ದಾವಣಗೆರೆ ಕೃಷ್ಣ, ಬೆಂಗಳೂರು.
ಪ್ರಶ್ನೆ: ಮುಂದಿನ ಕೆಲವು ವರ್ಷಗಳ ನಂತರ ನಿವೃತ್ತಿ ಹೊಂದಿದಾಗ ನನ್ನ ಬಳಿ ಪಿ.ಎಫ್ ಹಾಗೂ ಗ್ರಾಚ್ಯುಟಿ ಇತ್ಯಾದಿಗಳಿಂದ ಸುಮಾರು ₹1 ಕೋಟಿಯಷ್ಟು ನಿಧಿ ಇರುವ ಸಾಧ್ಯತೆ ಇದೆ. ಖಾಸಗಿ ವೃತ್ತಿಯಾಗಿರುವುದರಿಂದ ಪಿಂಚಣಿಯನ್ನು ನಾನೇ ವ್ಯವಸ್ಥೆ ಮಾಡಿಕೊಳ್ಳಬೇಕು. ತಿಂಗಳಿಗೆ ₹50,000 ಪಿಂಚಣಿ ಬೇಕಿದೆ. ಇದಕ್ಕಾಗಿ 60 ವಯಸ್ಸಿಗೆ ನಿವೃತ್ತಿ ಹೊಂದಿದ ನಂತರ ಮುಂದಿನ ಸುಮಾರು 30 ವರ್ಷಗಳ ತನಕ ಪಿಂಚಣಿ ಮೊತ್ತ ಪ್ರತಿ ಮೂರು ವರ್ಷಗಳಿಗೊಮ್ಮೆ ಶೇ 10ರಷ್ಟು ಏರಿಕೆ ಕಾಣುವಂತಿರಬೇಕಾದರೆ ಸಿಗುವ ಹಣವನ್ನು ಯಾವ ರೀತಿ ಹೂಡಿಕೆ ಮಾಡಬೇಕು?
ಉತ್ತರ: ಸಾಮಾನ್ಯವಾಗಿ ನಿವೃತ್ತಿ ಬದುಕಿನ ನಂತರದ ಆರ್ಥಿಕ ಅಗತ್ಯಗಳಿಗೆ ವೃತ್ತಿ ಬದುಕಿನ ಆದ್ಯ ಹಂತದಲ್ಲೇ ಯೋಜನೆ ನಿರೂಪಿಸುವುದು ಇಂದಿನ ಅಗತ್ಯ. ಅದರಲ್ಲೂ ಸ್ವಉದ್ಯೋಗಿಗಳಿಗೆ ಹಾಗೂ ಖಾಸಗಿ ವೃತ್ತಿಯಲ್ಲಿ ಇರುವವರಿಗೆ ಇದು ತೀರಾ ಅನಿವಾರ್ಯ. ನೀವು ನೀಡಿರುವ ಮಾಹಿತಿಗೆ ಸಂಬಂಧಿಸಿ ಕೆಲವು ಹೂಡಿಕೆ ಮಾಹಿತಿಯನ್ನು ಈ ಕೆಳಗಿನಂತೆ ನೀಡಬಹುದು.
1. ನಿವೃತ್ತಿ ನಿಧಿಯ ಹೂಡಿಕೆ: ನೀವು ನಿವೃತ್ತಿ ಸಂದರ್ಭದಲ್ಲಿ ಸುಮಾರು ಒಂದು ಕೋಟಿ ಮೊತ್ತವನ್ನು ಪಿ.ಎಫ್ ಹಾಗೂ ಗ್ರಾಚ್ಯುಟಿ ಇತ್ಯಾದಿಗಳಿಂದ ಬರಬಹುದು ಎಂದು ಊಹಿಸಿದ್ದೀರಿ. ಮುಂದೆ ಸಿಗಬಹುದಾದ ಮೊತ್ತವನ್ನು ಆ ಸಂದರ್ಭದಲ್ಲಿ ಸಮಯೋಚಿತವಾಗಿ, ಸೂಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡಿ ನೀವು ನಿರೀಕ್ಷಿಸುವ ಮಾಸಿಕ ಆದಾಯ/ ಪಿಂಚಣಿಯನ್ನು ಆ ಸಂದರ್ಭದಲ್ಲೂ ಪಡೆಯಬಹುದು. ನಿಮ್ಮ ಮೊತ್ತವನ್ನು ಪ್ರಸ್ತುತ ಅಂಚೆ ಇಲಾಖೆಯಲ್ಲಿ ಲಭ್ಯ ಇರುವ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಮುಂದಿನ ವರ್ಷಗಳಲ್ಲೂ ಇವು ಮುಂದುವರಿಯಲಿದ್ದು ಶೇ 8ರ ಅಂದಾಜು ಆದಾಯ ಬಂದರೂ ವರ್ಷಕ್ಕೆ ₹8 ಲಕ್ಷ ಆದಾಯ ಸಿಗಲಿದೆ. ನಿವೃತ್ತ ಉದ್ಯೋಗಿಗಳಿಗೆ ಸಿಗುವ ಏಕ ಕಂತಿನ ಮೊತ್ತವನ್ನು ಇದರಲ್ಲಿ ₹30 ಲಕ್ಷದ ತನಕ ಹೂಡಿಕೆ ಮಾಡಬಹುದು. ಪ್ರಸ್ತುತ ಇದಕ್ಕೆ ಶೇ8.2ರಷ್ಟು ಬಡ್ಡಿ ಸಿಗುತ್ತದೆ.
ಇದಲ್ಲದೆ, ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಯೋಜನೆಗಳಲ್ಲೂ (ಎಂಐಎಸ್) ಹೂಡಿಕೆ ಮಾಡಬಹುದು. ಇದಕ್ಕೆ ₹9 ಲಕ್ಷದ ಮಿತಿ ಇದೆ. ಪತಿ-ಪತ್ನಿ ಇಬ್ಬರ ಹೆಸರಲ್ಲಿ ಜಂಟಿ ಖಾತೆ ತೆರೆದು ಹೂಡಿದರೆ ₹15 ಲಕ್ಷ ಹೂಡಲು ಅವಕಾಶವಿದೆ. ಇದಕ್ಕೆ ಪ್ರಸ್ತುತ ಶೇ 7.2ರಷ್ಟು ಬಡ್ಡಿದರ ಇದೆ. ಉಳಿದ ಮೊತ್ತವನ್ನು ಯಾವುದೇ ಆರ್ಥಿಕ ಅಪಾಯ ಇರದ ಹೂಡಿಕೆಗಳಾದ ಬ್ಯಾಂಕಿನ ನಿಖರ ಠೇವಣಿ, ಪಿಪಿಎಫ್ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿ ಬಡ್ಡಿ ಪಡೆಯಬಹುದು.
2. ನಿವೃತ್ತಿ ಪಿಂಚಣಿಗಾಗಿ ಹೂಡಿಕೆ: ನೀವು ನೀಡಿದ ಮಾಹಿತಿಯಲ್ಲಿ ನಿಮ್ಮ ಪ್ರಸ್ತುತ ವಯಸ್ಸು ಹಾಗೂ ನಿವೃತ್ತಿಗಿರುವ ಮುಂದಿನ ಕಾಲಾವಧಿ ಏನೆಂಬುದನ್ನು ತಿಳಿಸಿಲ್ಲ. ಆದರೂ ನಿಮ್ಮ ಪ್ರಸ್ತುತ ಇರುವ ತಿಂಗಳ ಆದಾಯದಲ್ಲಿ ಒಂದಿಷ್ಟು ಮೊತ್ತವನ್ನು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿ. ಇದು ಸ್ವಉದ್ಯೋಗಿಗಳಿಗೆ ಹಾಗೂ ಖಾಸಗಿ ವೃತ್ತಿಯಲ್ಲಿ ಇರುವವರಿಗೆ ತಮ್ಮ 60ನೆಯ ವಯಸ್ಸಿನಿಂದ ಮುಂದೆ ಪಿಂಚಣಿ ಹಾಗೂ ಏಕ ಕಂತಿನ ಮೊತ್ತ ಪಡೆಯುವಲ್ಲಿ ನೆರವಾಗುತ್ತದೆ. ‘ಆಟೊ ಚಾಯ್ಸ್’ ಹೂಡಿಕೆ ವಿಧಾನವನ್ನು ಆಯ್ಕೆ ಮಾಡುವ ಮೂಲಕ ಹೂಡಿಕೆಯಾದ ಮೊತ್ತವನ್ನು ನಿಮ್ಮ ವಯೋಮಾನಕ್ಕೆ ಅನುಗುಣವಾಗಿ ಸಂಬಂಧಿತ ಎನ್‌ಪಿಎಸ್ ಪಾಲುದಾರ ಸಂಸ್ಥೆಗಳೇ ಹೂಡಿಕೆ ನಿರ್ವಹಣೆ ಮಾಡುತ್ತವೆ.
ಈ ಹೂಡಿಕೆಯ ಒಂದಷ್ಟು ಭಾಗವನ್ನು ಈಕ್ವಿಟಿ ಮಾರುಕಟ್ಟೆಯಲ್ಲೂ, ಉಳಿದ ಮೊತ್ತವನ್ನು ನಿಶ್ಚಿತ ಆದಾಯ ಬರುವ ಸರ್ಕಾರಿ ಬಾಂಡ್, ಕಂಪನಿಗಳ ಸಾಲಪತ್ರ ಇತ್ಯಾದಿಗಳಲ್ಲಿ ಪ್ರತಿ ಹೂಡಿಕೆ ಮಾಡುತ್ತವೆ. ನಿಮ್ಮ 60ನೆಯ ವಯಸ್ಸಿಗೆ ಆ ಸಂದರ್ಭದಲ್ಲಿರುವ ಮೊತ್ತದ ಶೇ 60ರಷ್ಟನ್ನು ನಿಮಗೆ ಒಂದೇ ಕಂತಿನಲ್ಲಿ ಹಿಂದಿರುಗಿಸಲಾಗುತ್ತದೆ. ಉಳಿದ ಮೊತ್ತವನ್ನು ನಿಮ್ಮ ಮಾಸಿಕ ಪಿಂಚಣಿಗಾಗಿ ಉಳಿಸಿಕೊಳ್ಳಲಾಗುತ್ತದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 10ರ ದರದಲ್ಲಿ ಪಿಂಚಣಿಯಲ್ಲಿ ವೃದ್ಧಿ ಪಡೆಯಲು ನಿರೀಕ್ಷಿಸುತ್ತಿದ್ದೀರಿ. ಇದಕ್ಕಾಗಿ ಈಗಲೇ ಪ್ರತಿ ತಿಂಗಳೂ ಈಕ್ವಿಟಿ ವಿಭಾಗದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ. ಇದು ಷೇರು ಮಾರುಕಟ್ಟೆಗೆ ನೇರ ಸಂಬಂಧಿಸಿದ್ದರಿಂದ ದೀರ್ಘಾವಧಿಯಲ್ಲಿ ಬಡ್ಡಿ ಆದಾಯಕ್ಕಿಂತ ಅಧಿಕ ಆದಾಯ/ಲಾಭ ನಿರೀಕ್ಷಿಸಲು ಸಾಧ್ಯ.
****
ರಮೇಶ್ ಕುಮಾರ್, ಕೋರಮಂಗಲ, ಬೆಂಗಳೂರು.
ಪ್ರಶ್ನೆ: ಇತ್ತೀಚೆಗೆ ಮಂಡಿಸಿರುವ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ ಹಿಂದಿನ ಅನೇಕ ತೆರಿಗೆ ಬಾಕಿಗಳ ಬಗ್ಗೆ ಮನ್ನಾ ಮಾಡುವ ಪ್ರಸ್ತಾವ ಇಡಲಾಗಿದೆ. ನನ್ನ ಹೆಸರಲ್ಲಿ 20 ವರ್ಷ ಹಿಂದಿನ ಒಂದೆರಡು ವರ್ಷಗಳ ಹಳೆಯ ತೆರಿಗೆ ಬಾಕಿ ಇದೆ. ಇದು ಆನ್‌ಲೈನ್ ಫೈಲಿಂಗ್ ಆರಂಭವಾಗುವ ಮೊದಲು ಇದ್ದ ಪೇಪರ್ ಆಧಾರಿತ ರಿಟರ್ನ್ಸ್ (ಆರ್ಥಿಕ ವರ್ಷ 2002-03 ಹಾಗೂ 2004-05) ಸಲ್ಲಿಕೆಗೆ ಸಂಬಂಧಿಸಿದ್ದು. ಇನ್ನೂ ಪೋರ್ಟಲ್‌ನಲ್ಲಿ ₹12 ಸಾವಿರ ಹಾಗೂ ₹8 ಸಾವಿರದ ಅಂದಾಜು ತೆರಿಗೆ ಪಾವತಿ ಬಾಕಿ ಇದೆ ಎಂದು ತೋರಿಸುತ್ತಿದೆ. ಇದರಿಂದ ಕೆಲವು ವರ್ಷ ರಿಫಂಡ್ ಬಂದಿಲ್ಲ. ಇದನ್ನು ಮನ್ನಾ ಮಾಡಿ ಮುಂದಕ್ಕೆ ಸರಿಪಡಿಸಬಹುದೇ. ಇದಕ್ಕೇನು ಮಾಡಬೇಕು.
ಉತ್ತರ: ಈ ಬಾರಿ ಮಂಡಿಸಲಾದ ಬಜೆಟ್ ಯಾವುದೇ ಪೂರ್ಣ ಪ್ರಮಾಣದ ಬಜೆಟ್ ಅಲ್ಲ. ಅದು ಕೇವಲ ಲೇಖಾನುದಾನವಷ್ಟೇ. ಆದರೆ, ಹಳೆಯ ತೆರಿಗೆ ಮನ್ನಾದ ಬಗ್ಗೆ ಅಗತ್ಯ ಪ್ರಸ್ತಾವಗಳನ್ನು ಮಾಡಿ ತೆರಿಗೆ ಇಲಾಖೆ ಹಾಗೂ ತೆರಿಗೆದಾರರ ಮಧ್ಯೆ ಇದ್ದ ಅನೇಕ ವ್ಯಾಜ್ಯಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿರುವುದು ಅನೇಕರಿಗೆ ನೆರವಾದೀತು. ಆರ್ಥಿಕ ವರ್ಷ 2009-10ರ ತನಕದ ತೆರಿಗೆ ಡಿಮಾಂಡ್‌ಗಳಿಗೆ ಸಂಬಂಧಿಸಿ ₹25 ಸಾವಿರದ ತನಕ ಹಾಗೂ ಆರ್ಥಿಕ ವರ್ಷ 2010-11ರಿಂದ 2014-15ರ ಅವಧಿಯ ತೆರಿಗೆ ಡಿಮಾಂಡ್‌ಗಳಿಗೆ ₹10 ಸಾವಿರದ ತನಕ ಮನ್ನಾ ಮಾಡುವ ಪ್ರಸ್ತಾವ ಇಡಲಾಗಿದೆ. ಇದಕ್ಕೆ ಪೇಪರ್ ಆಧಾರಿತ ದತ್ತಾಂಶ ವರ್ಗಾವಣೆ ಸಂದರ್ಭದಲ್ಲಿ ತೆರಿಗೆ ಇಲಾಖೆಯಲ್ಲೂ ಸಾಕಷ್ಟು ಪುರಾವೆಗಳು ಇಲ್ಲದಿರುವುದೂ ಕಾರಣ. ಈ ಬಗ್ಗೆ ತೆರಿಗೆದಾರರನ್ನು ಬೆನ್ನತ್ತಿ ತೆರಿಗೆ ಸಂಗ್ರಹಿಸುವ ಖರ್ಚು ಹೆಚ್ಚಾಗು ತ್ತಿರುವುದು, ಎಲ್ಲರ ಸಮಯವೂ ವ್ಯರ್ಥವಾಗುತ್ತಿರುವುದು ಕೂಡ ಕಾರಣ.
ನಿಮ್ಮ ವಿಚಾರಕ್ಕೆ ಸಂಬಂಧಿಸಿ ಹೇಳುವುದಾದರೆ, ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ ಅಧಿಕೃತ ಮಾಹಿತಿ ಹಾಗೂ ಅದಕ್ಕೆ ಯಾವೆಲ್ಲ ಹಂತದ ತೆರಿಗೆ ವ್ಯಾಜ್ಯಗಳು ಅರ್ಹ ಎಂಬುದರ ಬಗ್ಗೆ ಇನ್ನೂ ಸುತ್ತೋಲೆ ಬರಬೇಕಾಗಿದೆ. ತದನಂತರವಷ್ಟೇ ಈ ಸಂಬಂಧ ನಿಜವಾದ ಅರ್ಹ ತೆರಿಗೆದಾರರನ್ನು ಗುರುತಿಸುವುದು ಸಾಧ್ಯ. ಅಲ್ಲಿಯ ತನಕ ನೀವು ಸಂಪೂರ್ಣ ಮಾಹಿತಿಗಾಗಿ ಕಾಯಬೇಕಾಗುತ್ತದೆ.
ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್: businessdesk@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.