ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಕಾಲೇಜು ವಿದ್ಯಾರ್ಥಿಗಳಿಗೆ ಕ್ರೆಡಿಟ್ ಕಾರ್ಡ್

Last Updated 2 ಏಪ್ರಿಲ್ 2023, 20:14 IST
ಅಕ್ಷರ ಗಾತ್ರ

ಕ್ರೆಡಿಟ್ ಕಾರ್ಡ್ ಬಳಕೆ ಒಳ್ಳೆಯದೋ ಕೆಟ್ಟದ್ದೋ ಎನ್ನುವ ಚರ್ಚೆ ಬಹಳ ಕಾಲದಿಂದ ಇದೆ. ಕೆಲವರು ಅದನ್ನು ಸದುಪಯೋಗಪಡಿಸಿಕೊಂಡು ಉನ್ನತಿ ಸಾಧಿಸಿದ್ದರೆ, ಕೆಲವರು ಅದನ್ನು ದುರ್ಬಳಕೆ ಮಾಡಿಕೊಂಡು ಅವನತಿಯತ್ತ ಸಾಗಿದ್ದಾರೆ. ಇದರ ನಡುವೆಯೇ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕೂಡ ಕ್ರೆಡಿಟ್ ಕಾರ್ಡ್‌ಗಳು ಬಂದಿವೆ. ಈ ಕ್ರೆಡಿಟ್ ಕಾರ್ಡ್‌ಗಳು ಎಷ್ಟು ಸೂಕ್ತ? ಯಾವುದನ್ನು ಪಡೆದುಕೊಳ್ಳಬೇಕು, ಯಾವುದರಿಂದ ದೂರ ಇರಬೇಕು?

ಕಾಲೇಜು ವಿದ್ಯಾರ್ಥಿಗಳಿಗೆ ಸುಲಭದಲ್ಲಿ ಕ್ರೆಡಿಟ್ ಕಾರ್ಡ್ ಸಿಗುತ್ತದೆಯೇ? ಕಾಲೇಜು ಮೆಟ್ಟಿಲು ಹತ್ತಿದ ತಕ್ಷಣ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮುಂದಾಗುವ ವಿದ್ಯಾರ್ಥಿಗಳು ಇದ್ದಾರೆ. ಆದರೆ ಎಲ್ಲರಿಗೂ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ಒದಗಿಸುವುದಿಲ್ಲ. ಅವು ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದು, ಅವುಗಳ ಆಧಾರದಲ್ಲಿ ಮಾತ್ರ ವಿದ್ಯಾರ್ಥಿಗಳಿಗೆ ಕ್ರೆಡಿಟ್ ಕಾರ್ಡ್ ಕೊಡುತ್ತದೆ. ಕೆಲವು ಬ್ಯಾಂಕ್‌ಗಳು ಶಿಕ್ಷಣ ಸಾಲ ಪಡೆದಿರುವ ವಿದ್ಯಾರ್ಥಿಗಳಿಗೆ ಮಾತ್ರ ಕ್ರೆಡಿಟ್ ಕಾರ್ಡ್ ಒದಗಿಸುತ್ತವೆ. ಮತ್ತಷ್ಟು ಬ್ಯಾಂಕ್‌ಗಳು ನಿಶ್ಚಿತ ಠೇವಣಿಯನ್ನು ಆಧಾರವಾಗಿ ಇಟ್ಟುಕೊಂಡು ಕ್ರೆಡಿಟ್ ಕಾರ್ಡ್ ಒದಗಿಸುತ್ತವೆ.

ಇನ್ನು ಕೆಲವು ಬ್ಯಾಂಕ್‌ಗಳು ಪೋಷಕರು ಹೊಂದಿರುವ ಕ್ರೆಡಿಟ್ ಕಾರ್ಡ್ ಜೊತೆ ಹೆಚ್ಚುವರಿಯಾಗಿ ಮಕ್ಕಳಿಗೆ ಆ್ಯಡ್–ಆನ್ ಕ್ರೆಡಿಟ್ ಕಾರ್ಡ್ ಒದಗಿಸುತ್ತವೆ.

ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತೆ: ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕು ಅಂದರೆ 18 ವರ್ಷ ವಯಸ್ಸು ಆಗಿರಬೇಕು. ಮಾಸಿಕವಾಗಿ ನಿರ್ದಿಷ್ಟ ಆದಾಯವಿರಬೇಕು. ವೇತನದ ಚೀಟಿ, ಐ.ಟಿ ವಿವರ ಸಲ್ಲಿಸಿರುವ ವಿವರ ಒದಗಿಸಬೇಕು. ಇಷ್ಟೆಲ್ಲಾ ಇದ್ದಾಗ ಮಾತ್ರ ಕ್ರೆಡಿಟ್ ಕಾರ್ಡ್ ಸಿಗುತ್ತದೆ. ಆದರೆ ಇವ್ಯಾವುದನ್ನೂ ಅರಿಯದ ಬಹುತೇಕ ಕಾಲೇಜು ವಿದ್ಯಾರ್ಥಿಗಳು ಕ್ರೆಡಿಟ್ ಕಾರ್ಡ್‌ಗಾಗಿ ಬ್ಯಾಂಕ್‌ಗಳಲ್ಲಿ ಅರ್ಜಿ ಸಲ್ಲಿಸುತ್ತಾರೆ. ಒಂದು ಬ್ಯಾಂಕ್‌ನಲ್ಲಿ ಕ್ರೆಡಿಟ್ ಕಾರ್ಡ್ ಸಿಗದಿದ್ದರೆ ಮತ್ತೊಂದರಲ್ಲಿ, ಅದರಲ್ಲಿ ಸಿಗದಿದ್ದರೆ ಇನ್ನೊಂದರಲ್ಲಿ ಎಂಬಂತೆ ಮುಂದುವರಿಯುತ್ತಾರೆ. ಹೀಗೆ ಮಾಡಿದಾಗ ಮುಂದೆ ಅವರ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು.

ಹಾಗಾಗಿ ತಿಂಗಳ ಆದಾಯವಿಲ್ಲದ ವಿದ್ಯಾರ್ಥಿಗಳು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸದೆ ಇರುವುದು ಸೂಕ್ತ. ವಿದ್ಯಾಭ್ಯಾಸದ ಜೊತೆ ಅರೆಕಾಲಿಕ ಕೆಲಸ ಮಾಡುತ್ತಿದ್ದು ನಿರ್ದಿಷ್ಟ ಆದಾಯ ಗಳಿಸುತ್ತಿದ್ದರೆ ಕ್ರೆಡಿಟ್ ಕಾರ್ಡ್ ಬಯಸಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಹೇಗೆ ಸುಲಭದಲ್ಲಿ ಕಾರ್ಡ್ ಪಡೆಯಬಹುದು?: ಕಾಲೇಜು ವಿದ್ಯಾರ್ಥಿಗಳು ಕ್ರೆಡಿಟ್ ಕಾರ್ಡ್ ಪಡೆಯಬೇಕು ಎಂದಾದಲ್ಲಿ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ (ಎಫ್.ಡಿ) ಇಟ್ಟು ಅದರ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು. ಉದಾಹರಣೆಗೆ ₹ 10 ಸಾವಿರ ನಿಶ್ಚಿತ ಠೇವಣಿ ಇಟ್ಟರೆ ₹ 8 ಸಾವಿರದಿಂದ ₹ 9 ಸಾವಿರದವರೆಗೆ ಕ್ರೆಡಿಟ್ ಲಿಮಿಟ್ ಇರುವ ಕಾರ್ಡ್ ಸಿಗುತ್ತದೆ. ಕೆಲವು ಬ್ಯಾಂಕ್‌ಗಳು ವಿದ್ಯಾರ್ಥಿ ಕ್ರೆಡಿಟ್
ಕಾರ್ಡ್‌ಗೆ ₹ 15 ಸಾವಿರದ ಲಿಮಿಟ್ ಒದಗಿಸುತ್ತವೆ.

ಈ ಕ್ರೆಡಿಟ್ ಕಾರ್ಡ್‌ಅನ್ನು ವಿವೇಚನೆಯಿಂದ ಬಳಸಿ ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಮರುಪಾವತಿ ಮಾಡಿದರೆ ವಿದ್ಯಾರ್ಥಿ ದೆಸೆಯಿಂದಲೇ ಕ್ರೆಡಿಟ್ ಸ್ಕೋರ್ ಹೆಚ್ಚಳ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮಗೊಂಡರೆ ಭವಿಷ್ಯದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ಪಡೆದುಕೊಳ್ಳಲು ಅನುಕೂಲವಾಗುತ್ತದೆ.

ಆ್ಯಡ್–ಆನ್ ಕಾರ್ಡ್: ವಿದ್ಯಾರ್ಥಿಯ ತಂದೆ ಅಥವಾ ತಾಯಿ ಈಗಾಗಲೇ ಕ್ರೆಡಿಟ್ ಕಾರ್ಡ್ ಪಡೆದು ಬಳಸುತ್ತಿದ್ದರೆ ಹೆಚ್ಚುವರಿಯಾಗಿ ಮತ್ತೊಂದು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು. ಇಂತಹ ಕ್ರೆಡಿಟ್ ಕಾರ್ಡ್‌ಗೆ ಆ್ಯಡ್–ಆನ್ ಕ್ರೆಡಿಟ್ ಕಾರ್ಡ್ ಎನ್ನಲಾಗುತ್ತದೆ. ಪೋಷಕರು ಮಕ್ಕಳಿಗೆ ಇಂತಹ ಕಾರ್ಡ್ ಕೊಡಿಸಲು ಅವಕಾಶವಿದೆ. ಮಕ್ಕಳು ಪೋಷಕರಿಂದ ಪಡೆದ ಕ್ರೆಡಿಟ್ ಕಾರ್ಡ್ ಬಳಸಿದರೆ ಅದರ ಬಿಲ್ ಪಾವತಿಯನ್ನು ಕ್ರೆಡಿಟ್ ಕಾರ್ಡ್ ಹೊಂದಿರುವವರು ಮಾಡಬೇಕಾಗುತ್ತದೆ.

ಪಾವತಿ ವಿಳಂಬದಂತಹ ಸಮಸ್ಯೆಗಳು ಎದುರಾದರೆ ಅದರ ದಂಡವನ್ನು ಪೋಷಕರೇ ಭರಿಸಬೇಕಾಗುತ್ತದೆ. ಈ ಕಾರ್ಡ್‌ನಿಂದ ವಿದ್ಯಾರ್ಥಿಯ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಉಂಟಾಗುವುದಿಲ್ಲ. ಮಕ್ಕಳಲ್ಲಿ ಹಣಕಾಸು ನಿರ್ವಹಣೆಯ ಅರಿವು ಮೂಡಬೇಕು ಎಂದು ಬಯಸುವ ಪೋಷಕರು ಈ ಕಾರ್ಡ್ ಕೊಡಿಸಬಹುದು.

---

ಮೂರು ವಾರಗಳ ಬಳಿಕ ಗಳಿಕೆ

ಸತತ ಮೂರು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರಪೇಟೆ ಸೂಚ್ಯಂಕಗಳು ಗಳಿಕೆಯ ಲಯಕ್ಕೆ ಮರಳಿವೆ. ಮಾರ್ಚ್ 31ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 58,991 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 2.5ರಷ್ಟು ಜಿಗಿದಿದೆ. 17,359 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.44ರಷ್ಟು ಹೆಚ್ಚಳ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕಾರಾತ್ಮಕತೆ, ವಿದೇಶಿ ಹೂಡಿಕೆದಾರರಿಂದ ಖರೀದಿ ಭರಾಟೆ, ಬ್ಯಾಂಕಿಂಗ್ ವಲಯದ ಬಿಕ್ಕಟ್ಟು ಶಮನಗೊಳ್ಳುವ ಲಕ್ಷಣಗಳು ಗೋಚರಿಸಿರುವುದು ಸೇರಿ ಹಲವು ಅಂಶಗಳು ಸೂಚ್ಯಂಕಗಳ ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 4ರಷ್ಟು, ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 2.7ರಷ್ಟು, ಲೋಹ ಸೂಚ್ಯಂಕ ಶೇ 2.3ರಷ್ಟು ಮತ್ತು ಫಾರ್ಮಾ ಸೂಚ್ಯಂಕ ಶೇ 2.2ರಷ್ಟು ಗಳಿಸಿಕೊಂಡಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 2,243.74 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 4,955.78 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಇನ್ಫೋ ಎಜ್‌, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಬಾಷ್, ಜೆಎಸ್‌ಡಬ್ಲ್ಯು ಸ್ಟೀಲ್ ಮತ್ತು ಹಿಂಡಾಲ್ಕೊ ಇಂಡಸ್ಟ್ರೀಸ್ ಗಳಿಕೆ ಕಂಡಿವೆ. ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಷನ್ ಮತ್ತು ನೈಕಾ ಶೇ 10ರಿಂದ ಶೇ 14ರಷ್ಟು ಕುಸಿದಿವೆ.

ಬಿಎಸ್ಇ ಮಿಡ್ ಕ್ಯಾಪ್‌ನಲ್ಲಿ ಪಿಬಿ ಫಿನ್‌ಟೆಕ್, ಗ್ಲೆನ್ ಮಾರ್ಕ್ ಫಾರ್ಮಾ, ಮೋತಿಲಾಲ್ ಓಸ್ವಾಲ್ ಫೈನಾನ್ಸಿಯಲ್ ಸರ್ವಿಸಸ್, ಎಸ್‌ಜೆವಿಎನ್, ಅಲ್ ಕೆಮ್ ಲ್ಯಾಬೊರೇಟರಿಸ್, ದಾಲ್ಮಿಯಾ ಭಾರತ್ ಮತ್ತು ಆದಿತ್ಯ ಬಿರ್ಲಾ ಕ್ಯಾಪಿಟಲ್ ಗಳಿಸಿಕೊಂಡಿವೆ.

ಮುನ್ನೋಟ: ಏಪ್ರಿಲ್ 3ರಿಂದ 6ರವರೆಗೆ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದೆ. ಏಪ್ರಿಲ್ 6ರಂದು ರೆಪೊ ದರದಲ್ಲಿ 25 ಮೂಲಾಂಶಗಳಷ್ಟು ಹೆಚ್ಚಳ ಮಾಡುವ ಸಾಧ್ಯತೆಯಿದೆ. ರೆಪೊ ದರ ಹೆಚ್ಚಳವಾದರೆ ಸಾಲಗಳ ಮೇಲಿನ ಬಡ್ಡಿ ಹೊರೆ ಮತ್ತಷ್ಟು ಹೆಚ್ಚಾಗಲಿದ್ದು ಷೇರು ಮಾರುಕಟ್ಟೆ ಸಹ ಅದಕ್ಕೆ ಪ್ರತಿಕ್ರಿಯಿಸಲಿದೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಮತ್ತು ದೇಶಿ ಬೆಳವಣಿಗೆಗಳು ಷೇರು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT