ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೆಸ್‌ ಬ್ಯಾಂಕ್‌ ಮೇಲೆ ಆರ್‌ಬಿಐ ನಿರ್ಬಂಧ: ಹೆಚ್ಚಿದ ದುಗುಡ

ಗ್ರಾಹಕರ ಆಕ್ರೋಶ; ಶಾಖೆಗಳ ಎದುರು ಸಾಲು– ಆಡಳಿತ ಮಂಡಳಿ ವಿರುದ್ಧ ಘೋಷಣೆ
Last Updated 6 ಮಾರ್ಚ್ 2020, 20:17 IST
ಅಕ್ಷರ ಗಾತ್ರ

ಮುಂಬೈ/ಬೆಂಗಳೂರು:ಆರ್‌ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಹಣ ಹಿಂದೆ ಪಡೆಯಲು ಧಾವಿಸಿದ ಯೆಸ್‌ ಬ್ಯಾಂಕ್‌ನ ಗ್ರಾಹಕರಿಂದಾಗಿ ಶಾಖೆಗಳ ಎದುರು ದೇಶದಾದ್ಯಂತ ಶುಕ್ರವಾರ ಬೆಳಿಗ್ಗೆಯಿಂದಲೇ ಉದ್ದನೆಯ ಸರತಿ ಸಾಲುಗಳು ಕಂಡು ಬಂದವು.

ಆತಂಕಗೊಂಡಿದ್ದ ಜನರು ಮೊಬೈಲ್‌ ಕರೆಗಳ ಮೂಲಕ ತಮ್ಮ ದುಃಖ ದುಮ್ಮಾನಗಳನ್ನು ಹಿತೈಷಿಗಳ ಜತೆ ಹಂಚಿಕೊಳ್ಳುತ್ತಿರುವುದು ಸಾಮಾನ್ಯ ನೋಟವಾಗಿತ್ತು. ಬ್ಯಾಂಕ್‌ನ ಎಟಿಎಂಗಳಲ್ಲಿ ಹಣ ಸಿಗದೆ ಗ್ರಾಹಕರು ಹಿಡಿಶಾಪ ಹಾಕಿದರು. ಬ್ಯಾಂಕ್‌ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಣ ಪಡೆಯಲು ಸಾಧ್ಯವಾಗದವರು ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.

ಕೈಕೊಟ್ಟ ನೆಟ್‌ ಬ್ಯಾಂಕಿಂಗ್‌: ಬ್ಯಾಂಕ್‌ನ ಅಂತರ್ಜಾಲ ವ್ಯವಸ್ಥೆಯೂ (ನೆಟ್‌ ಬ್ಯಾಂಕಿಂಗ್‌) ಕೆಲಸ ಮಾಡಲಿಲ್ಲ. ಇದರಿಂದ ಆಕ್ರೋಶಗೊಂಡ ಅನೇಕ ಗ್ರಾಹಕರು ಟ್ವೀಟರ್‌ನಲ್ಲಿ ತಮ್ಮ ಕೋಪ, ಅಸಮಾಧಾನ ದಾಖಲಿಸಿದ್ದಾರೆ. ತಾಂತ್ರಿಕ ದೋಷ ಕಂಡು ಬಂದ (ಕನೆಕ್ಷನ್‌ ಎರ್ರರ್‌) ಸ್ಕ್ರೀನ್‌ಶಾಟ್ಸ್‌ಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಅನಿಯಮಿತವಾಗಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ ಎಂದು ಬ್ಯಾಂಕ್‌, ಗ್ರಾಹಕರ ಟೀಕೆಗೆ ಪ್ರತಿಕ್ರಿಯಿಸಿತ್ತು. ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬ್ಯಾಂಕ್‌ ತನ್ನ ಉಚಿತ ದೂರವಾಣಿ ಸಂಖ್ಯೆಯನ್ನು 1800 2000 ರಿಂದ 1800 1200ಕ್ಕೆ ಬದಲಿಸಿದೆ.

ವಹಿವಾಟಿಗೆ ಕಷ್ಟ: ಬೆಂಗಳೂರಿನ ಅವೆನ್ಯೂ ರಸ್ತೆಯ ಶಾಖೆಯ ಮುಂದೆ ಸೇರಿದ್ದ ಗ್ರಾಹಕರು ಹಣ ಹಿಂದೆ ಪಡೆಯಲು ವಿಧಿಸಿದ್ದ ಮಿತಿಯಿಂದ ಕಂಗಾಲಾಗಿದ್ದರು. ‘ವಹಿವಾಟಿಗೆ ಹಣ ಪಡೆಯುವುದು ಕಷ್ಟವಾಗಿದೆ ಸ್ವಾಮಿ. ಯಾರಲ್ಲಿ ನಮ್ಮ ಗೋಳು ತೋಡಿಕೊಳ್ಳುವುದು’ ಎಂದು ಚಿನ್ನಾಭರಣ ವರ್ತಕರೊಬ್ಬರು ಸಂಕಷ್ಟ ತೋಡಿಕೊಂಡರು.

ಅಲ್ಲಿ ಸೇರಿದ್ದ ಗ್ರಾಹಕರು ಇದೇ ಬಗೆಯಲ್ಲಿ ತಮ್ಮ ಹಣಕಾಸು ಅಗತ್ಯಗಳನ್ನು ಹೊಂದಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದರು. ಒಬ್ಬೊಬ್ಬ ಗ್ರಾಹಕರು ಹಣ ಪಡೆಯಲು ಕನಿಷ್ಠ ಎರಡು ಗಂಟೆ ಕಾಯಬೇಕಾಯಿತು. ದೇಶದಾದ್ಯಂತ ಇರುವ 1,122ಕ್ಕೂ ಹೆಚ್ಚು ಶಾಖೆಗಳ ಮುಂದೆ ಇದೇ ಬಗೆಯ ಚಿತ್ರಣ ಕಂಡುಬಂದಿತು.

ಸುರಕ್ಷಿತ: ಸರ್ಕಾರ, ಆರ್‌ಬಿಐ ಭರವಸೆ‌
ಗ್ರಾಹಕರ ಹಣ ಸುರಕ್ಷಿತವಾಗಿದೆ. ಯಾರೊಬ್ಬರೂ ಆತಂಕಪಡಬೇಡಿ ಎಂದು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌, ಗ್ರಾಹಕರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ನಡೆಸಿದವು. ಹಣಕಾಸು ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಬ್ಯಾಂಕ್‌ ಪುನಶ್ಚೇತನಗೊಳಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಕಾರ್ಯಗತಗೊಳಿಸುವುದಾಗಿ ಆರ್‌ಬಿಐ ಭರವಸೆ ನೀಡಿದೆ.

‘ಮೂವತ್ತು ದಿನಗಳ ಒಳಗೆ ಅತ್ಯಂತ ತ್ವರಿತವಾಗಿ ಪರಿಹಾರ ಕಂಡುಕೊಳ್ಳಲಾಗುವುದು, ಆರ್‌ಬಿಐನಿಂದ ನೀವು ಸದ್ಯದಲ್ಲೇ ಕ್ಷಿಪ್ರ ಕ್ರಮ ಕಾಣುವಿರಿ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಹೇಳಿದ್ದಾರೆ.

ಠೇವಣಿದಾರರಿಗೆ ಭರವಸೆ: ‘ಯೆಸ್‌ ಬ್ಯಾಂಕ್‌ನ ಪ್ರತಿಯೊಬ್ಬ ಗ್ರಾಹಕರ ಹಣ ಸುರಕ್ಷಿತವಾಗಿರುವ ಬಗ್ಗೆ ನಾನು ಅವರಿಗೆ ಭರವಸೆ ನೀಡಲು ಬಯಸುತ್ತೇನೆ. ಠೇವಣಿದಾರರು, ಬ್ಯಾಂಕ್‌ ಮತ್ತು ಆರ್ಥಿಕತೆಯ ಹಿತಾಸಕ್ತಿ ದೃಷ್ಟಿಯಿಂದ ಆರ್‌ಬಿಐ ಕ್ರಮ ಕೈಗೊಂಡಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಷೇರುಪೇಟೆಯಲ್ಲಿ ನಿಲ್ಲದ ತಲ್ಲಣ
ಮುಂಬೈ: ಕೋವಿಡ್‌–19 ಜಾಗತಿಕ ಷೇರುಪೇಟೆಗಳಲ್ಲಿ ತಲ್ಲಣ ಮೂಡಿಸಿರುವುದು ಮುಂಬೈ ಷೇರುಪೇಟೆಯಲ್ಲಿಯೂ ಶುಕ್ರವಾರ ಪ್ರತಿಫಲನಗೊಂಡಿತು.

ಜಾಗತಿಕ ಷೇರುಪೇಟೆಗಳಾದ ಶಾಂಘೈ, ಹಾಂಗ್‌ಕಾಂಗ್‌, ಸೋಲ್‌, ಟೋಕಿಯೊ ಶೇ 2ರಷ್ಟು ಕುಸಿತ ದಾಖಲಿಸಿದವು.

ಯೆಸ್‌ ಬ್ಯಾಂಕ್‌ನ ಮೇಲೆ ಆರ್‌ಬಿಐ ವಿಧಿಸಿರುವ ನಿರ್ಬಂಧವು ಹೂಡಿಕೆದಾರರ ಉತ್ಸಾಹವನ್ನು ಇನ್ನಷ್ಟು ಕುಗ್ಗಿಸಿತು. ಯೆಸ್‌ ಬ್ಯಾಂಕ್‌ ಪ್ರಕರಣವನ್ನು ಹೂಡಿಕೆದಾರರು ತುಂಬ ನಕಾರಾತ್ಮಕವಾಗಿ ಪರಿಗಣಿಸಿದ್ದಾರೆ. ದೇಶದ ಒಟ್ಟಾರೆ ಹಣಕಾಸು ವ್ಯವಸ್ಥೆಯ ಸ್ಥಿರತೆ ಬಗ್ಗೆಯೇ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಈ ಬಗೆಯ ಎರಡು ಪ್ರತಿಕೂಲ ವಿದ್ಯಮಾನಗಳ ಫಲವಾಗಿ ಷೇರುಪೇಟೆ ಸಂವೇದಿ ಸೂಚ್ಯಂಕವು 894 ಅಂಶಗಳಷ್ಟು ಪತನ ಕಂಡಿತು.

ಪಾಲು ಬಂಡವಾಳ ಖರೀದಿಗೆ ಎಸ್‌ಬಿಐ ಮುಂದು
ಬ್ಯಾಂಕ್‌ನ ಪುನಶ್ಚೇತನಕ್ಕೆ ಆರ್‌ಬಿಐ ರೂಪಿಸಿರುವ ಕರಡು ಯೋಜನೆ ಪ್ರಕಾರ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಯೆಸ್ ಬ್ಯಾಂಕ್‌ನ ಶೇ 49ರಷ್ಟು ಪಾಲು ಬಂಡವಾಳ ಖರೀದಿಸಲಿದೆ. ₹ 2,400 ಕೋಟಿ ಬಂಡವಾಳ ತೊಡಗಿಸಲಿದೆ.

ಷೇರುಪೇಟೆಯಲ್ಲಿ ನಿಲ್ಲದ ತಲ್ಲಣ
ಮುಂಬೈ: ಕೋವಿಡ್‌–19 ಜಾಗತಿಕ ಷೇರುಪೇಟೆಗಳಲ್ಲಿ ತಲ್ಲಣ ಮೂಡಿಸಿರುವುದು ಮುಂಬೈ ಷೇರುಪೇಟೆಯಲ್ಲಿಯೂ ಶುಕ್ರವಾರ ಪ್ರತಿಫಲನಗೊಂಡಿತು. ಜಾಗತಿಕ ಷೇರುಪೇಟೆಗಳಾದ ಶಾಂಘೈ, ಹಾಂಗ್‌ಕಾಂಗ್‌, ಸೋಲ್‌, ಟೋಕಿಯೊ ಶೇ 2ರಷ್ಟು ಕುಸಿತ ದಾಖಲಿಸಿದವು.

ಯೆಸ್‌ ಬ್ಯಾಂಕ್‌ನ ಮೇಲೆ ಆರ್‌ಬಿಐ ವಿಧಿಸಿರುವ ನಿರ್ಬಂಧವು ಹೂಡಿಕೆದಾರರ ಉತ್ಸಾಹವನ್ನು ಇನ್ನಷ್ಟು ಕುಗ್ಗಿಸಿತು. ಯೆಸ್‌ ಬ್ಯಾಂಕ್‌ ಪ್ರಕರಣವನ್ನು ಹೂಡಿಕೆದಾರರು ತುಂಬ ನಕಾರಾತ್ಮಕವಾಗಿ ಪರಿಗಣಿಸಿದ್ದಾರೆ. ದೇಶದ ಒಟ್ಟಾರೆ ಹಣಕಾಸು ವ್ಯವಸ್ಥೆಯ ಸ್ಥಿರತೆ ಬಗ್ಗೆಯೇ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಬಗೆಯ ಎರಡು ಪ್ರತಿಕೂಲ ವಿದ್ಯಮಾನಗಳ ಫಲವಾಗಿ ಷೇರುಪೇಟೆ ಸಂವೇದಿ ಸೂಚ್ಯಂಕವು 894 ಅಂಶಗಳಷ್ಟು ಪತನ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT