ಉತ್ತರ:
ನಿಮ್ಮ ಪ್ರಶ್ನೆ ಬಹಳ ಸುದೀರ್ಘವಾಗಿರುವುದರಿಂದ ಕ್ಲುಪ್ತವಾಗಿ ಹಾಗೂ ಅಗತ್ಯವುಳ್ಳ ಮಾಹಿತಿ ಮಾತ್ರ ನೀಡುತ್ತಿದ್ದೇನೆ. ಮಾರುಕಟ್ಟೆ ಸಮಂಜಸ ದರವನ್ನು ಮಾನ್ಯತೆ ಪಡೆದ ಸ್ಥಿರಾಸ್ತಿ ಮೌಲ್ಯಮಾಪಕರು ಆಯಾ ಸ್ಥಳ, ಅಲ್ಲಿನ ಸೌಲಭ್ಯ, ಹಿಂದಿನಿಂದ ಬೆಳೆದು ಬಂದ ಭೂ ಸುಧಾರಣೆ, ಮುಂದಿನ ಪ್ರಗತಿಯ ಸಾಧ್ಯತೆ ಇತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟು ನಿಗದಿಪಡಿಸುತ್ತಾರೆ. ಕೆಲವೊಂದು ಬಾರಿ ಅನೇಕ ವರ್ಷ ಹಿಂದೆ ಖರೀದಿಸಿದ್ದ ಭೂಮಿಯ ನಿಜವಾದ ಮೌಲ್ಯ ತುಂಬಾ ಕಡಿಮೆ ಇದ್ದಿರಬಹುದು ಅಥವಾ ಅದರ ಮಾಹಿತಿ ಸರಿಯಾಗಿ ಸಿಗದೆ ಇರಬಹುದು. ಇಂತಹ ಸಂದರ್ಭದಲ್ಲಿ ಮಾರುಕಟ್ಟೆ ಸಮಂಜಸ ದರವನ್ನು ತೆರಿಗೆ ಲೆಕ್ಕ ಹಾಕಲು ಬೇಕಾದ ಇನ್‍ಡೆಕ್ಸೇಷನ್ ಆಧಾರಿತ ಆಸ್ತಿ ಮೌಲ್ಯದ ನಿರ್ಧಾರಕ್ಕೆ ಪರಿಗಣಿಸಲಾಗುತ್ತದೆ. ಈ ಮೌಲ್ಯದ ಮೇಲೆ ಇನ್‍ಡೆಕ್ಸೇಷನ್ ದರವನ್ನು ಅನ್ವಯಿಸಲಾಗುತ್ತದೆ. ಆರ್ಥಿಕ ವರ್ಷ 2024-25ರ ಈ ಮೌಲ್ಯ 363 ಆಗಿದೆ. ಉದಾಹರಣೆಗೆ 2001ರಲ್ಲಿ ನಿಮ್ಮ ಆಸ್ತಿಯ ಮಾರುಕಟ್ಟೆ ಸಮಂಜಸ ದರ ₹5 ಲಕ್ಷ ಇದ್ದರೆ, ಇಂದು ಅದರ ಮೌಲ್ಯ ₹ 18.15 ಲಕ್ಷ ಎಂದರ್ಥ. ನಿಮ್ಮ ನಿಜವಾದ ಅಸಲು ₹1 ಲಕ್ಷವಾಗಿದ್ದರೂ, ಇಲ್ಲಿ ತೆರಿಗೆ ಲೆಕ್ಕ ಹಾಕುವ ಉದ್ದೇಶಕ್ಕಾಗಿ ₹5 ಲಕ್ಷ ಮೌಲ್ಯ ಪರಿಗಣಿಸಿ ಇನ್‍ಡೆಕ್ಸೇಷನ್‌ಗೆ ಅವಕಾಶ ನೀಡಲಾಗಿದೆ. ಇದು ಬಜೆಟ್‌ಗಿಂತ ಮೊದಲು ಖರೀದಿಸಿದ ಆಸ್ತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಹೀಗಾಗಿ ಹಳೆಯ ಆಸ್ತಿಗಳಿಗೆ ಸಂಬಂಧಿಸಿ ಹಿಂದೆ ಇದ್ದಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಯಾವುದೇ ಸ್ಥಿರಾಸ್ತಿಯ ಅಸಲು ಲೆಕ್ಕ ಹಾಕುವಾಗ, ಖರೀದಿಗೆ ಸಂಬಂಧಿತ ಮೂಲ ವೆಚ್ಚ, ಕಟ್ಟಡದ ನಿರ್ಮಾಣಕ್ಕೆ ಸಂಬಂಧಿತ ವೆಚ್ಚ, ಅದರ ಹಂತ ಹಂತದ ಅಭಿವೃದ್ಧಿಗೆ ಸಂಬಂಧಿಸಿ ಕೈಗೊಳ್ಳುವ ಮೌಲ್ಯವರ್ಧಿತ ವೆಚ್ಚ ಇತ್ಯಾದಿಯನ್ನು ಪರಿಗಣಿಸಿಕೊಳ್ಳುವ ಅವಕಾಶ ಇದೆ. ಆದರೆ, ಕಟ್ಟಡದ ಸಾಮಾನ್ಯ ನಿರ್ವಹಣಾ ವೆಚ್ಚ (ಉದಾ: ಸುಣ್ಣ-ಬಣ್ಣ, ತೆರಿಗೆ, ದುರಸ್ತಿ ವೆಚ್ಚ) ಇತ್ಯಾದಿಯನ್ನು ಅಸಲು ಮೊತ್ತಕ್ಕೆ ಪರಿಗಣಿಸುವ ಅವಕಾಶ ಇಲ್ಲ. ಕಾರಣ ಇವು ಆಸ್ತಿಯನ್ನು ಚೆನ್ನಾಗಿ ಕಾಣುವಂತೆ ಮಾಡಿದರೂ, ಮೂಲ ಉಪಯುಕ್ತತೆ ಹೆಚ್ಚಿಸುವಲ್ಲಿ ನೆರವಾಗುವುದಿಲ್ಲ. ನೀವು ಓದಿ ತಿಳಿದಿರುವಂತೆ ಪ್ರತ್ಯೇಕವಾದ ಎರಡು ತೆರಿಗೆ ಪದ್ಧತಿ ಅಡಿ ನಿಮಗೆ ಲಾಭದಾಯಕವಾದ ತೆರಿಗೆ ಪದ್ಧತಿಯ ಆಯ್ಕೆಗೆ ಅವಕಾಶ ಇದೆ. ನೀವು ಎರಡು ಪ್ರತ್ಯೇಕ ಆಸ್ತಿಗಳನ್ನು ಮಾರಾಟ ಮಾಡುತ್ತಿರುವ ಕಾರಣ ನಿಮ್ಮ ತೆರಿಗೆ ಉಳಿತಾಯದ ದೃಷ್ಟಿಯಲ್ಲಿ ಯಾವ ತೆರಿಗೆ ಪದ್ಧತಿಯ ಆಯ್ಕೆ ಯಾವ ಆಸ್ತಿಗೆ ಸೂಕ್ತ ಎಂಬುದನ್ನು ಬದಲಾದ ಸನ್ನಿವೇಶದಲ್ಲಿ ತೆರಿಗೆ ಲೆಕ್ಕ ಹಾಕಿ ನೋಡಿ. ನಿಮಗೆ ಸೂಕ್ತವಾದ ತೆರಿಗೆ ಪದ್ಧತಿಯ ಆಯ್ಕೆಗೆ ಅವಕಾಶ ಇದೆ.