ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2075ರಲ್ಲಿ ಆರ್ಥಿಕವಾಗಿ ಭಾರತ ಎರಡನೇ ಅತಿ ದೊಡ್ಡ ರಾಷ್ಟ್ರ: ಸಮೀಪದ ಪ್ರತಿಸ್ಪರ್ಧಿ ಯಾರು?

Published 11 ಜುಲೈ 2023, 7:43 IST
Last Updated 11 ಜುಲೈ 2023, 7:43 IST
ಅಕ್ಷರ ಗಾತ್ರ

ನವದೆಹಲಿ: ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಆರ್ಥಿಕ ಪ್ರಗತಿ ಇನ್ನಷ್ಟು ಹೆಚ್ಚಲಿದ್ದು, 2075ರ ಹೊತ್ತಿಗೆ ಇಡೀ ಜಗತ್ತಿನಲ್ಲೇ ಎರಡನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಲಿದೆ.

ಸಂಶೋಧನಾ ಸಂಸ್ಥೆ ಗೋಲ್ಡ್‌ಮನ್‌ ಸ್ಯಾಕ್ಸ್‌ ಪ್ರಕಟಿಸಿದ ವರದಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ಭಾರತದ ಆರ್ಥಿಕತೆ ಆ ಹೊತ್ತಿಗೆ 52.5 ಟ್ರಿಲಿಯನ್‌ ಅಮೆರಿಕನ್ ಡಾಲರ್‌ನಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಆ ಮೂಲಕ ವಿಶ್ವದ ಹಿರಿಯಣ್ಣ ಅಮೆರಿಕಾವನ್ನೇ ಭಾರತ ಹಿಂದಿಕ್ಕಲಿದೆ.

ದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ಹಾಗೂ ಅದರಿಂದ ಸೃಷ್ಟಿಯಾಗುತ್ತಿರುವ ಕೌಶಲಭರಿತ ಮಾನವ ಸಂಪನ್ಮೂಲ ಈ ಆರ್ಥಿಕತೆ ಬೆಳವಣಿಗೆಯ ಮುಖ್ಯ ಸತ್ವವಾಗಿರಲಿದೆ. ಇದರಿಂದಾಗಿ ಮುಂದಿನ ಎರಡು ದಶಕಗಳಲ್ಲಿ ಇತರ ರಾಷ್ಟ್ರಗಳ ಮೇಲಿನ ಭಾರತದ ಅವಲಂಬನೆ ಗಣನೀಯವಾಗಿ ಇಳಿಯಲಿದೆ. ತಯಾರಿಕಾ ಸಾಮರ್ಥ್ಯ ಹೆಚ್ಚಳವಾಗಲಿದೆ. ಸೇವಾ ವಲಯದ ವೃದ್ಧಿ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿದಲ್ಲಿ ಈ ಬೆಳವಣಿಗೆ ಸಾಧ್ಯವಾಗಲಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

'ಸದ್ಯ ದೇಶ ಜಗತ್ತಿನಲ್ಲೇ 5ನೇ ಅತಿ ದೊಡ್ಡ ಆರ್ಥಿಕತೆ ಹೊಂದಿದೆ. ದೇಶದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ ಇದಕ್ಕೆ ನೆರವಾಗಿದೆ. ಆದರೆ 2ನೇ ಸ್ಥಾನಕ್ಕೇರಲು ಇಷ್ಟೇ ಸಾಕಾಗದು. ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಮಾನವ ಸಂಪನ್ಮೂಲದ ಉತ್ಪಾದನೆಯೂ ಹೆಚ್ಚಬೇಕು. ಬಂಡವಾಳ ಹೂಡಿಕೆಯೂ ದೇಶದ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ. ಅದರಲ್ಲೂ ಭಾರತದಲ್ಲಿ ಉಳಿತಾಯದ ದರ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಇತರರ ಮೇಲಿನ ಅವಲಂಬನೆ ತಗ್ಗಲಿದೆ. ಜತೆಗೆ ಆರ್ಥಿಕತೆಯ ವೃದ್ಧಿ ಹಾಗೂ ಆರ್ಥಿಕ ಕ್ಷೇತ್ರದ ಬೆಳವಣಿಗೆಯಿಂದಾಗಿ ಹೂಡಿಕೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಲು ಸಾಧ್ಯ’ ಎಂದು ಗೋಲ್ಡ್‌ಮನ್‌ ಸ್ಯಾಕ್ಸ್ ಹೇಳಿದೆ.

ದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ ವರದಾನವೇ ಆಗಿದ್ದರೂ, ಅದನ್ನು ಶಕ್ತಿಯಾಗಿ ಬಳಸಿಕೊಳ್ಳುವ ದೊಡ್ಡ ಸವಾಲು ದೇಶದ ಮುಂದಿದೆ. 52.5 ಟ್ರಿಲಿಯನ್‌ ಅಮೆರಿಕನ್ ಡಾಲರ್‌ನೊಂದಿಗೆ ಭಾರತ 2ನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾದರೆ, ಪಕ್ಕದ ಚೀನಾ ₹57 ಟ್ರಿಲಿಯನ್‌ ಅಮೆರಿಕನ್ ಡಾಲರ್‌ ಆರ್ಥಿಕ ಶಕ್ತಿಯಾಗಿ ಜಗತ್ತಿನಲ್ಲೇ ಅಗ್ರಸ್ಥಾನಕ್ಕೇರಲಿದೆ. ಅಮೆರಿಕ ₹51.5 ಟ್ರಿಲಿಯನ್‌ ಅಮೆರಿಕನ್ ಡಾಲರ್‌ ಆರ್ಥಿಕತೆ ಹೊಂದಲಿದೆ’ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT