ಗೋವಿಂದರಾಜ್, ಬೆಂಗಳೂರು
ಪ್ರಶ್ನೆ: ನಾನು ಮ್ಯೂಚುವಲ್ ಫಂಡ್ ಹೂಡಿಕೆದಾರ. ಕೆಲವು ವರ್ಷಗಳ ಉಳಿತಾಯದಿಂದ ಹೂಡಿಕೆ ಮಾಡಿ ನನ್ನ ಒಟ್ಟಾರೆ ಹೂಡಿಕೆಯನ್ನು ಹೆಚ್ಚಿಸಿದ್ದೇನೆ. ಈಗ ನನ್ನ ಪೋರ್ಟ್‌ಫೋಲಿಯೊ ಸುಮಾರು ಶೇಕಡ 12ರ ವಾರ್ಷಿಕ ಬೆಳವಣಿಗೆ ದರ ತೋರಿಸುತ್ತಿದೆ. ಇತ್ತೀಚೆಗೆ ಷೇರು ಮಾರುಕಟ್ಟೆ ಏರುತ್ತಾ ಸಾಗಿದೆ. ಒಂದು ವೇಳೆ ಹಠಾತ್ ಆಗಿ ಮಾರುಕಟ್ಟೆ ಕೆಳಮುಖ ಚಲಿಸಿದರೆ ಏನು ಮಾಡುವುದು ಎಂಬ ಆತಂಕ ಇದೆ. ಬ್ಯಾಲೆನ್ಸ್ಡ್ ಫಂಡ್, ಅಡ್ವಾಂಟೇಜ್ ಫಂಡ್ ಇತ್ಯಾದಿ ಫಂಡ್‌ಗಳು ಈಕ್ವಿಟಿ ಫಂಡ್‌ಗಳಿಗಿಂತ ಉತ್ತಮವೇ? ಬಂದ ಲಾಭವು ಇಲ್ಲವಾಗದಂತೆ ಹೂಡಿಕೆ ನಿಭಾಯಿಸುವುದು ಹೇಗೆ?
ಉತ್ತರ: ಮ್ಯೂಚುವಲ್ ಫಂಡ್‌ಗಳು ದೀರ್ಘಾವಧಿಯಲ್ಲಿ ಉತ್ತಮ ಹೂಡಿಕೆ ಉತ್ಪನ್ನಗಳು. ಏರುಗತಿಯಲ್ಲಿರುವ ಮಾರುಕಟ್ಟೆ, ಹೂಡಿಕೆ ಮಾಡಿದ ಫಂಡ್‌ಗಳ ಗುಣಮಟ್ಟ, ಅಂತಹ ಫಂಡ್‌ಗಳಿಗೆ ಆಧಾರವಾಗಿರುವ ಷೇರುಗಳ ಪ್ರಸ್ತುತ ಮೌಲ್ಯ ಹಾಗೂ ಆಯ್ಕೆ ಮಾಡಿದ ಫಂಡ್‌ಗಳ ಧ್ಯೇಯೋದ್ದೇಶಗಳ ಆಧಾರದ ಮೇಲೆ ನಮಗೆ ಬರುವ ಲಾಭ-ನಷ್ಟ ನಿರ್ಧಾರವಾಗುತ್ತದೆ. ಗಳಿಸಿದ ಲಾಭವು ಕಳೆದುಹೋಗಬಾರದು ಎಂಬುದು ಎಲ್ಲ ಹೂಡಿಕೆದಾರರ ಸಹಜ ಆಕಾಂಕ್ಷೆ. ನೀವು ಉಲ್ಲೇಖಿಸಿರುವ ಈಕ್ವಿಟಿ ಫಂಡ್, ಬ್ಯಾಲೆನ್ಸ್ಡ್ ಫಂಡ್, ಅಡ್ವಾಂಟೇಜ್ ಫಂಡ್ ಇತ್ಯಾದಿಗಳು ವಿಭಿನ್ನ ಹೂಡಿಕೆ ಮಾರ್ಗ ಅನುಸರಿಸುತ್ತವೆ.
ಈಕ್ವಿಟಿ ಫಂಡ್: ಈಕ್ವಿಟಿ ಫಂಡ್‌ಗಳು ತಮ್ಮ ಹೆಚ್ಚಿನ ಮೊತ್ತವನ್ನು ಷೇರುಗಳಲ್ಲೇ ಹೂಡಿಕೆ ಮಾಡುತ್ತವೆ. ಪ್ರಸ್ತುತ ನಿಯಮಗಳ ಪ್ರಕಾರ, ಈಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳು ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಕನಿಷ್ಠ ಶೇಕಡ 65ರಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು. ಅಂದರೆ, ಷೇರುಪೇಟೆ ಏರುಗತಿಯಲ್ಲಿ ಇರುವ ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಇದು ಅಧಿಕ ಲಾಭ ನೀಡುತ್ತದೆ.
ಬ್ಯಾಲೆನ್ಸ್ಡ್ ಫಂಡ್: ಇಲ್ಲಿ ಹಣವನ್ನು ಈಕ್ವಿಟಿ ಮತ್ತು ಸಾಲಪತ್ರಗಳಲ್ಲಿ ಬಹುತೇಕ ಸಮ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗುತ್ತದೆ. ಉದಾಹರಣೆಗೆ, ಗರಿಷ್ಠ ಶೇ 60ರಷ್ಟು ಮೊತ್ತವನ್ನು ಈಕ್ವಿಟಿಗಳಲ್ಲಿ, ಇನ್ನುಳಿದ ಮೊತ್ತವನ್ನು ಸಾಲಪತ್ರಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಮಾರುಕಟ್ಟೆಗಳು ಗರಿಷ್ಠ ಮಟ್ಟವನ್ನು ತಲುಪಿದಾಗ ಅಥವಾ ಅತಿ ದುಬಾರಿ ಆದಾಗ, ಸಂಭವನೀಯ ಅಪಾಯ ತಡೆಯಲು ಒಂದಿಷ್ಟು ಮೊತ್ತವನ್ನು ಈಕ್ವಿಟಿಗಳಿಂದ ತೆಗೆದು ನಿಗದಿತ ಸಾಲಪತ್ರಗಳಿಗೆ ವರ್ಗಾಯಿಸಲಾಗುತ್ತದೆ. ಬಂಡವಾಳದ ಮೇಲಿನ ಲಾಭವನ್ನು ಹಾಗೆಯೇ ಇರಿಸಿ, ಸ್ಥಿರ ಆದಾಯ ಪಡೆಯುವ ಕೆಲಸವನ್ನೂ ಮಾಡಲಾಗುತ್ತದೆ. ಇದು ಹೂಡಿಕೆದಾರರಿಗೆ ಆಗುವ ಲಾಭ-ನಷ್ಟದಲ್ಲಿ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಇವು ಈಕ್ವಿಟಿ ಫಂಡ್‌ಗಳಷ್ಟು ತ್ವರಿತವಾಗಿ ಮಾರುಕಟ್ಟೆಯ ಏರಿಳಿತಗಳಿಗೆ ಸ್ಪಂದಿಸುವುದಿಲ್ಲ.
ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್: ಇವು ಬ್ಯಾಲೆನ್ಸ್ಡ್ ಫಂಡ್‌ಗಳಂತೆಯೇ ಈಕ್ವಿಟಿ ಮತ್ತು ಸಾಲಪತ್ರಗಳಲ್ಲಿ ಹೂಡಿಕೆ ಮಾಡುತ್ತವೆ. ಆದರೆ ಇಲ್ಲಿ, ಮಾರುಕಟ್ಟೆ ಏರಿಳಿತದ ಸಂದರ್ಭಕ್ಕೆ ತಕ್ಕಂತೆ ಆಂತರಿಕವಾಗಿ ಹೂಡಿಕೆ ಹಣದ ಹಂಚಿಕೆ ವಿಚಾರವಾಗಿ ಯಾವುದೇ ಮಿತಿ ಇಲ್ಲದೆ ಮ್ಯೂಚುವಲ್ ಫಂಡ್ ನಿರ್ವಾಹಕರು ಸಮಯೋಚಿತ ನಿರ್ಧಾರ ಕೈಗೊಳ್ಳುತ್ತಾರೆ. ಅಂದರೆ ಮಾರುಕಟ್ಟೆ ಮೌಲ್ಯ ಹೆಚ್ಚಿರುವಾಗ ಈಕ್ವಿಟಿ ವಿಭಾಗಕ್ಕೆ ಹಂಚಿಕೆ ಕಡಿಮೆ ಮಾಡಲಾಗುತ್ತದೆ ಮತ್ತು ಮೌಲ್ಯ ಕಡಿಮೆಯಾದಾಗ ಪುನಃ ಈಕ್ವಿಟಿ ಹೂಡಿಕೆಯನ್ನು ಹೆಚ್ಚಿಸಲಾಗುತ್ತದೆ. ಪ್ರಸ್ತುತ ನಿಮ್ಮ ಪ್ರಶ್ನೆಯಲ್ಲಿ ನೀವು ಯಾವ ವರ್ಗದ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡಿದ್ದೀರಿ ಎಂಬುದನ್ನು ತಿಳಿಸಿಲ್ಲ. ನಿಮ್ಮ ಆರ್ಥಿಕ ಅಪಾಯ ತಡೆಯುವ ಸಾಮರ್ಥ್ಯಕ್ಕೆ ಸರಿಯಾಗಿ ನಿಮ್ಮ ಹೂಡಿಕೆಗಳನ್ನು ಬದಲಾಯಿಸಿಕೊಳ್ಳಿ.
***
ಚಂದ್ರಶೇಖರ್ ಕೆ.ಎನ್., ಊರು ತಿಳಿಸಿಲ್ಲ
ಪ್ರಶ್ನೆ: ನನ್ನ ವಯಸ್ಸು 67 ವರ್ಷ. ಕೇಂದ್ರ ಸರ್ಕಾರದ ಪಿಂಚಣಿದಾರ. ಆರ್ಥಿಕ ವರ್ಷ 2022-23ರಲ್ಲಿ ನನ್ನ ಪಿಂಚಣಿ ಆದಾಯ ₹4,68,000 ಮತ್ತು ಬಡ್ಡಿ ಆದಾಯ ₹2,56,000. ಹಿರಿಯ ನಾಗರಿಕರ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಿರುವ ಮೊತ್ತ ₹1,50,000. ಹಳೆಯ ಯೋಜನೆ ಮತ್ತು ಹೊಸ ಯೋಜನೆಯ ಅಡಿ ಆದಾಯ ತೆರಿಗೆ ಹೊಣೆಗಾರಿಕೆಯ ಬಗ್ಗೆ ದಯವಿಟ್ಟು ಸಲಹೆ ನೀಡಿ.
ಉತ್ತರ: ನೀವು ಹಿರಿಯ ನಾಗರಿಕ. ಪಿಂಚಣಿ ಹಾಗೂ ಬಡ್ಡಿ ಮೂಲಗಳಿಂದ ಆದಾಯ ಗಳಿಸುತ್ತಿದ್ದೀರಿ. ಹಿರಿಯ ನಾಗರಿಕರ ಉಳಿತಾಯ ಖಾತೆಯಲ್ಲಿ ಕೂಡ ನೀವು ಹಣ ತೊಡಗಿಸಿದ್ದೀರಿ. ಪ್ರಶ್ನೆಯಲ್ಲಿ ತಿಳಿಸಿದಂತೆ ನಿಮ್ಮ ಒಟ್ಟು ಆದಾಯ ₹7.24 ಲಕ್ಷ. ನಿಮ್ಮ ಪಿಂಚಣಿ ಆದಾಯ ಹಾಗೂ ಬಡ್ಡಿ ಆದಾಯ ಇವೆರಡೂ ತೆರಿಗೆಗೊಳಪಡುವ ಆದಾಯಗಳು. ಆರ್ಥಿಕ ವರ್ಷ 2022-23ಕ್ಕೆ ಸಂಬಂಧಿಸಿದಂತೆ, ನೀವು ಹಳೆ ತೆರಿಗೆ ಪದ್ದತಿ ಅನುಸರಿಸಿದರೆ ಪಿಂಚಣಿ ಮೊತ್ತದ ಮೇಲೆ ಸ್ಟ್ಯಾಂಡರ್ಡ್ ಡಿಡಕ್ಷನ್ ₹50,000, ಸೆಕ್ಷನ್ 80 ಸಿ ಅಡಿ ₹1.50 ಲಕ್ಷ ಹಾಗೂ ಹಿರಿಯ ನಾಗರಿಕರು ಗಳಿಸುವ ಬಡ್ಡಿಗೆ ಸಿಗುವ ₹50,000ದ ವಿನಾಯಿತಿ ಸಿಗುತ್ತದೆ . ಒಟ್ಟು ₹2.50 ಲಕ್ಷಕ್ಕೆ ವಿನಾಯಿತಿ ಇದೆ. ಉಳಿಯುವ ಮೊತ್ತ ₹4.74 ಲಕ್ಷ. ನಿಮ್ಮ ಮೂಲ ತೆರಿಗೆ ಆದಾಯ ವಿನಾಯಿತಿ ಮಿತಿ ₹3 ಲಕ್ಷವಾದರೂ, ಸೆಕ್ಷನ್ 87ಎ ಅಡಿ ತೆರಿಗೆ ರಿಬೇಟ್ ಇರುವ ಕಾರಣ ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ. ಹೊಸ ಪದ್ದತಿಯಡಿ ಯಾವುದೇ ಹೂಡಿಕೆಗೆ ಹಾಗೂ ಬಡ್ಡಿ ಆದಾಯಕ್ಕೆ ವಿನಾಯಿತಿ ಇಲ್ಲದ ಕಾರಣ ಸಂಪೂರ್ಣ ಆದಾಯಕ್ಕೆ ತೆರಿಗೆ ಅನ್ವಯವಾಗುತ್ತದೆ. ಹೀಗಾಗಿ ಆರ್ಥಿಕ ವರ್ಷ 2022-23ಕ್ಕೆ ಸಂಬಂಧಿಸಿ ಹಳೆ ತೆರಿಗೆ ಪದ್ದತಿ ಸೂಕ್ತ.
ಇನ್ನು ಮುಂದಿನ ವರ್ಷ ನಿಮ್ಮ ಆದಾಯ ಇದೇ ಮಿತಿಯೊಳಗಿದ್ದರೆ, ಹೊಸ ತೆರಿಗೆ ಪದ್ದತಿ ಸೂಕ್ತ. ಕಾರಣ ಪಿಂಚಣಿಯ ಮೇಲೆ ₹50,000 ಸ್ಟ್ಯಾಂಡರ್ಡ್ ಡಿಡಕ್ಷನ್ ಪಡೆಯುವುದಕ್ಕೆ ಅನುವು ಮಾಡಲಾಗಿದೆ. ಹಾಗೂ ಹೊಸ ಪದ್ದತಿ ಅನುಸರಿಸುವವರಿಗೆ ಅನುಕೂಲವಾಗಲೆಂದು, ಸೆಕ್ಷನ್ 87ಎ ಅಡಿ ತೆರಿಗೆಗೊಳಪಡುವ ಆದಾಯ ₹7 ಲಕ್ಷದ ತನಕ ಇದ್ದರೆ, ಪೂರ್ಣ ತೆರಿಗೆಗೆ ರಿಬೇಟ್ ಕೂಡಾ ಸಿಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.