ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಮಾನ ಹೆಚ್ಚಳ: ಮೆಣಸು, ಕಾಫಿಗೆ ಬಿಸಿಲ ಬರೆ, ಶೇ 80ರಷ್ಟು ಫಸಲು ನಾಶದ ಆತಂಕ

ಆರ್.ಜಗದೀಶ್ ಹೊರಟ್ಟಿ
Published 5 ಮೇ 2024, 23:50 IST
Last Updated 5 ಮೇ 2024, 23:50 IST
ಅಕ್ಷರ ಗಾತ್ರ

ಹೆತ್ತೂರು (ಹಾಸನ): ಮಲೆನಾಡು ಭಾಗವಾದ ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಯಸಳೂರು ಹೋಬಳಿಯಲ್ಲಿ ತಾಪಮಾನ ಏರಿಕೆಯಿಂದಾಗಿ ಏಲಕ್ಕಿ, ಕಾಫಿ ತೋಟಗಳು ಒಣಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಮಾರ್ಚ್ ಮೊದಲ ವಾರ ಸಕಲೇಶಪುರ ತಾಲ್ಲೂಕಿನಲ್ಲಿ 32 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದರೆ, ತಿಂಗಳ ಅಂತ್ಯಕ್ಕೆ 35 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಮಲೆನಾಡಿನಲ್ಲಿ ಸಾಮಾನ್ಯವಾಗಿ ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಮಳೆಯಾಗುವುದು ವಾಡಿಕೆ. ಆದರೆ, ಈ ಬಾರಿ ಮೇ ತಿಂಗಳು ಆರಂಭಗೊಂಡರೂ ಮಳೆ ಬೀಳದ ಪರಿಣಾಮ ಉಷ್ಣಾಂಶ ಏರುತ್ತಿದ್ದು, ಕಾಫಿ ಬೆಳೆಗಾರರನ್ನು ಆತಂಕದ ಮಡುವಿಗೆ ದೂಡಿದೆ.

ಸಕಲೇಶಪುರ ತಾಲ್ಲೂಕಿನಲ್ಲಿ 16 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಾಳುಮೆಣಸು, 20 ಸಾವಿರ ಹೆಕ್ಟೇರ್‌ನಲ್ಲಿ ಕಾಫಿ ಹಾಗೂ 2,900 ಹೆಕ್ಟೇರ್‌ನಲ್ಲಿ ಅಡಿಕೆ ಹಾಗೂ ಒಂದು ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಏಲಕ್ಕಿ ಬೆಳೆಯಲಾಗಿದೆ.

ಮಳೆ ಕೊರತೆಯಿಂದಾಗಿ ಶೇ 80ರಷ್ಟು ಬೆಳೆ ನಾಶವಾಗುವ ಆತಂಕ ಎದುರಾಗಿದೆ.  ಇದರಿಂದ ಒಟ್ಟಾರೆ ಇಳುವರಿಯೂ ಕುಸಿಯುವ ಸಾಧ್ಯತೆಯಿದೆ ಎಂದು ಬೆಳೆಗಾರರು ಹೇಳುತ್ತಾರೆ.

ನೀರು ಸಿಂಪಡಣೆ:

ಉಷ್ಣಾಂಶ ಹೆಚ್ಚುತ್ತಿರುವ ಬೆನ್ನಲ್ಲೇ ಮುಂಬರುವ ಹಂಗಾಮಿಗೆ ಬೆಳೆ ಉಳಿಸಿಕೊಳ್ಳಲು ಬೆಳೆಗಾರರು ಹರಸಾಹಸಪಡುತ್ತಿದ್ದಾರೆ. ಕಾಫಿ, ಕಾಳುಮೆಣಸು ಬೆಳೆಗೆ ಕೃತಕವಾಗಿ ನೀರು ಸಿಂಪಡಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಏಪ್ರಿಲ್‌ ಆರಂಭದಲ್ಲಿ ಒಂದು ಸುತ್ತು ಕೃತಕವಾಗಿ ನೀರು ಸಿಂಪಡಿಸಿದ್ದ ಕಾಫಿ ಬೆಳೆಗಾರರು ಮಳೆ ಬೀಳದೇ ಇರುವುದರಿಂದ ಮತ್ತೊಂದು ಸುತ್ತು ನೀರು ಸಿಂಪಡಿಸಿದ್ದಾರೆ. ಆದರೂ, ಅತಿಯಾದ ಉಷ್ಣಾಂಶದಿಂದ ಪ್ರಯೋಜನವಾಗುತ್ತಿಲ್ಲ ಎಂದು ಬೆಳೆಗಾರರು ನೋವು ತೋಡಿಕೊಳ್ಳುತ್ತಾರೆ.

ಕುಡಿಯುವ ಸಮಸ್ಯೆ ಆರಂಭವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಹೊಳೆ ಹಾಗೂ ಕೆರೆಗಳಲ್ಲಿ ಬೆಳೆಗಾರರು ಮೋಟಾರ್ ಅಳವಡಿಸಿ ಕಾಫಿ ಗಿಡಗಳಿಗೆ ಕೃತಕವಾಗಿ ನೀರು ಸಿಂಪಡಿಸಬಾರದು ಎಂದು ತಾಲ್ಲೂಕು ಆಡಳಿತ ಆದೇಶ ಹೊರಡಿಸಿದೆ. ಇದರಿಂದಾಗಿ ಹಲವು ಬೆಳೆಗಾರರಿಗೆ ಹೊಳೆಗಳಲ್ಲಿ ಇಟ್ಟಿದ್ದ ಮೋಟಾರ್‌ಗಳನ್ನು ತೆರವು ಮಾಡಬೇಕಾದ ಅನಿವಾರ್ಯತೆಗೆ ಎದುರಾಗಿದೆ. ಇದರಿಂದ ಕಾಫಿ ಗಿಡಗಳಿಗೆ ನೀರು ಸಿಂಪಡಿಸುವುದು ಕಷ್ಟಕರವಾಗಿದೆ ಎಂದು ಬೆಳೆಗಾರರು ಹೇಳುತ್ತಾರೆ.

ಬತ್ತಿದ ಅಂತರ್ಜಲ:

ಮಳೆ ಕೈಕೊಟ್ಟಿರುವುದರಿಂದ ಹೊಳೆ, ಕೆರೆ, ಹಳ್ಳಗಳಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ.

ಹೇಮಾವತಿ ಹಾಗೂ ಉಪ ನದಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಹಲವು ಕೆರೆಗಳು, ಕೊಳವೆಬಾವಿಗಳು ಬತ್ತಿ ಹೋಗಿವೆ. ಇದರಿಂದಾಗಿ ಕೃಷಿ ಜಮೀನಿಗೆ ನೀರಿನ ಕೊರತೆ ಕಾಡುತ್ತಿದೆ.

ಹಳ್ಳಿಯೂರು ಗ್ರಾಮದ ತೋಟದಲ್ಲಿ ಒಣಗಿರುವ ಕಾಫಿ ಗಿಡಗಳು
ಹಳ್ಳಿಯೂರು ಗ್ರಾಮದ ತೋಟದಲ್ಲಿ ಒಣಗಿರುವ ಕಾಫಿ ಗಿಡಗಳು

ವಾಡಿಕೆಯಂತೆ ಮಾರ್ಚ್‌ ಮೊದಲ ವಾರದಲ್ಲಿ ಕಾಫಿ ಗಿಡಗಳಿಗೆ ನೀರು ಹಾಯಿಸಿರುವ ಬೆಳೆಗಾರರಿಗೆ ಗಿಡದಲ್ಲಿ ಹೂವನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ಈಗ ನೀರು ಒದಗಿಸಲಾಗದೆ ಗಿಡಗಳು ಹೂವು ಒಣಗುತ್ತಿದೆ

-ಕಾಗಿನಹರೆ ಚಂದ್ರು, ಕಾಫಿ ಬೆಳೆಗಾರ

ಮಳೆ ಬಿದ್ದರೆ ಒಣಗಿರುವ ಗಿಡಗಳು ಚಿಗುರುತ್ತವೆ. ಆದರೆ ಮುಂದಿನ ವರ್ಷಕ್ಕೆ ಫಸಲು ಸಿಗುವುದಿಲ್ಲ. ತಾಪಮಾನ ಏರಿಕೆಯು ಕಾಫಿ ಏಲಕ್ಕಿ ಬೆಳೆಗೆ ಹೆಚ್ಚಿನ ಹಾನಿ ಉಂಟು ಮಾಡಿದೆ

-ಗಂಗಾಧರ್ ಚಿಕ್ಕಕುಂದೂರು, ಕಾಫಿ ಬೆಳೆಗಾರ

ಮುಂದಿನ ದಿನಗಳಲ್ಲಿ ಇದೇ ರೀತಿ ಉಷ್ಣಾಂಶ ಹೆಚ್ಚಾದರೆ ಕಾಫಿ ಫಸಲಿಗೆ ಪೆಟ್ಟು ಬೀಳಲಿದೆ. ಒಟ್ಟಾರೆ ಇಳುವರಿ ಕುಸಿಯಲಿದ್ದು ಬೆಳೆಗಾರರಿಗೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ

ಎಂ.ಜೆ. ಸಚಿನ್, ಖಜಾಂಚಿ, ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘ

ಕೃಷಿ ಕಾರ್ಮಿಕರ ಪರದಾಟ ಕಾಫಿ ತೋಟಗಳು ಮತ್ತು ಗದ್ದೆಗಳಲ್ಲಿ ಕೃಷಿ ಕಾರ್ಮಿಕರು ಸುಡು ಬಿಸಿಲಿನಲ್ಲೇ ಕೆಲಸ ಮಾಡಬೇಕಾಗಿದೆ. ಇದರಿಂದ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಲವು ಕಾರ್ಮಿಕರು ಬಿಸಿಲಿನ ಝಳಕ್ಕೆ ಹೆದರಿ ಕೂಲಿ ಕೆಲಸಕ್ಕೆ ಹೋಗುತ್ತಿಲ್ಲ. ಇದರಿಂದ ಕಾಫಿ ತೋಟಗಳಲ್ಲಿನ ಕೆಲಸಗಳಿಗೆ ತೊಡಕು ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT