ಗುರುವಾರ , ಆಗಸ್ಟ್ 11, 2022
21 °C

PV Web Exclusive | ಖರ್ಚು ಮಾಡಿದವ ಈರಭದ್ರ, ಉಳಿಸಿದವ #@*%

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಉದ್ಯಮಗಳ ದನಿ ಸಂಘಟಿತವಾಗಿರುತ್ತದೆ. ಸಾಮಾನ್ಯರಲ್ಲಿ ಸಾಮಾನ್ಯರ ದನಿಗೆ ಯಾವ ಸಂಘಟನಾತ್ಮಕ ಬೆಂಬಲವೂ ಇರುವುದಿಲ್ಲ ಎಂಬುದನ್ನು ಹೇಳಲು ಸಂಶೋಧನೆಗಳ ಆಧಾರ ಬೇಕಿಲ್ಲ. ಅದು ಬಹುತೇಕರ ಪಾಲಿಗೆ ಅನುಭವವೇದ್ಯ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಗದಿ ಮಾಡುವ ರೆಪೊ ದರ ಹಾಗೂ ವಿವಿಧ ಬ್ಯಾಂಕ್‌ಗಳು ತಮ್ಮಲ್ಲಿ ಠೇವಣಿ ಇರಿಸುವವರಿಗೆ ನೀಡುವ ಬಡ್ಡಿ ದರಗಳ ವಿಚಾರದಲ್ಲಿ ಆಗುತ್ತಿರುವ ಅನುಭವವೂ ಇದೇ!

ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು (ಸಿಪಿಐ) ಈ ವರ್ಷದ ಆರಂಭದಿಂದಲೂ ಭಾರಿ ಪ್ರಮಾಣದಲ್ಲಿಯೇ ಇದೆ. ಹಾಗಾದರೆ, ಭಾರಿ ಪ್ರಮಾಣ ಅಂದರೆ ಏನು? ಆರ್‌ಬಿಐಗೆ ಸರ್ಕಾರ ನೀಡಿರುವ ಸೂಚನೆಯು, ಹಣದುಬ್ಬರವನ್ನು ಶೇಕಡ 4ರ ಆಸುಪಾಸಿನಲ್ಲಿ ಇರಿಸಬೇಕು ಎಂಬುದು. ಇದರಲ್ಲಿ ಶೇಕಡ 2ರಷ್ಟು ಹೆಚ್ಚು ಅಥವಾ ಕಡಿಮೆ ಆಗುವುದಕ್ಕೆ ಅವಕಾಶ ಇದ್ದರೂ, ಶೇಕಡ 4ರ ಆಸುಪಾಸಿನಲ್ಲಿ ಹಣದುಬ್ಬರದ ಪ್ರಮಾಣವನ್ನು ಮಿತಿಗೊಳಿಸುವ ಜವಾಬ್ದಾರಿ ಆರ್‌ಬಿಐ ಮೇಲೆ ಇದೆ. ಆದರೆ, ಈ ವರ್ಷದ ಜನವರಿಯಲ್ಲಿ ಹಣದುಬ್ಬರ ಪ್ರಮಾಣವು ಶೇಕಡ 7.59ರಷ್ಟು ಇತ್ತು! ಮಾರ್ಚ್‌ ತಿಂಗಳಲ್ಲಿ ಶೇಕಡ 5.91ರ ಮಟ್ಟಕ್ಕೆ ಇಳಿಕೆ ಕಂಡಿದ್ದ ಹಣದುಬ್ಬರವು, ಏಪ್ರಿಲ್‌ನಲ್ಲಿ ಶೇಕಡ 7.22ಕ್ಕೆ ಜಿಗಿಯಿತು. ಹಣದುಬ್ಬರವು ಜುಲೈ ತಿಂಗಳಿನಿಂದ ಏರುಗತಿಯಲ್ಲೇ ಸಾಗಿದೆ. ಅಕ್ಟೋಬರ್‌ ಅಂತ್ಯಕ್ಕೆ ಹಣದುಬ್ಬರ ಪ್ರಮಾಣವು ಶೇಕಡ 7.61ಕ್ಕೆ ತಲುಪಿದೆ.

ಅಂಚೆ ಕಚೇರಿಯಲ್ಲಿ ಒಂದು ಉಳಿತಾಯ ಖಾತೆ ತೆರೆದು, ಆ ಖಾತೆಯಿಂದ ಅಂಚೆ ಕಚೇರಿಯಲ್ಲೇ ಇರುವ ಆರ್‌.ಡಿ. ಖಾತೆಗೆ ಹಣ ವರ್ಗಾವಣೆ ಮಾಡುವುದು ಉಳಿತಾಯ ಮನೋಭಾವ ಇರುವ ಹಾಗೂ ಸಾಂಪ್ರದಾಯಿಕ ಹೂಡಿಕೆ ಮಾರ್ಗಗಳಲ್ಲಿ ಹೆಚ್ಚು ನಂಬಿಕೆ ಇರುವವರ ಇಷ್ಟದ ಕಾರ್ಯ. ಅಂಚೆ ಕಚೇರಿ ಆರ್‌.ಡಿ. ಖಾತೆಯಲ್ಲಿ ಇರಿಸುವ ಹಣಕ್ಕೆ ಇಂದು ಸಿಗುತ್ತಿರುವ ವಾರ್ಷಿಕ ಬಡ್ಡಿ ಶೇಕಡ 5.8ರಷ್ಟು. ಹಣದುಬ್ಬರವು ಶೇಕಡ 7ರ ಹಿಂದೆ–ಮುಂದೆ ಸುತ್ತುತ್ತಿರುವ ಸಂದರ್ಭದಲ್ಲಿ, ಠೇವಣಿ ರೂಪದಲ್ಲಿ ಇರಿಸುವ ಹಣಕ್ಕೆ ಸಿಗುತ್ತಿರುವ ಪ್ರತಿಫಲ ಇಷ್ಟು ಮಾತ್ರ!

ದೇಶದ ಅತಿದೊಡ್ಡ ಬ್ಯಾಂಕ್‌ ಎಂಬ ಹೆಗ್ಗಳಿಕೆ ಹೊತ್ತಿರುವುದು ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ). ಇಲ್ಲಿ ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಇರಿಸುವ ಠೇವಣಿಗೆ ಈಗ ಸಿಗುತ್ತಿರುವ ಬಡ್ಡಿ ದರ ವಾರ್ಷಿಕ ಶೇಕಡ 5.4ರಷ್ಟು! ಹಿರಿಯ ನಾಗರಿಕರಿಗೆ ಶೇಕಡ 6.2ರಷ್ಟು ಬಡ್ಡಿ ನೀಡಲಾಗುತ್ತಿದೆ. ಆದರೆ, ಹಿರಿಯರಲ್ಲದ ನಾಗರಿಕರು ಇರಿಸುವ ಹಣಕ್ಕೆ ಸಿಗುತ್ತಿರುವ ಬಡ್ಡಿ ದರಕ್ಕೂ, ಹಣದುಬ್ಬರಕ್ಕೂ ಎಷ್ಟೊಂದು ವ್ಯತ್ಯಾಸ ಇದೆ ಎಂಬುದನ್ನು ಅಂಕಿ–ಅಂಶ ಗಮನಿಸಿ ಯಾರಾದರೂ ಅರ್ಥ ಮಾಡಿಕೊಳ್ಳಬಹುದು.

ಅಷ್ಟಕ್ಕೂ, ಹಣದುಬ್ಬರ ಪ್ರಮಾಣಕ್ಕಿಂತ ಹೆಚ್ಚಿನ ಬಡ್ಡಿ ದರ ಏಕೆ ಬೇಕಾಗುತ್ತದೆ? ಹಣದುಬ್ಬರದ ಪ್ರಮಾಣಕ್ಕಿಂತ ಬಡ್ಡಿ ದರ ಕಡಿಮೆ ಇದ್ದರೆ ಸಮಸ್ಯೆ ಏನು? ಇದಕ್ಕೆ ಸರಳವಾಗಿ, ಒಂದು ಚಿಕ್ಕ ಉದಾಹರಣೆಯ ಮೂಲಕ ಉತ್ತರ ನೀಡಬಹುದು. ಶ್ರೀಮಾನ್‌ ರವಿ ಬಳಿ ಇಂದು ₹ 100 ಇದೆ. ಅದನ್ನು ಬಳಸಿ ಆತ ತನಗೆ ಇಷ್ಟವಾದ ಒಂದು ಪೆನ್ ಖರೀದಿ ಮಾಡಬಲ್ಲ – ಆ ಪೆನ್ನಿನ ಬೆಲೆ ₹ 100 ಎಂದಿಟ್ಟುಕೊಳ್ಳಿ. ಪೆನ್ನಿನ ವಾರ್ಷಿಕ ಹಣದುಬ್ಬರ ಪ್ರಮಾಣವು ಶೇಕಡ 7ರಷ್ಟು ಇದೆ. ಅಂದರೆ ಇಂದಿನಿಂದ ಒಂದು ವರ್ಷದ ನಂತರ, ಅದೇ ಪೆನ್ನಿನ ಬೆಲೆ ₹ 107 ಆಗಿರುತ್ತದೆ. ಶ್ರೀಮಾನ್‌ ರವಿಯು ಈ ವರ್ಷ ಪೆನ್ ಖರೀದಿಸುವುದು ಬೇಡ, ಮುಂದಿನ ವರ್ಷ ಅದನ್ನು ಖರೀದಿಸೋಣ ಎಂದು ತೀರ್ಮಾನಿಸಿ, ಹಣವನ್ನು ಒಂದು ವರ್ಷದ ಅವಧಿಗೆ ಠೇವಣಿ ರೂಪದಲ್ಲಿ ಇರಿಸುತ್ತಾರೆ. ವರ್ಷಾಂತ್ಯಕ್ಕೆ ಆ ಹಣ ₹ 105.4 (ವಾರ್ಷಿಕ ಬಡ್ಡಿ ದರ ಶೇಕಡ 5.4ರ ಅನ್ವಯ ಲೆಕ್ಕ ಹಾಕಿದಾಗ) ಆಗಿರುತ್ತದೆ. ಆದರೆ, ವಾರ್ಷಿಕ ಶೇಕಡ 7ರಷ್ಟು ಹಣದುಬ್ಬರ ಇರುವಾಗ ಪೆನ್ನಿನ ದರವು ಒಂದು ವರ್ಷದ ನಂತರ ₹ 107 ಆಗಿರುತ್ತದೆ!

ಶ್ರೀಮಾನ್ ರವಿಯು ಹಣವನ್ನು ಠೇವಣಿ ಇರಿಸುವ ಬದಲು, ಪೆನ್ನು ಖರೀದಿಸಿದ್ದರೆ ₹ 100ಕ್ಕೆ ಆ ಪೆನ್ನು ಅವನದಾಗುತ್ತಿತ್ತು. ಆದರೆ, ಹಣದ ಉಳಿತಾಯ, ಠೇವಣಿ ಇರಿಸುವಿಕೆ ಬಗ್ಗೆ ಮನಸ್ಸು ಹೊಂದಿದ್ದ ರವಿ, ವರ್ಷದ ನಂತರ ಪೆನ್ನು ಖರೀದಿಸುವ ತೀರ್ಮಾನ ಮಾಡಿದ. ಅದರಿಂದಾಗಿ ಆತನ ಹಣದ ಮೌಲ್ಯವೇ ಕಡಿಮೆ ಆಯಿತು. ವರ್ಷದ ನಂತರ ರವಿ ಅದೇ ಪೆನ್ ಖರೀದಿಸಬೇಕು ಎಂದಾದರೆ ಆತ ಬೇರೆ ಎಲ್ಲಿಂದಲಾದರೂ ಹೆಚ್ಚುವರಿಯಾಗಿ ₹ 1.60 ತರಬೇಕು! ಅಂದರೆ, ಆತ ವರ್ಷದ ಹಿಂದೆಯೇ ಹಣ ಖರ್ಚು ಮಾಡದೆ, ಉಳಿತಾಯ ಮಾಡಿದ್ದೇ ತಪ್ಪು ಎಂದಾಯಿತು!

ಹಣದುಬ್ಬರ ಪ್ರಮಾಣಕ್ಕಿಂತಲೂ ಠೇವಣಿ ಹಣದ ಮೇಲಿನ ಬಡ್ಡಿ ದರ ತುಸುವಾದರೂ ಹೆಚ್ಚಿರಬೇಕು ಎಂದು ಹೇಳುವುದರ ಮಹತ್ವ ಏನು ಎಂಬುದನ್ನು ರವಿಯ ಸ್ಥಿತಿ ವಿವರಿಸುತ್ತದೆ. ಹಣದುಬ್ಬರ ಪ್ರಮಾಣವು ಠೇವಣಿಗಳ ಮೇಲಿನ ಬಡ್ಡಿ ದರಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಉಳಿದುಕೊಳ್ಳುವುದು, ಉಳಿತಾಯ ಪ್ರವೃತ್ತಿಯನ್ನು ಚಿವುಟಿಹಾಕುವ ಶಕ್ತಿ ಹೊಂದಿದೆ.

ಈಗ ಅನುಭವಕ್ಕೆ ಬರುತ್ತಿರುವುದು ಇದೇ ಸ್ಥಿತಿ. ಉಳಿತಾಯದ ರೂಪದಲ್ಲಿ ಇರಿಸಿದ ಹಣದ ಮೌಲ್ಯ ತಗ್ಗುತ್ತಿದೆ. ಆದರೆ, ವಸ್ತುಗಳ ಮೌಲ್ಯವು ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಇದು ಉಳಿತಾಯ ಮಾಡುವವರಿಗೆ ಪೂರಕವಾದ ಸ್ಥಿತಿ ಖಂಡಿತ ಅಲ್ಲ. ಇಷ್ಟಿದ್ದರೂ, ಆರ್‌ಬಿಐ ರೆಪೊ ದರ ಹೆಚ್ಚಿಸಬೇಕು, ಆ ಮೂಲಕವಾದರೂ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳುವವರ ದನಿ ಗಟ್ಟಿಯಾಗಿ ಕೇಳುತ್ತಿಲ್ಲವಲ್ಲ? ಏಕೆ? ಏಕೆಂದರೆ, ಉಳಿತಾಯ ಪ್ರವೃತ್ತಿಯನ್ನು ಪ್ರೀತಿಯಿಂದ ಕಾಪಿಟ್ಟುಕೊಂಡು ಬಂದಿರುವ ಮಧ್ಯಮ, ಮೇಲ್ಮಧ್ಯಮ ವರ್ಗವು ಈ ವಿಚಾರದಲ್ಲಿ ಸಂಘಟಿತವಾಗಿಲ್ಲ. ಬಡ್ಡಿ ದರಗಳ ವಿಚಾರದಲ್ಲಿ ಈ ವರ್ಗವು ವೋಟ್‌ ಬ್ಯಾಂಕ್‌ ಕೂಡ ಅಲ್ಲ; ಅಧಿಕಾರಸ್ಥರ ಮೇಲೆ ಒತ್ತಡ ಹೇರುವ ಶಕ್ತಿ ಕೂಡ ಈ ವರ್ಗಕ್ಕೆ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು