ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web-Exclusive | ಇ–ಕಾಮರ್ಸ್‌ ಕಿರಾಣಿ ಅಂಗಡಿಗಳ ವ್ಯಾಪಾರದ ಹೊಸ ನಂಟು!

Last Updated 10 ಅಕ್ಟೋಬರ್ 2020, 12:31 IST
ಅಕ್ಷರ ಗಾತ್ರ
ADVERTISEMENT
""
""

ಆನ್‌ಲೈನ್ ಮೂಲಕ ನಡೆಸುವ‌ ಖರೀದಿಯು ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದರೂ ಆಹಾರ ಮತ್ತು ದಿನಸಿ ವಸ್ತುಗಳ ಮಾರುಕಟ್ಟೆಯ ಮೇಲೆ ಕಿರಾಣಿ ಅಂಗಡಿಗಳ ಬಿಗಿ ಹಿಡಿತ ತಪ್ಪಿಸಲು ಸಾಧ್ಯವಾಗಿಲ್ಲ. ಆದರೆ, ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಜನರಿಗೆ ಪೂರೈಸುವುದು ಕಿರಾಣಿ ಅಂಗಡಿಗಳಿಗೂ ಸವಾಲಾಯಿತು. ಈ ಹಂತದಲ್ಲಿ ಇ–ಕಾಮರ್ಸ್‌ ಕಂಪನಿಗಳು ಮತ್ತು ಕಿರಾಣಿ ಅಂಗಡಿಗಳು‍ಪರಸ್ಪರ ಒಪ್ಪಂದ ಮಾಡಿಕೊಳ್ಳುವ ಮೂಲಕ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳುವ ನಿರ್ಧಾರಕ್ಕೆ ಬಂದವು.

ಲಾಕ್‌ಡೌನ್‌ ವೇಳೆ ಇ–ಕಾಮರ್ಸ್‌ ಕಂಪನಿಗಳಿಗೆ ಅಗತ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡಲು ಅನುಮತಿ ಇರಲಿಲ್ಲ. ಈ ಹಂತದಲ್ಲಿ ಇ–ಕಾಮರ್ಸ್‌ ಕಂಪನಿಗಳು ಕಿರಾಣಿ ಅಂಗಡಿಗಳು, ಜನರಲ್‌ ಸ್ಟೋರ್‌ಗಳಿಗೆ ತಮ್ಮ ಆನ್‌ಲೈನ್‌ ವೇದಿಕೆ ಒದಗಿಸುವ ಭರವಸೆ ನೀಡಿದವು. ಇದರಿಂದಾಗಿ ಕಿರಾಣಿ ಅಂಗಡಿಗಳಿಗೆ ಹೆಚ್ಚಿನ ಗ್ರಾಹಕರನ್ನು ತಲುಪಲು ಸಾಧ್ಯವಾಯಿತು.

ಲಾಕ್‌ಡೌನ್ ವೇಳೆ, ಕಿರಾಣಿ ಅಂಗಡಿಗಳಲ್ಲಿ ಖರೀದಿಸುವವರ ಸಂಖ್ಯೆಯೂ ಸರಿಸುಮಾರು ಶೇ 40ರಷ್ಟು ಹೆಚ್ಚಾಯಿತು. ಅಗತ್ಯ ವಸ್ತುಗಳಿಗಾಗಿ ಜನರು ಕಿರಾಣಿ ಅಂಗಡಿಗಳಿಗೆ ಮುಗಿಬೀಳುವ ಸ್ಥಿತಿ ಎದುರಾಯಿತು. ಗಲ್ಲಿ ಗಲ್ಲಿಯಲ್ಲಿದ್ದ ಸಣ್ಣಪುಟ್ಟ ಅಂಗಡಿಗಳಲ್ಲಿ ಕೆಲವೊಮ್ಮೆ ಒಂದು ಬಿಸ್ಕತ್ ಬಾಕ್ಸ್‌ ಖಾಲಿ ಆಗಲು ಕನಿಷ್ಠ ತಿಂಗಳಾದರೂ ಬೇಕಾಗುತ್ತಿತ್ತು. ಆದರೆ ಲಾಕ್‌ಡೌನ್‌ ವೇಳೆ ಒಂದೇ ವಾರದಲ್ಲಿ ಖಾಲಿಯಾಗಿರುವ ನಿದರ್ಶನ ಇದೆ. ಅದೇ ವೇಳೆ ಬೇಡಿಕೆ ಪೂರೈಸಲು ಆಗದೇ ಎಷ್ಟೊ ಅಂಗಡಿಗಳು ಬಾಗಿಲು ಮುಚ್ಚಿರುವ ಉದಾಹರಣೆಗಳೂ ಇವೆ. ಎಲ್ಲಾ ರಿಟೇಲ್‌ ಅಂಗಡಿಗಳೂ ಲಾಕ್‌ಡೌನ್‌ ಅವಧಿಯಲ್ಲಿ ಉತ್ತಮ ವ್ಯಾಪಾರ ನಡೆಸಿವೆ ಎಂದು ಹೇಳುವುದು ಸರಿಯಲ್ಲ. ಏಕೆಂದರೆ ಅಖಿಲ ಭಾರತ ವರ್ತಕರ ಒಕ್ಕೂಟದ (ಸಿಎಐಟಿ) ಮಾಹಿತಿಯ ಪ್ರಕಾರ ರಿಟೇಲ್‌ ವಹಿವಾಟು ವಲಯಕ್ಕೆ ₹ 15.6 ಲಕ್ಷ ಕೋಟಿಗಳಷ್ಟು ನಷ್ಟವಾಗಿದೆ.

ಈ ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಇ–ಕಾಮರ್ಸ್‌ ಕಂಪನಿಗಳಾದ ರಿಲಯನ್ಸ್‌, ಅಮೆಜಾನ್‌, ಫ್ಲಿಪ್‌ಕಾರ್ಟ್ ಹಲವು ಮಾರುಕಟ್ಟೆ ತಂತ್ರಗಳನ್ನು ಅನುಸರಿಸಿವೆ. ಅದರಲ್ಲಿ ಕಿರಾಣಿ ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಸಹ ಪ್ರಮುಖವಾಗಿದ್ದು. ಏಕೆಂದರೆ, ದೇಶದಲ್ಲಿ ‌ಆಹಾರ ಮತ್ತು ದಿನಸಿ ಉತ್ಪನ್ನಗಳ ಮಾರುಕಟ್ಟೆಯ ಗಾತ್ರ ಅಂದಾಜು ₹ 36.50 ಲಕ್ಷ ಕೋಟಿಗಳಷ್ಟಿದೆ. ಇದರಲ್ಲಿ ಇ–ಕಾಮರ್ಸ್‌ ಕಂಪನಿಗಳ ಪಾಲು ಶೇ 1ಕ್ಕಿಂತಲೂ ಕಡಿಮೆ ಇದ್ದು,ಆಫ್‌ಲೈನ್‌ ಮಳಿಗೆಗಳೇ ಬಿಗಿ ಹಿಡಿತ ಹೊಂದಿವೆ.

ಜಿಯೊಮಾರ್ಟ್‌: ರಿಟೇಲ್‌ ವಹಿವಾಟಿನಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿರುವ ರಿಲಯನ್ಸ್‌ನ ಜಿಯೊಮಾರ್ಟ್, ವಾಟ್ಸ್‌ಆ್ಯಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ, ಗ್ರಾಹಕರು ಮತ್ತು ದಿನಸಿ ಅಂಗಡಿಗಳ ಮಧ್ಯೆ ಸಂವಹನ ನಡಸಲು ವಾಟ್ಸ್‌ಆ್ಯಪ್‌ ವೇದಿಕೆಯಾಗಲಿದೆ. ಇಲ್ಲಿ ಗ್ರಾಹಕರು ತಮಗೆ ಬೇಕಿರುವ ದಿನಸಿ ವಸ್ತುಗಳನ್ನು ವಾಟ್ಸ್‌ಆ್ಯಪ್‌ನಲ್ಲಿಯೇ ಆರ್ಡರ್‌ ಮಾಡಬಹುದಾಗಿದೆ. ದೇಶದಲ್ಲಿ ವಾಟ್ಸ್‌ಆ್ಯಪ್ ಬಳಸುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ರಿಟೇಲ್‌ ಮಾರಾಟ ಹೆಚ್ಚಿಸಿಕೊಳ್ಳಲು ಜಿಯೊಮಾರ್ಟ್‌ಗೆ ಇದರಿಂದ ಸುಲಭವಾಗಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್‌ ಮಾಡಿರುವ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಹೊರಡುತ್ತಿರುವ ಹುಬ್ಬಳ್ಳಿಯಲ್ಲಿ ಇರುವ ಶ್ರೀ ಶ್ರೀನಿವಾಸ ಸ್ಟೋರ್ಸ್‌ ಕೆಲಸಗಾರರು

ಅಮೆಜಾನ್‌: ಇದೇ ರೀತಿ, ಅಮೆಜಾನ್‌ ಸಹ ಕಿರಾಣಿ ಅಂಗಡಿಗಳಿಗೆ ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಅವಕಾಶ ಕಲ್ಪಿಸಿದೆ.Local Shops on Amazon ಹೆಸರಿನಲ್ಲಿ ಗ್ರಾಹಕರು ತಮ್ಮಗೆ ಹತ್ತಿರುವಿರುವ ಅಂಗಡಿಯಲ್ಲಿನ ವಸ್ತುಗಳನ್ನು ಅಮೆಜಾನ್‌ ಮೂಲಕವೇ ಖರೀದಿಸಬಹುದಾಗಿದೆ. ಇದರಿಂದ ಅಂಗಡಿಗಳಿಗೂ ಹೆಚ್ಚಿನ ಗ್ರಾಹಕರು ಬರಲಿದ್ದಾರೆ. ಇದಲ್ಲದೆ ಒಂದು ಲಕ್ಷಕ್ಕೂ ಅಧಿಕ ಕಿರಾಣಿ ಅಂಗಡಿಗಳು, ರಿಟೇಲ್‌ ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಸ್ಥಳೀಯ ವ್ಯಾಪಾರಿಗಳು ಅಮೆಜಾನ್‌ ವೇದಿಕೆಯ ಮೂಲಕ ದೇಶದ ಯಾವುದೇ ಮೂಲೆಯಲ್ಲಿರುವ ಗ್ರಾಹಕರಿಗೂ ತಮ್ಮ ಉತ್ಪನ್ನಗಳನ್ನು ಮಾರುವ ಅವಕಾಶ ದೊರೆತಂತಾಗಿದೆ. ಆನ್‌ಲೈನ್‌ ಪಾವತಿ ವ್ಯವಸ್ಥೆ ಇರುವುದರಿಂದ ಖಾತೆಗೆ ನೇರವಾಗಿ ಹಣ ಬರಲಿದೆ. ವೈವಿಧ್ಯಮಯ ಉತ್ಪನ್ನಗಳು ಇರುವುದರಿಂದ ಅಮೆಜಾನ್‌ ಮೂಲಕ ಖರೀದಿಸುವವರ ಸಂಖ್ಯೆಯೂ ಹೆಚ್ಚಲಿದೆ.

ಗಡಿ ವಿಸ್ತರಿಸಿಕೊಂಡ ಸ್ಥಳೀಯ ಮಳಿಗೆಗಳು: ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿನ ಗ್ರಾಹಕರಿಗಷ್ಟೇ ಸೀಮಿತವಾಗಿದ್ದ ಅದೆಷ್ಟೋ ಮಳಿಗೆಗಳು ಅಮೆಜಾನ್‌ನಿಂದಾಗಿ ನಗರ, ರಾಜ್ಯಗಳ ಗಡಿಯನ್ನೂ ಮೀರಿ ಗ್ರಾಹಕರನ್ನು ಸಂಪಾದಿಸುತ್ತಿವೆ. ‘ನಾಗರಬಾವಿಯಲ್ಲಿ ಶ್ರೀ ಸಾಯಿ ವಿನಾಯಕ ಫರ್ನಿಚರ್‌ ಮಳಿಗೆ ಹೊಂದಿರುವ ರಾಜು ಲಕ್ಷ್ಮಣ ಅವರು ಅಮೆಜಾನ್‌ನ ಲೋಕಲ್‌ ಶಾಪ್‌ ಪ್ರೋಗ್ರಾಂನಿಂದಾಗಿ ತಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆಫ್‌ಲೈನ್‌ ವಹಿವಾಟಿಗೆ ಹೋಲಿಸಿದರೆ ಆನ್‌ಲೈನ್‌ ಮಾರಾಟವು ಶೇ 50–60ರಷ್ಟು ಹೆಚ್ಚಾಗಿದೆ ಎನ್ನುತ್ತಾರೆ ಅವರು.ಲಾಕ್‌ಡೌನ್‌ ಅವಧಿಯಲ್ಲಿಯೂ ಆನ್‌ಲೈನ್‌ ಮೂಲಕ 500 ಆರ್ಡರ್‌ಗಳನ್ನು ಪೂರೈಸಲು ಸಾಧ್ಯವಾಗಿದೆ. ಆಫ್‌ಲೈನ್‌ನಲ್ಲಿ ಮಳಿಗೆ ಬಾಗಿಲು ತೆಗೆದಿದ್ದಾಗ ಮಾತ್ರವೇ ಆರ್ಡರ್‌ ಬರುತ್ತಿತ್ತು. ಈಗ ಆನ್‌ಲೈನ್‌ನಲ್ಲಿಯೂ ಇರುವುದರಿಂದ ದಿನದ 24 ಗಂಟೆಯೂ ಆರ್ಡರ್‌ ಬರುತ್ತಿರುತ್ತದೆ’ ಎಂದರು.

‘ಲಾಕ್‌ಡೌನ್‌ನಲ್ಲಿ ವ್ಯಾಪಾರಕ್ಕೆ ಹೊಡೆತ ಬಿದ್ದಿತು. ಆಗ ಅಮೆಜಾನ್‌ನ ಲೋಕಲ್‌ ಶಾಪ್ ಪ್ರೋಗ್ರಾಂ ಸೇರಿದೆ. ಅದರಿಂದಾಗಿ ಮಾರಾಟದಲ್ಲಿ ಉತ್ತಮ ಏರಿಕೆ ಕಂಡಿದೆ’ ಎನ್ನುತ್ತಾರೆ ದೊಮ್ಮಸಂದ್ರದಲ್ಲಿ ಸಾಧನಾ ವಾಟರ್‌ ಸಲ್ಯೂಷನ್ಸ್‌, ಸೋಲಾರ್‌ ವಾಟರ್‌ ಹೀಟರ್‌, ಯುಪಿಎಸ್‌ ಮತ್ತು ಬ್ಯಾಟರಿಗಳನ್ನು ಮಾರಾಟ ಮಾಡುತ್ತಿರುವ ಬಾಲಕೃಷ್ಣ ಪಿ. ಅವರು.

ಫ್ಲಿಪ್‌ಕಾರ್ಟ್‌:ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಕಂಪನಿ ದೇಶದಲ್ಲಿ ವಿನೂತನವಾದ ‘ಕಿರಾಣಾ ಪ್ರೋಗ್ರಾಂ’ ಆಯೋಜಿಸಿದೆ. ಆ ಮೂಲಕ ಸಣ್ಣ ಉದ್ದಿಮೆಗಳು ಮತ್ತು ಕಿರಾಣಿ ಅಂಗಡಿಗಳಿಗೆ ತಮ್ಮ ವಹಿವಾಟು ವಿಸ್ತರಿಸಿಕೊಳ್ಳುವ ಅವಕಾಶ ಕಲ್ಪಿಸಿದೆ. ದೇಶದಾದ್ಯಂತ 50 ಸಾವಿರಕ್ಕೂ ಅಧಿಕ ಕಿರಾಣಿ ಅಂಗಡಿಗಳು ಫ್ಲಿಪ್‌ಕಾರ್ಟ್‌ ಮೂಲಕ ವಹಿವಾಟು ನಡೆಸುತ್ತಿದ್ದು, ಅದರಲ್ಲಿ 14 ಸಾವಿರ ಅಂಗಡಿಗಳು ಬೆಂಗಳೂರು, ಕಲಬುರ್ಗಿ, ಮೈಸೂರು, ಚೆನ್ನೈ, ಕೊಚ್ಚಿ, ಕಣ್ಣೂರನ್ನೂ ಒಳಗೊಂಡು ದಕ್ಷಿಣ ಭಾಗದವೇ ಆಗಿವೆ.

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಪ್ರಾವಿಷನ್‌ ಸ್ಟೋರ್‌ ಹೊಂದಿರುವ ಹರೀಶ್‌ ಅವರು ಫ್ಲಿಪ್‌ಕಾರ್ಟ್‌ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಸಜ್ಜಾಗುತ್ತಿರುವುದು

‘ಫ್ಲಿಪ್‌ಕಾರ್ಟ್‌ನ ಕಿರಾಣಾ ಪ್ರೋಗ್ರಾಂನಿಂದ ಆದಾಯದ ಹೊಸ ಮೂಲ ಕಂಡುಕೊಳ್ಳುವಂತಾಗಿದೆ’ ಎಂದುಹುಬ್ಬಳ್ಳಿಯಲ್ಲಿ ಶ್ರೀ ಶ್ರೀನಿವಾಸ ಸ್ಟೋರ್ಸ್‌ನಲ್ಲಿ ಸಿಮೆಂಟ್‌ನ ಸಗಟು ವ್ಯಾಪಾರ ನಡೆಸುತ್ತಿರುವ ರಾಘವೇಂದ್ರ ಅವರು ಹೇಳುತ್ತಾರೆ. ‘ಲಾಕ್‌ಡೌನ್‌ನಿಂದಾಗಿ ವ್ಯಾಪಾರ ಕಡಿಮೆ ಆಗಿದ್ದಾಗ ಇದು ಕೈಹಿಡಿಯಿತು. ಹೆಚ್ಚುವರಿ ಆದಾಯದ ಜತೆಗೆ ಸಿಮೆಂಟ್‌ ವ್ಯಾಪಾರದಲ್ಲಿಯೂ ಏರಿಕೆ ಆಗುತ್ತಿದೆ. ಇದರಿಂದಾಗಿ ₹ 25 ಸಾವಿರದಿಂದ ₹ 30 ಸಾವಿರ ದುಡಿಯುತ್ತಿದ್ದೇನೆ. ಅಂಗಡಿಯಲ್ಲಿ ಇರುವ ಇಬ್ಬರು ಕೆಲಸಗಾರರು ಫ್ಲಿಪ್‌ಕಾರ್ಟ್‌ನಿಂದ ಬರುವ ವಸ್ತುಗಳನ್ನು ಬಿಡುವಿನ ವೇಳೆಯಲ್ಲಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಹೀಗಾಗಿ ಅವರಿಗೂ ಹೆಚ್ಚುವರಿ ಆದಾಯ ಸಿಗುತ್ತಿದೆ’ ಎಂದು ವಿವರಿಸಿದರು.

ಏಳು ವರ್ಷಗಳ ಹಿಂದೆ ಜೀವನ ಕಟ್ಟಿಕೊಳ್ಳಲು ಮಂಡ್ಯದಿಂದ ಬೆಂಗಳೂರಿಗೆ ಬಂದ ಹರೀಶ್‌ ಕೆ. ಅವರು ಸಹ ಫ್ಲಿಪ್‌ಕಾರ್ಟ್‌ನ ಕಿರಾಣಾ ಪ್ರೋಗ್ರಾಂನಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ವಿದ್ಯಾರಣ್ಯಪುರದಲ್ಲಿ ತಮ್ಮದೇ ಎಸ್‌ಬಿಟಿ ಸ್ಟೋರ್‌ (ಪ್ರಾವಿಷನ್‌ ಸ್ಟೋರ್‌) ಆರಂಭಿಸುವ ಮೊದಲು ಅವರು ಕಂಪನಿಯೊಂದರ ಕ್ಯಾಬ್‌ ಡ್ರೈವರ್ ಆಗಿ ಐದು ವರ್ಷ ದುಡಿದಿದ್ದರು. ದಿನಕ್ಕೆ 12 ರಿಂದ 14 ಗಂಟೆ ಕೆಲಸ ಮಾಡಿದರೆ ತಿಂಗಳಿಗೆ ₹ 20 ಸಾವಿರ ಸಂಬಳ ಸಿಗುತ್ತಿತ್ತು. ಇದರಿಂದ ಜೀವನ ನಿರ್ವಹಣೆ ಕಷ್ಟವಾದಾಗ ಪ್ರಾವಿಷನ್‌ ಸ್ಟೋರ್‌ ತೆರೆಯುವ ನಿರ್ಧಾರಕ್ಕೆ ಬಂದರು.

‘ಫ್ಲಿಪ್‌ಕಾರ್ಟ್‌ನ ಫೀಲ್ಡ್‌ ಅಧಿಕಾರಿಯೊಬ್ಬರು ಕಿರಾಣಾ ಪ್ರೋಗ್ರಾಂ ಬಗ್ಗೆ ವಿವರಿಸಿದರು.ಇದು ಸಂಪೂರ್ಣವಾಗಿ ಉಚಿತವಾದ ತರಬೇತಿ ಕಾರ್ಯಕ್ರಮ. ಗ್ರಾಹಕರೊಂದಿಗೆ ವ್ಯವಹರಿಸುವುದು, ಪಿಒಎಸ್‌ ಮಷಿನ್ ಬಳಕೆ, ಸಮಯಕ್ಕೆ ಸರಿಯಾಗಿ ಉತ್ಪನ್ನಗಳನ್ನು ತಲುಪಿಸುವುದರ ಬಗ್ಗೆನಾಲ್ಕು ದಿನಗಳ ತರಬೇತಿಯಲ್ಲಿ ಮಾಹಿತಿ ದೊರೆಯಿತು. ಈಗ ತಿಂಗಳಿಗೆ ಒಂದು ಸಾವಿರ ಪ್ಯಾಕೇಜ್‌ಗಳನ್ನು ಜನರ ವಿಳಾಸಕ್ಕೆ ತಲುಪಿಸುತ್ತಿದ್ದೇನೆ. ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಆರ್ಡರ್‌ ಮಾಡಿರುವ ವಸ್ತುಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 3ರ ತನಕ ವಿತರಿಸಿದ ಬಳಿಕ ಪ್ರಾವಿಷನ್‌ ಸ್ಟೋರ್‌ಗೆ ಬರುತ್ತೇನೆ. ಫ್ಲಿಪ್‌ಕಾರ್ಟ್‌ನಿಂದಾಗಿ ನನ್ನ ಕುಟುಂಬದ ಹಣಕಾಸಿನ ಸ್ಥಿತಿ ಸುಧಾರಿಸುತ್ತಿದೆ’ ಎಂದರು.

ಇ–ಕಾಮರ್ಸ್‌ ಮತ್ತು ಕಿರಾಣಿ ಅಂಗಡಿಗಳ ಪಾಲುದಾರಿಕೆಯು ಲಾಕ್‌ಡೌನ್‌ ಅವಧಿ ಮತ್ತು ಅದರಾಚೆಗೂ ಒಂದಷ್ಟರಮಟ್ಟಿಗೆ ಯಶಸ್ವಿಯಾಗಿದೆ. ಆದರೆ, ಕಿರಾಣಿ ಅಂಗಡಿಗಳ ಹಿತದೃಷ್ಟಿಯಿಂದ, ಇ–ಕಾಮರ್ಸ್‌ ಉದ್ಯಮದಲ್ಲಿ ಕಿರಾಣಿ ಅಂಗಡಿಗಳನ್ನು ಸೇರಿಸುವ ಬಗ್ಗೆ ಆಡಳಿತ ವರ್ಗ ಗಮನ ಹರಿಸುವುದು ಅವಶ್ಯಕ. ಈ ಕುರಿತ ಇ–ಕಾಮರ್ಸ್ ನೀತಿಯನ್ನು ಶೀಘ್ರವೇ ಅಂತಿಮಗೊಳಿಸಬೇಕಿದೆ. ಆ ಮೂಲಕ ದೇಶಿ ಮತ್ತು ವಿದೇಶಿ ಇ–ಕಾಮರ್ಸ್‌ ಸೇವೆಗಳನ್ನು ನೀಡುವ ಕಂಪನಿಗಳ ಮಧ್ಯೆ ಪಕ್ಷಪಾತವಿಲ್ಲದ ನಿಯಂತ್ರಣ ವ್ಯವಸ್ಥೆ ತರುವುದು ಹಾಗೂ ಇ–ಕಾಮರ್ಸ್‌–ಕಿರಾಣಾ ಪಾಲುದಾರಿಕೆಗೆ ಅಗತ್ಯ ಮೂಲಸೌಕರ್ಯ ರೂಪಿಸಲು ಬೇಕಿರುವ ಹೂಡಿಕೆಯ ಕಡೆಗೂ ಗಮನ ನೀಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT