ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ದರದಲ್ಲಿ ರಷ್ಯಾ ತೈಲ: ಪ್ರಸ್ತಾವ ಪರಿಗಣಿಸುತ್ತಿರುವ ಭಾರತ

Last Updated 14 ಮಾರ್ಚ್ 2022, 20:24 IST
ಅಕ್ಷರ ಗಾತ್ರ

ನವದೆಹಲಿ: ಕಚ್ಚಾ ತೈಲ ಮತ್ತು ಇತರ ಉತ್ಪನ್ನಗಳನ್ನು ಭಾರತಕ್ಕೆ ರಿಯಾಯಿತಿ ದರದಲ್ಲಿ ಒದಗಿಸುವುದಾಗಿ ರಷ್ಯಾ ಇರಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ. ಭಾರತವು ಖರೀದಿಸುವ ಉತ್ಪನ್ನಗಳಿಗೆ ಹಣ ಪಾವತಿಯನ್ನು ರೂಪಾಯಿಯಲ್ಲಿ ಮಾಡಬಹುದು ಎಂದೂ ರಷ್ಯಾ ಹೇಳಿದೆ.

ರಷ್ಯಾ ದೇಶವು ಉಕ್ರೇನ್ ವಿರುದ್ಧ ಸಮರ ಸಾರಿದ ನಂತರದಲ್ಲಿ ಪಾಶ್ಚಿಮಾತ್ಯ ದೇಶಗಳು ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿವೆ. ಭಾರತವು ತನ್ನ ಅಗತ್ಯದ ಕಚ್ಚಾ ತೈಲದ ಪೈಕಿ ಶೇ 80ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಶೇ 2ರಿಂದ ಶೇ 3ರಷ್ಟು ಕಚ್ಚಾ ತೈಲವು ರಷ್ಯಾದಿಂದ ಪೂರೈಕೆ ಆಗುತ್ತದೆ. ಆದರೆ, ಈ ವರ್ಷದಲ್ಲಿ ಕಚ್ಚಾ ತೈಲ ಬೆಲೆಯು ಶೇ 40ರಷ್ಟು ಹೆಚ್ಚಳವಾಗಿದ್ದು, ಕಚ್ಚಾ ತೈಲಕ್ಕಾಗಿ ಮಾಡುವ ವೆಚ್ಚವು ಕಡಿಮೆ ಆಗುವುದಾದಲ್ಲಿ ರಷ್ಯಾದಿಂದ ಏಕೆ ಅದನ್ನು ಖರೀದಿಸಬಾರದು ಎಂಬ ಆಲೋಚನೆ ಕೇಂದ್ರ ಸರ್ಕಾರಕ್ಕೆ ಇದೆ.

‘ರಷ್ಯಾ ದೇಶವು ಕಚ್ಚಾ ತೈಲ ಮತ್ತು ಇತರ ಉತ್ಪನ್ನಗಳನ್ನು ಭಾರಿ ರಿಯಾಯಿತಿ ದರದಲ್ಲಿ ಭಾರತಕ್ಕೆ ಮಾರಾಟ ಮಾಡಲು ಮುಂದೆ ಬಂದಿದೆ. ಅದನ್ನು ಖರೀದಿಸಲು ನಾವು ಉತ್ಸುಕರಾಗಿದ್ದೇವೆ. ಆದರೆ, ಟ್ಯಾಂಕರ್‌, ವಿಮಾ ರಕ್ಷಣೆಯಂತಹ ವಿಷಯಗಳನ್ನು ಪರಿಗಣಿಸಬೇಕಿದೆ. ಇವು ಇತ್ಯರ್ಥಗೊಂಡ ನಂತರದಲ್ಲಿ ನಾವು ರಿಯಾಯಿತಿ ದರದ ಕೊಡುಗೆಯನ್ನು ಪರಿಗಣಿಸುತ್ತೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆರ್ಥಿಕ ನಿರ್ಬಂಧಗಳ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಕೆಲವು ಅಂತರರಾಷ್ಟ್ರೀಯ ವ್ಯಾಪಾರಿಗಳು ರಷ್ಯಾದ ಕಚ್ಚಾ ತೈಲ ಖರೀದಿಯಿಂದ ದೂರ ಸರಿದಿದ್ದಾರೆ. ಆದರೆ, ನಿರ್ಬಂಧಗಳು ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ತೈಲ ಮತ್ತು ಇತರ ಉತ್ಪನ್ನಗಳಿಗೆ ರೂಪಾಯಿ–ರೂಬಲ್‌ ಮೂಲಕ ಪಾವತಿ ಮಾಡುವ ವ್ಯವಸ್ಥೆ ರೂಪಿಸುವ ಯತ್ನಗಳು ನಡೆದಿವೆ. ರಷ್ಯಾದಿಂದ ಎಷ್ಟು ತೈಲ ಸಿಗಬಹುದು, ಎಷ್ಟು ಪ್ರಮಾಣದ ರಿಯಾಯಿತಿ ನೀಡುವುದಾಗಿ ರಷ್ಯಾ ಹೇಳಿದೆ ಎಂಬ ವಿವರಗಳನ್ನು ಅಧಿಕಾರಿ ನೀಡಲಿಲ್ಲ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರತಿಕ್ರಿಯೆ ಸಿಕ್ಕಿಲ್ಲ.

