ಬುಧವಾರ, ಮೇ 25, 2022
27 °C

ಗರ್ಭಿಣಿಯರಿಗೆ ಸಂಬಂಧಿಸಿದ ಸುತ್ತೋಲೆಯನ್ನು ಹಿಂಪಡೆದ ಎಸ್‌ಬಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿವಿಧ ವಲಯಗಳಿಂದ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶನಿವಾರ ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದ ಸುತ್ತೋಲೆಯನ್ನು ಹಿಂಪಡೆದಿದೆ.

ಎಸ್‌ಬಿಐ ಇತ್ತೀಚೆಗೆ ನೇಮಕಾತಿಗೆ ದೇಹದಾರ್ಡ್ಯತೆ ಮಾನದಂಡಗಳನ್ನು' ಪರಿಷ್ಕರಿಸಿತ್ತು. ಅದರಲ್ಲಿ ಗರ್ಭಿಣಿ ಅಭ್ಯರ್ಥಿಗಳ ಮಾನದಂಡಗಳೂ ಇದ್ದವು. ಹೊಸ ನಿಯಮಗಳ ಪ್ರಕಾರ, ಮೂರು ತಿಂಗಳಿಗಿಂತ ಮೇಲ್ಪಟ್ಟ ಗರ್ಭಿಣಿ ಅಭ್ಯರ್ಥಿಯನ್ನು ‘ತಾತ್ಕಾಲಿಕವಾಗಿ ಅನರ್ಹ’ ಎಂದು ಪರಿಗಣಿಸಲಾಗಿತ್ತು. ಅಲ್ಲದೆ, ಹೆರಿಗೆ ನಂತರದ ನಾಲ್ಕು ತಿಂಗಳೊಳಗೆ ಬ್ಯಾಂಕ್‌ಗೆ ಸೇರಬಹುದು ಎಂದು ಹೇಳಲಾಗಿತ್ತು.

ಬ್ಯಾಂಕ್‌ನ ಈ ಕ್ರಮವು ಕಾರ್ಮಿಕ ಸಂಘಟನೆಗಳು ಮತ್ತು ದೆಹಲಿ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿತ್ತು. ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತನ್ನ ಸುತ್ತೋಲೆಯನ್ನು ಎಸ್‌ಬಿಐ ಹಿಂಪಡೆದಿದೆ. ‘ಗರ್ಭಿಣಿಯರ ನೇಮಕಾತಿಗೆ ಸಂಬಂಧಿಸಿದ ಪರಿಷ್ಕೃತ ಸೂಚನೆಗಳುಳ್ಳ ಸುತ್ತೋಲೆಯನ್ನು ಸಾರ್ವಜನಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ. ಈ ವಿಷಯದಲ್ಲಿ ಹಿಂದಿನ ಸೂಚನೆಗಳನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ,’ ಎಂದು ಎಸ್‌ಬಿಐ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು