ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶ್ನೋತ್ತರ | ತಂದೆ ಖಾತೆಗೆ ಜಮೆ ಮಾಡುವ ಹಣಕ್ಕೆ ತೆರಿಗೆ ಅನ್ವಯಿಸುತ್ತದೆಯೇ?

Published 20 ಆಗಸ್ಟ್ 2024, 23:35 IST
Last Updated 20 ಆಗಸ್ಟ್ 2024, 23:35 IST
ಅಕ್ಷರ ಗಾತ್ರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.

ಇ–ಮೇಲ್‌: businessdesk@prajavani.co.in

ಪ್ರದೀಪ, ದಾವಣಗೆರೆ

ಪ್ರ

ನಾನು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆದಾಯ ತೆರಿಗೆ ಪಾವತಿಸುತ್ತಿದ್ದೇನೆ. ಸ್ವಂತ ಊರಿನಲ್ಲಿ ಹೊಸ ಮನೆ ಕಟ್ಟಿಸುತ್ತಿದ್ದೇನೆ. ನನ್ನ ವೇತನದಲ್ಲಿ ಉಳಿತಾಯದ ಹಣವನ್ನು ಮನೆ ನಿರ್ಮಾಣಕ್ಕಾಗಿ ನನ್ನ ತಂದೆಯ ಖಾತೆಗೆ ವರ್ಗಾಹಿಸುತ್ತಿದ್ದೇನೆ. ಅವರು ಕೃಷಿಕರಾಗಿದ್ದಾರೆ. ಅವರ ಖಾತೆಗೆ ನಾನು ಜಮೆ ಮಾಡುವ ಹಣಕ್ಕೆ ತೆರಿಗೆ ಅನ್ವಯಸುತ್ತದೆಯೇ? ನಾನು ಹೀಗೆ ವರ್ಗಾಯಿಸುವುದರಿಂದ ಯಾವುದಾದರೂ ಸಮಸ್ಯೆ ಇದೆಯೇ? ಈ ವರ್ಗಾವಣೆಯನ್ನು ನಮ್ಮ ಮನೆಯ ನಿರ್ಮಾಣಕ್ಕೋಸ್ಕರ ಹೇಗೆ ನಿರ್ವಹಿಸಬಹುದು? ಈ ಬಗ್ಗೆ ಮಾಹಿತಿ ನೀಡಿ

ಈಗಾಗಲೇ ನೀವು ತೆರಿಗೆ ಪಾವತಿಸುತ್ತಿರುವ ಬಗ್ಗೆ ಹೇಳಿದ್ದೀರಿ. ನಿಮ್ಮ ತಂದೆಯವರು ಕೃಷಿ ಆದಾಯ ಹೊಂದಿರುವ ಬಗ್ಗೆ ತಿಳಿಸಿದ್ದೀರಿ. ಊರಿನಲ್ಲಿ ಮನೆ ನಿರ್ಮಿಸುವುದು ನಿಮ್ಮ ಉದ್ದೇಶವಾಗಿದೆ. ಪ್ರಶ್ನೆಯಲ್ಲಿ ಹೇಳಿರುವಂತೆ ನಿಮ್ಮ ಗಳಿಕೆಯಲ್ಲಿ ಉಳಿದ ಒಂದಷ್ಟು ಮೊತ್ತವನ್ನು ಮನೆ ನಿರ್ಮಾಣದ ಉದ್ದೇಶಕ್ಕಾಗಿ ಉಪಯೋಗಿಸುತ್ತಿದ್ದೀರಿ. ಈ ಮೊತ್ತವು ನಿಮ್ಮ ತೆರಿಗೆ ಆದಾಯದ ಭಾಗವೇ ಆಗಿದೆ. ಇದಕ್ಕೆ ಅನ್ವಯವಾಗುವ ತೆರಿಗೆಯನ್ನು ನೀವು ಈಗಾಗಲೇ ಕಟ್ಟಿರುತ್ತೀರಿ.

ಇಲ್ಲಿರುವ ಪ್ರಶ್ನೆ ಎಂದರೆ ಯಾವ ರೀತಿ ನೀವು ಈ ಮೊತ್ತವನ್ನು ನೈಜ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕು ಎಂಬುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ನೀವು ಈ ಕೆಳಗಿನ ಆಯ್ಕೆಗಳಲ್ಲಿ ಸೂಕ್ತ ಹಾಗೂ ವ್ಯಾವಹಾರಿಕವಾಗಿ ನಿಮಗೆ ಸಾಧ್ಯವಾಗುವ ರೀತಿಯಲ್ಲಿ ಅಳವಡಿಸಿಕೊಳ್ಳಬಹುದು.

ಯಾವುದೇ ಹಣದ ವರ್ಗಾವಣೆಯು ತಮ್ಮ ಸಮೀಪದ ಬಂಧುಗಳ ನಡುವೆ ನಡೆದರೆ ಅಂತಹ ವರ್ಗಾವಣೆಯು ಕೆಲವು ರಿಯಾಯಿತಿಗೆ ಒಳಪಡುತ್ತದೆ. ಅರ್ಥಾತ್ ಆ ಮೊತ್ತವನ್ನು ತೆರಿಗೆಗೆ ಒಳಪಡಿಸಲಾಗುವುದಿಲ್ಲ. ಆದರೆ, ಇದಕ್ಕೆ ಸೂಕ್ತ ವರ್ಗಾವಣೆಯ ‘ಗಿಫ್ಟ್ ಡೀಡ್’ ಹೊಂದಬೇಕಿದೆ. ಮುಂದಿನ ಆರ್ಥಿಕ ವ್ಯವಹಾರಗಳ ಪಾರದರ್ಶಕತೆಯ ದೃಷ್ಟಿಯಿಂದ ಇದು ಅತ್ಯಗತ್ಯವಾಗಿದೆ. ಇದಕ್ಕೆ ಯಾವುದೇ ಆರ್ಥಿಕ ಮಿತಿ ಇಲ್ಲ.  

ನಿಮ್ಮ ಊರಿನಲ್ಲಿ ತಂದೆಯವರ ಹೆಸರಿನಲ್ಲಿ ಈಗಾಗಲೇ ಒಂದು ಬ್ಯಾಂಕ್‌ ಖಾತೆಯಿದೆ. ಈ ಖಾತೆಗೆ ನಿಮ್ಮ ಹೆಸರನ್ನು ಸೇರಿಸಿ ಅಥವಾ ನಿಮ್ಮ ಹೆಸರಲ್ಲಿ (ಪ್ರಾಥಮಿಕ ಖಾತೆದಾರರಾಗಿ) ಒಂದು ಖಾತೆ ತೆರೆದು ಆ ಖಾತೆಗೆ ನಿಮ್ಮ ತಂದೆಯ ಹೆಸರನ್ನು ಸೇರಿಸಿ ಜಂಟಿ ಖಾತೆ ತೆರೆಯಿರಿ. ಅದರಲ್ಲಿ ನಿಮ್ಮಿಬ್ಬರಲ್ಲಿ ಯಾರೇ ಆದರೂ ವೈಯಕ್ತಿಕವಾಗಿ ಪಾವತಿ ವ್ಯವಹಾರ ಮಾಡುವ ಅವಕಾಶ ಕೊಡುವಂತೆ ಬ್ಯಾಂಕ್ ಖಾತೆ ತೆರೆಯುವಾಗ ಸೂಚಿಸಿ. ನೀವು ಪ್ರತಿ ಬಾರಿ ಹಣ ಕಳುಹಿಸುವಾಗ ನಿಮ್ಮ ಹೆಸರಲ್ಲಿ ಜಂಟಿ ಖಾತೆಗೆ ಹಣ ವರ್ಗಾಯಿಸಿ.

ನಿಮ್ಮ ಆದಾಯವು ಈಗಾಗಲೇ ಘೋಷಣೆ ಆಗಿದೆ. ಹಾಗಾಗಿ, ಒಂದು ಖಾತೆಯಿಂದ ಇನ್ನೊಂದು ಖಾತೆಗೆ ನಿಮ್ಮ ಹಣವನ್ನು ನಿಮ್ಮ ಅನುಕೂಲಕ್ಕೆ ವರ್ಗಾಯಿಸುವುದರಿಂದ ತೆರಿಗೆ ವಿಚಾರ ಉದ್ಭವಿಸುವುದಿಲ್ಲ. ಖಾತೆಗೆ ನಿಮ್ಮ ತಂದೆಯವರೂ ಅಧಿಕೃತ ಸಹಿದಾರರಾಗುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಅಗತ್ಯವಿದ್ದಾಗ ಮೊತ್ತ ಹಿಂಪಡೆದು ಪಾವತಿ ಮಾಡಬಹುದು.  

ಕೊನೆಯ ಅವಕಾಶವಾಗಿ ನೀವು ವರ್ಗಾಯಿಸುವ ಮೊತ್ತವನ್ನು ಸಾಲ ಎಂದು ದಾಖಲಿಸಿ ಹಣವನ್ನು ವರ್ಗಾಯಿಸಿಕೊಳ್ಳಬಹುದಾಗಿದೆ.

ಅಶ್ವಿನಿ ಬಿ.ಎನ್., ಊರು ಹೆಸರಿಸಿಲ್ಲ.

ಪ್ರ

ತುಮಕೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ನನಗೆ ಒಂದು ಎಕರೆ ಭೂಮಿ ಇದೆ. ಪ್ರಸ್ತುತ ಈ ಭೂಮಿಯನ್ನು ಮಾರಾಟ ಮಾಡುವ ಹಂತದಲ್ಲಿದ್ದೇನೆ. ಈ ಭೂಮಿಯ ಗೈಡೆನ್ಸ್ ಮೌಲ್ಯ ₹4 ಲಕ್ಷ. ನನ್ನ ಪ್ರಶ್ನೆ ಏನೆಂದರೆ ಈ ಮೌಲ್ಯಕ್ಕಿಂತ ಅಧಿಕ ಮೊತ್ತಕ್ಕೆ ಭೂಮಿ ಮಾರಾಟ ಮಾಡುವ ಸಂದರ್ಭದಲ್ಲಿ ವರ್ಗಾವಣೆ ದಾಖಲೆಗಳಲ್ಲಿ ಮೌಲ್ಯವನ್ನು ನಮೂದಿಸಬಹುದೇ? ಖರೀದಿದಾರರು ತಾವು ಪಾವತಿಸುವ ಮೊತ್ತವನ್ನು ಬ್ಯಾ೦ಕ್‌ ಮೂಲಕ ಆರ್‌ಟಿಜಿಎಸ್ ಮಾಡುವ ಬಗ್ಗೆ ಒಪ್ಪಿರುತ್ತಾರೆ. ಈ ರೀತಿ ವರ್ಗಾಯಿಸುವುದು ಸುರಕ್ಷಿತವೇ? ಈ ಬಗ್ಗೆ ಮಾಹಿತಿ ನೀಡಿ.

ಯಾವುದೇ ಭೂಮಿಯನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಮುದ್ರಾಂಕ ಶುಲ್ಕದ ತೀರ್ಮಾನಕ್ಕೆ ಭೂಮಿಯ ಕನಿಷ್ಠ ಮೌಲ್ಯವನ್ನು ಸರ್ಕಾರ ನಿರ್ಧರಿಸಿ ಸುತ್ತೋಲೆ ಹೊರಡಿಸುತ್ತದೆ. ಇದು ತಮಗೆ ಗೊತ್ತಿರಬಹುದಾದ ವಿಚಾರವಾಗಿದೆ. ಆದರೆ, ಈ ಮೌಲ್ಯಕ್ಕಿಂತ ಹೆಚ್ಚಿನ ಮೊತ್ತಕ್ಕೆ ಕೊಂಡುಕೊಳ್ಳುವವರ ನಡುವೆ ಆರ್ಥಿಕ ಮೌಲ್ಯ ನಿರ್ಧಾರವಾಗಿದ್ದರೆ ಅದಕ್ಕೆ ಯಾರೂ ಅಡ್ಡಿ ಬರಲು ಸಾಧ್ಯವಿಲ್ಲ.

ಕೊಂಡುಕೊಳ್ಳುವವರ ನಡುವಿನ ವ್ಯವಹಾರದಲ್ಲಿ ಆಸ್ತಿಯ ಮೇಲಿನ ಮೌಲ್ಯ ನಿರ್ಧಾರವಾಗುತ್ತದೆ. ಹೀಗಾಗಿ, ನಿಮ್ಮ ಭೂಮಿಯ ಮಾರಾಟ ಮೊತ್ತವನ್ನು ಗೈಡೆನ್ಸ್ ಮೌಲ್ಯ ₹4 ಲಕ್ಷ ಮೀರಿಯೂ ನಿಗದಿ ಮಾಡಬಹುದು. ಆದರೆ, ಅದಕ್ಕೆ ಸಂಬಂಧಿಸಿ ಮುದ್ರಾ೦ಕ ಶುಲ್ಕವನ್ನು, ಭೂಮಿ ಖರೀದಿಸುವವರು ಪಾವತಿಸುವುದಕ್ಕೆ ತಯಾರಿರಬೇಕು. ಅದೇ ರೀತಿ ಬಂಡವಾಳ ಗಳಿಕೆ ಮೇಲಿನ ತೆರಿಗೆ ಅನ್ವಯಿಸುವುದೇ ಆಗಿದ್ದಲ್ಲಿ ಮುಂದೆ ಮಾರಾಟದ ಸಮಯದಲ್ಲಿ ಕೊಂಡುಕೊಂಡವರು ಅದನ್ನು ಅಸಲು ಎಂದು ಪರಿಗಣಿಸುವುದಕ್ಕೂ ಅವಕಾಶ ಇದೆ.

ಹಳ್ಳಿ ಪ್ರದೇಶದ ಯಾವುದೇ ಕೃಷಿ ಭೂಮಿಯನ್ನು ವರ್ಗಾವಣೆ ಮಾಡಿದಾಗ ಬಂಡವಾಳ ಗಳಿಕೆ ಮೇಲಿನ ತೆರಿಗೆ ಇರುವುದಿಲ್ಲ. ಆದರೆ, ಆ ಭೂಮಿಯನ್ನು ಕೃಷಿಗಾಗಿ ಉಪಯೋಗಿಸಲಾಗುತ್ತದೆಯೇ ಎಂಬುದನ್ನು ಖಾತರಿಪಡಿಸುವ ದಾಖಲೆಗಳನ್ನು ಹೊಂದಿರಬೇಕಿದೆ.

ಇನ್ನು ಹಣ ವರ್ಗಾವಣೆಗೆ ಸಂಬಂಧಿಸಿ ನೀವು ಆರ್‌ಟಿಜಿಎಸ್ ಮೂಲಕ ಭೂಮಿಯ ಮೌಲ್ಯವನ್ನು ಪಡೆಯಬಹುದು. ಇದು ಸಹಜ ಪಾವತಿ ಪದ್ಧತಿಯಾಗಿದೆ. ಹೀಗಾಗಿ, ವರ್ಗಾವಣೆಯ ಸಮಯದಲ್ಲಿ ನಿಮ್ಮ ಖಾತೆಗೆ ಮೊತ್ತ ಜಮೆ ಆಗಿರುವ ಬಗ್ಗೆ ಬ್ಯಾಂಕ್‌ನಲ್ಲಿ ವಿಚಾರಿಸಿ ಖಚಿತಪಡಿಸಿಕೊಳ್ಳಬೇಕು. ಪರ್ಯಾಯವಾಗಿ ನೀವು ಡಿ.ಡಿ ಮೂಲಕವೂ ಹಣ ಪಡೆಯಬಹುದು. ನಿಮ್ಮ ಅನುಕೂಲಕರ ಬ್ಯಾಂಕ್ ಖಾತೆಗೆ ಅದನ್ನು ಜಮೆ ಮಾಡಬಹುದು. ಈ ಬಗ್ಗೆ ಮಾಹಿತಿಯನ್ನು ನಿಮ್ಮ ವರ್ಗಾವಣೆ ದಾಖಲೆಗಳಲ್ಲಿ ಸೇರಿಸಿಕೊಳ್ಳಿ. ಅಗತ್ಯ ಕಂಡುಬಂದರೆ ಹೆಚ್ಚುವರಿ ಮಾರ್ಗದರ್ಶನಕ್ಕಾಗಿ ನುರಿತ ವಕೀಲರಿಂದಲೂ ಸಲಹೆ ಪಡೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT