ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕ ವಾಹನಗಳ ಮಾರಾಟ ಶೇ 5ರಷ್ಟು ಇಳಿಕೆ

Last Updated 5 ಏಪ್ರಿಲ್ 2022, 11:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಯಾಣಿಕ ವಾಹನಗಳ ದೇಶಿ ರಿಟೇಲ್ ಮಾರಾಟವು ಮಾರ್ಚ್‌ ತಿಂಗಳಲ್ಲಿ ಶೇಕಡ 4.87ರಷ್ಟು ಇಳಿಕೆ ಆಗಿದೆ. ಹಿಂದಿನ ವರ್ಷದ ಮಾರ್ಚ್‌ನಲ್ಲಿ 2.85 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿತ್ತು.

ಈ ವರ್ಷದ ಮಾರ್ಚ್‌ನಲ್ಲಿ ಇದು 2.71 ಲಕ್ಷ ಆಗಿದೆ ಎಂದು ಆಟೊಮೊಬೈಲ್ ಡೀಲರ್‌ಗಳ ಸಂಘಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ.

‘ಪ್ರಯಾಣಿಕ ವಾಹನಗಳಿಗೆ ಬೇಡಿಕೆಯು ದೊಡ್ಡ ಮಟ್ಟದಲ್ಲಿಯೇ ಇದೆ. ಆದರೆ ಸೆಮಿಕಂಡಕ್ಟರ್ ಕೊರತೆಯು ಈಗಲೂ ಸವಾಲಿನದ್ದೇ ಆಗಿದೆ. ಹೀಗಿದ್ದರೂ, ಪೂರೈಕೆಯು ಹಿಂದಿನ ತಿಂಗಳಿಗೆ ಹೋಲಿಸಿದರೆ ಈಗ ತುಸು ಸುಧಾರಿಸಿದೆ’ ಎಂದು ಎಫ್‌ಎಡಿಎ ಅಧ್ಯಕ್ಷ ವಿಂಕೇಶ್ ಗುಲಾಟಿ ತಿಳಿಸಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಹಾಗೂ ಚೀನಾದಲ್ಲಿ ಮತ್ತೆ ಲಾಕ್‌ಡೌನ್‌ ಹೇರಿರುವುದು ಸೆಮಿಕಂಡಕ್ಟರ್ ಪೂರೈಕೆಗೆ ಅಡ್ಡಿ ಉಂಟುಮಾಡಲಿದೆ ಎಂದು ಅವರು ಹೇಳಿದ್ದಾರೆ.

ಹಿಂದಿನ ವರ್ಷದ ಮಾರ್ಚ್‌ ತಿಂಗಳ ಮಟ್ಟಕ್ಕೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಮಾರಾಟವು ಶೇ 4.02ರಷ್ಟು ಇಳಿಕೆ ಕಂಡಿದೆ. 2021ರ ಮಾರ್ಚ್‌ನಲ್ಲಿ 12.06 ಲಕ್ಷ ದ್ವಿಚಕ್ರ ವಾಹನಗಳ ಮಾರಾಟ ಆಗಿತ್ತು. ಅದು ಈ ಬಾರಿಯ ಮಾರ್ಚ್‌ನಲ್ಲಿ 11.57 ಲಕ್ಷಕ್ಕೆ ಇಳಿದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ಹೆಚ್ಚಿನ ಮಟ್ಟದಲ್ಲಿ ಇರಲಿಲ್ಲ. ವಾಹನ ಮಾಲೀಕತ್ವದ ವೆಚ್ಚ ಮತ್ತು ಇಂಧನ ದರ ಹೆಚ್ಚಾಗಿದ್ದರಿಂದ ಮಾರಾಟ ಇನ್ನಷ್ಟು ಕಡಿಮೆ ಆಯಿತು ಎಂದು ಗುಲಾಟಿ ಹೇಳಿದ್ದಾರೆ.

ವಾಣಿಜ್ಯ ವಾಹನಗಳ ಮಾರಾಟವು ಮಾರ್ಚ್‌ನಲ್ಲಿ ಶೇ 14.91ರಷ್ಟು ಜಾಸ್ತಿ ಆಗಿದೆ. ತ್ರಿಚಕ್ರ ವಾಹನಗಳ ಮಾರಾಟವು ಶೇ 26.61ರಷ್ಟು ಏರಿಕೆ ಕಂಡಿದೆ. ಎಲ್ಲ ಬಗೆಯ ವಾಹನಗಳ ಒಟ್ಟು ಮಾರಾಟವು ಶೇ 2.87ರಷ್ಟು ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT