ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೊತ್ತರ: ನಿವೃತ್ತಿಯಿಂದ ಅಂದಾಜು ₹42 ಲಕ್ಷ ಬರಬಹುದು, ತೆರಿಗೆ ಬರುತ್ತದೆಯೇ?

Last Updated 30 ನವೆಂಬರ್ 2021, 19:30 IST
ಅಕ್ಷರ ಗಾತ್ರ

*ಪ್ರಶ್ನೆ: ನಾನು ಸರ್ಕಾರಿ ನೌಕರ. ನನಗೆ ಪಿಂಚಣಿ ಇಲ್ಲ. ಪಿಂಚಣಿಗೆ ಬದಲಾಗಿ ನನ್ನಿಂದ ಶೇಕಡ 10 ಹಾಗೂ ಸರ್ಕಾರದಿಂದ ಶೇ 14 ಎನ್.ಪಿ.ಎಸ್‌. ಜಮಾ ಆಗುತ್ತದೆ. ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ₹ 50 ಸಾವಿರ ವಿನಾಯಿತಿ ಪಡೆಯಬಹುದೇ ತಿಳಿಸಿ. ಪ್ರತಿ ಬುಧವಾರ ನಿಮ್ಮ ಅಂಕಣದ ಮೇಲೆ ನಮ್ಮ ಕಚೇರಿಯಲ್ಲಿ ಚರ್ಚಿಸುತ್ತೇವೆ. ಎಲ್ಲಾ ವರ್ಗದ ಜನರಿಗೆ ಸರಳವಾದ ಕನ್ನಡದಲ್ಲಿ ಉತ್ತರಿಸುವ ನಿಮಗೆ ಅಭಿನಂದನೆ.

-ಜೈರಾಮರಾವ್, ಬನಶಂಕರಿ

ಉತ್ತರ: ಓರ್ವ ನೌಕರ ಸೆಕ್ಷನ್‌ 80ಸಿಸಿಡಿ (1) ಆಧಾರದ ಮೇಲೆ ತನ್ನ ಬೇಸಿಕ್‌+ಡಿ.ಎ.ದಲ್ಲಿ ಶೇಕಡ 10ರಷ್ಟು ಎನ್‌.ಪಿ.ಎಸ್‌.ಗೆ ಜಮಾ ಮಾಡಿದಲ್ಲಿ ಸೆಕ್ಷನ್‌ 80ಸಿ ಮಿತಿ ₹ 1.50 ಲಕ್ಷದೊಳಗೆ ವಿನಾಯಿತಿ ಪಡೆಯಬಹುದು. ಸೆಕ್ಷನ್‌ 80ಸಿಸಿಡಿ (2) ಆಧಾರದ ಮೇಲೆ ಗರಿಷ್ಠ ಮಿತಿ ಇಲ್ಲದೆ ಉದ್ಯೋಗದಾತರು ಕೊಡುವ ಕೊಡುಗೆಯಲ್ಲಿ ಬೇಸಿಕ್‌+ಡಿ.ಎ.ದಲ್ಲಿ ಶೇ 10ರಷ್ಟು ವಿನಾಯಿತಿ ಪಡೆಯಬಹುದು. ಇವೆರಡೂ ಯೋಜನೆ ಹೊರತುಪಡಿಸಿ, ನೀವು ಸೆಕ್ಷನ್‌ 80ಸಿಸಿ (1ಬಿ) ಆಧಾರದ ಮೇಲೆ ಕೂಡಾ ಎನ್‌.ಪಿ.ಎಸ್‌.ನಲ್ಲಿ ಗರಿಷ್ಠ ₹ 50 ಸಾವಿರ ಹೂಡಿಕೆ ಮಾಡಿ ವಿನಾಯಿತಿ ಪಡೆಯಬಹುದು. ನಿಮ್ಮ ಅಭಿಮಾನಕ್ಕೆ ಧನ್ಯವಾದ.

*ಪ್ರಶ್ನೆ: ನನ್ನ ಕೃಷಿ ಜಮೀನು ರಾಷ್ಟ್ರೀಯ ಹೆದ್ದಾರಿಗೆ ಹೋಗುತ್ತಿದೆ. ಇದರಿಂದ ಬರುವ ಹಣಕ್ಕೆ ತೆರಿಗೆ ಇದೆಯೇ ತಿಳಿಸಿ. ಒಂದು ಕೃಷಿ ಜಮೀನು ಮಾರಾಟ ಮಾಡಿ ಇನ್ನೊಂದು ಕೃಷಿ ಜಮೀನು ಕೊಳ್ಳುವಾಗ ತೆರಿಗೆ ಬರುವುದಾದರೆ ವಿನಾಯಿತಿ, ಕಾನೂನು, ಅವಧಿ ಎಲ್ಲವನ್ನೂ ತಿಳಿಸಿ.

-ರಾಮಾನಾಯ್ಕ್‌, ಹಳದೀಪುರ (ಹೊನ್ನಾವರ)

ಉತ್ತರ: ಸರ್ಕಾರ ಕೃಷಿ ಜಮೀನನ್ನು ಕಡ್ಡಾಯವಾಗಿ ವಶಪಡಿಸಿಕೊಂಡಾಗ (compu*sory acquisition) ಸೆಕ್ಷನ್‌ 15ಎಚ್‌ ಆಧಾರದ ಮೇಲೆ ಪರಿಹಾರದ ಹಣ ಸಿಕ್ಕಿದ ತಾರೀಕಿನಿಂದ ಎರಡು ವರ್ಷದೊಳಗೆ ಪರಿಹಾರದಿಂದ ಪಡೆದ ಹಣಕ್ಕೆ ಕಡಿಮೆ ಆಗದಂತೆ ಮತ್ತೊಂದು ಜಮೀನು ಕೊಳ್ಳಬಹುದು. ಅದೇ ರೀತಿ ಸೆಕ್ಷನ್‌ 54 (ಬಿ) ಆಧಾರದ ಮೇಲೆ ಓರ್ವ ಕೃಷಿಕ ಜಮೀನನ್ನು ಮಾರಾಟ ಮಾಡಿ ಬರುವ ಮೊತ್ತದಲ್ಲಿ ಬೇರೊಂದು ಕೃಷಿ ಜಮೀನನ್ನು ಕೊಳ್ಳಬಹುದು. ಹೀಗೆ ಮಾಡಿದಲ್ಲಿ ಅಲ್ಪಾವಧಿ–ದೀರ್ಘಾವಧಿ–ಬಂಡವಾಳ ವೃದ್ಧಿ ತೆರಿಗೆ ಬರುವುದಿಲ್ಲ. ಈ ಪ್ರಕ್ರಿಯೆ ಎರಡು ವರ್ಷದೊಳಗೆ ಆಗಬೇಕು. ಇದೇ ವೇಳೆ ಹೀಗೆ ಕೊಂಡ ಕೃಷಿ ಜಮೀನನ್ನು ಮೂರು ವರ್ಷದೊಳಗೆ ಮಾರಾಟ ಮಾಡುವಂತಿಲ್ಲ. ಕೃಷಿ ಜಮೀನು ಸೆಕ್ಷನ್‌ 48 ಆಧಾರದ ಮೇಲೆ ಮಾರಾಟ ಮಾಡಿದಾಗ ಅಥವಾ ಸರ್ಕಾರ ವಶಪಡಿಸಿಕೊಂಡಾಗ ಬಂಡವಾಳ ವೃದ್ಧಿ ತೆರಿಗೆಯಿಂದ ವಿನಾಯಿತಿ ಹೊಂದಿದ್ದರೂ ಅಂತಹ ಕೃಷಿ ಜಮೀನು ಪಟ್ಟಣಕ್ಕೆ ಸಮೀಪ ಇರುವಲ್ಲಿ ಉಳಿದ ಸ್ಥಿರ ಆಸ್ತಿಯಂತೆ ಮಾರಾಟ ಮಾಡಿದಾಗ ಬಂಡವಾಳವೃದ್ಧಿ ತೆರಿಗೆ ಕೊಡಬೇಕಾಗುತ್ತದೆ.‌

*ಪ್ರಶ್ನೆ: ನಾನು ಕೆಎಸ್‌ಆರ್‌ಟಿಸಿಯಲ್ಲಿ ಕೆಲಸ ಮಾಡುತ್ತಿದ್ದು 31–3–2022 ನಿವೃತ್ತಿಯಾಗುತ್ತಿದ್ದೇನೆ. ಎಲ್ಲಾ ಸೇರಿಸಿ ಅಂದಾಜು ₹ 42 ಲಕ್ಷ ನಿವೃತ್ತಿಯಿಂದ ಬರಬಹುದು. ಸ್ವಂತ ಮನೆ ಇಲ್ಲ. ಪಿಂಚಣಿ ಇಲ್ಲ. ₹ 42 ಲಕ್ಷಕ್ಕೆ ಎಷ್ಟು ತೆರಿಗೆ ಬರಬಹುದು? ₹ 42 ಲಕ್ಷದಲ್ಲಿ ₹ 30 ಲಕ್ಷದಿಂದ ಒಂದು ಫ್ಲ್ಯಾಟ್‌ ಕೊಳ್ಳುವ ವಿಚಾರ ಇದೆ. ತೆರಿಗೆ, ಉಳಿತಾಯ, ಫ್ಲ್ಯಾಟ್ ಕೊಳ್ಳುವ ವಿಚಾರದಲ್ಲಿ ಗೊಂದಲಕ್ಕೆ ಪರಿಹಾರ ನೀಡಿ.

-ಮಹಂತೇಶಪ್ಪ, ಶಿವಮೊಗ್ಗ

ಉತ್ತರ: ನಿವೃತ್ತಿಯಿಂದ ಪಡೆಯುವ (termina* benefit) ಎಲ್ಲಾ ಮೊತ್ತಗಳಿಗೆ ತೆರಿಗೆ ವಿನಾಯಿತಿ ಇದೆ. ಆದರೆ ಕೇಂದ್ರ ಸರ್ಕಾರ–ರಾಜ್ಯ ಸರ್ಕಾರದ ನೌಕರರನ್ನು ಹೊರತುಪಡಿಸಿ ಉಳಿದವರು ರಜಾ ಸಂಬಳ ನಗದೀಕರಿಸಿದಲ್ಲಿ ಅಂತಹ ಹಣ ₹ 3 ಲಕ್ಷದೊಳಗೆ ಇರುವಲ್ಲಿ ಮಾತ್ರ ತೆರಿಗೆ ಬರುವುದಿಲ್ಲ. ಮಿಕ್ಕಿದ ಹಣಕ್ಕೆ ತೆರಿಗೆ ಕೊಡಬೇಕಾಗುತ್ತದೆ. (ಸೆಕ್ಷನ್‌ 10 (10ಎಎ)). ನಿಮ್ಮೊಡನೆ ಈಗಾಗಲೇ ಮಾಡಿರುವ ಹೆಚ್ಚಿನ ಉಳಿತಾಯದ ಹಣವಿದ್ದು ಹಾಗೂ ಪಿತ್ರಾರ್ಜಿತ ಕೃಷಿ ಜಮೀನಿದ್ದು, ಇವುಗಳಿಂದ ಬರುವ ವರಮಾನ ಜೀವನೋಪಾಯಕ್ಕೆ ಸರಿ ಹೋಗುವಲ್ಲಿ ಮಾತ್ರ ₹ 30 ಲಕ್ಷವನ್ನು ಫ್ಲ್ಯಾಟ್‌ಗೆ ವಿನಿಯೋಗಿಸಿರಿ. ₹ 42 ಲಕ್ಷ ಜೀವನೋಪಾಯಕ್ಕೆಂದು ಬಳಸುವಲ್ಲಿ ₹ 15 ಲಕ್ಷ ಅಂಚೆ ಕಚೇರಿ ಹಿರಿಯ ನಾಗರಿಕ ಠೇವಣಿಯಲ್ಲಿ ಹಾಗೂ ಇನ್ನೊಂದು ₹ 15 ಲಕ್ಷ ಎಲ್‌ಐಸಿ ವಯೋವಂದನಾ ಯೋಜನೆಯಲ್ಲಿ ಇರಿಸಿ. ಈ ಎರಡೂ ಹೂಡಿಕೆ ಭದ್ರವಾಗಿದ್ದು, ಇವುಗಳಿಂದ ವಾರ್ಷಿಕ ಶೇ 7.4 ಬಡ್ಡಿ ಪಡೆಯಬಹುದು. ಉಳಿದ ₹ 12 ಲಕ್ಷ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ ಅವಧಿ ಠೇವಣಿಯಲ್ಲಿ ಇಡಿ. ಹೆಚ್ಚಿನ ವರಮಾನ, ಉಡುಗೊರೆ ಹಾಗೂ ಕಮಿಷನ್‌ ಆಸೆಯಿಂದ ಅಭದ್ರವಾದ ಹೂಡಿಕೆಯಲ್ಲಿ ಹಣ ಇಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT