ಭಾನುವಾರ, ಆಗಸ್ಟ್ 14, 2022
28 °C
ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ನಿರ್ಧಾರ

ಹಣದುಬ್ಬರದ ಒತ್ತಡ: ಬಡ್ಡಿದರ ಯಥಾಸ್ಥಿತಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಹಣದುಬ್ಬರದ ಒತ್ತಡ ಇರುವುದರಿಂದ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಿರ್ಧರಿಸಿದೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ದ್ವೈಮಾಸಿಕ ಹಣಕಾಸು ನೀತಿ ಸಭೆ ಶುಕ್ರವಾರ ಮುಕ್ತಾಯವಾಗಿದೆ. ಚಿಲ್ಲರೆ ಹಣದುಬ್ಬರ ಹಿತಕಾರಿ ಮಟ್ಟವನ್ನೂ ಮೀರಿರುವುದರಿಂದ (ಶೇ 2–6) ರೆಪೊ ದರದಲ್ಲಿ ಬದಲಾವಣೆ ಮಾಡದೇ ಇರಲು ಎಂಪಿಸಿಯ ಆರೂ ಸದಸ್ಯರು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ.

ಜನವರಿಯಿಂದ ಆಗಸ್ಟ್‌ವರೆಗೆ ರೆಪೊ ದರದಲ್ಲಿ ಶೇ 1.15ರಷ್ಟು ಕಡಿತ ಮಾಡಲಾಗಿತ್ತು. ಆದರೆ, ಹಣದುಬ್ಬರ ಹೆಚ್ಚಳದಿಂದಾಗಿ ಬಡ್ಡಿದರ ಯಥಾಸ್ಥಿತಿ ಕಾಯ್ದುಕೊಳ್ಳಲು ಸತತ ಮೂರನೇ ಸಭೆಯಲ್ಲಿಯೂ ನಿರ್ಣಯಿಸಲಾಗಿದೆ. ಹೀಗಾಗಿ ಆರ್‌ಬಿಐ ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ (ರೆಪೊ) ಶೇ 4ರಷ್ಟೇ ಇರಲಿದೆ. ಇನ್ನು, ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ಆರ್‌ಬಿಐ ನೀಡುವ ಬಡ್ಡಿದರ (ರಿವರ್ಸ್‌ ರೆಪೊ) ಶೇ 3.35ರಷ್ಟೇ ಇರಲಿದೆ.

‘ಬಡ್ಡಿದರದ ವಿಚಾರದಲ್ಲಿ, ಕನಿಷ್ಠಪಕ್ಷ ಪ್ರಸಕ್ತ ಹಣಕಾಸು ವರ್ಷ ಹಾಗೂ ಅಗತ್ಯ ಬಿದ್ದರೆ ಮುಂದಿನ ವರ್ಷವೂ ಹೊಂದಾಣಿಕೆಯ ನಿಲುವನ್ನು ಮುಂದುವರಿಸಲು ಎಂಪಿಸಿ ನಿರ್ಧರಿಸಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ.

ಜಿಡಿಪಿ ಮುನ್ನೋಟ ಪರಿಷ್ಕರಣೆ: ಪ್ರಸಕ್ತ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆಯನ್ನು ಆರ್‌ಬಿಐ ಪರಿಷ್ಕರಿಸಿದೆ. ಶೇ (–) 9.5ರಷ್ಟು ಇರಲಿದೆ ಎಂದು ಅಕ್ಟೋಬರ್‌ನಲ್ಲಿ ಹೇಳಿತ್ತು. ಆದರೆ, ಆರ್ಥಿಕತೆಯು ನಿರೀಕ್ಷೆಗಿಂತಲೂ ವೇಗವಾಗಿ ಚೇತರಿಕೆ ಕಾಣುತ್ತಿದೆ. ಹೀಗಾಗಿ ಶೇ (–) 7.5ರಷ್ಟಿರಲಿದೆ ಎಂದು ಶುಕ್ರವಾರ ತಿಳಿಸಿದೆ.

‘ಪ್ರಯಾಣಿಕ ವಾಹನ ಮತ್ತು ಮೋಟರ್‌ಸೈಕಲ್‌ ಮಾರಾಟ, ರೈಲ್ವೆ ಪ್ರಯಾಣ ಹಾಗೂ ವಿದ್ಯುತ್‌ ಬಳಕೆಯು ಅಕ್ಟೋಬರ್‌ನಲ್ಲಿ ಎರಡಂಕಿ ಪ್ರಗತಿ ಕಂಡಿವೆ. ಆರ್ಥಿಕ ಚೇತರಿಕೆಯು ವೇಗ ಪಡೆದುಕೊಳ್ಳುತ್ತಿದೆ ಎನ್ನುವುದನ್ನು ಇವು ಸೂಚಿಸಿವೆ. ಆರ್ಥಿಕತೆಯು ಮೂರನೇ ತ್ರೈಮಾಸಿಕದಲ್ಲಿ ಸಕಾರಾತ್ಮಕ ಹಾದಿಗೆ ಬರಲಿದ್ದು ಶೇ 0.1ರಷ್ಟು ಬೆಳವಣಿಗೆ ಕಾಣಲಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಶೇ 0.7ರಷ್ಟಾಗಲಿದೆ’ ಎಂದು ದಾಸ್‌ ತಿಳಿಸಿದ್ದಾರೆ.

‘ಹಣದುಬ್ಬರವನ್ನು ನಿಗದಿತ ಗುರಿಯೊಳಗೆ ಇರುವಂತೆ ನೋಡಿಕೊಳ್ಳುವ ಜತೆಗೆ ಕೋವಿಡ್‌–19 ಪರಿಣಾಮಗಳನ್ನು ತಡೆಯುವ ಮೂಲಕ ಆರ್ಥಿಕತೆಗೆ ಪುನಶ್ಚೇತನ ನೀಡುವುದು ಕೇಂದ್ರೀಯ ಬ್ಯಾಂಕ್‌ನ ಉದ್ದೇಶವಾಗಿದೆ’ ಎಂದೂ ಹೇಳಿದ್ದಾರೆ.

ಪ್ರಮುಖ ಅಂಶಗಳು

* ರೆಪೊ ದರ ಶೇ 4, ರಿವರ್ಸ್‌ ರೆಪೊ ದರ ಶೇ 3.35

* ಚಿಲ್ಲರೆ ಹಣದುಬ್ಬರ 3ನೇ ತ್ರೈಮಾಸಿಕದಲ್ಲಿ ಶೇ 6.8, 4ನೇ ತ್ರೈಮಾಸಿಕದಲ್ಲಿ ಶೇ 5.8

* ಕಾಂಟ್ಯಾಕ್ಟ್‌ಲೆಸ್‌ ಕಾರ್ಡ್‌ ವ್ಯವಹಾರದ ಮಿತಿ ಜನವರಿಯಿಂದ ₹ 2 ಸಾವಿರದಿಂದ ₹ 5 ಸಾವಿರಕ್ಕೆ ಏರಿಕೆ

* ₹ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಆರ್‌ಟಿಜಿಎಸ್‌ ವರ್ಗಾವಣೆ ಶೀಘ್ರವೇ 24X7 ಲಭ್ಯ

ಜಿಡಿಪಿ ಬೆಳವಣಿಗೆ

ಏಪ್ರಿಲ್‌–ಜೂನ್‌; (–) 23.9%

ಜುಲೈ–ಸೆಪ್ಟೆಂಬರ್‌; (–) 7.5%

ಅಕ್ಟೋಬರ್‌–ಡಿಸೆಂಬರ್‌; 0.1%*

ಜನವರಿ–ಮಾರ್ಚ್‌; 0.7%*

* ಆರ್‌ಬಿಐ ನಿರೀಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು