ಶುಕ್ರವಾರ, ಜೂನ್ 5, 2020
27 °C
ಆರ್ಥಿಕತೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ 2ನೇ ನೆರವು

ರೆಪೊ ದರ ಅಗ್ಗ l ‘ಇಎಂಐ’ ಮತ್ತೆ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ:  ಕೋವಿಡ್‌ ದಿಗ್ಬಂಧನದಿಂದಾಗಿ ನಿಸ್ತೇಜಗೊಂಡಿರುವ ದೇಶಿ ಆರ್ಥಿಕತೆ ಪುಟಿದೇಳಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಶುಕ್ರವಾರ ಅನಿರೀಕ್ಷಿತವಾಗಿ ಎರಡನೇ ಕಂತಿನ ಹಣಕಾಸು ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದೆ. 

ಬ್ಯಾಂಕ್‌ಗಳು ವಿತರಿಸುವ ಗೃಹ, ವಾಹನ ಖರೀದಿ ಮತ್ತು ಇತರ ಸಾಲಗಳ ಹಾಗೂ  ಬ್ಯಾಂಕ್‌ಗಳ ಉಳಿತಾಯ ಖಾತೆ, ಸ್ಥಿರ ಠೇವಣಿಗಳ ಮೇಲಿನ  ಬಡ್ಡಿ ದರಗಳನ್ನು ನಿರ್ಧರಿಸುವ ಅಲ್ಪಾವಧಿ ಬಡ್ಡಿ ದರಗಳಾದ ರೆಪೊ  ದರಗಳನ್ನು ಶೇ 0.40ರಷ್ಟು ತಗ್ಗಿಸಿದೆ. ರೆಪೊ ದರ ಈಗ ಶೇ 4ಕ್ಕೆ ಮತ್ತು ರಿವರ್ಸ್‌ ರೆಪೊ ದರ ಶೇ 3.35ಕ್ಕೆ ಇಳಿದಿದೆ. ಎರಡು ತಿಂಗಳಲ್ಲಿನ ಎರಡನೇ ಕಡಿತ ಇದಾಗಿದೆ.

ಅಗತ್ಯ ಬಿದ್ದರೆ ಬಡ್ಡಿ ದರಗಳನ್ನು ಇನ್ನಷ್ಟು ಇಳಿಸುವ ಅವಕಾಶವನ್ನು ಆರ್‌ಬಿಐ ಮುಕ್ತವಾಗಿರಿಸಿಕೊಂಡಿದೆ.

ರೆಪೊ ದರಗಳ ಕಡಿತಕ್ಕೆ ಪೂರಕವಾಗಿ, ಗೃಹ, ವಾಹನ ಮತ್ತಿತರ ಸಾಲ ಮರು ಪಾವತಿಸುವ ಮಾಸಿಕ ಸಮಾನ ಕಂತುಗಳನ್ನು (ಇಎಂಐ) ಇನ್ನೂ ಮೂರು ತಿಂಗಳ ಕಾಲ ಮುಂದೂಡಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ ‘ಇಎಂಐ’ ಮುಂದೂಡಿಕೆಗೆ ಈಗ ಒಟ್ಟಾರೆ 6 ತಿಂಗಳ ಕಾಲಾವಕಾಶ ದೊರೆಯಲಿದೆ. ಕಂಪನಿಗಳ ದುಡಿಯುವ ಬಂಡವಾಳದ ಬಡ್ಡಿ ಪಾವತಿಗೂ 3 ತಿಂಗಳ ಹೆಚ್ಚಿನ ಸಮಯಾವಕಾಶ ಕಲ್ಪಿಸಲಾಗಿದೆ.

ರೆಪೊ ದರ ಕಡಿತದ ಪರಿಣಾಮ: ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರವಾಗಿರುವ ರೆಪೊ ದರ ತಗ್ಗಿಸಿರುವುದರಿಂದ ಬ್ಯಾಂಕ್‌ ಸಾಲ ತುಸು ಅಗ್ಗವಾಗಲಿವೆ. ಮುಂಬರುವ ದಿನಗಳಲ್ಲಿ ಗೃಹ, ವಾಹನ, ವೈಯಕ್ತಿಕ ಮತ್ತು ಇತರ ಅವಧಿ ಸಾಲಗಳ ಬಡ್ಡಿ ದರ ಮತ್ತು ಮಾಸಿಕ ಸಮಾನ ಕಂತಿನ (ಇಎಂಐ) ಹೊರೆ ಕಡಿಮೆಯಾಗಲಿದೆ.

 

‘ಜಿಡಿಪಿಯ ನಕಾರಾತ್ಮಕ ಪ್ರಗತಿ’

‘ಕೋವಿಡ್‌–19’ ಪಿಡುಗಿನ ವ್ಯತಿರಿಕ್ತ ಪರಿಣಾಮವು ನಿರೀಕ್ಷೆಗಿಂತ ಹೆಚ್ಚು ತೀವ್ರವಾಗಿದ್ದು, 2020–21ನೇ ಹಣಕಾಸು ವರ್ಷ
ದಲ್ಲಿ ಆರ್ಥಿಕ ಪ್ರಗತಿಯು (ಜಿಡಿಪಿ) ನಕಾರಾತ್ಮಕ ಮಟ್ಟದಲ್ಲಿ ಇರುವ ಸಾಧ್ಯತೆ ಹೆಚ್ಚಿದೆ. ಹಣದುಬ್ಬರದ ಮುನ್ನೋಟವು ಅನಿಶ್ಚಿತವಾಗಿರಲಿದೆ. ಸಂಕುಚಿತಗೊಂಡಿರುವ ಬೇಡಿಕೆ ಹಾಗೂ ಪೂರೈಕೆ ವ್ಯತ್ಯಯಗಳು ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಗಮನಾರ್ಹವಾಗಿ ಕುಗ್ಗಿಸಲಿವೆ. ದ್ವಿತೀಯಾರ್ಧದಲ್ಲಿ ಮಾತ್ರ ಚೇತರಿಕೆ ಕಂಡು ಬರಲಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯನ್ನು 2ನೇ ಬಾರಿಗೆ ಅವಧಿಗೆ ಮುನ್ನವೇ ಕರೆದಿರುವ ಆರ್‌ಬಿಐ, ಹಲವಾರು ಮಹತ್ವದ ನಿರ್ಧಾರ
ಗಳನ್ನು ಕೈಗೊಂಡಿದೆ.

 

**

ಠೇವಣಿ ಆದಾಯ ಕುಸಿತ

ಬ್ಯಾಂಕ್‌ಗಳು, ತಮ್ಮ ಹಣಕಾಸು ಪರಿಸ್ಥಿತಿಯ ಸಮತೋಲನ ಕಾಯ್ದುಕೊಳ್ಳಲು ವಿವಿಧ ಅವಧಿಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವನ್ನೂ ಇಳಿಸಲಿವೆ. ಈ ಠೇವಣಿಗಳ ಮೇಲಿನ ಬಡ್ಡಿ ಆದಾಯ ನೆಚ್ಚಿಕೊಂಡಿರುವ ಉಳಿತಾಯಗಾರರು ಮತ್ತು ಪಿಂಚಣಿದಾರರಿಗೆ ನಷ್ಟವಾಗಲಿದೆ.

ಬ್ಯಾಂಕ್‌ಗಳು ತನ್ನಲ್ಲಿ ಠೇವಣಿ ಇರಿಸುವ ಮೊತ್ತಕ್ಕೆ ಪ್ರತಿಯಾಗಿ ಆರ್‌ಬಿಐ ನೀಡುವ ಬಡ್ಡಿ ದರವಾದ ರಿವರ್ಸ್‌ ರೆಪೊ ದರವೂ ಕಡಿಮೆಯಾಗಿರುವುದರಿಂದ, ಬ್ಯಾಂಕ್‌ಗಳು ಉತ್ಪಾದನಾ ವಲಯಕ್ಕೆ ಹೆಚ್ಚು ಸಾಲ ನೀಡಲು ಮುಂದಾಗಲಿವೆ. ಆರ್‌ಬಿಐ ಬಳಿ ಇರುವ ಅಂದಾಜು ₹ 7 ಲಕ್ಷ ಕೋಟಿ ಮೊತ್ತವು ಈ ಉದ್ದೇಶಕ್ಕೆ  ಬಳಕೆಯಾಗಬಹುದು.

***

ಮುಂದೂಡಿಕೆ ಪ್ರಯೋಜನ

ಅವಧಿ ಸಾಲಗಳ ಮರುಪಾವತಿಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಿರುವುದರಿಂದ ಗೃಹ, ವಾಹನ ಖರೀದಿ, ಅವಧಿ ಸಾಲ ಪಡೆದವರು ಆಗಸ್ಟ್‌ವರೆಗೆ ತಮ್ಮ ಕಂತು ಪಾವತಿ ಮುಂದೂಡಬಹುದು. ವೇತನ ಕಡಿತ, ಉದ್ಯೋಗ ನಷ್ಟ ಭೀತಿ
ಎದುರಿಸುತ್ತಿರುವವರು, ತಯಾರಿಕೆ ಸ್ಥಗಿತಗೊಳಿಸಿರುವ ಮತ್ತು
ಬಳಿಯಲ್ಲಿ ಹಣವಿಲ್ಲದ ಕೈಗಾರಿಕೋದ್ಯಮಿಗಳಿಗೆ ಇದರಿಂದ ಲಾಭವಾಗಲಿದೆ. ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವ ರಿಯಲ್‌ ಎಸ್ಟೇಟ್‌ ವಲಯವೂ ಇದರ ಪ್ರಯೋಜನ ಪಡೆಯಲಿದೆ.

6 ತಿಂಗಳವರೆಗೆ ಮರುಪಾವತಿ ಮುಂದೂಡಿಕೆ ಅವಧಿಯಲ್ಲಿನ ಬಡ್ಡಿಯನ್ನು ಅವಧಿ ಸಾಲವನ್ನಾಗಿ ಪರಿವರ್ತಿಸಲು ಅವಕಾಶ ಮಾಡಿಕೊಡಲಾಗಿದೆ. ಸಾಲಗಾರರು ಇದನ್ನು 2021ರ ಮಾರ್ಚ್‌ ಒಳಗೆ ಮರುಪಾವತಿಸಬಹುದು. ಸಾಲ ಮುಂದೂಡಿದವರ ಮೇಲಿನ ಹೊರೆಯನ್ನೂ ಇದು ಕಡಿಮೆ ಮಾಡಲಿದೆ.

ರಾಜ್ಯಗಳಿಗೆ ₹ 13,300 ಕೋಟಿ

ತಮ್ಮ ಸಾಲ ಪಾವತಿಸಲು ರಾಜ್ಯ ಸರ್ಕಾರಗಳು ಆರ್‌ಬಿಐನಲ್ಲಿ ಪ್ರತ್ಯೇಕವಾಗಿ (ಸಿಎಸ್‌ಎಫ್‌) ಇರಿಸಿರುವ ಮೊತ್ತವನ್ನು ಹಿಂದೆ ಪಡೆಯುವ ನಿಯಮ ಸಡಿಲಿಸಲಾಗಿದೆ. ಇದರಿಂದ ರಾಜ್ಯಗಳಿಗೆ ₹ 13,300 ಕೋಟಿ ಹೆಚ್ಚುವರಿ ಸಂಪನ್ಮೂಲ ಲಭ್ಯವಾಗಲಿದೆ.

ಕಂಪನಿ ಸಾಲ ಮಿತಿ ಹೆಚ್ಚಳ

ಕಾರ್ಪೊರೇಟ್‌ಗಳಿಗೆ ಬ್ಯಾಂಕ್‌ ಒಕ್ಕೂಟ ನೀಡುವ ಸಾಲದ ಮಿತಿ ‌ಹೆಚ್ಚಿಸಲಾಗಿದೆ. ವಿದೇಶಿ ವ್ಯಾಪಾರಕ್ಕೆ ನೆರವಾಗುವ ಆಮದು – ರಫ್ತು ಬ್ಯಾಂಕ್‌ಗೆ ₹ 15 ಸಾವಿರ ಕೋಟಿ ಮೊತ್ತದ ಸಾಲ.

ಷೇರುಪೇಟೆ ನಿರುತ್ಸಾಹ

ಆರ್‌ಬಿಐ ನಿರ್ಧಾರವು ಷೇರುಪೇಟೆಯಲ್ಲಿ ಉತ್ಸಾಹ ಮೂಡಿಸುವಲ್ಲಿ ವಿಫಲವಾಗಿದೆ. ಸಾಲ ಮರುಪಾವತಿ ಮುಂದೂಡಿಕೆಯಿಂದ ಬ್ಯಾಂಕ್‌ಗಳ ವಸೂಲಾಗದ ಸಾಲ (ಎನ್‌ಪಿಎ) ಹೆಚ್ಚಳಗೊಳ್ಳುವ ಮತ್ತು ಹಣಕಾಸು ಶಿಸ್ತು ಅಸ್ತವ್ಯಸ್ತಗೊಳ್ಳುವ ಆತಂಕದಿಂದಾಗಿ ಬ್ಯಾಂಕಿಂಗ್‌ ಮತ್ತು ಹಣಕಾಸು ಕಂಪನಿಗಳ ಷೇರುಗಳಲ್ಲಿ ಮಾರಾಟ ಒತ್ತಡ ಕಂಡು ಬಂದಿತು. ಸಂವೇದಿ ಸೂಚ್ಯಂಕವು 260 ಅಂಶಕ್ಕೆ ಎರವಾಗಿ 30,672 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು