ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಭದ್ರತೆ ಇದೆಯೇ?

Last Updated 22 ಫೆಬ್ರುವರಿ 2022, 21:13 IST
ಅಕ್ಷರ ಗಾತ್ರ

* ಪ್ರಶ್ನೆ: ನಾನು ಕೇಂದ್ರ ಸರ್ಕಾರದನಿವೃತ್ತ ನೌಕರ. ನನಗೆ ಮಾಸಿಕ ₹ 28,000 ಪಿಂಚಣಿ ಬರುತ್ತಿದೆ. ನಾನು ಐ.ಟಿ. ರಿಟರ್ನ್ಸ್ ಪ್ರತಿ ವರ್ಷ ಸಲ್ಲಿಸುತ್ತಿದ್ದೇನೆ. ನನಗೆ ಮತ್ತು ನನ್ನ ಶ್ರೀಮತಿಗೆ ಒಟ್ಟು ಐದು ಎಕರೆ ಕೃಷಿ ಜಮೀನು ಇದೆ. ನಾನು ಸೇವೆಯಲ್ಲಿದ್ದಾಗ ಕೃಷಿ ಆದಾಯ ತೋರಿಸಿರಲಿಲ್ಲ. ಈಗ ಕೃಷಿ ಆದಾಯವನ್ನು ರಿಟರ್ನ್ಸ್‌ ಸಲ್ಲಿಸುವಾಗ ತೋರಿಸಬಹುದೇ? ನಾನು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದಲ್ಲಿ ನಿವೇಶನಕ್ಕಾಗಿ ₹ 1.75 ಲಕ್ಷದ ಕಂತು ಜಮಾ ಮಾಡುತ್ತಿದ್ದೇನೆ. ಒಟ್ಟು ಕಂತುಗಳು ಐದು ಇರಬಹುದು. ಇದಕ್ಕೇನಾದರೂ ತೆರಿಗೆ ರಿಯಾಯಿತಿ ಇದೆಯೇ?

–ಆರಾಧ್ಯ, ಹುಲಿಕೆರೆ

ಉತ್ತರ: ನೀವು ಪ್ರಶ್ನೆಯಲ್ಲಿ ಉಲ್ಲೇಖಿಸಿರುವಂತೆ ಮಾಸಿಕವಾಗಿ ₹ 28,000 ಪಿಂಚಣಿ ಪಡೆಯುತ್ತಿದ್ದೀರಿ. ಇದು ವಾರ್ಷಿಕವಾಗಿ ₹ 3.36 ಲಕ್ಷ. ಈ ಮೊತ್ತ ತೆರಿಗೆ ವಿನಾಯಿತಿಯ ಗರಿಷ್ಠ ಮಿತಿಗಿಂತ ಅಧಿಕ. ಆದಾಯ ತೆರಿಗೆ ಕಾಯ್ದೆ–1961ರ ಸೆಕ್ಷನ್ 10(1)ರ ಅಡಿಯಲ್ಲಿ ಕೃಷಿ ಆದಾಯಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ. ಆದರೂ, ಆದಾಯ ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಾಚಾರ ಮಾಡುವಲ್ಲಿ ದರ ನಿರ್ಣಯದ ಉದ್ದೇಶಗಳಿಗಾಗಿ, ಕೆಳಗಿನ ಎರಡು ಷರತ್ತುಗಳನ್ನು ಒಟ್ಟಾಗಿ ಪೂರೈಸಿದರೆ, ಅಂದರೆ ನಿವ್ವಳ ಕೃಷಿ ಆದಾಯವು ₹ 5,000 ಮೀರಿದ್ದರೆ ಮತ್ತು ಒಟ್ಟು ಆದಾಯ, ನಿವ್ವಳ ಕೃಷಿ ಆದಾಯವನ್ನು ಹೊರತುಪಡಿಸಿ, ತೆರಿಗೆ ವಿನಾಯಿತಿಯ ಗರಿಷ್ಠ ಮಿತಿಯನ್ನು ಮೀರಿದ್ದರೆ ಆಗ ಬರುವ ತೆರಿಗೆ ಮೊತ್ತಕ್ಕೆ ವಿನಾಯಿತಿ ಇದೆ.

ನಿಮ್ಮ ಪ್ರಸ್ತುತ ಕೃಷಿ ಆದಾಯದ ನಿರೀಕ್ಷಿತ ಮೊತ್ತವನ್ನು ನಿಮ್ಮ ಪ್ರಶ್ನೆಯಲ್ಲಿ ನಮೂದಿಸಿಲ್ಲ. ಆದರೂ ಇರುವ ಮಾಹಿತಿಯಂತೆ ಉತ್ತರಿಸುವುದಾದರೆ, ಮುಂದಿನ ವರ್ಷಗಳಲ್ಲಿ ಕೃಷಿ ಆದಾಯ ವಾರ್ಷಿಕವಾಗಿ ₹ 5 ಸಾವಿರಕ್ಕಿಂತ ಅಧಿಕವಿದ್ದರೆ, ನಿಮ್ಮ ಒಟ್ಟು ಕೃಷಿ ಆದಾಯವನ್ನು ಪಿಂಚಣಿ ಆದಾಯದೊಡನೆ ಸೇರಿಸಿ ತೆರಿಗೆ ಲೆಕ್ಕ ಹಾಕಬೇಕು. ಅದೇ ರೀತಿ ಕೃಷಿ ಆದಾಯದೊಡನೆ ನಿಮ್ಮ ವಯಸ್ಸಿಗೆ ಅನ್ವಯವಾಗುವ ತೆರಿಗೆ ವಿನಾಯಿತಿಯ ಗರಿಷ್ಠ ಮೊತ್ತದೊಡನೆ ಸೇರಿಸಿ ತೆರಿಗೆ ಲೆಕ್ಕ ಹಾಕಬೇಕು. ಮೊದಲ ಹಂತದಲ್ಲಿ ಲೆಕ್ಕ ಹಾಕಲಾದ ಕೃಷಿ ಆದಾಯದ ಮೇಲಣ ತೆರಿಗೆ ಮೊತ್ತವನ್ನು ಎರಡನೆಯ ಹಂತದಲ್ಲಿ ಲೆಕ್ಕ ಹಾಕಲಾದ ತೆರಿಗೆ ಮೊತ್ತದಿಂದ ಕಳೆದಾಗ ಉಳಿದ ಮೊತ್ತದ ಮೇಲಷ್ಟೇ ನೀವು ತೆರಿಗೆ ಕಟ್ಟಬೇಕು . ಇನ್ನೂ ಹೆಚ್ಚಿನ ನೆರವಿಗೆ, ಪೂರ್ಣ ಮಾಹಿತಿಯೊಂದಿಗೆ ನಿಮ್ಮ ಆಪ್ತ ತೆರಿಗೆ ಸಲಹೆದಾರರನ್ನು ಸಂಪರ್ಕಿಸಿ.

ಮುಂದಿನ ಪ್ರಶ್ನೆಯಲ್ಲಿ, ನೀವು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದಲ್ಲಿ ನಿವೇಶನಕ್ಕಾಗಿ ಹಣ ಜಮಾ ಮಾಡುತ್ತಿದ್ದೀರಿ ಎಂದು ತಿಳಿಸಿರುವಿರಿ. ಪ್ರಸ್ತುತ ಆದಾಯ ತೆರಿಗೆ ನಿಯಮದ ಅಡಿ ಗೃಹ ಸಾಲದ ಅಸಲು ಮೊತ್ತ ಹಾಗೂ ಬಡ್ಡಿ ಮೊತ್ತದ ಪಾವತಿಗಷ್ಟೇ ತೆರಿಗೆ ವಿನಾಯಿತಿ ಇದೆ. ನಗದು ರೂಪದಲ್ಲಿ ಮನೆ, ಖಾಲಿ ಭೂಮಿ ಅಥವಾ ನಿವೇಶನ ಖರೀದಿಸಿದಾಗ ಯಾವುದೇ ರೀತಿಯ ರಿಯಾಯಿತಿ ಇರುವುದಿಲ್ಲ.

* ಪ್ರಶ್ನೆ: ಮ್ಯೂಚುವಲ್ ಫಂಡ್ ಹೂಡಿಕೆಯ ಬಗ್ಗೆ ಕೇಳಿರುತ್ತೇನೆ. ಇವುಗಳೆಲ್ಲ ಹೂಡಿಕೆಯ ದೃಷ್ಟಿಯಲ್ಲಿ ಭದ್ರತೆ ಹೊಂದಿವೆಯೇ? ನಮ್ಮ ಹಣ ಅದರಲ್ಲಿ ಸುರಕ್ಷಿತವೇ? ಇದರ ಲಾಭ-ನಷ್ಟದ ಮೇಲೆ ಬರುವ ತೆರಿಗೆಯ ಬಗ್ಗೆಯೂ ತಿಳಿಸಿ.

–ಅವಿನಾಶ್ ಶರ್ಮಾ, ಕನ್ಯಾನ, ದ.ಕ.ಜಿಲ್ಲೆ

ಉತ್ತರ: ಮ್ಯೂಚುವಲ್ ಫಂಡ್ ಎನ್ನುವುದು ವೃತ್ತಿಪರವಾಗಿ ನಿರ್ವಹಿಸಲಾಗುವ ಹೂಡಿಕೆ ನಿಧಿ. ಅದು ಅನೇಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಆಯಾ ಫಂಡ್‌ನ ಒಟ್ಟು ಆಶಯಕ್ಕೆ ಅನುಗುಣವಾಗಿ ವಿವಿಧ ಕಂಪನಿಯ ಷೇರು, ಬಾಂಡ್‌ ಮತ್ತು ಅಲ್ಪಾವಧಿಯ ಭದ್ರತಾ ಸಾಲಗಳಲ್ಲಿ ಹೂಡಿಕೆ ಮಾಡುವ ವ್ಯವಸ್ಥೆ. ಯಾವುದೇ ಮ್ಯೂಚುವಲ್ ಫಂಡ್‌ನಲ್ಲಿ ವ್ಯಕ್ತಿಯೊಬ್ಬ ಹೂಡಿಕೆ ಮಾಡಿದಾಗ, ಆ ಮೊತ್ತವನ್ನು ಆಯಾ ಆಸ್ತಿ ನಿರ್ವಹಣೆ ಕಂಪನಿಯು ಪ್ರತಿ ಫಂಡ್‌ನಲ್ಲಿ ಇರಬಹುದಾದ ಆರ್ಥಿಕ ಅಪಾಯಗಳನ್ನು ಹೂಡಿಕೆದಾರರಿಗೆ ತಿಳಿಸುವ ಕಡತ (fact sheet) ಬಿಡುಗಡೆಗೊಳಿಸುತ್ತದೆ. ಪ್ರತಿ ಹೂಡಿಕೆದಾರನೂ ಇದನ್ನು ಮೊದಲೇ ಓದಿ ಹೂಡಿಕೆ ಮಾಡುವುದು ಹಣದ ಭದ್ರತೆಯ ದೃಷ್ಟಿಯಲ್ಲಿ ಅನಿವಾರ್ಯ. ಅದರಲ್ಲಿನ ಮಾಹಿತಿ ಅರಿಯುವುದು ಹೂಡಿಕೆದಾರನ ಜವಾಬ್ದಾರಿ. ಉಂಟಾಗುವ ನಷ್ಟಕ್ಕೆ ಹೂಡಿಕೆದಾರನೇ ಹೊಣೆಗಾರ.

ಮ್ಯೂಚುವಲ್ ಫಂಡ್ ಕಂಪನಿಗಳು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮೇಲ್ವಿಚಾರಣೆಯಲ್ಲಿರುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮ್ಯೂಚುವಲ್ ಫಂಡ್ ಕಂಪನಿಗಳು ಬ್ಯಾಂಕಿನಷ್ಟೇ ಸುರಕ್ಷಿತ. ಆದರೂ, ನೀವು ಹೂಡಿಕೆ ಮಾಡುತ್ತಿರುವ ಕಂಪನಿಗಳ ವ್ಯಾವಹಾರಿಕ ಮಾಹಿತಿ ತಿಳಿಯುತ್ತಿರಲು ಪ್ರಯತ್ನಿಸಿ.

ಮ್ಯೂಚುವಲ್ ಫಂಡ್‌ಗಳಿಂದ ಬರುವ ಡಿವಿಡೆಂಡ್‌, ಆಯಾ ವ್ಯಕ್ತಿಯ ವೈಯಕ್ತಿಕ ತೆರಿಗೆ ದರಕ್ಕೆ ಅನ್ವಯವಾಗಿರುತ್ತದೆ. ಬಂಡವಾಳ ಲಾಭದ ತೆರಿಗೆ ದರವು ಹೂಡಿಕೆಯ ಅವಧಿ ಮತ್ತು ಮ್ಯೂಚುವಲ್ ಫಂಡ್‌ನ ಪ್ರಕಾರವನ್ನು ಅವಲಂಬಿಸಿರುತ್ತದೆ. ಹೂಡಿಕೆಗೆ ಅನುಗುಣವಾಗಿ ತೆರಿಗೆಯ ದರವು ಶೇ 10, ಶೇ 15, ಶೇ 20ರಷ್ಟು ಇರುತ್ತದೆ. ಪ್ರತಿ ಫಂಡ್ ಕೂಡ ತೆರಿಗೆ ದೃಷ್ಟಿಯಿಂದ ತುಸು ಬೇರೆ ಬೇರೆ ಆಗಿರುವುದರಿಂದ ನಿರ್ದಿಷ್ಟ ಮಾಹಿತಿಗೆ ನಿಮ್ಮ ತೆರಿಗೆ ಸಲಹೆದಾರರನ್ನು ಸಂಪರ್ಕಿಸಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT