ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಏಳನೇ ಬಾರಿ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

Published 5 ಏಪ್ರಿಲ್ 2024, 5:06 IST
Last Updated 5 ಏಪ್ರಿಲ್ 2024, 5:06 IST
ಅಕ್ಷರ ಗಾತ್ರ

ಮುಂಬೈ: ಆರ್ಥಿಕ ತಜ್ಞರ ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್‌ ಬ್ಯಾಂಕ್‌, ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಹಾಗಾಗಿ ಗೃಹ, ವಾಹನ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ತೀವ್ರ ನಿರಾಸೆಯಾಗಿದೆ. 

ಶುಕ್ರವಾರ ಮುಕ್ತಾಯಗೊಂಡ 2024–25ನೇ ಆರ್ಥಿಕ ವರ್ಷದ ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಪ್ರಥಮ ಸಭೆಯಲ್ಲಿ, ಆರು ಸದಸ್ಯರ ಪೈಕಿ ಐವರು ರೆಪೊ ದರವನ್ನು ಶೇ 6.5ರಲ್ಲಿಯೇ ಉಳಿಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. 

ಏಪ್ರಿಲ್‌ನಿಂದ ಜೂನ್‌ವರೆಗೆ ಸಾಮಾನ್ಯ ತಾಪಮಾನ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇದರಿಂದ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಹಾಗಾಗಿ, ಚಿಲ್ಲರೆ ಹಣದುಬ್ಬರವು ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಬಡ್ಡಿದರದಲ್ಲಿ ಬದಲಾವಣೆಗೆ ಆರ್‌ಬಿಐ ಮುಂದಾಗಿಲ್ಲ. ಸತತ ಏಳನೇ ಬಾರಿಗೆ ಯಥಾಸ್ಥಿತಿ ಕಾಯ್ದುಕೊಂಡಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌, ಸರ್ಕಾರಿ ಸಾಲ ಪತ್ರಗಳನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಅಡಮಾನ ಇಡದೆ ಅವುಗಳ ಬಳಿ ಇರುವ ಹೆಚ್ಚುವರಿ ಹಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ (ಸ್ಟ್ಯಾಂಡಿಂಗ್‌ ಡಿಪಾಸಿಟ್‌ ಫೆಸಿಲಿಟಿ– ಎಸ್‌ಡಿಎಫ್‌). ಇದು ನಗದು ಹರಿವಿನ ಪ್ರಮಾಣ ತಗ್ಗಿಸಲು ನೆರವಾಗಲಿದೆ.

ಈ ಹಣಕ್ಕೆ ನಿಗದಿಪಡಿಸಿರುವ ಶೇ 6.25ರಷ್ಟು ಬಡ್ಡಿದರದಲ್ಲೂ ಬದಲಾವಣೆ ಮಾಡಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಆರ್‌ಬಿಐನಿಂದ ಬ್ಯಾಂಕ್‌ಗಳು ‍ಪಡೆಯುವ ಸಾಲಕ್ಕೆ ನಿಗದಿಪಡಿಸಿರುವ ಶೇ 6.75ರಷ್ಟು ಬಡ್ಡಿದರದಲ್ಲೂ ಯಥಾಸ್ಥಿತಿ ಕಾಯ್ದುಕೊಂಡಿದೆ. 

ಸಭೆಯ ಬಳಿಕ ಮಾತನಾಡಿದ ಗವರ್ನರ್‌ ಶಕ್ತಿಕಾಂತ ದಾಸ್‌, ‘ದೇಶದ ಅರ್ಥ ವ್ಯವಸ್ಥೆಯ ಮುನ್ನೋಟವನ್ನು ಅವಲೋಕಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಹಂತ ಹಂತವಾಗಿ ಹಣದುಬ್ಬರವನ್ನು ಶೇ 4ರ ಮಿತಿಯೊಳಗೆ ತರುವ ನಿಟ್ಟಿನಲ್ಲಿ ಹಣದ ಹರಿವನ್ನು ಸಂಕುಚಿತಗೊಳಿಸುವ ಕ್ರಮಕ್ಕೆ ಮುಂದಾಗಿದ್ದೇವೆ. ಇದು ಆರ್ಥಿಕತೆ ಬೆಳವಣಿಗೆಗೂ ನೆರವಾಗಲಿದೆ ಎಂದು ಹೇಳಿದರು.

2022ರ ಏಪ್ರಿಲ್‌ನಲ್ಲಿ ಶೇ 7.8ರಷ್ಟಿದ್ದ ಹಣದುಬ್ಬರವನ್ನು ನೆನಪಿಸಿಕೊಂಡ ಅವರು, ‘ಆ ವೇಳೆ ಹಣದುಬ್ಬರದ ಕೊಠಡಿಗೆ ಆನೆವೊಕ್ಕಿತ್ತು. ಈಗ ಅದು ಹೊರಗೆ ವಿಹಾರಕ್ಕೆ ಹೋಗಿದ್ದು, ಅರಣ್ಯದೊಳಕ್ಕೆ ಹೋಗುವಂತೆ ಕಾಣುತ್ತಿದೆ. ಅದು ಕಾಡಿಗೆ ಮರಳಿ ಅಲ್ಲಿಯೇ ಉಳಿಯುವಂತೆ ಬಯಸುತ್ತೇವೆ’ ಎಂದು ಹೇಳಿದರು.

‘ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಮಧ್ಯಮ ಹಂತದಲ್ಲಿದ್ದು, ನಿಗದಿತ ಗುರಿಯತ್ತ ಸಾಗುತ್ತಿದೆ. ಈ ಗುರಿ ಮುಟ್ಟದ ಹೊರತು ನಮ್ಮ ಕಾರ್ಯ ಪೂರ್ಣಗೊಳ್ಳುವುದಿಲ್ಲ’ ಎಂದು ಸ್ಪ‍ಷ್ಟಪಡಿಸಿದರು.

ಜಿಡಿಪಿ ಶೇ 7ರಷ್ಟು ಪ್ರಗತಿ ನಿರೀಕ್ಷೆ

2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. 2023–24ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 7.6ರಷ್ಟು ದಾಖಲಾಗಲಿದೆ ಎಂದು ಹೇಳಿದೆ. ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದ್ದು ಹಣದುಬ್ಬರದ ಒತ್ತಡ ತಗ್ಗಲಿದೆ. ತಯಾರಿಕಾ ಮತ್ತು ಸೇವಾ ವಲಯಗಳ ಬೆಳವಣಿಗೆ ವೇಗವು ಸುಸ್ಥಿರವಾಗಿರಲಿದೆ. ಇದು ದೇಶದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಶಕ್ತಿಕಾಂತ ದಾಸ್‌ ಹೇಳಿದ್ದಾರೆ. ಕೃಷಿ ಮತ್ತು ಗ್ರಾಮೀಣ ಚಟುವಟಿಕೆಗಳು ಸದೃಢವಾಗಿರಲಿವೆ.  ಖಾರೀಫ್‌ ಅವಧಿಯಲ್ಲೂ ಫಸಲು ಸುಧಾರಿಸಲಿದೆ. ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಹೆಚ್ಚಳ ಹಾಗೂ ಬಳಕೆಗೆ ಉತ್ತೇಜನ ಸಿಗಲಿದ್ದು ಅರ್ಥ ವ್ಯವಸ್ಥೆಗೆ ನೆರವಾಗಲಿದೆ ಎಂದಿದ್ದಾರೆ. ಸಿಮೆಂಟ್ ಉತ್ಪಾದನೆಯು ಚೇತರಿಕೆ ಕಾಣಲಿದೆ. ಉಕ್ಕಿನ ಬಳಕೆ ಮತ್ತು ಉತ್ಪಾದನೆಯೂ ಸದೃಢವಾಗಿರಲಿದೆ. ಬಂಡವಾಳ ಸರಕುಗಳ ಆಮದು ಬಲಗೊಳ್ಳಲಿದೆ. ಇದು ಹೂಡಿಕೆ ಚಕ್ರದ ಸುಗಮ ಚಾಲನೆಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. 

‘ಹಣದುಬ್ಬರ ಶೇ 4.5ರಷ್ಟು ಇರಲಿದೆ’

ಹಣದುಬ್ಬರದ ಪಥದಲ್ಲಿ ಆಹಾರ ಪದಾರ್ಥಗಳ ಬೆಲೆ ನಿಯಂತ್ರಣವು ಅನಿಶ್ಚಿತತೆಯಿಂದ ಕೂಡಿದೆ. ಹಾಗಾಗಿ 2024–25ನೇ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.5ರಷ್ಟು ಇರಲಿದೆ ಎಂದು ಹಣಕಾಸು ನೀತಿ ಸಮಿತಿ ಅಂದಾಜಿಸಿದೆ.  ಫೆಬ್ರುವರಿ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇ 5.1ರಷ್ಟು ದಾಖಲಾಗಿದೆ. ಆಹಾರ ಹಣದುಬ್ಬರವು ಶೇ 8.66ರಷ್ಟಿದೆ. 2023–24ನೇ ಆರ್ಥಿಕ ವರ್ಷದಲ್ಲಿ ಹಣದುಬ್ಬರವು ಶೇ 5.4ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.  ಮಾರ್ಚ್‌ ತಿಂಗಳ ಮಧ್ಯದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಕಡಿತವಾಗಿದೆ. ಆದರೆ ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ. ಮುಂದುವರಿದಿರುವ ಜಾಗತಿಕ ಬಿಕ್ಕಟ್ಟುಗಳು ಸರಕುಗಳ ಬೆಲೆ ಮತ್ತು ಪೂರೈಕೆ ಸರಪಳಿಗೆ ಧಕ್ಕೆ ತರುವ ಸಾಧ್ಯತೆಯಿದೆ ಎಂದು ಆರ್‌ಬಿಐ ತಿಳಿಸಿದೆ. ಕಳೆದ ಎರಡು ವರ್ಷಗಳ ಹಿಂದೆ ಗೋಧಿ ಫಸಲು ಬಿಸಿ ಗಾಳಿಗೆ ಸಿಲುಕಿ ಇಳುವರಿ ಕುಂಠಿತವಾಗಿತ್ತು. ರಾಬಿ ಅವಧಿಯಲ್ಲಿ ಗೋಧಿ ಉತ್ಪಾದನೆ ಹೆಚ್ಚಲಿದೆ. ಆದರೆ ಬಿಸಿ ಗಾಳಿಯು ತರಕಾರಿಗಳ ಬೆಲೆ ಏರಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಶಕ್ತಿಕಾಂತ ದಾಸ್‌ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT