ನನ್ನ ಮಗ ವಿದೇಶದಲ್ಲಿದ್ದಾನೆ. ಆತ ಕಳೆದ ವರ್ಷದ ಏಪ್ರಿಲ್‌ನಲ್ಲಿ ವಿದೇಶಕ್ಕೆ ಹೋಗಿದ್ದಾನೆ. ನಮ್ಮೊಂದಿಗಿದ್ದಾಗ ಆತ ನಮ್ಮ ಸಲಹೆಯ ಮೇರೆಗೆ ಅಂಚೆ ಇಲಾಖೆಯ ಪಿಪಿಎಫ್ ಖಾತೆ ತೆರೆದಿದ್ದ. ಈ ವರ್ಷದ ಪಾವತಿ ಬಾಕಿ ಇದೆ. ಕಳೆದ ಬಾರಿಯ ಮೊತ್ತವನ್ನು ಪಾವತಿಸಿ ಖಾತೆ ನಿಷ್ಕ್ರಿಯಗೊಳ್ಳದಂತೆ ಮುಂದುವರಿಸಿದ್ದೇವೆ. ನನ್ನ ಪ್ರಶ್ನೆ ಏನೆಂದರೆ, ಈಗಾಗಲೇ ಆತ ತೆರೆದಿರುವ ಖಾತೆಯನ್ನು ಏನು ಮಾಡಬೇಕು? ಅನಿವಾಸಿ ಭಾರತೀಯರಾಗಿದ್ದರೆ ಪಿಪಿಎಫ್ ಖಾತೆಯನ್ನು ಮುಚ್ಚಬೇಕು ಎನ್ನುವ ಅಭಿಪ್ರಾಯ ಇದೆ. ಈ ಮಾಹಿತಿ ಸರಿಯೇ? ಒಂದು ವೇಳೆ ಇನ್ನೂ ಮುಂದುವರಿಸುವ ಅವಕಾಶ ಇದ್ದರೆ ನಾವು ಯಾವ ಕ್ರಮ ಕೈಗೊಳ್ಳಬೇಕು?
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್), ಸಾರ್ವಜನಿಕರ ಉಳಿತಾಯ ಹೆಚ್ಚಿಸುವ ಉದ್ದೇಶದಿಂದ ಮಾಡಲಾದ ಯೋಜನೆ, ಅಂಚೆ ಕಚೇರಿ ಹಾಗೂ ಬಹುತೇಕ ಬ್ಯಾಂಕ್‌ಗಳಲ್ಲಿ ಈ ಹೂಡಿಕೆ ಉತ್ಪನ್ನ ಲಭ್ಯ. ಈ ಹೂಡಿಕೆಗಳು ಪಿಪಿಎಫ್ ನಿಯಮಾವಳಿಗಳಿಗೆ ಅನುಗುಣವಾಗಿ ಇರುತ್ತವೆ. ಖಾತೆ ತೆರೆಯುವಾಗ ಬಳಸುವ ‘ಫಾರ್ಮ್-1’ರಲ್ಲಿ ಹೂಡಿಕೆದಾರರು ತಮ್ಮ ಬದಲಾದ ವಾಸಸ್ಥಿತಿಯನ್ನು (ರೆಸಿಡೆನ್ಷಿಯಲ್ ಸ್ಟೇಟಸ್) ಖಾತೆ ಇರುವ ಸಂಬಂಧಿತ ಕಚೇರಿಗೆ ತಿಳಿಸಬೇಕು.
ಪ್ರಸ್ತುತ ನಿಯಮಗಳ ಪ್ರಕಾರ ಹೊಸ ಖಾತೆಯನ್ನು ಭಾರತೀಯ ನಿವಾಸಿಗಳು ಮಾತ್ರ ತೆರೆಯಬಹುದಾಗಿದ್ದು, ಅನಿವಾಸಿ ಭಾರತೀಯರು ಹೊಸ ಖಾತೆ ತೆರೆಯಲು ಅವಕಾಶವಿಲ್ಲ. ಆದರೆ, ಖಾತೆ ತೆರೆದ ನಂತರ ಯಾವುದೇ ನಿವಾಸಿ ಭಾರತೀಯ, ಅನಿವಾಸಿ ಭಾರತೀಯನಾಗಿ ಬದಲಾದ ಸನ್ನಿವೇಶದಲ್ಲಿ, ಅದಾಗಲೇ ತೆರೆದಿರುವ ಖಾತೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಅವಕಾಶ ಇದೆ.
ನಿಮ್ಮ ವಿಚಾರದಲ್ಲಿ, ಈಗಾಗಲೇ ಖಾತೆ ತೆರೆದಿರುವ ಕಾರಣಕ್ಕೆ ಅದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಖಾತೆಯನ್ನು ಅವಧಿಯ ಕೊನೆಯ ತನಕ (15 ವರ್ಷ) ಮುಂದುವರಿಸಲು ಸಾಧ್ಯ. ಆದರೆ ಮತ್ತೆ ಅದೇ ಖಾತೆಯನ್ನು ಹೆಚ್ಚಿನ ಅವಧಿಗೆ ಮುಂದುವರಿಸಲು ಅವಕಾಶ ಇಲ್ಲ. ನಿಮ್ಮ ಮಗ ಈಗಾಗಲೇ ಅನಿವಾಸಿ ಭಾರತೀಯ ಆಗಿರುವುದರಿಂದ ಖಾತೆ ಮುಂದುವರಿಸುವ ಉದ್ದೇಶ ಹೊಂದಿದ್ದರೆ, ಅವರ ಅನಿವಾಸಿ ಭಾರತೀಯ ಸಾಮಾನ್ಯ ಬ್ಯಾಂಕ್ ಖಾತೆಯಿಂದ (ಎನ್‌ಆರ್‌ಒ ಖಾತೆ) ಹೂಡಿಕೆ ಮಾಡಬೇಕು. ಈ ಬಗ್ಗೆ ಇರುವ ಮಾಹಿತಿಯನ್ನು ಬ್ಯಾ೦ಕಿಗೂ ನೀಡಬೇಕು.
ನನ್ನ ಮೊಬೈಲ್ ಕಳ್ಳತನ ಮಾಡಿ, ಸಾಲ ವಿತರಿಸುವ ಒಂದು ಖಾಸಗಿ ಸಂಸ್ಥೆಯಿಂದ ₹50,000 ಸಾಲವನ್ನು ಯಾರೋ ಅಪರಿಚಿತರು ನನ್ನ ಮೊಬೈಲ್ ಫೋನ್ ಹಾಗೂ ಮೊಬೈಲ್ ಸಂಖ್ಯೆಯನ್ನು ದುರುಪಯೋಗ ಮಾಡಿ ಆ್ಯಪ್ ಮೂಲಕ ಪಡೆದಿದ್ದಾರೆ. ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ. ಆದಾಗ್ಯೂ ಆ ಸಂಸ್ಥೆಯವರು ನನಗೆ ಹಣ ಕಟ್ಟುವಂತೆ ಪೀಡಿಸುತ್ತಿದ್ದಾರೆ ಮತ್ತು ನನ್ನ ಕ್ರೆಡಿಟ್ ಅಂಕವನ್ನು ಸಹ ಕಡಿಮೆ ಮಾಡಿದ್ದಾರೆ. ಈಗ ಕ್ರೆಡಿಟ್ ಅಂಕ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?
ಅಪರಿಚಿತ ವ್ಯಕ್ತಿಗಳು ಯಾರದೇ ಮಾಹಿತಿ ಕಸಿದು ಅಥವಾ ಅನುಮತಿಯಿಲ್ಲದೆ ಅವರ ಸಿಮ್ ಕಾರ್ಡ್‌ನಿಂದ ಡಿಜಿಟಲ್ ವೇದಿಕೆಗಳ ಮೂಲಕ ಸಾಲ ಪಡೆಯುವುದು ಅತ್ಯಂತ ಗಂಭೀರವಾದ ಆರ್ಥಿಕ ಅಪರಾಧ. ಇಂತಹ ಸಮಸ್ಯೆ ಎದುರಿಸುತ್ತಿರುವ ನೀವು ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಹಾಗೂ ಅಪರಿಚಿತರು ನಿಮ್ಮ ಹೆಸರಲ್ಲಿ ಸಾಲ ಪಡೆದು ವಂಚಿಸಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಿಸಿರುವುದು ಸೂಕ್ತ ಕ್ರಮ. ಮಾತ್ರವಲ್ಲ, ಇದು ನೀವು ಕೈಗೊಳ್ಳುವ ಮುಂದಿನ ಕಾನೂನು ಪ್ರಕ್ರಿಯೆಗೆ ಹೆಚ್ಚಿನ ನೆರವು ನೀಡುತ್ತದೆ.
ಈ ಎಫ್‌ಐಆರ್‌ನ ಪ್ರತಿಯನ್ನು, ನಿಮ್ಮ ಗುರುತಿನ ದಾಖಲೆಗಳೊಂದಿಗೆ, ಸಂಬಂಧಿತ ಹಣಕಾಸು ಸಂಸ್ಥೆಗೆ ಕಳುಹಿಸಿ. ಅಪರಿಚಿತರು ನಿಮ್ಮ ಮಾಹಿತಿಯನ್ನು ದುರ್ಬಳಕೆ ಮಾಡಿ ಸಾಲ ಪಡೆದಿರುವ ಬಗ್ಗೆ, ನಿಮ್ಮ ಕೆವೈಸಿ ವಿವರವನ್ನು ಸಂಸ್ಥೆಯವರು ತಪ್ಪಾಗಿ ಪರಿಗಣಿಸಿರುವುದರ ಬಗ್ಗೆ ಮಾಹಿತಿ ನೀಡಿ. ನೀಡಿರುವ ಸಾಲವನ್ನು ನಿಮ್ಮ ಹೆಸರಿನಿಂದ ರದ್ದುಪಡಿಸಲು ಕೋರಿ. ಮಾತ್ರವಲ್ಲ ನಿಮ್ಮ ಕ್ರೆಡಿಟ್ ದಾಖಲೆಗಳಿಂದ ಅಪರಿಚಿತರು ಪಡೆದಿರುವ ಮಾಹಿತಿ ತೆಗೆದುಹಾಕಲು ವಿನಂತಿಸಿ. ಈ ದೂರನ್ನು ಸಂಬಂಧಿತ ಸಂಸ್ಥೆಯ ಗ್ರಾಹಕರ ಅಹವಾಲು ಸ್ವೀಕರಿಸುವ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸಲ್ಲಿಸಿ ಅಥವಾ ಇಮೇಲ್ ಮುಖಾಂತರ ಸಲ್ಲಿಸಿ.
ಸಮಸ್ಯೆಗೆ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ನೀವು ಸಿಬಿಲ್ ವೆಬ್‌ಸೈಟ್‌ನಲ್ಲಿ ಗ್ರಾಹಕರಿಗೆ ಸಂಬಂಧಿಸಿದ ನಿಮ್ಮ ದೂರು ದಾಖಲಿಸಿ. ಮೇಲಾಗಿ ಈಗಾಗಲೇ ಸಲ್ಲಿಸಿರುವ ಮಾಹಿತಿಯನ್ನು ಸಿಬಿಲ್ ಸಂಸ್ಥೆಗೂ ಕಳುಹಿಸಿ. ಸಾಮಾನ್ಯವಾಗಿ ಇಂತಹ ಅಹವಾಲುಗಳಿಗೆ 30 ದಿನದೊಳಗೆ ಪ್ರತ್ಯುತ್ತರ ಅಥವಾ ಕೈಗೊಂಡ ಕ್ರಮದ ಬಗ್ಗೆ ಅವರಿಂದ ಪ್ರತಿಕ್ರಿಯೆ ಅಥವಾ ನಿರ್ಣಯ ಬರಬೇಕು. ಮೊಬೈಲ್ ಆ್ಯಪ್ ಮೂಲಕ ನಕಲಿ ಸಾಲ ನಿಮ್ಮ ಹೆಸರಲ್ಲಿ ದಾಖಲಾಗಿರುವ ಕಾರಣ, ಸಾಲ ಮಂಜೂರು ಮಾಡಿರುವ ಸಂಸ್ಥೆ ಎನ್‌ಬಿಎಫ್‌ಸಿ ಆಗಿದೆಯೇ ಅಥವಾ ಇನ್ನಾವುದೋ ಸಂಸ್ಥೆಯೊಡನೆ ಸಹಭಾಗಿತ್ವದ ಆಧಾರದಲ್ಲಿ ಸಾಲ ವಿತರಣೆ ಆಗಿದೆಯೆ ಎಂಬ ಬಗ್ಗೆ ಮಾಹಿತಿ ಪಡೆದು, ಭಾರತೀಯ ರಿಸರ್ವ್ ಬ್ಯಾಂಕ್‌ನ ದೂರು ನಿರ್ವಹಣಾ ವ್ಯವಸ್ಥೆಯ (https://cms.rbi.org.in) ಮೂಲಕವೂ ದೂರು ದಾಖಲಿಸಬಹುದು.
ಇನ್ನೂ ಹೆಚ್ಚಿನ ಕಾನೂನು ಅವಕಾಶಗಳು ನಿಮಗಿರಬಹುದು. ಅದಕ್ಕಾಗಿ ಈ ವಿಚಾರವಾಗಿ ನುರಿತ ವಕೀಲರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಇನ್ನು ನಿಮ್ಮ ಹೆಸರಲ್ಲಿ ಅಕ್ರಮವಾಗಿ ಪಡೆದ ಸಾಲ ವಾಪಸಿಗೆ ಸಂಬಂಧಿಸಿ ಬಲವಂತದ ಬಡ್ಡಿ ವಸೂಲಿ ಅಥವಾ ಬೆದರಿಕೆ ಇತ್ಯಾದಿ ಬಂದರೆ, ವಕೀಲರ ಸಲಹೆಯ ಮೇರೆಗೆ ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾದೀತು. ಈ ಎಲ್ಲ ಪ್ರಕ್ರಿಯೆಯಲ್ಲಿ ನಿಮ್ಮ ಎಲ್ಲ ದಾಖಲೆಗಳು ಹಾಗೂ ಸಂಪರ್ಕಗಳ ನಿಖರ ಮಾಹಿತಿ ಇಟ್ಟುಕೊಳ್ಳುವುದು ಅವಶ್ಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.