ಸೋಮವಾರ, ಜುಲೈ 4, 2022
21 °C
ಬಿಗ್ ಬಜಾರ್ ಬ್ರ್ಯಾಂಡ್‌ ಬದಲು ರಿಲಯನ್ಸ್ ಬ್ರ್ಯಾಂಡ್ ಅಳವಡಿಕೆ?

ಫ್ಯೂಚರ್ ಮಳಿಗೆಗಳ ಉಪಗುತ್ತಿಗೆ ರದ್ದುಪಡಿಸಿದ ರಿಲಯನ್ಸ್ ರಿಟೇಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫ್ಯೂಚರ್ ರಿಟೇಲ್‌ ಕಂಪನಿಯಿಂದ 950 ಮಳಿಗೆಗಳನ್ನು ಸ್ವಾಧೀನಕ್ಕೆ ತೆಗದುಕೊಂಡಿದ್ದ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ರಿಟೇಲ್ ಕಂಪನಿಯು, ಈ ಮಳಿಗೆಗಳ ಉಪಗುತ್ತಿಗೆಯನ್ನು ರದ್ದುಪಡಿಸುವಂತೆ ನೋಟಿಸ್ ನೀಡಿದೆ.

ಫ್ಯೂಚರ್ ರಿಟೇಲ್ ಮಳಿಗೆಗಳು ಹಾಗೂ ಫ್ಯೂಚರ್ ಲೈಫ್‌ಸ್ಟೈಲ್ ಮಳಿಗೆಗಳ ಉಪಗುತ್ತಿಗೆ ರದ್ದುಪಡಿಸುವಂತೆ ತನಗೆ ನೋಟಿಸ್ ಬಂದಿದೆ ಎಂದು  ಫ್ಯೂಚರ್ ಸಮೂಹವು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ.

ಫ್ಯೂಚರ್‌ ಸಮೂಹದಿಂದ ಲೀಸ್‌ ಹಣ ಪಾವತಿ ಮಾಡಲು ಸಾಧ್ಯವಾಗದಿದ್ದ ಮಳಿಗೆಗಳನ್ನು ರಿಲಯನ್ಸ್ ರಿಟೇಲ್ ಕಂಪನಿಯು ಹಿಂದಿನ ತಿಂಗಳು ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ಇವುಗಳನ್ನು ನಂತರದಲ್ಲಿ ಫ್ಯೂಚರ್ ಸಮೂಹಕ್ಕೆ ಉಪಗುತ್ತಿಗೆ ಆಧಾರದಲ್ಲಿ ನೀಡಲಾಗಿತ್ತು.

‘342 ದೊಡ್ಡ ಮಳಿಗೆಗಳು (ಬಿಗ್‌ ಬಜಾರ್, ಫ್ಯಾಷನ್‌@ಬಿಗ್‌ ಬಜಾರ್), 493 ಸಣ್ಣ ಮಳಿಗೆಗಳ (ಈಸಿಡೇ ಮತ್ತು ಹೆರಿಟೇಜ್ ಮಳಿಗೆಗಳು) ವಿಚಾರವಾಗಿ ನೋಟಿಸ್‌ ತಲುಪಿದೆ’ ಎಂದು ಫ್ಯೂಚರ್ ಸಮೂಹವು ತಿಳಿಸಿದೆ. ‘ಸೆಂಟ್ರಲ್’ ಹೆಸರಿನ ಒಟ್ಟು 34 ಮಳಿಗೆಗಳ, ಬ್ರ್ಯಾಂಡ್ ಫ್ಯಾಕ್ಟರಿ ಹೆಸರಿನ 78 ಮಳಿಗೆಗಳ ಉಪಗುತ್ತಿಗೆ ರದ್ದುಪಡಿಸುವ ನೋಟಿಸ್‌ಗಳು ತಲುಪಿವೆ ಎಂದು ಫ್ಯೂಚರ್‌ ಲೈಫ್‌ಸ್ಟೈಲ್‌ ಫ್ಯಾಷನ್ಸ್ ತಿಳಿಸಿದೆ.

ಫ್ಯೂಚರ್ ಸಮೂಹದ ರಿಟೇಲ್ ಮತ್ತು ಸರಕು ಸಾಗಣೆ ವಹಿವಾಟುಗಳನ್ನು ₹ 24,713 ಕೋಟಿಗೆ ಖರೀದಿಸಲು ರಿಲಯನ್ಸ್ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈ ಒಪ್ಪಂದ ಪ್ರಶ್ನಿಸಿ ಅಮೆಜಾನ್ ನ್ಯಾಯಾಲಯದ ಮೆಟ್ಟಿಲು ಏರಿದ ಕಾರಣ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ.

‘ಯಥಾಸ್ಥಿತಿ ಕಾಯ್ದುಕೊಳ್ಳಲು ಹಾಗೂ ಪಾಲುದಾರರ ಹಿತ ಕಾಯಲು ರಿಲಯನ್ಸ್ ಸಮೂಹದ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದೇವೆ’ ಎಂದು ಫ್ಯೂಚರ್ ಸಮೂಹದ ಕಂಪನಿಗಳು ಹೇಳಿವೆ.

ಬಿಗ್ ಬಜಾರ್ ಮಳಿಗೆಗಳು ಸೇರಿದಂತೆ 1,700ಕ್ಕಿಂತ ಹೆಚ್ಚು ಮಳಿಗೆಗಳನ್ನು ಹೊಂದಿರುವ ಫ್ಯೂಚರ್ ಸಮೂಹವು ಕೆಲವು ಮಳಿಗೆಗಳ ಲೀಸ್ ಮೊತ್ತವನ್ನು ಪಾವತಿಸಿರಲಿಲ್ಲ. ಏಕೆಂದರೆ, ಕಂಪನಿಯು ನಷ್ಟದಲ್ಲಿದೆ. ಸಾಲ ಮರುಪಾವತಿಯಲ್ಲಿ ಕೂಡ ವಿಫಲವಾಗಿದೆ.

ಕೆಲವು ಮಳಿಗೆಗಳು ಮುಚ್ಚಿಹೋಗಬಹುದು ಎಂದು ರಿಲಯನ್ಸ್ ಕಂಪನಿಯು ತನ್ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ಗೆ ಲೀಸ್ ವರ್ಗಾವಣೆ ಮಾಡಿಕೊಂಡಿತ್ತು. ನಂತರ ಅವುಗಳನ್ನೇ ಫ್ಯೂಚರ್‌ ಸಮೂಹಕ್ಕೆ ಉಪಗುತ್ತಿಗೆ ನೀಡಿತ್ತು. ಈ ಉಪಗುತ್ತಿಗೆ ರದ್ದು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇಷ್ಟೇ ಅಲ್ಲದೆ, ಈ ಮಳಿಗೆಗಳಿಗೆ ರಿಲಯನ್ಸ್ ಜಿಯೊಮಾರ್ಟ್‌ನಿಂದ ಉತ್ಪನ್ನಗಳನ್ನು ಪೂರೈಸಲಾಗುತ್ತಿತ್ತು. ಈ ಮಳಿಗೆಗಳಲ್ಲಿ ರಿಲಯನ್ಸ್‌ ಕಂಪನಿಯ ಬಿಗ್‌ ಬಜಾರ್ ಬ್ರ್ಯಾಂಡ್‌ ಬದಲಿಸಿ, ಅಲ್ಲಿ ತನ್ನ ಬ್ರ್ಯಾಂಡ್ ಅಳವಡಿಕೆ ಮಾಡಬಹುದು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು