ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಆರ್‌ಸಿಇಪಿ ಒಪ್ಪಂದ: ಆತಂಕ–ಸಂಭ್ರಮ ಪಡುವ ಮೊದಲು ಅರ್ಥ ಮಾಡಿಕೊಳ್ಳಿ

Last Updated 26 ಅಕ್ಟೋಬರ್ 2019, 9:24 IST
ಅಕ್ಷರ ಗಾತ್ರ

ಅಸಿಯಾನ್‌ ದೇಶಗಳ ನಡುವೆ ‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (Regional Comprehensive Economic Partnership–RCEP)’ ಒಪ್ಪಂದದ ಅಡಿಯಲ್ಲಿ ನಡೆಯುತ್ತಿರುವ ಮುಕ್ತ ವ್ಯಾಪಾರ ಒಪ್ಪಂದದ (Free Trade Agreements–FTA) ಕುರಿತು ದೇಶಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ಒಪ್ಪಂದ ದೇಶಕ್ಕೆ ಮಾರಕವಾಗಲಿದೆ ಎಂದು ವಿರೋಧ ಪಕ್ಷಗಳು ವಾದಿಸುತ್ತಿದ್ದರೆ, ಅಭಿವೃದ್ಧಿ ಕಡೆಗೆ ಚಿಂತಿಸುತ್ತಿರುವ ಭಾರತಕ್ಕೆ ಬಹುದೊಡ್ಡ ಮಾರುಕಟ್ಟೆಯೊಂದು ಲಭ್ಯವಾಗಲಿದೆ ಎಂದು ಆಡಳಿತ ಪಕ್ಷದ ಕಡೆಯವರು ವಾದಿಸುತ್ತಿದ್ದಾರೆ.

ಅಷ್ಟಕ್ಕೂ ಏನಿದು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ? ಅದರಡಿಯಲ್ಲಿ ಬರುವ ಮುಕ್ತ ವ್ಯಾಪಾರ ಒಪ್ಪಂದದ ಸಾಧಕ ಬಾಧಕಗಳೇನು? ಭಾರತದ ಮಟ್ಟಿಗೆ ವ್ಯಕ್ತವಾಗುತ್ತಿರುವ ಆತಂಕವೇನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

***

‘ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ ಅಡಿಯಲ್ಲಿ ಆಗುತ್ತಿರುವ ಮುಕ್ತ ವ್ಯಾಪಾರ ಒಪ್ಪಂದದ ಅಂತಿಮ ಅಂಶಗಳ ಕುರಿತು ಚರ್ಚೆ ನಡೆಸಲು ಕೇಂದ್ರದ ವಾಣಿಜ್ಯ ಮತ್ತು ಉದ್ಯಮ ಖಾತೆ ಸಚಿವ ಪಿಯೂಷ್‌ ಗೊಯೆಲ್‌ ಅವರು ಆಸಿಯನ್‌ ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಲು ಬ್ಯಾಂಕಾಕ್‌ಗೆ ತೆರಳಿದ್ದರು. 16 ರಾಷ್ಟ್ರಗಳ ನಡುವೆ ನಡೆಯುತ್ತಿರುವ ಈ ಒಪ್ಪಂದದ ಸಚಿವರ ಹಂತದ ಕೊನೆ ಮಾತುಕತೆಯಲ್ಲಿ ಅವರು ಭಾಗವಹಿಸಿದ್ದರು.

ಜಗತ್ತಿನ ಅರ್ಧದರಷ್ಟು ಜನಸಂಖ್ಯೆ ಹೊಂದಿರುವ ಈ 16 ರಾಷ್ಟ್ರಗಳ ನಡುವೆ ಚರ್ಚೆ ಹಂತದಲ್ಲಿರುವ ಈ ವಾಣಿಜ್ಯ ವ್ಯವಹಾರ ಪ್ರಸ್ತಾಪವಾಗಿದ್ದು 2013ರಲ್ಲಿ. ಒಪ್ಪಂದದಲ್ಲಿ ಒಟ್ಟು 25 ಅಧ್ಯಾಯಗಳಿದ್ದು, ಈ ಪೈಕಿ 21 ಅಧ್ಯಾಯಗಳು ಚರ್ಚೆಯಾಗಿವೆ. ಉಳಿದ ಅಧ್ಯಾಯಗಳು ಚರ್ಚೆ ಶೀಘ್ರದಲ್ಲೇ ಪೂರ್ಣಗೊಂಡು ಜಾರಿಗೆ ಬರುವ ಸಾಧ್ಯತೆಗಳಿವೆ.

ಇನ್ನಷ್ಟೇ ಜಾರಿಗೆ ಬರಬೇಕಿರುವ ಆರ್‌ಸಿಇಪಿಯಿಂದ ಒಪ್ಪಂದ ದೇಶದ ಮಾರುಕಟ್ಟೆ ವಿಸ್ತರಣೆಗೆ ಸಹಾಯಕ, ಇದರಿಂದ ಸೇವಾ ವಲಯದಲ್ಲಿ ಹೊಸ ಅವಕಾಶಗಳು ಲಭ್ಯವಾಗಲಿವೆ ಎಂದೂ ಹೇಳಲಾಗುತ್ತಿದೆ. ಇದೇ ಹೊತ್ತಲ್ಲೇ ದೇಶದ ಕೃಷಿ, ಹೈನುಕಾರಿಕೆ ಮತ್ತು ಜವಳಿ ಉದ್ಯಮಕ್ಕೆ ಇದರಿಂದ ಬಾರಿ ಹೊಡೆತ ಬೀಳಲಿದೆ. ದೇಶದ ಕೃಷಿ ವ್ಯವಸ್ಥೆ ಇನ್ನೂ ಸಾಂಪ್ರದಾಯಿಕ, ಅಸಂಘಟಿತವಾಗಿರುವ ಈ ಹೊತ್ತಿನಲ್ಲಿ ದೊಡ್ಡ ದೊಡ್ಡ ದೇಶಗಳನ್ನು ಪೈಪೋಟಿಗೆ ಬಿಟ್ಟುಕೊಂಡರೆ ದೇಶದ ರೈತರಿಗೆ ಸಂಕಷ್ಟ ಎದುರಾಗಲಿದೆ ಎಂಬ ಚರ್ಚೆಗಳೂ ಉದ್ಭವವಾಗಿದೆ. ಅಲ್ಲದೆ, ಗ್ರಾಮೀಣ ಜನರ ಕೈ ಹಿಡಿದಿರುವ ಹೈನುಗಾರಿಕೆಗೆ ಈ ಒಪ್ಪಂದದಿಂದ ಪೆಟ್ಟು ಬೀಳಲಿದ್ದು, ಬಡ ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ಹೇಳಲಾಗುತ್ತಿದೆ. ಈ ಒಪ್ಪಂದದಿಂದ ಕಬ್ಬಿಣ ಮತ್ತು ಜವಳಿ ಉದ್ಯಮಕ್ಕೂ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.

ಯಾವೆಲ್ಲ ದೇಶಗಳ ನಡುವೆ ಒಪ್ಪಂದ

ಏಷ್ಯಾದ ಹತ್ತು ಅಸಿಯಾನ್ ದೇಶಗಳಾದ ಬ್ರೂನೈ, ಕಾಂಬೋಡಿಯಾ, ಸಿಂಗಾಪುರ, ಫಿಲಿಫ್ಫಿನ್ಸ್, ಇಂಡೋನೇಷಿಯಾ, ಲಾವೋಸ್, ಥೈಲಾಂಡ್, ಮಲೇಷಿಯಾ, ವಿಯೆಟ್ನಾಂ ಮತ್ತು ಮ್ಯಾನ್ಮಾರ್ ದೇಶಗಳ ಜೊತೆ ಅಸ್ಟ್ರೇಲಿಯಾ, ಭಾರತ, ಚೀನಾ, ಜಪಾನ್, ಕೊರಿಯಾ ಮತ್ತು ನ್ಯೂಜಿಲೆಂಡ್ 'ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ( RCEP)’ ದ ಅಡಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದ (FTA) ಮಾಡಿಕೊಳ್ಳುತ್ತಿವೆ.

ಒಪ್ಪಂದವಾದರೆ ಏನಾಗಲಿದೆ?

ಈ ಒಪ್ಪಂದ ನಡೆದರೆ ಗುಂಪಿನ ಹದಿನಾರು ದೇಶಗಳ ನಡುವೆ ಶೇಕಡಾ 80ರಿಂದ 90ರಷ್ಟು ಸರಕು ಮತ್ತು ಸೇವೆಗಳು ಕಡಿಮೆ (ಶೇ. 80–90ರಷ್ಟು ಕಡಿತ) ಆಮದು ಸುಂಕದೊಂದಿಗೆ ಆಮದು–ರಫ್ತಾಗುತ್ತವೆ. ದೇಶಗಳ ಮಾರುಕಟ್ಟೆ ವಲಯದ ವಿಸ್ತರಣೆಯಾಗುತ್ತದೆ. ಔಷಧ, ಹತ್ತಿ ಮತ್ತು ನೂಲು ಉದ್ಯಮಕ್ಕೆ ದೊಡ್ಡ ಮಟ್ಟದ ಮಾರುಕಟ್ಟೆ ಲಭ್ಯವಾಗುತ್ತದೆ. ಸೇವಾ ಕ್ಷೇತ್ರಗಳಲ್ಲಿ ಹೊಸ ಹೊಸ ಅವಕಾಶಗಳು ವೃದ್ಧಿಯಾಗುತ್ತವೆ ಎಂಬುದು ನಂಬಿಕೆ.

ಭಾರತದ ಮಟ್ಟಿಗೆ ವ್ಯಕ್ತವಾಗುತ್ತಿರುವ ಆತಂಕಗಳು

ಈ ಗುಂಪಿನಲ್ಲಿರುವ ದೇಶಗಳು ತಮ್ಮ ಹೆಚ್ಚುವರಿ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುತ್ತವೆ. ಇದರಿಂದಾಗಿ ಕೃಷಿ ಉತ್ಪನ್ನ, ಹೈನುಗಾರಿಕೆ, ಮಾತ್ರವಲ್ಲ, ಗದ್ದೆಯ ಮತ್ತು ತೋಟದ ಬೆಳೆಗಳು, ಸಾಂಬಾರ ಪದಾರ್ಥಗಳು ಹೀಗೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳ ಮೇಲೆಯೂ ಒಪ್ಪಂದ ಪರಿಣಾಮ ಬೀರಲಿದೆ. ಔಷಧಿಗಳ ಬೆಲೆ ಕೂಡಾ ಹೆಚ್ಚಾಗಲಿದೆ.

ಒಪ್ಪಂದದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬಾಧಿತವಾಗುವುದು ಹೈನುಗಾರಿಕೆ. ದೇಶದಲ್ಲಿ ಕೋಟ್ಯಂತರ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಹಾಲು ಉತ್ಪಾದನೆಯನ್ನು ದೇಶದಲ್ಲಿ ಬಹುದೊಡ್ಡ ವರ್ಗ ಅವಲಂಬಿಸಿರುವ ಹೊತ್ತಿನಲ್ಲಿ ಆರ್‌ಸಿಇಪಿ ಅಡಿಯಲ್ಲಿ ಹಾಲು ಆಮದಿಗೆ ಅವಕಾಶ ಮಾಡಿಕೊಟ್ಟರೆ ಜನ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರಾಜ್ಯದಲ್ಲಿ ಸಹಕಾರ ತತ್ವದ ಅಡಿಯಲ್ಲಿ ನಡೆಯುತ್ತಿರುವ ಹಾಲು ಉದ್ಯಮಕ್ಕೆ ಮತ್ತು ಅದನ್ನು ನಂಬಿರುವ ರೈತರಿಗೆ ತೊಂದರೆಯಾಗಲಿದೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಿದರೆ ವಿಶ್ವದ ಅನೇಕ ಬಹುರಾಷ್ಟ್ರೀಯ ಕಂಪೆನಿಗಳು ನೇರವಾಗಿ ಇಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲಿವೆ. ಇದರಿಂದಾಗಿ ಸಹಕಾರಿ ನಮ್ಮ ಹಾಲಿನ ಒಕ್ಕೂಟಗಳು ನಾಶವಾಗಲಿವೆ. ಸಹಕಾರಿ ವ್ಯವಸ್ಥೆಯೂ ಹಾಳಾಗುತ್ತದೆ ಎಂಬುದು ಬಹುತೇಕರ ಆತಂಕ.

ಸೂಪರ್ ಮಾರ್ಕೆಟ್ ಮತ್ತು ದೊಡ್ಡ ಕಂಪನಿಗಳ ನೇರ ಚಿಲ್ಲರೆ ವ್ಯಾಪಾರವು ಸ್ಥಳೀಯ ಮಾರುಕಟ್ಟೆಗಳನ್ನು ನಾಶ ಮಾಡಲು ಹೆಚ್ಚಿನ ಶಕ್ತಿಯನ್ನು ಪಡೆಯಲಿವೆ ಎಂದು ಅಂದಾಜಿಸಲಾಗುತ್ತಿದೆ.

ಚೀನಾ ಎಂಬ ಆತಂಕ

ಈ ಒಪ್ಪಂದದಲ್ಲಿ ಉಳಿದೆಲ್ಲ ದೇಶಗಳಿಗಿಂತ ಚೀನಾ ಸೇರಿಕೊಂಡಿರುವುದು ಭಾರತದ ಚಿಂತೆಗೆ ಕಾರಣವಾಗಿದೆ. ಚೀನಾದಿಂದ ಅಗ್ಗದ ವಸ್ತುಗಳು ಆಮದಾಗುತ್ತಿರುವುದರಿಂದ ದೇಶದ ಸಣ್ಣ ಮತ್ತು ಬೃಹತ್ ಉದ್ಯಮಗಳು, ಗುಡಿಕೈಗಾರಿಕೆಗಳು, ಕೃಷಿ ಕ್ಷೇತ್ರ ಅನಾರೋಗ್ಯಕರವಾದ ಪೈಪೋಟಿಯನ್ನು ಎದುರಿಸಿ ನಾಶವಾಗುತ್ತಿವೆ. ಇದೇ ಕಾರಣಕ್ಕೇ ಅಮೆರಿಕ ಕೂಡ ಚೀನಾದ ಮೇಲೆ ಆರ್ಥಿಕ ದಿಗ್ಬಂಧನ ಹೇರಿದೆ. ಹೀಗಿರುವಾಗ ಒಪ್ಪಂದದ ನೆಪದಲ್ಲಿ ಸರಕು–ಸೇವೆಗೆ ಸುಂಕ ವಿನಾಯ್ತಿ ನೀಡಿ ಚೀನಾವನ್ನು ಭಾರತದ ಒಳಗೆ ಏಕೆ ಬಿಟ್ಟುಕೊಳ್ಳಬೇಕೆಂಬ ವಾದವಿದೆ.

ವ್ಯಾಪಾರ ಕೊರತೆ ನೀಗಿಸಿಕೊಳ್ಳಬಹುದೇ?

ಭಾರತ ನಿರಂತರ ವ್ಯಾಪಾರ ಕೊರತೆ ಅನುಭವಿಸುತ್ತಿದೆ. 2001-02ರಲ್ಲಿ ಒಂದು ಶತಕೋಟಿ ಡಾಲರ್ ಇದ್ದ ವ್ಯಾಪಾರಿ ಕೊರತೆ, 2018-19ರ ಹೊತ್ತಿಗೆ 84.45 ಶತಕೋಟಿ ಡಾಲರ್ ಗೆ ಏರಿದೆ. ಭಾರತದ ಒಟ್ಟು ವ್ಯಾಪಾರ ಕೊರತೆಯಲ್ಲಿ ಚೀನಾದ ಪಾಲು ಶೇಕಡಾ 50ರಷ್ಟಿದೆ. ಇಂತಹ ಚೀನಾದೊಂದಿಗೆ ಶೇಕಡಾ 90ರಷ್ಟು ಸರಕುಗಳನ್ನು ಆಮದು ಮಾಡಿಕೊಂಡರೆ ಪರಿಸ್ಥಿತಿ ಮಾರಕವಾಗಲಿದೆ ಎಂಬುದು ಭಾರತದ ಆರ್ಥಿಕ ತಜ್ಞರ ಆತಂಕ. ಆದರೆ, ವಿಶಾಲವಾದ ಮಾರುಕಟ್ಟೆಯೊಂದು ಭಾರತಕ್ಕೆ ದೊರೆಯುವುದರಿಂದ ಭಾರತದ ವ್ಯಾಪಾರ ಕೊರತೆ ನೀಗಲಿದೆ ಎಂಬ ನಿರೀಕ್ಷೆಯೂ ಇದೆ.

ವಿದೇಶಿ ಹೂಡಿಕೆದಾರರಿಂದ ಭೂ ಕಬಳಿಕೆ?

ಆರ್‌ಸಿಇಪಿ ಅಡಿಯಲ್ಲಿ ಬರುವ ದೇಶಗಳಲ್ಲಿ ಈಗಾಗಲೇ 9.6 ದಶಲಕ್ಷ ಹೆಕ್ಟೇರ್‌ ಕೃಷಿ ಭೂಮಿಯನ್ನು ಗ್ರಾಮೀಣರಿಂದ ವಿದೇಶಿ ಹೂಡಿಕೆದಾರರಿಗೆ ವರ್ಗಾವಣೆ ಮಾಡಲಾಗಿದೆ. ಆಸ್ಟ್ರೇಲಿಯಾ, ಕಾಂಬೋಡಿಯಾ, ಇಂಡೋನೇಷ್ಯಾ ಮತ್ತು ಲಾವೋಸ್‌ನಲ್ಲಿ ಈಗಾಗಲೇ ಭಾರಿ ಪ್ರಮಾಣದ ಭೂಮಿಯನ್ನು ಇದೇ ಒಪ್ಪಂದದ ಅಡಿಯಲ್ಲಿ ವಿದೇಶಿಯರಿಗೆ ಪರಾಭಾರೆ ಮಾಡಲಾಗಿದೆ. ಭಾರತದಲ್ಲೂ ವಿದೇಶಿ ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಭೂಮಿ ಹಕ್ಕು ಸಿಕ್ಕರೆ, ಅದು ಮುಂದೊಂದು ದಿನ ಭಾರತದ ಕೃಷಿಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳುಂಟು. ಕೃಷಿ ಭೂಮಿಯ ಕೊರತೆ ಎದುರಾಗಬಹುದು ಎಂಬ ಆತಂಕವೂ ಇದೆ.

ಬಹಿರಂಗವಾಗದ ಕರಡು

ಇಷ್ಟೆಲ್ಲ ಆತಂಕಗಳನ್ನು ಒಳಗೊಂಡಿರುವ ಈ ಒಪ್ಪಂದದ ಕರಡುನ್ನು ಚರ್ಚೆಗೆ ಒಳಪಡಿಸಬೇಕಾದ ಕೇಂದ್ರ ಸರ್ಕಾರ ಈ ವರೆಗೆ ಅದರ ಕರಡನ್ನು ಬಹಿರಂಗಗೊಳಿಸಿಲ್ಲ. ಇದು ಕೇಂದ್ರದ ಮೇಲೆ ನಾಗರಿಕರಿಗೆ ಅನುಮಾನ ಮೂಡಿಸುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT