ಮಂಗಳವಾರ, ನವೆಂಬರ್ 12, 2019
27 °C

ವಿಪ್ರೊ ನಿವ್ವಳ ಲಾಭ ₹ 2,552 ಕೋಟಿ

Published:
Updated:
Prajavani

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೊ, ಪ್ರಸಕ್ತ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ ₹ 2,552 ಕೋಟಿ ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ₹1,889 ಕೋಟಿಗೆ ಹೋಲಿಸಿದರೆ, ಈ ಬಾರಿಯ ನಿವ್ವಳ ಲಾಭವು ಶೇ 35ರಷ್ಟು ಹೆಚ್ಚಳವಾಗಿದೆ. ಒಟ್ಟಾರೆ ವರಮಾನವು ವರ್ಷದ ಹಿಂದಿನ ₹ 15,203 ಕೋಟಿಗೆ ಹೋಲಿಸಿದರೆ ಈಗ ₹ 15,875 ಕೋಟಿಗೆ ತಲುಪಿದೆ.

ಡಿಸೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯ ವರಮಾನವು ಶೇ 0.8 ರಿಂದ ಶೇ 2.8ರಷ್ಟು ಹೆಚ್ಚಳಗೊಳ್ಳಲಿದೆ ಎಂದು ಅಂದಾಜಿಸಿದೆ.

‘ಲಾಭ ಮತ್ತು ವರಮಾನ ಹೆಚ್ಚಳ ವಿಷಯದಲ್ಲಿ ಕಂಪನಿಯ ಈ ತ್ರೈಮಾಸಿಕ ಸಾಧನೆ ಉತ್ತಮವಾಗಿದೆ. ಅರ್ಥ ವ್ಯವಸ್ಥೆಯ ಕೆಲ ವಲಯಗಳಲ್ಲಿ ಅನಿಶ್ಚಿತತೆ ಕಂಡು ಬಂದಿದ್ದರೂ ಐ.ಟಿ ವೆಚ್ಚದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ’ ಎಂದು ಸಿಇಒ ಅಬಿದಲಿ ನೀಮೂಚವಾಲಾ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಜಾಗತಿಕ ಗ್ರಾಹಕರಿಗೆ ನೀಡಲಾಗುತ್ತಿದ್ದ ಸೇವೆಯನ್ನು ಭಾರತದ ಕಂಪನಿಗಳಿಗೂ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಡಿಜಿಟಲ್‌ ಕ್ಷೇತ್ರದಲ್ಲಿನ ಕಂಪನಿಯ ಜಾಗತಿಕ ಹೂಡಿಕೆಯು ಕೇವಲ ಪ್ರಮುಖ ಮಾರುಕಟ್ಟೆಗೆ ಸೀಮಿತವಾಗಿಲ್ಲ. ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಯಲ್ಲಿಯೂ ಹೂಡಿಕೆ ಮಾಡಲಾಗುತ್ತಿದೆ. ನಮ್ಮ ಡಿಜಿಟಲ್‌ ವರಮಾನವು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 7ರಷ್ಟು ಪ್ರಗತಿ ದಾಖಲಿಸಿದೆ’ ಎಂದು ಅವರು ಹೇಳಿದ್ದಾರೆ.

 

ಪ್ರತಿಕ್ರಿಯಿಸಿ (+)