ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವಿಡ್‌–19’ ವೈರಸ್‌ ಹಾವಳಿ: ದೇಶಿ ಔಷಧಿ ತಯಾರಿಕೆಗೆ ಅಡ್ಡಿ

Last Updated 18 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಚೀನಾದಲ್ಲಿ ಸರಣಿ ಸಾವಿಗೆ ಕಾರಣವಾಗಿರುವ ‘ಕೋವಿಡ್‌–19’ ವೈರಸ್‌ನಿಂದಾಗಿ ಭಾರತದ ಔಷಧಿ ತಯಾರಿಕೆ ಉದ್ದಿಮೆ ಮೇಲೆ ತೀವ್ರ ಸ್ವರೂಪದ ಪ್ರತಿಕೂಲ ಪರಿಣಾಮಗಳು ಕಂಡು ಬಂದಿವೆ.

ಔಷಧಿಗಳ ತಯಾರಿಕೆಯಲ್ಲಿ ಬಳಸುವ ವಿವಿಧ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಕಚ್ಚಾ ಪದಾರ್ಥಗಳ ಬೆಲೆ ಶೇ 20ರಿಂದ ಶೇ 30ರಷ್ಟು ಏರಿಕೆಯಾಗಿದೆ. ಇದರಿಂದ ಔಷಧಿ ಮತ್ತು ಸೋಂಕು ನಿವಾರಕಗಳ ಬೆಲೆ ದುಬಾರಿಯಾಗುವ ಪರಿಸ್ಥಿತಿ ಉದ್ಭವಿಸಿದೆ.

ದೇಶಿ ಔಷಧಿ ತಯಾರಿಕೆ ಉದ್ದಿಮೆಯು, ಔಷಧಿಗಳಿಗೆ ಚಿಕಿತ್ಸಕ ಮೌಲ್ಯ ಹೆಚ್ಚಿಸುವ ಪದಾರ್ಥಗಳು ಮತ್ತು ಇತರ ಕಚ್ಚಾ ಸರಕಿಗೆ ಚೀನಾವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಔಷಧಿ ಪೂರೈಸುವ ಜಾಗತಿಕ ಕಂಪನಿಗಳು ಕೂಡ ಹಲವಾರು ಔಷಧಿಗಳ ತಯಾ
ರಿಕೆಗೆ ಬಳಸುವ ಪದಾರ್ಥಗಳಿಗಾಗಿ ಚೀನಾವನ್ನೇ ಹೆಚ್ಚಾಗಿ ಅವಲಂಬಿಸಿವೆ.

‘ಕೋವಿಡ್‌–19’ ವೈರಸ್‌ ಹಾವಳಿಯ ಕೇಂದ್ರ ಬಿಂದುವಾಗಿರುವ ವುಹಾನ್‌ ಪ್ರಾಂತ್ಯವು ಔಷಧಿ ಪದಾರ್ಥಗಳನ್ನು ತಯಾರಿಸುವ ಅತಿದೊಡ್ಡ ಕೇಂದ್ರವಾಗಿದೆ.

‘ಚೀನಾದಲ್ಲಿನ ಪರಿಸ್ಥಿತಿಯು ಸದ್ಯದಲ್ಲೇ ಸುಧಾರಿಸದಿದ್ದರೆ ವಿಟಮಿನ್‌ಗೆ ಸಂಬಂಧಿಸಿದ ಔಷಧಿ, ಪ್ಯಾರಾಸಿಟ್ಮಲ್‌, ಮೊಕ್ಸಿಸಿಲಿಯನ್‌ನಂತಹ ಔಷಧಿಗಳ ಕಚ್ಚಾ ಸರಕಿನ ಬೆಲೆಯು ಶೇ 20ರಿಂದ ಶೇ 30ರಷ್ಟು ಏರಿಕೆಯಾಗಲಿದೆ. ಔಷಧಿಗಳ ಪೂರೈಕೆ
ಯಲ್ಲಿಯೂ ತೀವ್ರ ವ್ಯತ್ಯಯ ಕಂಡು ಬರಲಿದೆ ಎಂದು ಭಾರತೀಯ ಔಷಧಿ ತಯಾರಕರ ಸಂಘದ ಉಪಾಧ್ಯಕ್ಷ ಜೆ. ಜಯಸೀಲಂ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಯಾರಿಕೆ ಸ್ಥಗಿತ: ಕರ್ನಾಟಕದಲ್ಲಿ ಇರುವ 300 ಔಷಧಿ ತಯಾರಿಕಾ ಕಂಪನಿಗಳು ಹಲವಾರು ಔಷಧಿ ಪದಾರ್ಥಗಳ ಕೊರತೆಯಿಂದ ತಯಾರಿಕೆ ಸ್ಥಗಿತಗೊಳಿಸಿವೆ.

ಬ್ಯಾಕ್ಟೀರಿಯಾ ಸೋಂಕು, ಆಸ್ಥಮಾಗೆ ಚಿಕಿತ್ಸೆ ನೀಡುವ ಮತ್ತು ನೋವು ನಿವಾರಕಗಳ ತಯಾರಿಕೆಗೆ ಅಗತ್ಯವಾದ ಔಷಧಿ ಪದಾರ್ಥಗಳ ಪೂರೈಕೆ ನಿಂತು ಹೋಗಿದೆ.

‘ಮಾರ್ಚ್‌ ವೇಳೆಗೆ ಪರಿಸ್ಥಿತಿ ಸುಧಾರಿಸದಿದ್ದರೆ ಔಷಧಿಗಳ ತೀವ್ರ ಕೊರತೆ ಉಂಟಾಗಲಿದೆ’ ಎಂದು ಕರ್ನಾಟಕ ಔಷಧಿ ತಯಾರಕರ ಸಂಘದ ಅಧ್ಯಕ್ಷ ಸುನಿಲ್‌ ಅತ್ತಾವರ್‌ ಹೇಳಿದ್ದಾರೆ.

‘ಪರಿಣಾಮ ತಡೆಗೆ ಶೀಘ್ರ ಕ್ರಮ’
ನವದೆಹಲಿ (ಪಿಟಿಐ):
ಚೀನಾದಲ್ಲಿ ‘ಕೋವಿಡ್‌–19’ ವೈರಸ್‌ ಸೃಷ್ಟಿಸಿರುವ ಆತಂಕವು ದೇಶಿ ಕೈಗಾರಿಕೆಗಳ ಮೇಲೆ ಬೀರಿರುವ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಕೇಂದ್ರ ಸರ್ಕಾರವು ಸದ್ಯದಲ್ಲೇ ಅಗತ್ಯ ಕ್ರಮಗಳನ್ನು ಪ್ರಕಟಿಸಲಿದೆ.

ಮಂಗಳವಾರ ಇಲ್ಲಿ ನಡೆದ ಉದ್ಯಮಿಗಳ ಜತೆಗಿನ ಸಭೆಯ ನಂತರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ವಿಷಯ ತಿಳಿಸಿದರು. ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳ ಜತೆ ಬುಧವಾರ ಸಭೆ ನಡೆಸಿದ ನಂತರ, ಪ್ರಧಾನಿ ಕಚೇರಿ (ಪಿಎಂಒ) ಸಂಪರ್ಕಿಸಿ ಪರಿಸ್ಥಿತಿ ಎದುರಿಸಲು ಕೈಗೊಳ್ಳುವ ಕ್ರಮಗಳನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.

ಎಲ್‌ಇಡಿ ಬಲ್ಬ್‌ ದುಬಾರಿ?
ಚೀನಾದಿಂದ ಎಲೆಕ್ಟ್ರಾನಿಕ್ಸ್‌ ಬಿಡಿಭಾಗಗಳ ಪೂರೈಕೆಯಲ್ಲಿ ಕೊರತೆ ಕಂಡು ಬಂದಿರುವುದರಿಂದ ಮಾರ್ಚ್‌ನಿಂದ ಎಲ್‌ಇಡಿ ಬಲ್ಬ್ ಬೆಲೆ ಶೇ 10ರಷ್ಟು ತುಟ್ಟಿಯಾಗುವ ಸಾಧ್ಯತೆ ಇದೆ. ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಉದ್ದಿಮೆಯಂತೆ ದೇಶಿ ಬಲ್ಬ್ ಮತ್ತು ಲೈಟ್ಸ್‌ ಉದ್ದಿಮೆಯೂ ಬಾಧಿತವಾಗಿದೆ ಎಂದು ಉದ್ದಿಮೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT