ದಿನಕ್ಕೆ ಸರಾಸರಿ 1,600 ಐಟಿ ಉದ್ಯೋಗಿಗಳು ಕೆಲಸದಿಂದ ವಜಾ

ನವದೆಹಲಿ : ಜಾಗತಿಕ ಆರ್ಥಿಕ ಕುಸಿತ ಮತ್ತು ಆರ್ಥಿಕ ಹಿಂಜರಿತದಿಂದ ಉದ್ಯೋಗ ಕಡಿತ ಹೆಚ್ಚುತ್ತಿದ್ದು, ಭಾರತ ಸೇರಿದಂತೆ ಜಾಗತಿಕವಾಗಿ 2023ರಲ್ಲಿ ದಿನಕ್ಕೆ ಸರಾಸರಿ 1,600 ಕ್ಕೂ ಹೆಚ್ಚು ಟೆಕ್ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿ ಹೇಳಿದೆ.
2022ರಲ್ಲಿ 1,000ಕ್ಕೂ ಹೆಚ್ಚು ಕಂಪನಿಗಳು 1,54,336 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದವು ಎಂದು ಉದ್ಯೋಗ ಸಂಬಂಧಿ ಮಾಹಿತಿ ಒದಗಿಸುವ ಖಾಸಗಿ ವೆಬ್‌ಸೈಟ್ ವರದಿ ಮಾಡಿದೆ.
2022 ರ ಸಾಮೂಹಿಕ ಉದ್ಯೋಗ ಕಡಿತ ಹೊಸ ವರ್ಷದಲ್ಲಿಯೂ ಮುಂದುವರಿಯುತ್ತಿವೆ. ಭಾರತೀಯ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ಸಿಬ್ಬಂದಿಯನ್ನು ವಜಾಗೊಳಿಸುವಲ್ಲಿ ಮುಂಚೂಣಿಯಲ್ಲಿವೆ ಎಂದು ವರದಿ ತಿಳಿಸಿದೆ.
ಹೋಮ್‌ಗ್ರೋನ್ ಸಾಮಾಜಿಕ ಮಾಧ್ಯಮ ಕಂಪನಿ ಶೇರ್‌ಚಾಟ್ (ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್) ಅನಿಶ್ಚಿತ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ತನ್ನ ಶೇ 20 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ, ಇದು 500 ಕ್ಕೂ ಹೆಚ್ಚು ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. ಟ್ವಿಟರ್, ಗೂಗಲ್, ಸ್ನ್ಯಾಪ್ ಮತ್ತು ಟೈಗರ್ ಗ್ಲೋಬಲ್ ಬೆಂಬಲದೊಂದಿಗೆ, ಶೇರ್‌ಚಾಟ್ ಸುಮಾರು 2,300 ಉದ್ಯೋಗಿಗಳನ್ನು ಹೊಂದಿದೆ.
ಡಿಸೆಂಬರ್ 2022 ರಲ್ಲಿ, ಶೇರ್‌ಚಾಟ್ ತನ್ನ ಜೀಟ್ 11 ಎಂಬ ಫ್ಯಾಂಟಸಿ ಸ್ಪೋರ್ಟ್ಸ್ ವೇದಿಕೆಯನ್ನು ಮುಚ್ಚಿ, ಶೇ 5ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು.
ಒಲಾ ಮತ್ತು ಸ್ಕಿಟ್ ಡಾಟ್ ಎಐ ಕೂಡ ಈ ತಿಂಗಳು ಹೆಚ್ಚು ಜನ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಡೋರ್ ಡೆಲವರಿ ಆ್ಯಪ್ ಡಂಜೊ ಕೂಡ ವೆಚ್ಚ ಕಡಿತದ ಕ್ರಮವಾಗಿ ಶೇ 3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ.
ಭಾರತದಲ್ಲಿ ಈ ವರ್ಷದ ಪ್ರಾರಂಭವೇ ಟೆಕ್ ಉದ್ಯೋಗಿಗಳಿಗೆ ಕಹಿ ಅನುಭವ ನೀಡಿದೆ. 91 ಕಂಪನಿಗಳು ಈ ತಿಂಗಳ ಮೊದಲ 15 ದಿನಗಳಲ್ಲಿ 24,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ. ಭಾರತದಲ್ಲಿ ಸುಮಾರು 1,000 ಮಂದಿ ಸೇರಿದಂತೆ ಜಾಗತಿಕವಾಗಿ 18,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಅಮೆಜಾನ್ ಘೋಷಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.