ತನ್ನ ಜೊತೆ ಸ್ನೇಹದಿಂದ ಇರುವ ರಾಷ್ಟ್ರಗಳು ವ್ಯಾಪಾರ ಮತ್ತು ಹೂಡಿಕೆ ನಂಟು ಮುಂದುವರಿಸಬೇಕು ಎಂದು ರಷ್ಯಾ ಮನವಿ ಮಾಡಿದೆ. ಭಾರತವು ರಸಗೊಬ್ಬರ ತಯಾರಿಕೆಗೆ ರಷ್ಯಾ ಮತ್ತು ಬೆಲಾರೂಸ್‌ನಿಂದ ಕಡಿಮೆ ವೆಚ್ಚದಲ್ಲಿ ಕಚ್ಚಾ ವಸ್ತುಗಳನ್ನು ತರಿಸಿಕೊಳ್ಳುವ ಬಗ್ಗೆಯೂ ಆಲೋಚಿಸುತ್ತಿದೆ.

ಐಒಸಿಯಿಂದ ಕಚ್ಚಾ ತೈಲ ಖರೀದಿ
ನವದೆಹಲಿ: ದೇಶದ ಅತಿದೊಡ್ಡ ತೈಲ ಸಂಸ್ಕರಣಾ ಕಂಪನಿಯಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಮೇ ತಿಂಗಳಿನಲ್ಲಿ ಪೂರೈಕೆ ಆಗುವ 30 ಲಕ್ಷ ರಷ್ಯನ್ ಯೂರಲ್ಸ್ ಕಚ್ಚಾ ತೈಲವನ್ನು ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರದಲ್ಲಿ ಐಒಸಿ ಯೂರಲ್ಸ್‌ ಕಚ್ಚಾ ತೈಲ ಖರೀದಿ ಮಾಡಿರುವುದು ಇದೇ ಮೊದಲು.

‍ಐಒಸಿ ಕಂಪನಿಯು ನಿರ್ಬಂಧಕ್ಕೆ ಒಳಗಾಗಿರುವ ಯಾವುದೇ ಕಂಪನಿಯ ಜೊತೆ ವಹಿವಾಟು ನಡೆಸುತ್ತಿಲ್ಲವಾದ ಕಾರಣ, ತೈಲದ ಮೇಲೆ ನಿರ್ಬಂಧ ಇಲ್ಲದಿರುವ ಕಾರಣ ಐಒಸಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಮೂಲಗಳು ಹೇಳಿವೆ. ನಿರ್ದಿಷ್ಟ ದಿನಾಂಕಕ್ಕೆ ವಿತರಣೆ ಆಗುವ ಬ್ರೆಂಟ್ ಕಚ್ಚಾ ತೈಲದ ಬೆಲೆಗೆ ಹೋಲಿಸಿದರೆ, ಐಒಸಿ ಕಂಪನಿಯು ವಿಟೊಲ್ ಕಂಪನಿಯಿಂದ ಬ್ಯಾರೆಲ್‌ಗೆ ಗರಿಷ್ಠ 25 ಡಾಲರ್ ಕಡಿಮೆ ಬೆಲೆಗೆ ಯೂರಲ್ಸ್ ಕಚ್ಚಾ ತೈಲ ಖರೀದಿಸಿದೆ ಎನ್ನಲಾಗಿದೆ.

ಆಮದು ವೆಚ್ಚ ಹೆಚ್ಚಳದ ಅಪಾಯ
ನವದೆಹಲಿ:ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಇದ್ದರೆ ದೇಶದ ಆಮದು ವೆಚ್ಚವು ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 76.5 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 75 ಡಾಲರ್‌ ಒಳಗೆ ಇರುತ್ತದೆ ಎಂಬ ಅಂದಾಜಿನಲ್ಲಿ 2022–23ನೇ ಸಾಲಿನ ಬಜೆಟ್ ಲೆಕ್ಕಾಚಾರ ಮಾಡಲಾಗಿದೆ.

‘ರಿಯಾಯಿತಿ ದರದಲ್ಲಿ ತೈಲ ಸಿಗುತ್ತದೆ ಎಂಬುದು ಸ್ವಾಗತಾರ್ಹ. ದೇಶದ ಅರ್ಥ ವ್ಯವಸ್ಥೆ ಈಗಾಗಲೇ ಎದುರಿಸುತ್ತಿರುವ ಹಲವು ಸಮಸ್ಯೆಗಳು ಅದರಿಂದ ನಿವಾರಣೆ ಆಗುತ್ತವೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT