ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 | ಸುರಕ್ಷಿತ ಹೂಡಿಕೆಗೆ ಆಯ್ಕೆಗಳು...

Last Updated 13 ಆಗಸ್ಟ್ 2020, 23:25 IST
ಅಕ್ಷರ ಗಾತ್ರ

ಕೋವಿಡ್‌–19 ಹೊಡೆತಕ್ಕೆ ಸಿಲುಕಿ ಜಾಗತಿಕ ಆರ್ಥಿಕತೆಯೇ ನಲುಗಿದೆ. ಈಗಾಗಲೇ ಕೆಳ ಮಟ್ಟದಲ್ಲಿ ಇರುವ ಬಡ್ಡಿದರವನ್ನು ಕೇಂದ್ರೀಯ ಬ್ಯಾಂಕ್‌ಗಳು ಇನ್ನಷ್ಟು ಕಡಿತ ಮಾಡಿ ಆರ್ಥಿಕತೆ ಚೇತರಿಸಿಕೊಳ್ಳುವಂತೆ ಮಾಡುವ ಪ್ರಯತ್ನವೂ ನಡೆಯಬಹುದು. ಇತ್ತ,‌ಭಾರತದ ಬ್ಯಾಂಕ್‌ಗಳ ಠೇವಣಿ ದರವೂ ಇಳಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಿಶ್ಚಿತ ವರಮಾನ ಗಳಿಸುವ ಉದ್ದೇಶದಿಂದ ಹೂಡಿಕೆ ಮಾಡುವುದಾದರೆ, ಕಡಿಮೆ ಅಪಾಯದೊಂದಿಗೆ ಉತ್ತಮ ಮೊತ್ತ ಗಳಿಸುವ ಒಂದಿಷ್ಟು ಆಯ್ಕೆಗಳು ನಿಮಗಿವೆ.

ಸದ್ಯದ ಅನಿಶ್ಚಿತ ಸಂದರ್ಭದಲ್ಲಿ ‘ಗರಿಷ್ಠ ಲಾಭ ಸಿಗಲಿದೆ’ ಎನ್ನುವ ಆಮಿಷಗಳಿಗೆ ಒಳಗಾಗದೇ ಇರುವುದು ಬಹಳ ಮುಖ್ಯ. ಹಾಗಾದರೆ, ಸುರಕ್ಷಿತ ಹೂಡಿಕೆ ಮಾಡುವುದಾದರೂ ಎಲ್ಲಿ ಎನ್ನುವಿರಾ? ಇಲ್ಲಿವೆ ಕೆಲವು ಆಯ್ಕೆಗಳು

ಬದಲಾಗುವ ಬಡ್ಡಿದರದ ಉಳಿತಾಯ ಬಾಂಡ್‌ಗಳು: ಇವು ತೆರಿಗೆಗೆ ಒಳಪಡುತ್ತವೆ. ಶೇಕಡ 7.15ರ ಬಡ್ಡಿದರದಲ್ಲಿ ಆರ್‌ಬಿಐ ಈ ಬಾಂಡ್‌ಗಳನ್ನು ನೀಡುತ್ತದೆ. ಆರು ತಿಂಗಳಿಗೆ ಒಮ್ಮೆ ಬಡ್ಡಿ ಸಿಗಲಿದೆ.ಬಾಂಡ್‌ ಅವಧಿ 7 ವರ್ಷ ಪೂರ್ಣಗೊಂಡ ನಂತರ ಬಾಂಡ್‌ ಮೊತ್ತವನ್ನು ಹೂಡಿಕೆದಾರರಿಗೆ ಮರಳಿಸಲಾಗುವುದು. ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬ ಈ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಬಡ್ಡಿದರವು ಕಡಿಮೆ ಇರುವಂತಹ ಸಂದರ್ಭದಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಬಡ್ಡಿದರವು ಏರಿಕೆಯಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಇದಕ್ಕೆ ಬದಲಾಗಿ ಕಡಿಮೆ ಬಡ್ಡಿದರವೇ ಸಾಕು ಎಂದಾದರೆ ದೀರ್ಘಾವಧಿಗೆ ಬ್ಯಾಂಕ್‌ ಠೇವಣಿ ಇಡಬಹುದು. ಈ ಬಾಂಡ್‌ ಎಸ್‌ಬಿಐ ಮತ್ತು ಇತರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಮತ್ತು ದೊಡ್ಡ ಖಾಸಗಿ ಬ್ಯಾಂಕ್‌ಗಳಲ್ಲಿ ಸಿಗುತ್ತದೆ. ಬಾಂಡ್‌ನ ಬಡ್ಡಿದರಕ್ಕೆ ತೆರಿಗೆ ಕಟ್ಟಬೇಕಾಗುವುದರಿಂದ ಕಡಿಮೆ ಪ್ರಮಾಣದ ತೆರಿಗೆ ವ್ಯಾಪ್ತಿಯಲ್ಲಿ ಇರುವವರಿಗೆ ಇದು ಸೂಕ್ತವಾಗಿದೆ.

ಸುಕನ್ಯಾ ಸಮೃದ್ಧಿ ಖಾತೆ/ಪಿಪಿಎಫ್‌: ನಿಮಗೆ ಹೆಣ್ಣು ಮಗು ಇದ್ದರೆ, ನಿಮಗೆ ಸುಕನ್ಯಾ ಸಮೃದ್ಧಿಗಿಂತಲೂ ಉತ್ತಮ ಆಯ್ಕೆ ಬೇರೊಂದಿಲ್ಲ. ಏಕೆಂದರೆ, ಇಲ್ಲಿ ಮಾಡಿರುವ ಹೂಡಿಕೆಗೆ ಸೆಕ್ಷನ್‌ 80ಸಿ ಅಡಿ ತೆರಿಗೆ ವಿನಾಯಿತಿ ಪಡೆಯಬಹುದು ಹಾಗೂ ಇದಕ್ಕೆ ಶೇಕಡ 7.6ರ ಬಡ್ಡಿ ಸಿಗುತ್ತದೆ. 10 ವರ್ಷದೊಳಗಿನ ಯಾವುದೇ ಹೆಣ್ಣುಮಗುವಿನ ಹೆಸರಿನಲ್ಲಿ, ಆ ಮಗುವಿನ ಹೆತ್ತವರು ಅಥವಾ ಕಾನೂನುಬದ್ಧ ಪೋಷಕರು ಅಂಚೆ ಕಚೇರಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. 21 ವರ್ಷ ತುಂಬಿದ ನಂತರ ಖಾತೆಯಲ್ಲಿರುವ ಹಣವನ್ನು ಹಿಂದಕ್ಕೆ ಪಡೆಯಬಹುದು.

ಪಿಪಿಎಫ್‌: ತೆರಿಗೆ ಉಳಿತಾಯಕ್ಕೆ ಮತ್ತು ದೀರ್ಘಾವಧಿಯ ಹೂಡಿಕೆಗೆ ಇರುವ ಇನ್ನೊಂದು ಆಯ್ಕೆ ಎಂದರೆ ಪಿಪಿಎಫ್‌. ಇದರಲ್ಲಿ ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕ ಬಡ್ಡಿದರ ಶೇಕಡ 7.1ರಷ್ಟು ಮಾತ್ರವೇ ಆದರೂ, ಬಡ್ಡಿಗೆ ತೆರಿಗೆ ಇಲ್ಲ. ವರ್ಷಕ್ಕೆ ₹ 1.50 ಲಕ್ಷದಂತೆ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಇಲ್ಲಿ ಬಡ್ಡಿದರ ಸ್ಥಿರವಾಗಿರದೇ ಇರುವುದರಿಂದ ಬಡ್ಡಿದರದಲ್ಲಿ ಯಾವುದೇ ಏರಿಕೆಯಾದರೂ ಅದರ ಪ್ರಯೋಜನ ಸಿಗಲಿದೆ.

ಡೆಟ್‌ ಮ್ಯೂಚುವಲ್‌ ಫಂಡ್ಸ್‌: ನಿಯಮಿತವಾಗಿ ನಿರ್ದಿಷ್ಟ ಆದಾಯ ಗಳಿಕೆಯನ್ನು ನಿರೀಕ್ಷಿಸದೇ ಇದ್ದರೆ, ಬ್ಯಾಂಕಿಂಗ್‌ ಮತ್ತು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಗುಣಮಟ್ಟದ ಡೆಟ್ (ಸಾಲಪತ್ರ)‌ ಮತ್ತು ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಇವುಗಳಲ್ಲಿ ಹೂಡಿಕೆ ಮಾಡಿ, ಕನಿಷ್ಠ ಎರಡರಿಂದ ಮೂರು ವರ್ಷ ಕಾಯಬೇಕಾಗುತ್ತದೆ. ಬ್ಯಾಂಕ್‌ ಬಡ್ಡಿದರ ಇಳಿಕೆ ಆಗುತ್ತಿದ್ದಂತೆಯೇ ಟ್ರಷರಿ ಬಿಲ್‌, ಸರ್ಕಾರಿ ಬಾಂಡ್‌, ಕಾರ್ಪೊರೇಟ್‌ ಬಾಂಡ್‌ಗಳಂತಹ ಹೂಡಿಕೆಯ ಸಾಧನಗಳ ದರದಲ್ಲಿನ ಏರಿಕೆಯಿಂದಾಗಿ ಈ ನಿಧಿಗಳು ಗಳಿಕೆ ಮಾಡಲು ಆರಂಭಿಸುತ್ತವೆ. ಡೆಟ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯಿಂದ ಬರುವ ಲಾಭಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ.

ಹಿರಿಯ ನಾಗರಿಕರಿಗೆ:60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಈ ಕೆಳಗಿನ ಯೋಜನೆಗಳು ಹೂಡಿಕೆಗೆ ಲಭ್ಯವಿವೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ: ನಿಯ ಮಿತವಾಗಿ ನಿರ್ದಿಷ್ಟ ಆದಾಯ ಬಯಸುವವರಿಗೆ ಇದು ಅತ್ಯಂತ ಉಪಯುಕ್ತವಾದ ಹೂಡಿಕೆ ಆಯ್ಕೆ. ಸದ್ಯ ಶೇ 7.4ರಷ್ಟು ವಾರ್ಷಿಕ ಬಡ್ಡಿದರ ಇದೆ. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರ ಬದಲಾಗುತ್ತದೆ. ಒಬ್ಬರ ಹೆಸರಿನಲ್ಲಿ ಗರಿಷ್ಠ ₹ 15 ಲಕ್ಷ ಹೂಡಿಕೆ ಮಾಡಬಹುದು. ಇದು ಐದು ವರ್ಷಗಳ ಯೋಜನೆಯಾಗಿದ್ದು ಮೂರು ತಿಂಗಳಿಗೆ ಬಡ್ಡಿದರ ಸಿಗಲಿದೆ. ಸೆಕ್ಷನ್‌ 80ಸಿ ಅಡಿ ತೆರಿಗೆ ವಿನಾಯಿತಿ ಸಿಗಲಿದೆ. ಬಡ್ಡಿಗೆ ತೆರಿಗೆ ಕಟ್ಟಬೇಕು. ಆದರೆ, ಹಿರಿಯ ನಾಗರಿಕರಿಗೆ ಸೆಕ್ಷನ್‌ 80ಟಿಟಿಬಿ ಅಡಿ ₹ 50 ಸಾವಿರದವರೆಗೆ ತೆರಿಗೆಯಿಂದ ವಿನಾಯಿತಿ ಸಿಗಲಿದೆ.

ಪ್ರಧಾನ ಮಂತ್ರಿ ವಯೋ ವಂದನ ಯೋಜನೆ: 60 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರ ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ.ಭಾರತೀಯ ಜೀವ ವಿಮಾ ನಿಗಮವು ಇದನ್ನು ನೀಡುತ್ತದೆ. ಈ ಯೋಜನೆಯಲ್ಲಿ ಗರಿಷ್ಠ ₹ 15 ಲಕ್ಷಗಳವರೆಗೆ ಹೂಡಿಕೆಗೆ ಅವಕಾಶವಿದೆ.ಹೂಡಿಕೆಯ ಮೊತ್ತಕ್ಕೆ ಅನುಗುಣವಾಗಿಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದಲ್ಲಿ ಪಿಂಚಣಿ ಸಿಗಲಿದೆ.2023ರ ಮಾರ್ಚ್ 31ರವರೆಗೆ ಯೋಜನೆ ಜಾರಿಯಲ್ಲಿರಲಿದೆ. 2020–21ನೇ ಹಣಕಾಸು ವರ್ಷಕ್ಕೆ ಶೇ 7.40ರಷ್ಟು ಬಡ್ಡಿದರ ಸಿಗಲಿದೆ. ಏಪ್ರಿಲ್‌ 1ರಂದು ವಾರ್ಷಿಕ ಬಡ್ಡಿದರದಲ್ಲಿ ಬದಲಾವಣೆ ಆಗಲಿದೆ. 10 ವರ್ಷಗಳ ಪಾಲಿಸಿ ಅವಧಿ ಮುಗಿದ ಬಳಿಕ ಪಾಲಿಸಿಗಾಗಿ ಹೂಡಿದ್ದ ಅಸಲು ಮೊತ್ತವನ್ನು ಪಿಂಚಣಿದಾರನಿಗೆ ನೀಡಲಾಗುತ್ತದೆ.

ಈ ಮೇಲಿನ ಆಯ್ಕೆಗಳಲ್ಲದೆ, ಒಂದೊಮ್ಮೆ ನೀವು ಬ್ಯಾಂಕ್‌ನಲ್ಲಿ ಠೇವಣಿ ಇಡುತ್ತಿದ್ದರೆ, ಒಂದು ವರ್ಷಕ್ಕೆ ನಿಗದಿಪಡಿಸಿ. ಬಡ್ಡಿದರ ಹೆಚ್ಚಾದಾಗ ಠೇವಣಿ ಅವಧಿಯನ್ನು ನವೀಕರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT