ಶುಕ್ರವಾರ, ಜೂನ್ 5, 2020
27 °C

ಕೊರೊನಾ ಬಿಕ್ಕಟ್ಟು | ಹೂಡಿಕೆದಾರರೇ ಚಿಂತೆ ಬಿಡಿ

ಕೈಲಾಶ್‌ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಷೇರುಪೇಟೆಯಲ್ಲಿ ಏರಿಳಿತ

ವಿಶ್ವದಾದ್ಯಂತ ಹರಡಿರುವ ‘ಕೋವಿಡ್‌–19’ ಪಿಡುಗು ದೇಶಿ ಷೇರುಪೇಟೆ ವಹಿವಾಟಿನ ಮೇಲೆಯೂ ತೀವ್ರ ಸ್ವರೂಪದ ವ್ಯತಿರಿಕ್ತ ಪರಿಣಾಮ ಬೀರಿದೆ. ‘ಕೊರೊನಾ–2’ ವೈರಸ್‌ ಎಲ್ಲ ದೇಶಗಳನ್ನು ವ್ಯಾಪಿಸಿದ್ದು, ಜಾಗತಿಕ ಆರ್ಥಿಕತೆಗೆ ಭಾರಿ ಪೆಟ್ಟು ನೀಡಿದೆ. ಭಾರತದ ಒಟ್ಟಾರೆ ಆರ್ಥಿಕತೆಯೂ ಈ ಪ್ರತಿಕೂಲ ಸನ್ನಿವೇಶದಿಂದ ತತ್ತರಿಸಿದೆ. ಈ ಪರಿಸ್ಥಿತಿ ಇನ್ನೆಷ್ಟು ದಿನಗಳ ಕಾಲ ಮುಂದುವರೆಯಲಿದೆ ಎನ್ನುವುದರ ಬಗ್ಗೆ ಸದ್ಯಕ್ಕೆ ಯಾರಲ್ಲೂ ಖಚಿತ ಮಾಹಿತಿ ಇಲ್ಲ.

ಕೋವಿಡ್‌ ಸೃಷ್ಟಿಸಿರುವ ಆರೋಗ್ಯ ಬಿಕ್ಕಟ್ಟು ಆರ್ಥಿಕತೆಯನ್ನು ದುರ್ಬಲಗೊಳಿಸಿದೆ. ಎಲ್ಲ ದೇಶಗಳ ಸರ್ಕಾರಗಳು, ಜಾಗತಿಕ ಸಂಸ್ಥೆಗಳು ಚೇತರಿಕೆಯ ಮಾರ್ಗೋಪಾಯಗಳ  ಹುಡುಕಾಟದಲ್ಲಿ ತೊಡಗಿವೆ. ಬಿಕ್ಕಟ್ಟಿನ ತೀವ್ರತೆ ಶಮನಗೊಳಿಸಲು ಯುದ್ಧೋಪಾಧಿಯಲ್ಲಿ ಕಾರ್ಯೋನ್ಮುಖವಾಗಿವೆ. ಈ ಪಿಡುಗು ಇನ್ನಷ್ಟು ಸಮಯ ಮುಂದುವರಿಯಲಿದೆ. ಇದರಿಂದಾಗಿ ಷೇರು, ಮ್ಯೂಚುವಲ್ ಫಂಡ್‌ ಮತ್ತಿತರ ಹಣಕಾಸು ಉತ್ಪನ್ನಗಳಲ್ಲಿ ಹಣ ಹೂಡಿಕೆ ಮಾಡಿದವರೆಲ್ಲ ತುಂಬ ಚಿಂತಾಕ್ರಾಂತರಾಗಿದ್ದಾರೆ.

ಷೇರುಗಳಲ್ಲಿನ ಜನರ ಹೂಡಿಕೆಯು ಅತ್ಯಲ್ಪ ಅವಧಿಯಲ್ಲಿ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಗಮನಾರ್ಹವಾಗಿ ಕರಗಿದೆ. ಈ ಬೆಳವಣಿಗೆಯು  ಹೂಡಿಕೆಯ ಉದ್ದೇಶವನ್ನೇ ಪ್ರಶ್ನಿಸುವಂತೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ದಿನೇ ದಿನೇ ಕುಸಿಯುತ್ತಲೇ ಸಾಗಿದೆ.  ಇದು ದೊಡ್ಡ ಮತ್ತು ಸಣ್ಣ ಉದ್ಯಮಗಳಿಗೆ ಭಾರಿ ಪೆಟ್ಟು ನೀಡಿದೆ.

ಕುಂಟುತ್ತ ಸಾಗಿದ್ದ ಆರ್ಥಿಕತೆಯ ಪ್ರಗತಿಯು ಈ ಪಿಡುಗಿನಿಂದ ಮತ್ತಷ್ಟು ಕುಂಠಿತಗೊಳ್ಳಲಿದೆ.  ಹಿರಿದು– ಕಿರಿದು ಎಂಬುದನ್ನೂ ಲೆಕ್ಕಿಸದೆ ಉದ್ಯಮ, ಹಣಕಾಸು ಮಾರುಕಟ್ಟೆಗಳಿಗೆ ಸುಲಭವಾಗಿ ಚೇತರಿಸಿಕೊಳ್ಳದ ಹೊಡೆತ ನೀಡಿದೆ. ಇದರ ಪ್ರಭಾವ ಬಹಳ ದಿನಗಳವರೆಗೆ ಕಾಡಲಿದೆ. ಎಲ್ಲವೂ  ಮತ್ತೆ ಸಹಜ ಸ್ಥಿತಿಗೆ ಮರಳುವ ದಿನಗಳು  ಬಹಳ ದೂರದಲ್ಲಿವೆ. 

ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಹೂಡಿಕೆದಾರರು ಧೈರ್ಯಗೆಡಬಾರದು. ಬಿಕ್ಕಟ್ಟಿನಿಂದ ಪಾರಾಗುವ ಮಾರ್ಗೋಪಾಯಗಳ ಬಗ್ಗೆ ಆಲೋಚಿಸಬೇಕು. ಸರ್ಕಾರವು ಅನೇಕ ಪರಿಹಾರ ಕೊಡುಗೆಗಳನ್ನು ಪ್ರಕಟಿಸಿ ಉದ್ದಿಮೆ ಮತ್ತು ಜನರನ್ನು ಹಣಕಾಸಿನ ಸಂಕಷ್ಟಗಳಿಂದ  ಪಾರು ಮಾಡಲು ಶ್ರಮಿಸಲಿದೆ. ಜನರ ಮತ್ತು ಉದ್ಯಮದ ಬವಣೆ ಕ್ರಮೇಣ ದೂರವಾಗಲಿದೆ. ಇದನ್ನು ಸಮಯವೇ ನಿರ್ಧರಿಸಲಿದೆ.

ಈ ಬಿಕ್ಕಟ್ಟಿನ ಗಳಿಗೆಯಲ್ಲಿ ಹೂಡಿಕೆದಾರರಿಗೆ ಮೂರು ಪ್ರಶ್ನೆಗಳು ಮುಖ್ಯವಾಗಿ ಕಾಡುತ್ತಿವೆ.

1. ಮುಂದೇನಾಗಲಿದೆ ಮತ್ತು ಅದು ಇನ್ನೆಷ್ಟು ಕಾಲ ಇರಲಿದೆ?

2. ನನ್ನ ಹೂಡಿಕೆಯ ಸ್ವರೂಪ ಬದಲಿಸಬೇಕೆ?

3. ನನ್ನ ಹೂಡಿಕೆ ಎಷ್ಟು ಸುರಕ್ಷಿತ. ಅದನ್ನು ಸ್ಥಿರ ಠೇವಣಿಗಳಿಗೆ ಬದಲಿಸಬೇಕೆ?

ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. 

ಈ ಪಿಡುಗು ನಿಯಂತ್ರಿಸಲು ಎಷ್ಟು ಸಮಯ ತೆಗೆದುಕೊಳ್ಳಲಿದೆ ಎನ್ನುವುದನ್ನು ಯಾರೊಬ್ಬರೂ  ಊಹಿಸಲು ಆಗುವುದಿಲ್ಲ. ಜನಜೀವನವು  ಯಾವಾಗ ಸಹಜ ಸ್ಥಿತಿಗೆ ಮರಳಲಿದೆ ಎಂಬುದನ್ನು ಕೂಡ ಊಹಿಸಲಿಕ್ಕಾಗದು. ಇಲ್ಲಿ ನಾವೆಲ್ಲ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಮುಖ್ಯ.  ಮನು ಕುಲವು ಇತಿಹಾಸದ ಉದ್ದಕ್ಕೂ ಇಂತಹ ಲೆಕ್ಕವಿಲ್ಲದಷ್ಟು ನೈಸರ್ಗಿಕ ವಿಕೋಪಗಳನ್ನು ಮೆಟ್ಟಿ ನಿಂತಿದೆ ಎಂಬುದನ್ನು ಇತಿಹಾಸದ ಪುಟಗಳು ಹೇಳುತ್ತವೆ. ಯುದ್ಧಗಳು ಮಾಡಿರುವ ಅಪಾರ ಹಾನಿಗೂ ಇತಿಹಾಸ ಸಾಕ್ಷಿಯಾಗಿದೆ.  ಜನರು ಮತ್ತು ಆರ್ಥಿಕತೆಗಳು ಮತ್ತೆ ಚೈತನ್ಯದಾಯಕವಾಗಿ ಪುಟಿದೆದ್ದಿರುವುದನ್ನು ಕಂಡಿದ್ದೇವೆ. ಯಾವುದೇ ದೇಶ ಮತ್ತು ಸಮುದಾಯವು ಅಪಾಯಗಳಿಗೆ ಹೆದರಿ ಯಾವತ್ತೂ ಪಲಾಯನ ಮಾಡಿಲ್ಲ.

ಹೂಡಿಕೆಯ ಸ್ವರೂಪ ಬದಲಾಯಿಸಬೇಕೆ?

ನನ್ನ ಬಹುತೇಕ ಹೂಡಿಕೆಗಳು ಷೇರುಗಳ ನೇರ ಖರೀದಿ ಇಲ್ಲವೇ ಮ್ಯೂಚುವಲ್‌ ಫಂಡ್‌ ಖರೀದಿ ರೂಪದಲ್ಲಿ ಇವೆ. ಇಲ್ಲಿನ ಹೂಡಿಕೆ ಉದ್ದೇಶ ದೀರ್ಘಕಾಲೀನ ಸ್ವರೂಪದ್ದಾಗಿದೆ. ಕೆಲ ನಿರ್ದಿಷ್ಟ ಗುರಿಗಳ ಈಡೇರಿಕೆಗಾಗಿಯೇ ನನ್ನೆಲ್ಲ ಹೂಡಿಕೆ ನಿರ್ಧಾರಗಳನ್ನು ಕೈಗೊಂಡಿರುವೆ. ಕಂಪನಿಗಳ ಷೇರುಗಳ ಬೆಲೆ ಗಮನಾರ್ಹವಾಗಿ ಕುಸಿದಿರುವ ಸದ್ಯದ ಸಂದರ್ಭದಲ್ಲಿ ಹೆಚ್ಚೆಚ್ಚು ಷೇರುಗಳನ್ನು ಖರೀದಿಸುವುದು ಲಾಭಕರ ಎಂದು ನನಗೆ ಅನಿಸುತ್ತದೆ.

ನಾನಂತೂ ನನ್ನ ವ್ಯವಸ್ಥಿತ ಹೂಡಿಕೆ ಯೋಜನೆ  (ಎಸ್‌ಐಪಿ) ಸ್ಥಗಿತಗೊಳಿಸುವುದಿಲ್ಲ. ಕಡಿಮೆ ಬೆಲೆ ಇದ್ದಾಗ ಹೆಚ್ಚು ಮ್ಯೂಚುವಲ್‌ ಫಂಡ್‌ ಯುನಿಟ್‌ಗಳನ್ನು ಖರೀದಿಸುತ್ತೇನೆ. ಇದು ಮಾರುಕಟ್ಟೆ ಏರುಗತಿಯಲ್ಲಿ ಸಾಗಿದಾಗ ನನಗೆ ಖಂಡಿತವಾಗಿಯೂ ಲಾಭ ತಂದು ಕೊಡಲಿದೆ.

ಸ್ಥಿರ ಠೇವಣಿಗಳತ್ತ ಹೂಡಿಕೆ ಬದಲಿಸುವುದು ಸೂಕ್ತವೇ?

ಸಾಲ ನಿಧಿಗಳು, ಬ್ಯಾಂಕ್ ಎಫ್‌.ಡಿ, ಪಿ.ಎಫ್, ಪಿಪಿಎಫ್‌ಗಳಲ್ಲಿ ನನ್ನ ಹೂಡಿಕೆಗಳಿವೆ. ಭವಿಷ್ಯದ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ನನ್ನ ಬಳಿಯಲ್ಲಿ ಇಲ್ಲವೇ ಬ್ಯಾಂಕ್‌ ಖಾತೆಗಳಲ್ಲಿ ಪ್ರತ್ಯೇಕ ಹಣ ಇಟ್ಟಿರುವೆ. ಹೀಗಾಗಿ ನನ್ನಲ್ಲಿ ಆತಂಕ ಮನೆ ಮಾಡಿಲ್ಲ. ಸದ್ಯದ ಪರಿಸ್ಥಿತಿಯು ನನಗೆ ಒದಗಿದ ಅವಕಾಶ ಎಂದೇ ನಾನು ಭಾವಿಸುವೆ. ಇಂತಹ ಸಂದರ್ಭಗಳಲ್ಲಿ ಭಾವುಕತೆಯಿಂದ ನಿರ್ಧಾರ ಕೈಗೊಳ್ಳುವ ಬದಲಿಗೆ ಬುದ್ಧಿವಂತಿಕೆಯಿಂದ ವರ್ತಿಸಬೇಕು.

ʻಹೂಡಿಕೆಯ ಮೊದಲ ಪಾಠ’ದಲ್ಲಿ, ಹೂಡಿಕೆಗೆ ಹಣಕಾಸಿನ ಗುರಿ ಇರಬೇಕು ಎನ್ನುವುದು ಮುಖ್ಯವಾಗಿರಬೇಕು. ನಷ್ಟ ಎದುರಿಸುವ  ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆಯನ್ನು ವಿವಿಧ ಹಣಕಾಸು ಉತ್ಪನ್ನಗಳಲ್ಲಿ ತೊಡಗಿಸಬೇಕು.

ಪ್ರತಿಯೊಬ್ಬರೂ ಈ ಸಮಯದಲ್ಲಿ ಚಿಂತಿತರಾಗಿರುವುದು ನಿಜ. ಆದರೆ, ಈ ಸಮಯದಲ್ಲಿ ಹೂಡಿಕೆಗಳಿಂದ ಹಣ ಹಿಂದೆ ಪಡೆಯುವುದು ಬುದ್ದಿವಂತಿಕೆಯಲ್ಲ. ಹೂಡಿಕೆಗಳಿಂದ ಹಣ ಹಿಂದೆಗೆದುಕೊಂಡರೆ  ಹೆಚ್ಚು ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ.

ಒಬ್ಬ ಒಳ್ಳೆಯ ಸಲಹೆಗಾರ ಈ ಸಂದರ್ಭದಲ್ಲಿ ನೆರವಿಗೆ ಬರುತ್ತಾನೆ. ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುತ್ತಾನೆ.  ಸಲಹೆಗಾರನು ನಿಮ್ಮ ಹೂಡಿಕೆ ಹಂಚಿಕೆ  ಖಾತ್ರಿಪಡಿಕೊಂಡೇ, ಅದರ ಪ್ರಯೋಜನಗಳನ್ನು ವಿವರಿಸುತ್ತಾನೆ. ವಿಶೇಷವಾಗಿ ಈ ಕಷ್ಟಕರ ಗಳಿಗೆಯಲ್ಲಿ ನಂಬಿಕಸ್ಥ ಸಲಹೆಗಾರರ ಜತೆ ಕೆಲಸ ಮಾಡುವುದು ಹೂಡಿಕೆದಾರರು ತೋರುವ ಬುದ್ಧಿವಂತಿಕೆಯಾಗಿದೆ. ಸದ್ಯದ ಬಿಕ್ಕಟ್ಟು ಕ್ರಮೇಣ ತಿಳಿಯಾಗಲಿದೆ. ಜನಜೀವನ ಮತ್ತೆ ಸಹಜ ಸ್ಥಿತಿಗೆ ಬರಲಿದೆ. ದಯವಿಟ್ಟು ಎಲ್ಲರೂ ಮುನ್ನೆಚ್ಚರಿಕೆ ವಹಿಸಿ. ಸುರಕ್ಷಿತರಾಗಿರಿ! 

ಹೂಡಿಕೆದಾರರಿಗೆ ಕಾಡುವ ಪ್ರಶ್ನೆಗಳು

1. ಮುಂದೇನಾಗಲಿದೆ ಮತ್ತು ಅದು ಇನ್ನೆಷ್ಟು ಕಾಲ ಇರಲಿದೆ

2. ನನ್ನ ಹೂಡಿಕೆಯ ಸ್ವರೂಪ ಬದಲಿಸಬೇಕೆ

3. ನನ್ನ ಹೂಡಿಕೆ ಎಷ್ಟು ಸುರಕ್ಷಿತ. ಅದನ್ನು ಸ್ಥಿರ ಠೇವಣಿಗಳಿಗೆ ಬದಲಿಸಬೇಕೆ?

ಉತ್ತರಗಳು

ಹೂಡಿಕೆದಾರರು ಧೈರ್ಯಗೆಡಬಾರದು

ಭಾವುಕತೆಯ  ಬದಲಿಗೆ ಬುದ್ಧಿವಂತಿಕೆಯ ನಿರ್ಧಾರ ಮುಖ್ಯ

ಹೂಡಿಕೆಗಳಿಂದ ಹಣ ಹಿಂದೆ ಪಡೆಯುವುದು ಜಾಣತನವಲ್ಲ

(ಲೇಖಕ, ಎಲ್‌ಅ್ಯಂಡ್‌  ಟಿ ಮ್ಯೂಚುವಲ್‌ ಫಂಡ್‌ ಸಿಇಒ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು