ನವದೆಹಲಿ: ಆನ್‌ಲೈನ್‌ನಲ್ಲಿ ಆಹಾರ ಪದಾರ್ಥ ವಿತರಿಸುವ ಕಂಪನಿಯಾದ ಜೊಮಾಟೊ, ಪೇಟಿಎಂನ ಮನರಂಜನಾ ಟಿಕೆಟ್ ವಿತರಣಾ ವ್ಯವಹಾರ ವಿಭಾಗವನ್ನು ₹2,048 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ.
ಇದರಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪೇಟಿಎಂಗೆ ವರದಾನವಾಗಲಿದೆ. ಅಲ್ಲದೆ, ಕೋರ್ ಬ್ಯಾಕಿಂಗ್ ಮತ್ತು ಹಣಕಾಸು ಸೇವೆಯನ್ನು ಮತ್ತಷ್ಟು ಬಲಪಡಿಸಲು ನೆರವಾಗಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪೇಟಿಎಂನ ಈ ವಿಭಾಗದಲ್ಲಿ ಸಿನಿಮಾ, ಕ್ರೀಡೆಗಳು ಮತ್ತು ವಿವಿಧ ಕಾರ್ಯಕ್ರಮಗಳಿಗೆ ಟಿಕೆಟ್ ಖರೀದಿಸುವ ವ್ಯವಸ್ಥೆಯಿದೆ.
ಈ ಸ್ವಾಧೀನ ಪ್ರಕ್ರಿಯೆಯ ಒಪ್ಪಂದಕ್ಕೆ ಜೊಮಾಟೊ ಮತ್ತು ಪೇಟಿಎಂನ ಮಾತೃಸಂಸ್ಥೆಯಾದ ಒನ್97 ಕಮ್ಯೂನಿಕೇಷನ್ ಲಿಮಿಟೆಡ್‌ನ ಆಡಳಿತ ಮಂಡಳಿಗಳು ಅನುಮೋದನೆ ನೀಡಿವೆ.
ಜೊಮಾಟೊ ಕಂಪನಿಯು ಈ ಹೊಸ ವ್ಯವಹಾರವನ್ನು ‘ಡಿಸ್ಟಿಕ್ಟ್’ ಹೆಸರಿನ ಆ್ಯಪ್ ಮೂಲಕ ನಡೆಸಲಿದೆ.