ಮಂಗಳವಾರ, ಆಗಸ್ಟ್ 9, 2022
21 °C

ಪೆಟ್ರೋಲಿಯಂ ಉತ್ಪನ್ನ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ರಾಜ್ಯಗಳಿಗೇ ಹೆಚ್ಚು ನಷ್ಟ

ರಕ್ಷಿತ್‌ ಎಸ್‌. ಪೊನ್ನಾಥಪುರ Updated:

ಅಕ್ಷರ ಗಾತ್ರ : | |

Prajavani

ಹಲವು ತಿಂಗಳುಗಳಿಂದ ಇಂಧನಗಳ ಬೆಲೆ ಗಗಕ್ಕೇರುತ್ತಲೇ ಇದೆ. ಹಲವು ರಾಜ್ಯಗಳಲ್ಲಿ ಇಂಧನದ ಬೆಲೆ ಪ್ರತಿ ಲೀಟರ್‌ಗೆ ₹100ರ ಗಡಿ ದಾಟಿದೆ. ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ಲಾಕ್‌ಡೌನ್, ಉದ್ಯೋಗ ನಷ್ಟ ಮತ್ತು ನಿರುದ್ಯೋಗದ ಸಮಸ್ಯೆಯು ದೇಶದ ಬಹುತೇಕ ಜನರ ಆರ್ಥಿಕ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ಇಂಧನಗಳ ಬೆಲೆ ಗಗನಕ್ಕೇರಿರುವುದಕ್ಕೆ ಎಲ್ಲೆಡೆಯಿಂದ, ಅದರಲ್ಲೂ ವಿರೋಧ ಪಕ್ಷಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ಅಡಿ ತಂದರೆ ಬೆಲೆ ಏರಿಕೆ ನಿಯಂತ್ರಿಸಬಹುದು ಎಂಬುದು ಈ ಅವಧಿಯಲ್ಲಿ ಸೂಚಿಸಲಾಗುತ್ತಿರುವ ಪ್ರಮುಖ ಪರಿಹಾರೋಪಾಯ. ಆದರೆ ಹೀಗೆ ಮಾಡಿದರೆ ಒಳಿತಾಗುವುದಕ್ಕಿಂತ ಕೆಡುಕಾಗುವುದೇ ಹೆಚ್ಚು, ಅದರಲ್ಲೂ ರಾಜ್ಯಗಳಿಗೆ ಹೆಚ್ಚು ಹಾನಿಯಾಗುತ್ತದೆ.

ಬೇರೆ ಬೇರೆ ತೆರಿಗೆಗಳ ವ್ಯಾಪ್ತಿಯಲ್ಲಿದ್ದ ಎಲ್ಲಾ ಸರಕುಗಳು 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದ ನಂತರ, ಜಿಎಸ್‌ಟಿ ವ್ಯಾಪ್ತಿಗೆ ಬಂದವು. ಆದರೆ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾದ ಕೆಲವೇ ಸರಕುಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳೂ ಒಂದು. ಹೀಗಾಗಿಯೇ ರಾಜ್ಯಗಳು ವಿಧಿಸುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಅನ್ವಯ ರಾಜ್ಯದಿಂದ ರಾಜ್ಯಕ್ಕೆ ಇಂಧನಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ. (ಚಿಲ್ಲರೆ ಮಾರಾಟ ಬೆಲೆಯಲ್ಲಿ ಕೇಂದ್ರೀಯ ಅಬಕಾರಿ ತೆರಿಗೆ, ಡೀಲರ್‌ ಕಮಿಷನ್ ಮತ್ತು ಕಚ್ಚಾತೈಲದ ಬೆಲೆಯೂ ಸೇರಿರುತ್ತದೆ. ಈ ಎಲ್ಲಾ ಬೆಲೆ ಮತ್ತು ತೆರಿಗೆ ಮೊತ್ತವು ಎಲ್ಲಾ ರಾಜ್ಯದಲ್ಲೂ ಸಮನಾಗಿಯೇ ಇರುತ್ತವೆ). ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗುತ್ತಿದ್ದರೂ, ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿರುವುದು ತೆರಿಗೆ ಏರಿಕೆಯೇ ಆಗಿದೆ.

ಇಂಧನಗಳ ಮೇಲೆ ವಿಧಿಸಲಾಗುವ ಒಟ್ಟು ತೆರಿಗೆಯಲ್ಲಿ ರಾಜ್ಯಗಳ ವ್ಯಾಟ್‌ಗಿಂತ ಕೇಂದ್ರ ಅಬಕಾರಿ ತೆರಿಗೆಯ ಪ್ರಮಾಣವೇ ಹೆಚ್ಚು. 2014ಕ್ಕೆ ಹೋಲಿಸಿದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರ ಅಬಕಾರಿ ತೆರಿಗೆಯಲ್ಲಿ ಶೇ 300ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ. 2014ರಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ಮತ್ತು ಡೀಸೆಲ್‌ನ ಮೇಲೆ ಕ್ರಮವಾಗಿ ಶೇ 9 ಮತ್ತು ಶೇ 3ರಷ್ಟು ಕೇಂದ್ರ ಅಬಕಾರಿ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಈಗ ಪ್ರತಿ ಲೀಟರ್‌ ಪೆಟ್ರೋಲ್ ಮತ್ತು ಡೀಸೆಲ್‌ಗೆ ಕ್ರಮವಾಗಿ ಶೇ 33 ಮತ್ತು ಶೇ 32ರಷ್ಟು ಕೇಂದ್ರ ಅಬಕಾರಿ ಸುಂಕ ಸಂಗ್ರಹಿಸಲಾಗುತ್ತಿದೆ. ಈ ವರ್ಷದ ಆರಂಭದಲ್ಲಿ ಇಂಧನಗಳ ಬೆಲೆ ಏರಿಕೆಯಾದಾಗ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ಸರ್ಕಾರಗಳು ವ್ಯಾಟ್‌ ದರವನ್ನು ಇಳಿಕೆ ಮಾಡಿದ್ದವು. ಆದರೆ ಕೇಂದ್ರ ಅಬಕಾರಿ ತೆರಿಗೆಯನ್ನು ಕಡಿತ ಮಾಡಿರಲಿಲ್ಲ. 

ಜಿಎಸ್‌ಟಿ ಬಂದ ನಂತರ ತೆರಿಗೆ ವಿಧಿಸುವ ಅಧಿಕಾರವನ್ನು ಕಳೆದುಕೊಂಡಿದ್ದು ರಾಜ್ಯಗಳೇ ಎಂಬುದನ್ನು ನಾವು ಗಮನದಲ್ಲಿ ಇರಿಸಿಕೊಳ್ಳಬೇಕು. ರಾಜ್ಯಗಳು ತೆರಿಗೆ ವಿಧಿಸಬಹುದಾದ ಅಧಿಕಾರ ಇರುವ ಕೆಲವೇ ಕೆಲವು ಸರಕುಗಳು ಇನ್ನೂ ಉಳಿದಿವೆ. ಅವು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಮಾತ್ರ. ಈ ಸರಕುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತಹ ಯಾವುದೇ ಕ್ರಮವೂ ಒಕ್ಕೂಟ ಸರ್ಕಾರಕ್ಕಿಂತ, ರಾಜ್ಯ ಸರ್ಕಾರಗಳ ಆದಾಯಕ್ಕೇ ಹೆಚ್ಚು ಹಾನಿ ಮಾಡುತ್ತವೆ. ಇಂಧನಗಳ ಮೇಲೆ ಒಕ್ಕೂಟ ಸರ್ಕಾರವೇ ಭಾರಿ ಪ್ರಮಾಣದ ತೆರಿಗೆ ಹೇರುತ್ತಿರುವ ಈ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಒಕ್ಕೂಟ ಸರ್ಕಾರದ ತಪ್ಪಿಗೆ ರಾಜ್ಯ ಸರ್ಕಾರಗಳಿಗೆ ಶಿಕ್ಷೆ ವಿಧಿಸಿದಂತಾಗುತ್ತದೆ.

ಎರಡನೆಯದಾಗಿ ಈಚಿನ ವರ್ಷಗಳಲ್ಲಿ ಆದಾಯದ ಪ್ರಮಾಣ ಕಡಿಮೆಯಾಗಿರುವ ಕಾರಣ ರಾಜ್ಯ ಸರ್ಕಾರಗಳು, ಒಕ್ಕೂಟ ಸರ್ಕಾರದ ಹಣ ವರ್ಗಾವಣೆಯನ್ನೇ ಅವಲಂಭಿಸಬೇಕಾದ ಸ್ಥಿತಿ ಇದೆ. ಇನ್ನೊಂದೆಡೆ ಕೋವಿಡ್‌ ಸಾಂಕ್ರಾಮಿಕದಿಂದ ಲಾಕ್‌ಡೌನ್‌ ಮತ್ತು ಕುಂಠಿತ ಆರ್ಥಿಕತೆಯಿಂದಾಗಿ ಒಕ್ಕೂಟ ಸರ್ಕಾರವು ರಾಜ್ಯ ಸರ್ಕಾರಕ್ಕೆ ಕೊಡಬೇಕಾದ ತೆರಿಗೆ ಪಾಲಿನ ವರ್ಗಾವಣೆಗೂ ಹೊಡೆತ ಬಿದ್ದಿದೆ. ಒಕ್ಕೂಟ ಸರ್ಕಾರವು ಭರವಸೆ ನೀಡಿದ್ದಷ್ಟು ಜಿಎಸ್‌ಟಿ ಪರಿಹಾರವನ್ನು ಪಡೆದುಕೊಳ್ಳುವಲ್ಲಿಯೂ ರಾಜ್ಯ ಸರ್ಕಾರಗಳು ಹಲವು ಸಮಸ್ಯೆ ಎದುರಿಸುತ್ತಿವೆ. ಹೀಗಾಗಿಯೇ ರಾಜ್ಯ ಸರ್ಕಾರಗಳು ಜಿಎಸ್‌ಟಿ ಕೊರತೆಯನ್ನು ಸರಿದೂಗಿಸಿಕೊಳ್ಳಲು ಸಾಲದ ಮೊರೆ ಹೋಗಬೇಕಾದ ಅನಿವಾರ್ಯ ಎದುರಿಸಿದವು. ಇವೆಲ್ಲವುಗಳ ಕಾರಣದಿಂದ ರಾಜ್ಯಗಳು ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿವೆ. ಕೋವಿಡ್‌ ಪರಿಹಾರ ಮತ್ತು ನೆರವು ಯೋಜನೆಗಳ ಕಾರಣ ಆರ್ಥಿಕ ಹೊರೆ ಹೆಚ್ಚಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಆರ್ಥಿಕ ಅಧಿಕಾರವನ್ನು ರಾಜ್ಯ ಸರ್ಕಾರಗಳು ಇಂತಹ ಅನಿಶ್ಚಿತ ಪರಿಸ್ಥಿತಿಯಲ್ಲಿ ಬಿಟ್ಟುಕೊಡುವುದು ಮರಣ ಮೃದಂಗವೇ ಆಗುತ್ತದೆ. ಆದಾಯ ಸಂಗ್ರಹಕ್ಕೆ ಬೇರೆ ಬೇರೆ ಆಯ್ಕೆಗಳನ್ನು ಹೊಂದಿರುವ ಒಕ್ಕೂಟ ಸರ್ಕಾರವೇ, ಇಂಧನಗಳ ಮೇಲಿನ ತೆರಿಗೆಯನ್ನು ಕಡಿತ ಮಾಡುವ ಮೂಲಕ ಸಾರ್ವಜನಿಕರ ಹೊರೆಯನ್ನು ಸ್ವಲ್ಪ ಕಡಿಮೆ ಮಾಡಬಹುದು.

ಇದಕ್ಕಿಂತಲೂ ಮುಖ್ಯವಾಗಿ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೇ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎನ್ನುವ ಕೂಗು ರಾಜಕೀಯ ಘೋಷಣೆಯಿಂದ, ಪ್ರಸ್ತಾವದ ಮಟ್ಟಕ್ಕೆ ಬರುವುದೇ ಇಲ್ಲ. ಕೋವಿಡ್ ಸಾಂಕ್ರಾಮಿಕದಿಂದ ತತ್ತರಿಸಿರುವ ಜನರಿಗೆ ಪರಿಹಾರ ಮತ್ತು ನೆರವು ನೀಡಬೇಕಿರುವುದರಿಂದ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವುದು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳಿಗೆ ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತಹ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆ. ದೇಶವು ಹಂತಹಂತವಾಗಿ ಅನ್‌ಲಾಕ್‌ನತ್ತ ಮರಳಿದಂತೆ ಮತ್ತು ಆರ್ಥಿಕತೆಗೆ ಚಾಲನೆ ದೊರೆತ ಹಾಗೆ, ಕೇಂದ್ರ ಅಬಕಾರಿ ತೆರಿಗೆ ಮತ್ತು ರಾಜ್ಯ ಮೌಲ್ಯವರ್ಧಿತ ತೆರಿಗೆಗಳನ್ನು ಹಂತಹಂತವಾಗಿ ಇಳಿಕೆ ಮಾಡಿಕೊಂಡು ಬರುವುದೇ ಈಗ ಇರುವ ಏಕೈಕ ಪರಿಹಾರ ಮಾರ್ಗ.

ಲೇಖಕ: ಚೆನ್ನೈನ ‘ದ್ವಾರಾ ರಿಸರ್ಚ್‌’ ಸಂಸ್ಥೆಯ ಸಂಶೋಧನಾ ಸಹಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು