ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿತಾಯ ತಗ್ಗಿಸುವ ಹೊಸ ಐಚ್ಛಿಕ ಆದಾಯ ತೆರಿಗೆ

Last Updated 16 ಫೆಬ್ರುವರಿ 2020, 21:03 IST
ಅಕ್ಷರ ಗಾತ್ರ

ನವದೆಹಲಿ: ಯಾವುದೇ ವಿನಾಯ್ತಿ ಮತ್ತು ಕಡಿತ ಸೌಲಭ್ಯಗಳಿಲ್ಲದ ಉದ್ದೇಶಿತ ಹೊಸ ಆದಾಯ ತೆರಿಗೆ ವ್ಯವಸ್ಥೆಯು ಉಳಿತಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹಣಕಾಸು ಪರಿಣತರು ಆತಂಕ ವ್ಯಕ್ತಪಡಿಸಿದ್ದಾರೆ.

2020–21ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಹೊಸ ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ತೆರಿಗೆದಾರರು ಸದ್ಯದ ವಿನಾಯ್ತಿ ಮತ್ತು ಕಡಿತ ಸೌಲಭ್ಯಗಳನ್ನು ಒಳಗೊಂಡಿರುವ ತೆರಿಗೆ ಯೋಜನೆ ಅಥವಾ ಕಡಿಮೆ ತೆರಿಗೆ ದರ ಇರುವ ಆದರೆ ವಿನಾಯ್ತಿ ಮತ್ತು ಕಡಿತ ಸೌಲಭ್ಯ ಹೊಂದಿರದ ಹೊಸ ತೆರಿಗೆ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ವರದಿಗಳ ಪ್ರಕಾರ, ಆರು ವರ್ಷಗಳಲ್ಲಿ ದೇಶದಲ್ಲಿನ ಉಳಿತಾಯದ ದರ ಗಮನಾರ್ಹ ಕುಸಿತ ಕಾಣುತ್ತಿದೆ. ಬಜೆಟ್‌ ಪ್ರಸ್ತಾವವು ಉಳಿತಾಯ ಪ್ರವೃತ್ತಿಯು ಇನ್ನಷ್ಟು ಕ್ಷೀಣಿಸಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಉಳಿತಾಯ ಪ್ರವೃತ್ತಿ ಕುಸಿಯುತ್ತಿರುವಾಗ, ಹೆಚ್ಚುವರಿ ತೆರಿಗೆ ಉಳಿತಾಯದ ಬಾಂಡ್‌ಗಳನ್ನು ಬಜೆಟ್‌ನಲ್ಲಿ ಪರಿಚಯಿಸಲಾಗುತ್ತಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾದ ಪ್ರಸ್ತಾವಗಳನ್ನು ಬಜೆಟ್‌ ಒಳಗೊಂಡಿದೆ’ ಎಂದು ಸಾರ್ವಜನಿಕ ಹಣಕಾಸು ಮತ್ತು ನೀತಿಗೆ ಸಂಬಂಧಿಸಿದ ರಾಷ್ಟ್ರೀಯ ಸಂಸ್ಥೆಯ (ಎನ್‌ಐಪಿಪಿಎಫ್‌) ಪ್ರೊ. ಎನ್‌. ಆರ್‌. ಭಾನುಮೂರ್ತಿ ಹೇಳಿದ್ದಾರೆ.

‘ಈಗಾಗಲೇ ಎಲ್ಲ ವಲಯಗಳಲ್ಲಿ ಬೇಡಿಕೆ ಕುಸಿದಿದೆ. ವೈಯಕ್ತಿಕ ಆದಾಯ ಮತ್ತು ಕಾರ್ಪೊರೇಟ್‌ ವರಮಾನಕ್ಕೆ ವಿಧಿಸಲಾಗುವ ನೇರ ತೆರಿಗೆ ಕಡಿತಗೊಳಿಸಲಾಗಿದೆ. ಇದು ಕೆಲ ಮಟ್ಟಿಗೆ ಬೇಡಿಕೆ ಹೆಚ್ಚಿಸಲು ನೆರವಾಗಲಿದೆ. ಆದರೆ, ಕೌಟುಂಬಿಕ ಉಳಿತಾಯವನ್ನೂ ತಗ್ಗಿಸಲಿದೆ’ ಎಂದು ಹೇಳಿದ್ದಾರೆ.

‘ಹೊಸ ಆದಾಯ ತೆರಿಗೆ ಯೋಜನೆಯು ಖಂಡಿತವಾಗಿಯೂ ಉಳಿತಾಯವನ್ನು ಉತ್ತೇಜಿಸುವುದಿಲ್ಲ’ ಎಂದು ಆರ್ಥಿಕ ತಜ್ಞ ಯೋಗಿಂದರ್‌ ಅಲಘ್‌ ಪ್ರತಿಕ್ರಿಯಿಸಿದ್ದಾರೆ.

‘ಬಜೆಟ್‌ ಪ್ರಸ್ತಾವದಿಂದ ಉಳಿತಾಯ ದರ ಕಡಿಮೆಯಾಗಲಿದೆ. ಆರ್ಥಿಕತೆಯಲ್ಲಿ ಮಂದಗತಿ ಇರುವಾಗ ಇದು ಸಹಜ. ಆದರೆ, ಮಧ್ಯಮ ವರ್ಗ ಮತ್ತು ಕಡಿಮೆ ಆದಾಯದವರ ಮೇಲಿನ ತೆರಿಗೆ ಹೊರೆ ತಗ್ಗಿಸಲಿದೆ ಎಂದು ಪ್ರತಿಪಾದಿಸುವುದು ಅತಿಶಯೋಕ್ತಿಯಾಗಿದೆ’ ಎಂದು ಜೆಎನ್‌ಯುದ ಸಹಾಯಕ ಪ್ರಾಧ್ಯಾಪಕ ರೋಹಿತ್‌ ಆಜಾದ್‌ ಹೇಳಿದ್ದಾರೆ.

ಶೇ 80ರಷ್ಟು ಆದಾಯ ತೆರಿಗೆದಾರರು ಹೊಸ ಆದಾಯ ತೆರಿಗೆ ಯೋಜನೆಗೆ ಒಲವು ತೋರಿಸಲಿದ್ದಾರೆ ಎನ್ನುವುದು ಹಣಕಾಸು ಸಚಿವಾಲಯದ ನಿರೀಕ್ಷೆಯಾಗಿದೆ.

ಅಂಕಿ ಅಂಶ

36 %: 2012ರಲ್ಲಿನ ಉಳಿತಾಯ ದರ

30 %: 2020ರಲ್ಲಿನ ಉಳಿತಾಯ ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT