ಮಂಗಳವಾರ, ಮೇ 11, 2021
26 °C

ಮಹಿಳೆಯರಿಗೆ ನಿವೃತ್ತಿ ಯೋಜನೆ ಅಗತ್ಯ

ತರುಣ್‌ ಚುಘ್‌ Updated:

ಅಕ್ಷರ ಗಾತ್ರ : | |

ನಿವೃತ್ತಿ ನಂತರದ ಜೀವನದ ಬಗ್ಗೆ ಯೋಜನೆ ರೂಪಿಸುವುದರಲ್ಲಿ ಭಾರತದ ಮಹಿಳೆಯರು ಪುರುಷರಿಗಿಂತ ಹಿಂದೆ ಉಳಿದಿದ್ದಾರೆ ಎಂದು ಅನೇಕ ವರದಿಗಳು ಹೇಳಿವೆ. ಮಹಿಳೆಯರು ನಿವೃತ್ತಿಯ ನಂತರದ ಜೀವನದ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚನೆ ಮಾಡಲೇಬೇಕು ಎಂಬುದಕ್ಕೆ ಅನೇಕ ಕಾರಣಗಳಿವೆ. ಲಿಂಗಾಧಾರಿತ ವೇತನ ತಾರತಮ್ಯ, ಕೌಟುಂಬಿಕ ಸ್ಥಿತಿಗತಿ, ದೀರ್ಘವಾದ ಜೀವಿತಾವಧಿ ಮುಂತಾದವು ಇವುಗಳಲ್ಲಿ ಕೆಲವು. ಈ ವಿಚಾರದಲ್ಲಿ ಮಹಿಳೆಯರು ಯಾಕೆ ಗಂಭೀರ ಚಿಂತನೆ ನಡೆಸಬೇಕು ಎಂಬುದಕ್ಕೆ ಒಂದಷ್ಟು ಕಾರಣಗಳು ಇಲ್ಲಿವೆ...

ಆರ್ಥಿಕ ಕಂದಕ

ನಮ್ಮಲ್ಲಿ ಅನೇಕ ಕಡೆಗಳಲ್ಲಿ ಲಿಂಗಾಧಾರಿತ ವೇತನ ತಾರತಮ್ಯ ಇದೆ ಎಂಬುದು ವಾಸ್ತವ. ಇದರಿಂದಾಗಿ ಪುರುಷರು ಮಾಡುವಷ್ಟು ಉಳಿತಾಯವನ್ನು ಮಾಡಲು ಮಹಿಳೆಯರಿಗೆ ಸಾಧ್ಯವಾಗುವುದಿಲ್ಲ. ಇದಲ್ಲದೆ ಮಕ್ಕಳು ಅಥವಾ ಕುಟುಂಬದ ಹಿರಿಯರನ್ನು ನೋಡಿಕೊಳ್ಳುವ ಸಲುವಾಗಿ ಮಹಿಳೆಯರು ಕೆಲವೊಮ್ಮೆ ಸ್ವಲ್ಪ ಅವಧಿಗೆ ಉದ್ಯೋಗವನ್ನು ತ್ಯಜಿಸುವ ಸಂದರ್ಭಗಳೂ ಬರುತ್ತವೆ. ಇಂತಹ ‘ಬಿಡುವು’ ನಿವೃತ್ತಿಯ ನಂತರದ ಜೀವನಕ್ಕೆ ಸಿದ್ಧತೆ ನಡೆಸುವ ವಿಚಾರದಲ್ಲಿ ಮಹಿಳೆಗೆ ದೊಡ್ಡ ಅಡ್ಡಿಯಾಗುತ್ತದೆ. ವಿಶೇಷವಾಗಿ ನೀವು 35–40 ವರ್ಷ ವಯಸ್ಸಿನಲ್ಲಿ ಇಂಥ ಬಿಡುವನ್ನು ತೆಗೆದುಕೊಳ್ಳುವುದಾದರೆ ಬಹುದೊಡ್ಡ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಯಾಕೆಂದರೆ ಈ ವಯಸ್ಸಿನಲ್ಲಿ ಬಿಡುವು ತೆಗೆದುಕೊಂಡರೆ ವೇತನದ ಜೊತೆಗೆ ಕೆಲವೊಮ್ಮೆ ಉದ್ಯೋಗದಲ್ಲಿ ಬಡ್ತಿಯ ಅವಕಾಶವನ್ನೂ ಕಳೆದುಕೊಳ್ಳಬೇಕಾಗುತ್ತದೆ.

ವೃತ್ತಿಯನ್ನು ಆರಂಭಿಸಿದ ಕೂಡಲೇ ಒಂದಷ್ಟು ಹಣವನ್ನು ‘ಯುಲಿಪ್‌’ನಂತಹ (Unit Linked Insurance Plans) ಷೇರುಪೇಟೆ ಆಧಾರಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿದರೆ, ನೀವು ಕೆಲಸದಿಂದ ಕೆಲವು ವರ್ಷಗಳ ಕಾಲ ಬಿಡುವು ತೆಗೆದುಕೊಂಡರೂ ನಿಮ್ಮ ಹೂಡಿಕೆಯ ಹಣವು ವೃದ್ಧಿಸುತ್ತಾ ಇರುತ್ತದೆ.

ಆರೋಗ್ಯ ಮತ್ತು ಜೀವಿತಾವಧಿ

ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ಅಗತ್ಯಗಳ ವಿಚಾರದಲ್ಲಿ ಪುರುಷ ಮತ್ತು ಮಹಿಳೆಯರ ಅಗತ್ಯಗಳು ಬೇರೆ ಬೇರೆಯಾಗಿರುತ್ತವೆ. ಮಹಿಳೆಯರು ಕೆಲವು ವರ್ಗದ ಕ್ಯಾನ್ಸರ್‌ಗಳಿಗೆ ತುತ್ತಾಗುವ ಮತ್ತು ಕೆಲವು ಗಂಭೀರ ಕಾಯಿಲೆಗಳಿಗೆ ಒಳಗಾಗುವ ಸಾಧ್ಯತೆಗಳು ಪುರುಷರಿಗಿಂತ ಹೆಚ್ಚಾಗಿರುತ್ತವೆ ಎಂದು ಅಧ್ಯಯನಗಳು ಸ್ಪಷ್ಟಪಡಿಸಿವೆ. ಆದರೆ, ಮಹಿಳೆಯರು ಪುರುಷರಿಗಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿರುತ್ತಾರೆ ಎಂದೂ ಅಧ್ಯಯನಗಳು ಹೇಳುತ್ತವೆ.

ಈ ಅಂಶಗಳನ್ನು ಗಮನಿಸಿದರೆ, ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿನ ವೈದ್ಯಕೀಯ ವೆಚ್ಚಗಳು ಬರುವ ಸಾಧ್ಯತೆ ಇರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. 65 ರಿಂದ 87ವರ್ಷದವರೆಗಿನ ವಯಸ್ಸಿನಲ್ಲಿ ಮಹಿಳೆಯರ ಆರೋಗ್ಯ ರಕ್ಷಣೆಗೆ ಬರುವ ವೆಚ್ಚವು ಅದೇ ವಯಸ್ಸಿನ ಪುರುಷರಿಗೆ ಬರುವ ವೆಚ್ಚಕ್ಕಿಂತ ಶೇ 18ರಷ್ಟು ಹೆಚ್ಚಾಗಿರುತ್ತದೆ ಎಂದು ಒಂದು ಅಧ್ಯಯನ ಹೇಳಿದೆ. ಆದ್ದರಿಂದ ನಿವೃತ್ತಿಯ ನಂತರದ ಜೀವನದ ಬಗ್ಗೆ ಯೋಚನೆ ಮಾಡುವಾಗ ಈ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು.

ನಿವೃತ್ತಿ ನಂತರದ ಜೀವನದ ವೆಚ್ಚಗಳು, ವಿಮಾ ಸೌಲಭ್ಯ ಮುಂತಾದವುಗಳ ಲೆಕ್ಕಾಚಾರಕ್ಕೆ ಈಗ ಸಾಕಷ್ಟು ಆನ್‌ಲೈನ್‌ ಕ್ಯಾಲ್ಕುಲೇಟರ್‌ಗಳು ಲಭ್ಯ ಇವೆ. ಅವುಗಳ ಸಹಾಯದಿಂದ ನಿವೃತ್ತಿಯ ನಂತರದ ಬದುಕಿಗಾಗಿ ಈಗಿನಿಂದಲೇ ಎಷ್ಟು ಉಳಿತಾಯ ಮಾಡಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಬಹುದು.

ಕೌಟುಂಬಿಕ ಗುರಿಗಳು

ನೈಸರ್ಗಿಕವಾಗಿ ಬಂದಿರುವ ಗುಣವೋ ಅಥವಾ ನಮ್ಮ ಸಾಮಾಜಿಕ ರಚನೆಯೋ, ಕುಟುಂಬದ ಆರೈಕೆ ಮಾಡುವ ಜವಾಬ್ದಾರಿಯನ್ನು ನಮ್ಮಲ್ಲಿ ಹೆಚ್ಚಾಗಿ ಮಹಿಳೆಯೇ ವಹಿಸಿಕೊಂಡಿರುತ್ತಾಳೆ. ತನ್ನ ಅಗತ್ಯಗಳನ್ನು ಬದಿಗಿಟ್ಟಾದರೂ ಮಹಿಳೆಯು ಕುಟುಂಬದ ಅಗತ್ಯಗಳನ್ನು ಈಡೇರಿಸುತ್ತಾಳೆ.

ನೀವು ಉದ್ಯೋಗಿ ಮಹಿಳೆಯಾಗಿರಬಹುದು ಅಥವಾ ಗೃಹಿಣಿಯಾಗಿರಬಹುದು, ವಿವಾಹಿತೆ ಅಥವಾ ಅವಿವಾಹಿತೆ ಆಗಿರಬಹುದು. ನೀವೂ ಸಹ ಒಂದು ದಿನ ನಿಮ್ಮ ಎಲ್ಲಾ ಅಗತ್ಯಗಳನ್ನು ಬದಿಗಿಟ್ಟು, ಜೀವನದ ಗುರಿಯನ್ನು ತೊರೆದು ವೇತನರಹಿತವಾದ ‘ಕುಟುಂಬದ ಆರೈಕೆ’ಯ ಕೆಲಸದಲ್ಲಿ ತೊಡಗಬೇಕಾಗಿ ಬರಬಹುದು.

ಬಜಾಜ್‌ ಅಲಯನ್ಸ್‌ ಸಂಸ್ಥೆಯು ಇತ್ತೀಚಿಗೆ ನಡೆಸಿದ್ದ ‘ಜೀವನ ಗುರಿ ಸಾಧಿಸಲು ಸಿದ್ಧತೆ’ ಕುರಿತ ಸಮೀಕ್ಷೆಯಲ್ಲಿ, ‘ಮಹಿಳೆಯರು ಹೆಚ್ಚಾಗಿ ಸಮತೋಲನದ ಜೀವನ ನಡೆಸುವ ಗುರಿ ಇಟ್ಟುಕೊಂಡು ತಮ್ಮ ಬದುಕನ್ನು ಶ್ರೀಮಂತಗೊಳಿಸಲು ಇಚ್ಛಿಸುತ್ತಾರೆ, ಪುರುಷರಿಗೆ ಹೋಲಿಸಿದರೆ ಅವರು ಪ್ರವಾಸ, ಆರೋಗ್ಯ ರಕ್ಷಣೆ, ಮುಂತಾದ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ’ ಎಂಬ ಆಸಕ್ತಿದಾಯಕ ಮಾಹಿತಿ ಬೆಳಕಿಗೆ ಬಂದಿದೆ.

ವಿದೇಶ ಪ್ರಯಾಣ, ಸಾಕಷ್ಟು ಹಣ ಸಂಪಾದಿಸಿದ ನಂತರ ನಿವೃತ್ತಿಹೊಂದಿ ಆರೋಗ್ಯದಿಂದ ಇರುವುದೇ ಮುಂತಾದ ದೀರ್ಘಾವಧಿಯ ಗುರಿಗಳನ್ನು ಈಡೇರಿಸಿಕೊಳ್ಳಬೇಕಾದರೆ ಎಷ್ಟು ಸಾಧ್ಯವೋ ಅಷ್ಟು ಬೇಗ ನೀವು ಹೂಡಿಕೆಯನ್ನು ಆರಂಭಿಸುವುದು ಅಗತ್ಯ.

ಇಂದು ಹೂಡಿಕೆಗೆ ಅನೇಕ ಮಾಧ್ಯಮಗಳಿವೆ. ಉದಾಹರಣೆಗೆ ಜೀವ ವಿಮೆಯು ಈಗ ಹೆಚ್ಚು ಜನರು ಆಯ್ಕೆ ಮಾಡುವ ಹೂಡಿಕಾ ವಿಧಾನವಾಗಿದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಜೀವ ವಿಮೆಯನ್ನು ರೂಪಿಸುವ ಸೌಲಭ್ಯವೂ ಇಂದು ಲಭ್ಯವಿದೆ. ಉಳಿತಾಯದ ಒಂದು ಭಾಗವನ್ನು ನೀವು ಉದ್ದೇಶಿಸಿದ ಕಡೆ ಹೂಡಿಕೆ ಮಾಡಿ ದೊಡ್ಡ ನಿಧಿಯನ್ನು ರೂಪಿಸಲು ಸಾಧ್ಯವಾಗುವಂಥ ವ್ಯವಸ್ಥೆ ಈಗ ಇದೆ. ಆದ್ದರಿಂದ ಆರ್ಥಿಕ ವಿಚಾರದಲ್ಲಿ ಮಹಿಳೆಯರೂ ಪೂರ್ವಭಾವಿಯಾಗಿ ಚಿಂತನೆ ನಡೆಸಿ ಮುನ್ನಡೆದರೆ ನಿವೃತ್ತಿ ಜೀವನವು ಹೆಚ್ಚು ಆರಾಮ ಮತ್ತು ಆನಂದದಾಯಕ ಆಗಿರಲು ಸಾಧ್ಯವಿದೆ.

(ಲೇಖಕ: ಬಜಾಬ್‌ ಅಲಯನ್ಸ್‌ ಲೈಫ್‌ನ ಸಿಇಒ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು