ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಗಟು ಹಣದುಬ್ಬರ 3 ತಿಂಗಳ ಕನಿಷ್ಠ: ತರಕಾರಿ‌, ಬೇಳೆಕಾಳು, ಈರುಳ್ಳಿ ಬೆಲೆ ಇಳಿಕೆ

Published 14 ಆಗಸ್ಟ್ 2024, 15:12 IST
Last Updated 14 ಆಗಸ್ಟ್ 2024, 15:12 IST
ಅಕ್ಷರ ಗಾತ್ರ

ನವದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಜುಲೈ ತಿಂಗಳಿನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇ 2.04ರಷ್ಟು ದಾಖಲಾಗಿದೆ. ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿರುವುದೇ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಅದರಲ್ಲೂ ತರಕಾರಿಗಳ ಬೆಲೆ ಕಡಿಮೆಯಾಗಿದೆ. 

ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರವು ಶೇ 1.19ರಷ್ಟು ದಾಖಲಾಗಿತ್ತು. ಜೂನ್‌ನಲ್ಲಿ ಶೇ 3.36ರಷ್ಟು ಏರಿಕೆಯಾಗುವ ಮೂಲಕ 16 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಕಳೆದ ವರ್ಷದ ಜುಲೈನಲ್ಲಿ ಶೇ (–) 1.23ರಷ್ಟು ದಾಖಲಾಗಿತ್ತು. 

ಜೂನ್‌ನಲ್ಲಿ ಶೇ 10.87ರಷ್ಟಿದ್ದ ಆಹಾರ ಹಣದುಬ್ಬರವು ಜುಲೈನಲ್ಲಿ ಶೇ 3.45ಕ್ಕೆ ತಗ್ಗಿದೆ. ತರಕಾರಿಗಳು, ಧಾನ್ಯ, ಬೇಳೆಕಾಳು ಮತ್ತು ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ತರಕಾರಿ ಬೆಲೆಯು ಶೇ 38.76ರಿಂದ ಶೇ 8.93ಕ್ಕೆ ಕುಗ್ಗಿದೆ. 

‘ಆಹಾರ ತಯಾರಿಕಾ ಸರಕುಗಳು, ಖನಿಜ ತೈಲಗಳು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸೇರಿ ಇತರೆ ತಯಾರಿಕಾ ವೆಚ್ಚದಲ್ಲಿ ಏರಿಕೆಯಾಗಿದೆ’ ಎಂದು ಬುಧವಾರ ಬಿಡುಗಡೆಯಾಗಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವರದಿ ತಿಳಿಸಿದೆ.

ಕಳೆದ ವರ್ಷದ ಜುಲೈನಲ್ಲಿ ಶೇ 1.43ರಷ್ಟಿದ್ದ ತಯಾರಿಕಾ ಸರಕುಗಳ ಬೆಲೆಯು ಈ ಜುಲೈನಲ್ಲಿ ಶೇ 1.58ರಷ್ಟು ಹೆಚ್ಚಳವಾಗಿದೆ. ಇಂಧನ ಮತ್ತು ವಿದ್ಯುತ್ ಸೂಚ್ಯಂಕವು ಶೇ 1.03ರಿಂದ ಶೇ 1.72ಕ್ಕೆ ಏರಿಕೆಯಾಗಿದೆ.

‘ಕೋರ್‌ ಸಗಟು ಹಣದುಬ್ಬರವು (ಆಹಾರೇತರ ತಯಾರಿಕಾ ಸರಕುಗಳು) ಸತತ ಐದು ತಿಂಗಳಿನಿಂದ ಏರಿಕೆಯಾಗಿದೆ‌. ಜುಲೈನಲ್ಲಿ ಶೇ 1.2ರಷ್ಟು ದಾಖಲಾಗುವ ಮೂಲಕ 17 ತಿಂಗಳ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ’ ಎಂದು ಐಸಿಆರ್‌ಎ ಹಿರಿಯ ಅರ್ಥಶಾಸ್ತ್ರಜ್ಞ ರಾಹುಲ್ ಅಗರವಾಲ್ ತಿಳಿಸಿದ್ದಾರೆ.

‘ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಬಿತ್ತನೆಯೂ ಚೆನ್ನಾಗಿದೆ. ಹಾಗಾಗಿ, ಬಹುತೇಕ ಆಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಆಗಸ್ಟ್‌ನಲ್ಲಿಯೂ ಸಗಟು ಹಣದುಬ್ಬರವು ಶೇ 2ರಷ್ಟು ದಾಖಲಾಗುವ ನಿರೀಕ್ಷೆಯಿದೆ’ ಎಂದು ತಿಳಿಸಿದ್ದಾರೆ.

ಜುಲೈನಲ್ಲಿ ಚಿಲ್ಲರೆ ಹಣದುಬ್ಬರವು ಐದು ವರ್ಷಗಳ ಕನಿಷ್ಠ ಮಟ್ಟವಾದ ಶೇ 3.54ರಷ್ಟು ದಾಖಲಾಗಿದೆ. ಇದು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿರುವ ಶೇ 4ರ ಮಿತಿಗಿಂತಲೂ ಕಡಿಮೆಯಿದೆ.

‘ಸಗಟು ಹಣದುಬ್ಬರವು ನಿಧಾನಗತಿಯಲ್ಲಿ ಇಳಿಕೆಯಾಗಲಿದೆ. ಇದರಿಂದ ಉತ್ಪಾದನಾ ವೆಚ್ಚ ತಗ್ಗಲಿದೆ. ಇದು ದೇಶದಲ್ಲಿ ಸರಕು ಮತ್ತು ಸೇವೆಯ ಬೇಡಿಕೆ ಹೆಚ್ಚಳಕ್ಕೆ ನೆರವಾಗಲಿದೆ’ ಎಂದು ಪಿಎಚ್‌ಡಿ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ  ಅಧ್ಯಕ್ಷ ಸಂಜೀವ್‌ ಅಗರ್ವಾಲ್‌ ತಿಳಿಸಿದ್ದಾರೆ.

ಹಣಕಾಸು ನೀತಿ ನಿರ್ಧರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌, ಚಿಲ್ಲರೆ ಹಣದುಬ್ಬರವನ್ನು ಮಾತ್ರ ಪರಿಗಣಿಸುತ್ತದೆ. ಸತತ ಒಂಬತ್ತನೇ ಬಾರಿಗೆ ಹಣಕಾಸು ನೀತಿ ಸಮಿತಿ ಸಭೆಯು ರೆಪೊ ದರದಲ್ಲಿ ಬದಲಾವಣೆ ಮಾಡಿಲ್ಲ. ಸದ್ಯ ರೆಪೊ ದರವು ಶೇ 6.5ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT