ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್ ಪರ ಸುಪ್ರೀಂ ಕೋರ್ಟ್‌ ಆದೇಶ

Last Updated 6 ಆಗಸ್ಟ್ 2021, 11:07 IST
ಅಕ್ಷರ ಗಾತ್ರ

ನವದೆಹಲಿ: ಫ್ಯೂಚರ್‌ ರಿಟೇಲ್ ಲಿಮಿಟೆಡ್‌ (ಎಫ್‌ಆರ್‌ಎಲ್‌) ಕಂಪನಿಯನ್ನು ರಿಲಯನ್ಸ್ ರಿಟೇಲ್‌ ಜೊತೆ ವಿಲೀನ ಮಾಡುವಂತಿಲ್ಲ ಎಂದು ಸಿಂಗಪುರದ ತುರ್ತು ಮಧ್ಯಸ್ಥಿಕೆ ಕೇಂದ್ರ ನೀಡಿದ್ದ ಆದೇಶವು ಭಾರತದಲ್ಲಿ ಜಾರಿಗೆ ಬರುತ್ತದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ. ಇದರಿಂದಾಗಿ, ಎಫ್‌ಆರ್‌ಎಲ್‌ ಹಾಗೂ ರಿಲಯನ್ಸ್ ರಿಟೇಲ್ ನಡುವಿನ ಒಪ್ಪಂದವನ್ನು ಪ್ರಶ್ನಿಸಿದ್ದ ಅಮೆಜಾನ್ ಕಂಪನಿಗೆ ಜಯ ಸಿಕ್ಕಂತಾಗಿದೆ.

ರಿಲಯನ್ಸ್ ರಿಟೇಲ್ ಕಂಪನಿಯು ಎಫ್‌ಆರ್‌ಎಲ್‌ ಕಂಪನಿಯನ್ನು ₹ 24,731 ಕೋಟಿಗೆ ಖರೀದಿಸಲು ಮುಂದಾಗಿತ್ತು. ಇದಕ್ಕೆ ಅಮೆಜಾನ್ ವಿರೋಧ ವ್ಯಕ್ತಪಡಿಸಿತ್ತು. ಭಾರತೀಯ ಮಧ್ಯಸ್ಥಿಕೆ ಮತ್ತು ರಾಜೀ ಕಾಯ್ದೆಯ ಅನ್ವಯ, ವಿದೇಶದ ಮಧ್ಯಸ್ಥಿಕೆ ಕೇಂದ್ರ ನೀಡಿದ ಆದೇಶವು ಭಾರತದಲ್ಲಿಯೂ ಜಾರಿಯಾಗುತ್ತದೆ ಎಂದು ನ್ಯಾಯಮೂರ್ತಿ ಆರ್.ಎಫ್. ನರಿಮನ್ ಅವರು ಇದ್ದ ನ್ಯಾಯಪೀಠವು ಹೇಳಿದೆ.

ಸುಪ್ರೀಂ ಕೋರ್ಟ್‌ ಆದೇಶವನ್ನು ಪ್ರಶ್ನಿಸಿ, ಸಿಂಗಪುರದ ಮಧ್ಯಸ್ಥಿಗೆ ಕೇಂದ್ರದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಎಫ್‌ಆರ್‌ಎಲ್‌ ಕಂಪನಿಯ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಕಾನೂನು ಪರಿಣತರೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಹೇಳಿದರು.

ಈಗ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವು ಎಫ್‌ಆರ್‌ಎಲ್‌ ಹಾಗೂ ಅಮೆಜಾನ್‌ ನಡುವಿನ ವ್ಯಾಜ್ಯದ ಸರಿ–ತಪ್ಪುಗಳ ಬಗ್ಗೆ ಏನನ್ನೂ ಹೇಳಿಲ್ಲ. ಬದಲಿಗೆ, ಇದು ಕಾನೂನಿನ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದೆ, ಮಧ್ಯಸ್ಥಿಕೆ ಕೇಂದ್ರದ ಆದೇಶವನ್ನು ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ಸ್ಪಷ್ಟಪಡಿಸಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT