ಬುಧವಾರ, ಜನವರಿ 22, 2020
28 °C

ಗಳಿಕೆಗೆ ತೆರಿಗೆ ಇಲ್ಲ, ಹೂಡಿಕೆಗೆ ತೆರಿಗೆ ಅನುಕೂಲ; ಗುರಿ ಸಾಧನೆಗೆ ಪಿಪಿಎಫ್ ಹಾದಿ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಎಫ್‌ಡಿ, ಆರ್‌ಡಿ ಮಾಡಿದರೆ ಸಿಗುವುದಕ್ಕಿಂತ ಹೆಚ್ಚಿನ ಬಡ್ಡಿ ಇರಬೇಕು, ಗಳಿಸುವ ಬಡ್ಡಿಗೆ ತೆರಿಗೆ ಇರಬಾರದು, ನನೆಗ ಸಾಧ್ಯ ಆಗುವವಷ್ಟು ಹಣ ಕಟ್ಟಲು ಅವಕಾಶ ಇರಬೇಕು, ಪ್ರತಿ ತಿಂಗಳೂ ಆಗದಿದ್ದರೆ ವರ್ಷಕ್ಕೆ ಒಂದೇ ಸಲ ಕಟ್ಟುವಂತಿರಬೇಕು,...ಮತ್ತೆ, ಕಟ್ಟುವ ಹಣಕ್ಕೆ ತೆರಿಗೆ ಅನುಕೂಲವೂ ಸಿಗಬೇಕು!

ಉಳಿತಾಯ ಮತ್ತು ತೆರಿಗೆ ವಿಷಯ ಬಂದಾಗ ಸಹಜವಾಗಿಯೇ ಮೇಲೆ ಹೇಳಿದ ಎಲ್ಲವೂ ನಮ್ಮ ಯೋಚನೆಗಳಲ್ಲಿಯೂ ಸುಳಿದಿರುತ್ತವೆ. ಇದಕ್ಕೆ ಹತ್ತಾರು ವರ್ಷಗಳ ಹಿಂದೆಯೇ ಭಾರತ ಸರ್ಕಾರ ನೀಡಿರುವ ಉತ್ತಮ ಪರಿಹಾರ ಮಾರ್ಗ 'ಪಿಪಿಎಫ್‌'. ವರ್ಷಕ್ಕೆ ಕನಿಷ್ಠ ₹ 500 ರಿಂದ ಗರಿಷ್ಠ ₹ 1.5 ಲಕ್ಷದವರೆಗೆ ಹೂಡಿಕೆಗೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯಲ್ಲಿ ಅವಕಾಶವಿದೆ.

ಮೂರು ತಿಂಗಳಿಗೆ ಸರ್ಕಾರ ಪಿಪಿಎಫ್‌ ಬಡ್ಡಿ ಪರಿಷ್ಕೃತಗೊಳಿಸುತ್ತದೆ. ಪ್ರಸ್ತುತ ಶೇ 7.9ರಷ್ಟು ಬಡ್ಡಿ ನಿಗದಿಯಾಗಿದ್ದು, ಹೂಡಿಕೆ ಅವಧಿ 15 ವರ್ಷ ಆಗಿದೆ. ಅಂದರೆ, ಪಿಪಿಎಫ್‌ನಲ್ಲಿ ಹೂಡುವ ಸಂಪೂರ್ಣ ಹಣವನ್ನು 15 ವರ್ಷಕ್ಕಿಂತ ಮೊದಲು ತೆಗೆಯಲು ಅವಕಾಶ ಇಲ್ಲ. 

ರಾಷ್ಟ್ರೀಯ ಉಳಿತಾಯ ಯೋಜನೆಗಳ ಭಾಗವಾಗಿ 1968ರಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಬ್ಯಾಂಕ್‌ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಉಳಿತಾಯ ಆರಂಭಿಸಬಹುದು. ಇಲ್ಲಿ ಹೂಡುವ ಹಣಕ್ಕೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಲಾಭ ಸಿಗುತ್ತದೆ ಹಾಗೂ ಬಡ್ಡಿಯಿಂದ ಗಳಿಸುವ ಹೆಚ್ಚುವರಿ ಹಣ ತೆರಿಗೆಯಿಂದ ಮುಕ್ತವಾಗಿರುತ್ತದೆ. ಹಾಗಾಗಿಯೇ ಇದು ಬಹುತೇಕರ ಫೇವರಿಟ್‌ ಯೋಜನೆಯಾಗಿ ಮುಂದುವರಿದಿದೆ. 

ಸಣ್ಣ ಹೂಡಿಕೆ ದೊಡ್ಡ ಗಳಿಕೆ

ವರ್ಷದಿಂದ ವರ್ಷಕ್ಕೆ ಬೆಳೆಯುವ ಹಣ 15 ವರ್ಷಗಳ ಬಳಿಕ ದೊಡ್ಡ ಮೊತ್ತವಾಗಿ ಹೂಡಿಕೆದಾರನ ಕೈ ಸೇರುತ್ತದೆ. ವರ್ಷಕ್ಕೆ ಕನಿಷ್ಠ ₹500 ಹೂಡಕೆ ಅವಕಾಶ ಇರುವುದರಿಂದ ಯಾವುದೇ ವ್ಯಕ್ತಿ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಸಾಧ್ಯವಾಗುವಷ್ಟು ಹಣವನ್ನು ವರ್ಷಕ್ಕೆ ಒಂದೇ ಸಲ ಅಥವಾ ಪ್ರತಿ ತಿಂಗಳು ಪಿಪಿಎಫ್‌ ಖಾತೆಗೆ ವರ್ಗಾಯಿಸಬಹುದು. ಯೋಜನಾ ಅವಧಿ 15 ವರ್ಷ ಆಗಿದ್ದು, ಬಳಿಕ ಹೂಡಿಕೆದಾರ ಇಚ್ಛಿಸಿದರೆ ಐದು ವರ್ಷಗಳ ವರೆಗೂ ವಿಸ್ತರಣೆಗೆ ಅವಕಾಶವಿದೆ.

ಉದಾಹರಣೆ: ಖಾಸಗಿ ಸಂಸ್ಥೆಯೊಂದರಲ್ಲಿ ಸಹಾಯಕನಾಗಿರುವ ತಮ್ಮಣ್ಣನ ತಿಂಗಳ ವೇತನದಲ್ಲಿ ನಿಗದಿಯಂತೆ ಶೇ 12ರಷ್ಟು ಭವಿಷ್ಯ ನಿಧಿ (ಪಿಎಫ್‌) ಯೋಜನಗೆ ಕಡಿತವಾಗುತ್ತಿದೆ. ಮುಂದಿನ ಅಗತ್ಯಗಳಿಗಾಗಿ ತಮ್ಮಣ್ಣ ಇದರ ಹೊರತಾಗಿ ಇನ್ನಷ್ಟು ಉಳಿತಾಯ ಮಾಡುವ ಯೋಚನೆ ಮಾಡಿ, ಕಚೇರಿಗೆ ಸಮೀಪದ ಬ್ಯಾಂಕ್‌ವೊಂದರಲ್ಲಿ ಪಿಪಿಎಫ್‌ ಖಾತೆ ತೆರೆಯುತ್ತಾರೆ. ತಿಂಗಳಿಗೆ ₹ 5,000 ಪಿಪಿಎಫ್‌ಗೆ ಖಾತೆಗೆ ವರ್ಗಾಯಿಸುವುದನ್ನು 15 ವರ್ಷ ಮುಂದುವರಿಸುತ್ತಾರೆ. 15 ವರ್ಷ ಹೂಡಿಕೆ ಪೂರ್ಣಗೊಳ್ಳುವ ಸಮಯಕ್ಕೆ ತಮ್ಮಣ್ಣನ ಮಗಳ ಮದುವೆಗೆ ಸಿದ್ಧತೆ ನಡೆದಿರುತ್ತದೆ. ಪಿಪಿಎಫ್‌ ಖಾತೆಗೆ ಆವರೆಗೂ 9 ಲಕ್ಷ ರೂಪಾಯಿ ಹೂಡಿರುವ ತಮ್ಮಣ್ಣ ₹ 17,44,206 ಪಡೆಯುತ್ತಾರೆ. ಮದುವೆ ಖರ್ಚು ಕಳೆದು ತಮ್ಮಣ್ಣ ಒಂದಷ್ಟು ಹಣವನ್ನು ಉಳಿಸಿಕೊಳ್ಳುತ್ತಾರೆ. 


ಪಿಪಿಎಫ್‌ ಬಡ್ಡಿ ಶೇ 7.9ರಷ್ಟು ಲೆಕ್ಕಚಾರದಲ್ಲಿ 15 ವರ್ಷಗಳ ಅವಧಿಗೆ

ವಾರ್ಷಿಕ ಗರಿಷ್ಠ ಹೂಡಿಕೆ ₹ 1,50,000 ಇರುವುದರಿಂದ; ತಮ್ಮಣ್ಣ ವರ್ಷಕ್ಕೆ ₹ 1,50,000 ಹದಿನೈದು ವರ್ಷಗಳ ವರೆಗೂ ಹೂಡಿಕೆ (ಒಟ್ಟು ₹ 22,50,000) ಮಾಡಿದ್ದರೆ, ಪರಿಪಕ್ವ ದಿನ (ಮೆಚ್ಯುರಿಟಿ ಡೇಟ್) ಅವರು ₹ 43,60,517 ಪಡೆಯುತ್ತಿದ್ದರು. 


ಪಿಪಿಎಫ್‌ ಬಡ್ಡಿ ಶೇ 7.9ರಷ್ಟು ಲೆಕ್ಕಚಾರದಲ್ಲಿ 15 ವರ್ಷಗಳ ಅವಧಿಗೆ

ಕೇಂದ್ರ ಸರ್ಕಾರ 3 ತಿಂಗಳಿಗೊಮ್ಮೆ ಬಡ್ಡಿದರ ನಿಗದಿಪಡಿಸುವುದರಿಂದ ಗಳಿಕೆಯಲ್ಲೂ ಸ್ವಲ್ಪ ಮಟ್ಟಿನ ವ್ಯತ್ಯಾಸವಾಗುತ್ತದೆ. 2019 ಪ್ರಾರಂಭದಲ್ಲಿ ಶೇ 8ರಷ್ಟಿದ್ದ ಬಡ್ಡಿದರ ಅಕ್ಟೋಬರ್‌ನಿಂದ ಶೇ 7.9 ನಿಗದಿಯಾಗಿದೆ. ಖಾತೆಯಲ್ಲಿನ ಹಣಕ್ಕೆ ಬಡ್ಡಿಯನ್ನು ಪ್ರತಿ ತಿಂಗಳ 5ನೇ ತಾರೀಕಿನಂದು ಲೆಕ್ಕ ಹಾಕಲಾಗುತ್ತದೆ. ಅಂದು ಖಾತೆಯಲ್ಲಿರುವ ಮೊತ್ತಕ್ಕೆ ಬಡ್ಡಿ ಅನ್ವಯವಾಗುತ್ತದೆ. ಹೀಗಾಗಿ ತಿಂಗಳ ಆರಂಭದಲ್ಲೇ ಹಣ ಜಮೆ ಮಾಡಿದರೆ ಉತ್ತಮ. 

ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯಬಹುದು

ಭಾರತದ ಯಾವುದೇ ನಾಗರಿಕ ಪಿಪಿಎಫ್ ಖಾತೆ ಆರಂಭಿಸಬಹುದು. ಒಬ್ಬರು ಒಂದು ಖಾತೆ ತೆರೆಯಲು ಮಾತ್ರ ಅವಕಾಶವಿದೆ. ಅಪ್ರಾಪ್ತ ಮಗ, ಮಗಳ ಹೆಸರಿನಲ್ಲೂ ಖಾತೆ ತೆರೆಯಬಹುದು. ಅಂಚೆ ಕಚೇರಿ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹಾಗೂ ಕೆಲ ಖಾಸಗಿ ಬ್ಯಾಂಕ್‌ಗಳಲ್ಲಿ ಈ ಖಾತೆ ಸೌಲಭ್ಯವಿದೆ. ಒಬ್ಬರಿಗಿಂತ ಹೆಚ್ಚು ಜನರನ್ನು ನಾಮಿನಿ ಮಾಡುವ ಅವಕಾಶವೂ ಇದೆ. ಪಿಪಿಎಫ್ ಖಾತೆಯನ್ನು ಒಂದು ಬ್ಯಾಂಕ್‌ನಿಂದ ಮತ್ತೊಂದಕ್ಕೆ ಅಥವಾ ಅಂಚೆ ಕಚೇರಿಗೆ ವರ್ಗಾಯಿಸಬಹುದು.

ತುರ್ತು ಸಂದರ್ಭದಲ್ಲಿ ಹಣ ಪಡೆಯಬಹುದು

ಖಾತೆದಾರನಿಗೆ ಅಥವಾ ಅವರ ಕುಟುಂಬದವರಿಗೆ ಗಂಭೀರ ಅನಾರೋಗ್ಯ ಎದುರಾದರೆ ಅಥವಾ ಉನ್ನತ ಶಿಕ್ಷಣದ ಉದ್ದೇಶವಿದ್ದರೆ ಅಗತ್ಯ ದಾಖಲೆ ನೀಡಿ ಹಣ ಪಡೆದು ಪಿಪಿಎಫ್‌ ಖಾತೆ ಅಂತ್ಯಗೊಳಿಸಬಹುದು. ಖಾತೆಯಲ್ಲಿ ಹೂಡಿಕೆ ಆರಂಭ ಮಾಡಿದ 3ನೇ ಆರ್ಥಿಕ ವರ್ಷದಿಂದ 6ನೇ ಆರ್ಥಿಕ ವರ್ಷದ ಆರಂಭದ ಒಳಗಾಗಿ ಸಾಲ ಪಡೆದುಕೊಳ್ಳಬಹುದು. ಪಿಪಿಎಫ್‌ ಖಾತೆ ಆರಂಭಿಸಿದ 5ನೇ ಹಣಕಾಸು ವರ್ಷದ ಬಳಿಕ ಹಣವನ್ನು ಪ್ರತಿ ವರ್ಷವೂ ಭಾಗಶಃ ತೆಗೆಯಲು ಸಾಧ್ಯವಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು