ಹಣಕಾಸು, ವಿಮೆ, ಹೂಡಿಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ತಜ್ಞರು ಇಲ್ಲಿ ಉತ್ತರ ನೀಡಿದ್ದಾರೆ

ಪ್ರಶ್ನೆ: ನಾನು ಕಳೆದ ಕೆಲವು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದೇನೆ, ಇತ್ತೀಚೆಗೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದೇನೆ. ನಾನು ಐ.ಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನನಗೆ ಕಾರ್ಪೊರೇಟ್ ವಿಮೆ ಇದೆ. ಆದ್ದರಿಂದ ಕಸಿ ವೆಚ್ಚದಲ್ಲಿ ಹೆಚ್ಚಿನ ಪಾಲನ್ನು ವಿಮೆಯಿಂದ ಭರಿಸಲಾಗಿದೆ.

ನನಗಿರುವಂತಹ ದೀರ್ಘಕಾಲದ ಕಾಯಿಲೆ ಇರುವ ಇತರ ರೋಗಿಗಳು ರಿಟೇಲ್ ವಿಮೆ ಖರೀದಿಸಬಹುದೇ? ಹಾಗಿದ್ದಲ್ಲಿ ಯಾವುದು ಸೂಕ್ತ? ಈ ಬಗ್ಗೆ ನಾನು ಆನ್ಲೈನ್ನಲ್ಲಿ ಪರಿಶೀಲಿಸಿದಾಗ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಯಾವುದೇ ವಿಮಾ ಕಂಪನಿಯು ಈ ರೀತಿಯ ಕಾಯಿಲೆಗಳಿಗೆ ವಿಮೆಯನ್ನು ಒದಗಿಸುತ್ತಿದ್ದರೆ ಪ್ರಸ್ತುತ ಅಸ್ತಿತ್ವದಲ್ಲಿರುವ ಕಾಯಿಲೆಗಳಿಗೆ ಕವರ್ ನೀಡಲಾಗುತ್ತದೆಯೇ? ಇಲ್ಲದಿದ್ದರೆ ಅದಕ್ಕಾಗಿ ಕಾಯುವ ಅವಧಿ ಎಷ್ಟು? – ವೀರೇಶ್, ಊರು ತಿಳಿಸಿಲ್ಲ

ಉತ್ತರ: ವಿಮಾ ಸೌಲಭ್ಯ ಅತ್ಯಂತ ಸೂಕ್ಷ್ಮ ವಿಚಾರ. ವಿಮಾ ಕಂಪನಿಗಳು ಸೇವೆಯ ಜೊತೆ ವ್ಯವಹಾರವನ್ನೂ ಮಾಡಬೇಕು. ಆದರೆ, ವಿಮೆ ಪಡೆಯುವ ವ್ಯಕ್ತಿಗೆ ತಾನು ಅಥವಾ ತನ್ನ ಕುಟುಂಬದ ಮಂದಿ ಕಾಯಿಲೆ ಬಿದ್ದರೆ, ವಿಮೆ ಒದಗಿಸುವ ಕಂಪನಿ ಕನಿಷ್ಠ ಆರ್ಥಿಕ ನೆರವು ಕೊಡಮಾಡಬಹುದೇ ಎನ್ನುವ ವಿಚಾರ ಹಾಗೂ ಭರವಸೆಯಷ್ಟೇ ಮುಖ್ಯ.

ನೀವು ಈಗಾಗಲೇ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಿದ್ದೀರಿ ಹಾಗೂ ಪ್ರಸ್ತುತ ನಿಮ್ಮ ಕಂಪನಿಯವರು ಕೊಡಮಾಡುವ ವಿಮಾ ಸೌಲಭ್ಯದೊಡನೆ ಈ ಹಂತದ ನಂತರ, ನಿಮ್ಮ ಕಡೆಯಿಂದ ಕಂಪನಿಯ ಮೂಲಕ ಹೆಚ್ಚುವರಿ ಮೊತ್ತ ಪಾವತಿಸಿ ಅಗತ್ಯವಿರುವ ವಿಮಾ ಸೌಲಭ್ಯ ಪಡೆಯುವ ಅವಕಾಶ ಇದೆಯೇ ಎಂಬುದನ್ನು ನೋಡಿ. ಒಂದುವೇಳೆ ಈ ಸೌಲಭ್ಯ ಇದ್ದರೆ ಅದನ್ನು ಉಪಯೋಗಿಸಿಕೊಳ್ಳಬಹುದು. ನೀವು ಕಂಪನಿ ತೊರೆದ ನಂತರವೂ ಅದನ್ನು ವೈಯಕ್ತಿಕವಾಗಿ ಮುಂದುವರಿಸುವ ಅವಕಾಶ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ, ಪ್ರಸ್ತುತ ನಿಮ್ಮ ವಿಮಾ ಕಂಪನಿ ಅಥವಾ ನೀವು ಉದ್ಯೋಗ ಮಾಡುತ್ತಿರುವ ಕಂಪನಿಯ ಸಂಬಂಧಿತ ವಿಭಾಗವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.

ಒಂದು ವೇಳೆ ಈ ಅವಕಾಶ ಇಲ್ಲವೆಂದಾದರೆ, ನೀವು ಪ್ರತ್ಯೇಕವಾದ ವಿಮಾ ಪಾಲಿಸಿ ಖರೀದಿಸುವುದು ಉತ್ತಮ. ಪ್ರತಿಯೊಂದು ಕಾಯಿಲೆಯ ಬಗ್ಗೆ ನೀವು ವಿಮೆ ಖರೀದಿಸುವ ಕಂಪನಿಯೊಡನೆ ಕೇಳಿ ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ನಿಮ್ಮ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ಮೊದಲೇ ತಿಳಿಸಿ ಅದಕ್ಕೆ ಸೂಕ್ತವಾದ ವಿಮಾ ಸೌಲಭ್ಯ ಇದೆಯೇ ಎಂಬುದನ್ನು ಸಮಾಲೋಚಿಸಿ ಖಚಿತಪಡಿಸಿಕೊಳ್ಳಿ. ಸಾಮಾನ್ಯ ಮಾಹಿತಿ ಆಧಾರದಲ್ಲಿ ಇದನ್ನು ಹೇಳುವುದು ಕಷ್ಟ. ನಿಮಗಿರುವ ಕಾಯಿಲೆಯನ್ನು ಸ್ಪಷ್ಟವಾಗಿ ತಿಳಿಸಿ. ಇದರಿಂದ ಭವಿಷ್ಯದಲ್ಲಿ ಕ್ಲೇಮ್ ನಿರಾಕರಣೆಯ ತೊಂದರೆ ತಪ್ಪಬಹುದು.

ಯಾವುದೇ ಪಾಲಿಸಿಯಲ್ಲಿ ಪ್ರಾಥಮಿಕ ಕಾಯುವಿಕೆ ಸಮಯ ಹಾಗೂ ದೀರ್ಘಾವಧಿ (2-4 ವರ್ಷ) ಕಾಯುವಿಕೆ ಸಮಯ ಎರಡೂ ಆಯಾ ಕಾಯಿಲೆ ಹಾಗೂ ನಿರ್ದಿಷ್ಟ ವಿಮಾ ಕಂಪನಿಗೆ ಸಂಬಂಧಿಸಿ ವ್ಯತ್ಯಾಸ ಆಗಬಹುದು. ವಿಮಾ ಪಾಲಿಸಿ ತೆಗೆದುಕೊಳ್ಳುವ ಮೊದಲು ಐಆರ್ಡಿಎ ಅನುಮೋದಿತ ಕಂಪನಿಗಳನ್ನು ಮಾತ್ರ ಸಂಪರ್ಕಿಸಿ ಹಾಗೂ ಪರಿಚಿತ ವಿಮಾ ಸಲಹೆಗಾರರಿಂದ ಮಾಹಿತಿ ಪಡೆದುಕೊಳ್ಳಿ.

ಪ್ರಶ್ನೆ: ನಾನು ಕಳೆದ ಮೇ ತಿಂಗಳಲ್ಲಿ ಮೈಸೂರಿನಲ್ಲಿ ಇರುವ ನನ್ನ ಮನೆಯನ್ನು ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯಕ್ಕೆ ಮಾರಾಟ ಮಾಡಿದ್ದೇನೆ. ಈಗ ಈ ಹಣ ನನ್ನ ಉಳಿತಾಯ ಖಾತೆಯಲ್ಲಿದೆ. ನಾನು ಈ ಮೊತ್ತವನ್ನು ಕಿರು ಹಣಕಾಸು ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲು ಅಂದಾಜಿಸಿದ್ದೇನೆ ಮತ್ತು ನಾನು ಕೆಲಸ ಮಾಡುತ್ತಿರುವ ಬೆಂಗಳೂರು ನಗರದಲ್ಲಿ ಒಂದು ನಿವೇಶನ ಅಥವಾ ಮನೆ ಖರೀದಿಸಬೇಕೆಂದಿದ್ದೇನೆ. ಬಂಡವಾಳ ತೆರಿಗೆ ವಿನಾಯಿತಿಯ ಪ್ರಯೋಜನ ಪಡೆಯಲು ನಾನು ‘ಕ್ಯಾಪಿಟಲ್ ಗೇನ್ಸ್’ ಖಾತೆಯಲ್ಲಿ ಹೂಡಿಕೆ ಮಾಡಬೇಕೇ? ಈ ವಿಷಯದಲ್ಲಿ ನಾನು ಹೇಗೆ ಮುಂದುವರಿಯಬೇಕು? – ವ್ಯಾಸರಾಜ್, ಮೈಸೂರು

ಉತ್ತರ: ನೀವು ಮನೆ ಮಾರಾಟ ಮಾಡಿ ಗಳಿಸಿರುವ ಸಂಪೂರ್ಣ ಮೊತ್ತ ನಿಮ್ಮ ಕೈಸೇರಿದ್ದರೂ, ಅದು ತೆರಿಗೆಗೊಳಪಡುವ ಆದಾಯವಲ್ಲ. ನೀವು ಮಾರಾಟ ಮಾಡಿರುವುದು ನಿಮ್ಮ ವಾಸದ ಮನೆಯನ್ನು. ಹಾಗಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54ರ ಅಡಿ ತೆರಿಗೆ ಪ್ರಯೋಜನಗಳು ಲಭ್ಯ ಇವೆ. ಇದಕ್ಕೂ ಮೊದಲು, ನೀವು ತೆರಿಗೆಗೊಳಪಡುವ ನಿಮ್ಮ ನಿಜವಾದ ಮೊತ್ತ ಏನೆಂಬುದನ್ನು ಸಮೀಪದ ತೆರಿಗೆ ಸಲಹೆಗಾರರ ನೆರವಿನಿಂದ ನಿಖರಪಡಿಸಿಕೊಳ್ಳಿ. ಇದಕ್ಕಾಗಿ ನಿಮ್ಮ ಆಸ್ತಿಯ ಖರೀದಿ ಮೌಲ್ಯ ಅಥವಾ 2001ರ ಏಪ್ರಿಲ್ 1ಕ್ಕೂ ಹಿಂದೆ ಖರೀದಿಸಿದ ಆಸ್ತಿಯಾಗಿದ್ದರೆ, ಅದರ ಮಾರುಕಟ್ಟೆ ಮೌಲ್ಯ ಇತ್ಯಾದಿ ಮಾಹಿತಿಯ ಆಧಾರದಲ್ಲಿ ಲಾಭದ ಅಂಶ ಎಷ್ಟೆಂದು ಲೆಕ್ಕ ಹಾಕಿ ಅಗತ್ಯವಿರುವ ಹೂಡಿಕೆಯನ್ನು ನಿರ್ಧರಿಸಬೇಕಾಗಿರುತ್ತದೆ.

ನಿಮಗೆ ಹಣದುಬ್ಬರ ಸೂಚ್ಯಂಕದ ಆಧಾರದಲ್ಲಿ ತೆರಿಗೆ ಲೆಕ್ಕ ಹಾಕಿದರೆ, ಲಾಭದ ಮೇಲೆ ಶೇಕಡ 20ರಷ್ಟು ತೆರಿಗೆ ಹಾಗೂ ಅದನ್ನು ಪರಿಗಣಿಸದೆ ತೆರಿಗೆ ಲೆಕ್ಕ ಹಾಕಿದರೆ ಶೇಕಡಾ 12.5ರಷ್ಟು ತೆರಿಗೆ ಅನ್ವಯವಾಗುತ್ತದೆ. ಇವುಗಳಲ್ಲಿ ಯಾವುದು ನಿಮಗೆ ಲಾಭದಾಯಕವೋ ಅದನ್ನು ಪರಿಗಣಿಸಿ ಅಂತಹ ಲಾಭವನ್ನು ಕ್ಯಾಪಿಟಲ್ ಗೇನ್ಸ್ ಖಾತೆಯಲ್ಲಿ ಹೂಡಿಕೆ ಮಾಡಿ ಅಥವಾ ಹೊಸ ಮನೆ ಖರೀದಿಗೆ ಉಪಯೋಗಿಸಿಕೊಳ್ಳಿ. ಹೊಸ ಮನೆ ಖರೀದಿಗೆ, ಮಾರಾಟವಾದ ದಿನದಿಂದ ಮುಂದಿನ ಎರಡು ವರ್ಷ ಹಾಗೂ ಮನೆ ಕಟ್ಟಿಸುವುದಿದ್ದರೆ ಮೂರು ವರ್ಷಗಳ ಸಮಯಾವಕಾಶ ಇದೆ. ಮುಂದಿನ ವರ್ಷದ ಆದಾಯ ತೆರಿಗೆ ವಿವರ ಸಲ್ಲಿಸುವ ಮೊದಲು ಕ್ಯಾಪಿಟಲ್ ಗೇನ್ಸ್ ಖಾತೆಗೆ ಮೇಲಿನ ಮಾಹಿತಿಯಂತೆ ಹಣ ವರ್ಗಾಯಿಸಲು ಅವಕಾಶವಿದೆ. ಆದರೆ, ಕೇವಲ ಹೂಡಿಕೆಗಾಗಿ ನಿವೇಶನ ಖರೀದಿಸಿ ಇಟ್ಟುಕೊಳ್ಳುವುದಿದ್ದರೆ, ಅದಕ್ಕೆ ಯಾವುದೇ ತೆರಿಗೆ ವಿನಾಯಿತಿ ಇಲ್ಲ ಅಥವಾ ಅದನ್ನು ಮರುಹೂಡಿಕೆ ಎಂದು ಪರಿಗಣಿಸಲಾಗುವುದಿಲ್ಲ ಎಂಬುದನ್ನು ಗಮನಿಸಿ. ಹೆಚ್ಚುವರಿ ಉಳಿಯುವ ಹಣವನ್ನು ನಿಮಗೆ ಹೆಚ್ಚಿನ ಬಡ್ಡಿ ಲಾಭ ನೀಡುವ ಅಥವಾ ಇತರ ಯಾವುದೇ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.