ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯಕ್ಕೆ ಇಳಿಯಲ್ಲ ಬಡ್ಡಿದರ, ಹಣದುಬ್ಬರ ತಗ್ಗಿಸಲು ಆದ್ಯತೆ: ಶಕ್ತಿಕಾಂತ ದಾಸ್

Published 20 ಅಕ್ಟೋಬರ್ 2023, 15:43 IST
Last Updated 20 ಅಕ್ಟೋಬರ್ 2023, 15:43 IST
ಅಕ್ಷರ ಗಾತ್ರ

ನವದೆಹಲಿ: ಸದ್ಯದ ಮಟ್ಟಿಗೆ ಬಡ್ಡಿದರವು ಗರಿಷ್ಠ ಮಟ್ಟದಲ್ಲಿಯೇ ಇರಲಿದೆ. ಎಲ್ಲಿಯವರೆಗೆ ಬಡ್ಡಿದರವು ಗರಿಷ್ಠ ಮಟ್ಟದಲ್ಲಿಯೇ ಇರಲಿದೆ ಎನ್ನುವುದನ್ನು ಸಮಯವೇ ನಿರ್ಧರಿಸಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಹೇಳಿದ್ದಾರೆ.

ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಪ್ರಶ್ನೆಯೊಂದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲಾಗಿದೆ ಎಂದು ದಾಸ್‌ ತಿಳಿಸಿದ್ದಾರೆ. 

ಸದ್ಯ ನಡೆಯುತ್ತಿರುವ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಹಲವು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಏರುತ್ತಿರುವ ಹಣದುಬ್ಬರ ನಿಯಂತ್ರಿಸಲು ಬಡ್ಡಿದರ ಹೆಚ್ಚಳ ಮಾಡಿವೆ. 

ಆರ್‌ಬಿಐ ಸಹ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ರೆಪೊ ದರವನ್ನು 2022ರ ಮೇ ತಿಂಗಳಿನಿಂದ ಆರಂಭಿಸಿ ಒಟ್ಟು ಶೇ 2.50ರಷ್ಟು ಏರಿಕೆ ಮಾಡಿದೆ. ಇದರಿಂದಾಗಿ ಸಾಲದ ಮೇಲಿನ ಬಡ್ಡಿದರವು ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ವರ್ಷದ ಫೆಬ್ರುವರಿಯಿಂದ ಬಡ್ಡಿದರವನ್ನು ಶೇ 6.5ರಲ್ಲಿಯೇ ಉಳಿಸಿಕೊಂಡು ಬರಲಾಗುತ್ತಿದೆ. 

ಜುಲೈನಲ್ಲಿ ಶೇ 7.44ರ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 5ಕ್ಕೆ ಇಳಿಕೆ ಕಂಡಿದೆ. ಹಣದುಬ್ಬರವನ್ನು ಗರಿಷ್ಠ ಶೇ 6ರ ಒಳಗೆ ನಿಯಂತ್ರಿಸಬೇಕು ಎನ್ನುವ ಗುರಿಯನ್ನು ಕೇಂದ್ರ ಸರ್ಕಾರವು ಆರ್‌ಬಿಐಗೆ ನೀಡಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯ ಕುರಿತು ಮಾತನಾಡಿದ ಅವರು ಭಾರತದ ಪೆಟ್ರೋಲ್ ಪಂಪ್‌ಗಳಲ್ಲಿ ತೈಲ ದರ ಏಷ್ಟಿದೆ ಎನ್ನುವುದು ಮುಖ್ಯವಾಗುತ್ತದೆ. ದೇಶದಲ್ಲಿ ಇಂಧನ ದರ ಹೆಚ್ಚಾದರೆ ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.  ಮಧ್ಯಪ್ರಾಚ್ಯ ಬಿಕ್ಕಟ್ಟು ಭಾರತದ ಮೇಲೆಯೂ ಪರಿಣಾಮ ಬೀರಲಿದೆ. ಆದರೆ ನಮ್ಮ ಆರ್ಥಿಕ ತಳಹದಿಯು ಬಲಿಷ್ಠವಾಗಿದೆ. ಇದರೆ ಜೊತೆಗೆ ಹಣಕಾಸು ವಲಯದ ಸ್ಥಿತಿಯೂ ಉತ್ತಮವಾಗಿ ಇರುವುದರಿಂದ ಹೆಚ್ಚಿನ ಹಾನಿ ಆಗುವುದಿಲ್ಲ ಎಂದು ದಾಸ್‌ ಹೇಳಿದ್ದಾರೆ.

ಮುಂದಿನ ಪೀಳಿಗೆಗೆ ಸಾಲದ ಹೊರೆ ವರ್ಗಾಯಿಸಲ್ಲ: ನಿರ್ಮಲಾ

ನವದೆಹಲಿ (ಪಿಟಿಐ): ‘ಕೇಂದ್ರ ಸರ್ಕಾರವು ವಿತ್ತೀಯ ಕೊರತೆಯನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ. ಸಾಲದ ಹೊರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದಿಲ್ಲ ಎನ್ನುವ ಖಾತರಿಯನ್ನೂ ನೀಡಲು ಬಯಸುತ್ತದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಹೇಳಿದ್ದಾರೆ.

ಕೌಟಿಲ್ಯ ಆರ್ಥಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದ ಒಟ್ಟಾರೆ ಸಾಲವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಪ್ರಯತ್ನ ನಡೆಸುತ್ತಿದೆ ಎಂದಿದ್ದಾರೆ.

‘ದೇಶದ ಆರ್ಥಿಕ ಸ್ಥಿರತೆಯ ಕುರಿತು ನಾವು ಜಾಗೃತರಾಗಿದ್ದೇವೆ. ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ನಿರ್ವಹಿಸುವ ಕಡೆಗೂ ಗಮನ ಹರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT