ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತದ ಅನಿಶ್ಚಿತತೆ: ಗೂಳಿ ನಾಗಾಲೋಟಕ್ಕೆ ತಡೆ

Published 12 ಏಪ್ರಿಲ್ 2024, 14:26 IST
Last Updated 12 ಏಪ್ರಿಲ್ 2024, 14:26 IST
ಅಕ್ಷರ ಗಾತ್ರ

ಮುಂಬೈ: ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದಿಂದ ಷೇರು ಮಾರಾಟಕ್ಕೆ ಮುಂದಾಗಿದ್ದರಿಂದ ದೇಶದ ಷೇರು‍ಪೇಟೆಗಳಲ್ಲಿ ಶುಕ್ರವಾರ ನಡೆದ ವಹಿವಾಟಿನಲ್ಲಿ ಸೂಚ್ಯಂಕಗಳು ಇಳಿಕೆ ಕಂಡಿವೆ. 

ಅಲ್ಲದೆ, ಮಾರ್ಚ್‌ ತಿಂಗಳಲ್ಲಿ ಅಮೆರಿಕದ ಚಿಲ್ಲರೆ ಹಣದುಬ್ಬರವು ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ. ಹಾಗಾಗಿ, ಅಲ್ಲಿನ ಕೇಂದ್ರೀಯ ಬ್ಯಾಂಕ್ ಆದ ಫೆಡರಲ್ ರಿಸರ್ವ್‌, ಜೂನ್‌ನಲ್ಲಿ ಬಡ್ಡಿದರ ಕಡಿತ ಮಾಡುವುದು ಅನಿಶ್ಚಿತತೆಯಿಂದ ಕೂಡಿದೆ. ಇದು  ಷೇರುಪೇಟೆಯಲ್ಲಿ ಕರಡಿ ಕುಣಿತಕ್ಕೆ ಕಾರಣವಾಯಿತು. ಇದರಿಂದಾಗಿ ಮೂರು ದಿನಗಳ ಗೂಳಿಯ ನಾಗಾಲೋಟವು ಕೊನೆಗೊಂಡಿತು. 

ಹೂಡಿಕೆದಾರರ ಸಂಪತ್ತು ಒಂದೇ ದಿನ ₹2.52 ಲಕ್ಷ ಕೋಟಿ ಕರಗಿದೆ. 

ಎರಡು ದಿನಗಳ ಹಿಂದೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 793 ಅಂಶ (ಶೇ 1.06ರಷ್ಟು) ಇಳಿಕೆ ಕಂಡು 74,244 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ದಿನದ ವಹಿವಾಟಿನಲ್ಲಿ 848 ಅಂಶಗಳಷ್ಟು ಇಳಿಕೆ ಕಂಡಿತ್ತು. ಸೆನ್ಸೆಕ್ಸ್ ಗುಚ್ಛದಲ್ಲಿ 27 ಕಂಪನಿಗಳ ಷೇರಿನ ಮೌಲ್ಯ ಇಳಿಕೆ ಕಂಡಿದೆ. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ, 234 ಅಂಶ (ಶೇ 1.03ರಷ್ಟು) ಇಳಿಕೆ ಕಂಡು 22,519 ಅಂಶಗಳಲ್ಲಿ ಅಂತ್ಯಗೊಂಡಿತು. 

ಸನ್‌ ಫಾರ್ಮಾ, ಮಾರುತಿ, ಪವರ್ ಗ್ರಿಡ್‌, ಟೈಟನ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಟೆಕ್‌ ಮಹೀಂದ್ರ, ಲಾರ್ಸನ್‌ ಆ್ಯಂಡ್‌ ಟೂಬ್ರೊ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಷೇರುಗಳು ಕುಸಿತ ಕಂಡಿವೆ. 

ಟಾಟಾ ಮೋಟರ್ಸ್‌, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಹಾಗೂ ನೆಸ್ಲೆ ಷೇರು ಗಳಿಕೆ ಕಂಡಿವೆ. ‌

‘ಫೆಬ್ರುವರಿಯಲ್ಲಿ ದಾಖಲಾಗಿದ್ದಕ್ಕಿಂತಲೂ ಮಾರ್ಚ್‌ನಲ್ಲಿ ಅಮೆರಿಕದ ಚಿಲ್ಲರೆ ಹಣದುಬ್ಬರವು ಶೇ 0.4ರಷ್ಟು ಏರಿಕೆಯಾಗಿದೆ. ಪ್ರಸಕ್ತ ವರ್ಷದಲ್ಲಿ ಫೆಡರಲ್‌ ರಿಸರ್ವ್‌ ಮೂರು ಬಾರಿ ಬಡ್ಡಿದರ ಇಳಿಸುವ ಮುನ್ಸೂಚನೆ ನೀಡಿತ್ತು. ಆದರೆ, ಹಣದುಬ್ಬರದ ಏರಿಕೆಯು ಕೇಂದ್ರೀಯ ಬ್ಯಾಂಕ್‌ನ ನಿರ್ಧಾರಕ್ಕೆ ಸವಾಲೊಡ್ಡಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಆದರೆ, ಯುರೋಪ್ ಸೆಂಟ್ರಲ್ ಬ್ಯಾಂಕ್‌ನ ಬಡ್ಡಿದರ ನೀತಿಯಿಂದಾಗಿ ಯುರೋಪ್‌ ಮಾರುಕಟ್ಟೆಯು ಸದೃಢವಾಗಿದೆ. ಅಲ್ಲದೆ, ಬ್ಯಾಂಕ್‌ ಶೀಘ್ರವೇ ಬಡ್ಡಿದರ ಕಡಿತಗೊಳಿಸುವ ಸುಳಿವು ನೀಡಿದೆ ಎಂದು ಹೇಳಿದ್ದಾರೆ.

‘ಫೆಡರಲ್‌ ರಿಸರ್ವ್‌ನ ಬಡ್ಡಿದರ ಕಡಿತ ವಿಳಂಬ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ತೈಲದ ಬೆಲೆ ಏರಿಕೆ ಹಾಗೂ ಕಂಪನಿಗಳ ನಾಲ್ಕನೇ ತ್ರೈಮಾಸಿಕ ಫಲಿತಾಂಶವು ಭಾರತೀಯ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿವೆ. ಹಾಗಾಗಿ, ಸೂಚ್ಯಂಕಗಳು ಕುಸಿತ ದಾಖಲಿಸಿವೆ’ ಎಂದು ಜಿಯೊಜಿತ್‌ ಫೈನಾನ್ಷಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಬಿಎಸ್‌ಇ ಸ್ಮಾಲ್‌ ಕ್ಯಾ‍ಪ್ ಶೇ 0.60ರಷ್ಟು ಹಾಗೂ ಮಿಡ್‌ ಕ್ಯಾಪ್‌ ಸೂಚ್ಯಂಕ ಶೇ 0.49ರಷ್ಟು ಕುಸಿತ ಕಂಡಿವೆ. 

ಆಯಿಲ್‌ ಆ್ಯಂಡ್‌ ಗ್ಯಾಸ್‌ ಶೇ 1.28, ಯುಟಿಲಿಟಿ ಶೇ 1.02, ರಿಯಾಲ್ಟಿ ಶೇ 0.96, ಬ್ಯಾಂಕೆಕ್ಸ್ ಶೇ 0.91, ಐ.ಟಿ ಶೇ 0.84 ಹಾಗೂ ಹಣಕಾಸು ಸೇವಾ ಸೂಚ್ಯಂಕ ಶೇ 0.81ರಷ್ಟು ಇಳಿಕೆ ಕಂಡಿವೆ.  

ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.95ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 90.55 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT