ಗುರುವಾರ , ನವೆಂಬರ್ 26, 2020
20 °C

ಪ್ರಶ್ನೋತ್ತರ: ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪರಿಹಾರ

ಯು.ಪಿ. ಪುರಾಣಿಕ್ Updated:

ಅಕ್ಷರ ಗಾತ್ರ : | |

Prajavani

ಡಿ.ಎಚ್‌. ಸಾಬೋಜಿ, ಹುಬ್ಬಳ್ಳಿ

ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 78 ವರ್ಷ. ಮಾಸಿಕ ಪಿಂಚಣಿ ₹ 40 ಸಾವಿರ. ಎಸ್‌ಬಿಐಯಲ್ಲಿ ₹ 10 ಲಕ್ಷ ಅವಧಿ ಠೇವಣಿ ಇರಿಸಿದ್ದೇನೆ. ನಾನು ಗರಿಷ್ಠ ಎಷ್ಟು ಹಣ ಬ್ಯಾಂಕ್‌ನಲ್ಲಿ ಇರಿಸಬಹುದು, ರಿಟರ್ನ್ಸ್‌ ತುಂಬಬೇಕೇ? ನನ್ನ ಪತ್ನಿಗೆ 77 ವರ್ಷ ವಯಸ್ಸು. ಅವಳ ಹೆಸರಿನಲ್ಲಿ ₹ 30 ಲಕ್ಷ ಎಸ್‌ಬಿಐನಲ್ಲಿ ಠೇವಣಿ ಇರಿಸಿದ್ದೇನೆ. ಅವಳಿಗೆ ಪಿಂಚಣಿ ಇಲ್ಲ. ನಾವಿಬ್ಬರೂ ಐ.ಟಿ. ಪಾವತಿಸಬೇಕೇ ಹಾಗೂ ರಿಟರ್ನ್ಸ್‌ ತುಂಬಬೇಕೇ?

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ಆದಾಯ ₹ 4.80 ಲಕ್ಷ. ನಿಮಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೆಕ್ಷನ್ 16 (1ಎ) ಆಧಾರದ ಮೇಲೆ ₹ 50 ಸಾವಿರ ಹಾಗೂ ಠೇವಣಿ ಮೇಲಿನ ಬಡ್ಡಿಯಲ್ಲಿ ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ₹ 50 ಸಾವಿರ ಹೀಗೆ ಒಟ್ಟಾರೆ ₹ 1 ಲಕ್ಷ ವಿನಾಯಿತಿ ಸಿಗಲಿದೆ. ನಿಮ್ಮ ಪಿಂಚಣಿ ಆದಾಯ ಹಾಗೂ ಬ್ಯಾಂಕ್‌ ಠೇವಣಿ ಆದಾಯದಲ್ಲಿ ₹ 1 ಲಕ್ಷ ಕಳೆದು, ನಂತರ ಬರುವ ಮೊತ್ತ ₹ 5 ಲಕ್ಷ ದಾಟಿದಲ್ಲಿ ನೀವು ಆದಾಯ ತೆರಿಗೆಗೆ ಒಳಗಾಗುತ್ತೀರಿ. ಐ.ಟಿ. ರಿಟರ್ನ್ಸ್‌ ತುಂಬಬೇಕಾಗುತ್ತದೆ. ನಿಮ್ಮ ಹೆಂಡತಿಗೆ ₹ 30 ಲಕ್ಷದಿಂದ ಬರುವ ಬಡ್ಡಿ ಆದಾಯ ₹ 5 ಲಕ್ಷದೊಳಗಿದ್ದು ಅವರಿಗೆ ತೆರಿಗೆ ಬರುವುದಿಲ್ಲ. ಬಡ್ಡಿ ಆದಾಯ ₹ 3 ಲಕ್ಷ ದಾಟಿದಲ್ಲಿ ಮಾತ್ರ ಐ.ಟಿ. ರಿಟರ್ನ್ಸ್‌ ಸಲ್ಲಿಸಬೇಕು. ನೀವು ಎಷ್ಟು ಹಣ ಬೇಕಾದರೂ ಬ್ಯಾಂಕ್‌ನಲ್ಲಿ ಠೇವಣಿ ಮಾಡಬಹುದು. ಇಲ್ಲಿ ಗರಿಷ್ಠ ಮಿತಿ ಇಲ್ಲ. ಐ.ಟಿ. ರಿಟರ್ನ್ಸ್‌ ತುಂಬಲು ಈ ಬಾರಿ ನವೆಂಬರ್ 30 ಕೊನೆಯ ದಿನ.

***

ನಾರಾಯಣಪ್ಪ, ಶಿವಮೊಗ್ಗ

ಪ್ರಶ್ನೆ: ನಾನು ಸರ್ಕಾರಿ ನೌಕರ. ವಯಸ್ಸು 52. ನನಗೆ 22 ವರ್ಷ ವಯಸ್ಸಿನ ಮಗ, 19 ವರ್ಷ ವಯಸ್ಸಿನ ಮಗಳು ಹಾಗೂ 16 ವರ್ಷ ವಯಸ್ಸಿನ ಇನ್ನೊಬ್ಬ ಮಗ ಇದ್ದಾರೆ. ನಾನು ಪ್ರತಿ ವರ್ಷ ತೆರಿಗೆ ಸಲ್ಲಿಸುವುದರೊಂದಿಗೆ ಐ.ಟಿ. ರಿಟರ್ನ್ಸ್‌ ಸಲ್ಲಿಸುತ್ತೇನೆ. ನನ್ನ ಹೆಂಡತಿ ಹೆಸರಿನಲ್ಲಿ ₹ 10 ಲಕ್ಷ ಬ್ಯಾಂಕ್‌ ಠೇವಣಿ ಮಾಡಿದ್ದೇನೆ. ಮೂವರು ಮಕ್ಕಳ ಹೆಸರಿನಲ್ಲಿ ಪ್ರತಿ ತಿಂಗಳು ₹ 5 ಸಾವಿರ ಆರ್‌.ಡಿ. ಮಾಡುತ್ತಿದ್ದೇನೆ. ಈ ಹೂಡಿಕೆ ನನ್ನ ಆದಾಯದಿಂದ ಬಂದ ಮೊತ್ತಕ್ಕೆ ತೆರಿಗೆ ಸಲ್ಲಿಸಿ ಉಳಿಸಿದ ಹಣ. ನನ್ನ ಕುಟುಂಬದ ಸದಸ್ಯರ ಈ ಠೇವಣಿ ಮೇಲಿನ ಬಡ್ಡಿ ಅವರವರ ಆದಾಯಕ್ಕೆ ಸೇರುತ್ತದೆ. ನಾನು ಪ್ರಶ್ನೆಯಲ್ಲಿ ವಿವರಿಸಿದರಂತೆ ನನ್ನ ಕುಟುಂಬದವರು ಪಡೆಯುವ ಠೇವಣಿ ಮೇಲಿನ ಬಡ್ಡಿ ಆದಾಯ ನನ್ನ ಆದಾಯಕ್ಕೆ ಸೇರಿಸಿ ತೆರಿಗೆ ಕೊಡುವ ಅವಶ್ಯವಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಕುರಿತು ನನಗೆ ತಿಳಿಸಿ ಹೇಳಿರಿ.

ಉತ್ತರ: ನಿಮ್ಮ ಅನಿಸಿಕೆ ಒಂದು ರೀತಿಯಲ್ಲಿ ತಪ್ಪಲ್ಲ. ನಿಮ್ಮ ಪ್ರಶ್ನೆ ಪ್ರಕಾರ ನೀವು ನಿಮ್ಮ ಹೆಂಡತಿ, ಮಕ್ಕಳ ಹೆಸರಿನಲ್ಲಿ ಬ್ಯಾಂಕ್‌ ಠೇವಣಿ ಮಾಡುತ್ತಿದ್ದು, ಇದು ನೀವು ಅವರಿಗೆ ಕೊಡುವ ಇನಾಮು ಎಂದು ಕೂಡಾ ‍ಪರಿಗಣಿಸಬಹುದು. ರಕ್ತಸಂಬಂಧಿಗಳಲ್ಲಿ ಯಾವುದೇ ತರಹದ ಚರ ಅಥವಾ ಸ್ಥಿರ ಆಸ್ತಿ ಇನಾಮು ಅಥವಾ ದಾನ ರೂಪದಲ್ಲಿ ಕೊಟ್ಟಾಗ, ಕೊಟ್ಟ ಅಥವಾ ಪಡೆದ ವ್ಯಕ್ತಿ ಇಂತಹ ವ್ಯವಹಾರದಲ್ಲಿ ಯಾವುದೇ ತೆರಿಗೆಗೆ ಒಳಗಾಗುವುದಿಲ್ಲ. ಇದೇ ವೇಳೆ ಆದಾಯ ತೆರಿಗೆ ಸೆಕ್ಷನ್‌ 64(1ಎ) ಪ್ರಕಾರ ಗಂಡನಾದವನು ತನ್ನ ಆದಾಯದಿಂದ ಹೆಂಡತಿ ಮತ್ತು ಅಪ್ರಾಪ್ತ ವಯಸ್ಸಿನ (Minors) ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಿದಲ್ಲಿ ಅಂತಹ ಠೇವಣಿ ಮೇಲಿನ ಬಡ್ಡಿ ಗಂಡನ ಆದಾಯಕ್ಕೆ ಸೇರಿ, ಗಂಡನೇ ತೆರಿಗೆ ಕೊಡಬೇಕಾಗುತ್ತದೆ. ಸೆಕ್ಷನ್‌ 10 (32) ಆಧಾರದ ಮೇಲೆ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನ ಠೇವಣಿ ಮೇಲಿನ ಬಡ್ಡಿಯಲ್ಲಿ ತಲಾ ₹ 1,500 ವಿನಾಯಿತಿ ಪಡೆಯಬಹುದು. ನಿಮ್ಮ ವಿಚಾರದಲ್ಲಿ 22 ವರ್ಷದ ಮಗ, 19 ವರ್ಷದ ಮಗಳು ಇವರ ಹೆಸರಿನಲ್ಲಿ ಇರಿಸಿದ ಠೇವಣಿ ಮೇಲಿನ ಬಡ್ಡಿ ಆದಾಯವನ್ನು ನಿಮ್ಮ ಆದಾಯಕ್ಕೆ ಸೇರಿಸಿ ತೆರಿಗೆ ಕೊಡುವ ಅವಶ್ಯವಿಲ್ಲ. ನಿಮ್ಮ ಹೆಂಡತಿ ಹಾಗೂ 16 ವರ್ಷದ ಅಪ್ರಾಪ್ತ ವಯಸ್ಸಿನ ಮಗ ಇವರ ಠೇವಣಿಯಿಂದ ಬರುವ ಬಡ್ಡಿ ನಿಮ್ಮ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಿರಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001. ಇ–ಮೇಲ್‌: businessdesk@prajavani.co.in ಮೊ: 9448015300

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು