ಶುಕ್ರವಾರ, ಜುಲೈ 1, 2022
24 °C

ನವೋದ್ಯಮ ಶ್ರೇಯಾಂಕ: ಕರ್ನಾಟಕಕ್ಕೆ ಅಗ್ರಗಣ್ಯ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉತ್ಸಾಹಿ ಉದ್ಯಮಿಗಳಿಗೆ ನವೋದ್ಯಮ ಆರಂಭಿಸಲು ಅನುಕೂಲಕರ ವಾತಾವರಣ ನಿರ್ಮಿಸಿದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕವು ‘ಅಗ್ರಗಣ್ಯ ಸಾಧಕ’ ಸ್ಥಾನವನ್ನು ಸತತ ಎರಡನೆಯ ವರ್ಷದಲ್ಲೂ ಉಳಿಸಿಕೊಂಡಿದೆ. ಗುಜರಾತ್ ರಾಜ್ಯವು ‘ಅತ್ಯುತ್ತಮ ಸಾಧಕ’ ಸ್ಥಾನದಲ್ಲಿ ಮುಂದುವರಿದಿದೆ.

ಶ್ರೇಯಾಂಕ ನೀಡುವ ಉದ್ದೇಶದಿಂದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು, ‘ಅತ್ಯುತ್ತಮ ಸಾಧಕ’, ‘ಅಗ್ರಗಣ್ಯ ಸಾಧಕ’, ‘ನಾಯಕ’, ‘ನಾಯಕನಾಗಲು ಬಯಸುವವ’ ಹಾಗೂ ‘ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮ ಪರಿಸರ’ ಎಂಬ ಹೆಸರಿನಡಿ ಐದು ವಿಭಾಗಗಳಾಗಿ ವರ್ಗೀಕರಿಸಲಾಗಿತ್ತು.

ಕರ್ನಾಟಕ ಮತ್ತು ಕೇರಳ ‘ಅಗ್ರಗಣ್ಯ ಸಾಧಕ’ರಾಗಿ ಹೊರಹೊಮ್ಮಿವೆ. ಬಿಹಾರ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ಚಂಡೀಗಢ ರಾಜ್ಯಗಳು ‘ನಾಯಕ’ ಎಂದು ಪರಿಗಣಿತವಾಗಿವೆ. ‘ನಾಯಕನಾಗಲು ಬಯಸುವವ’ ವಿಭಾಗದಲ್ಲಿ ಹರಿಯಾಣ, ಜಾರ್ಖಂಡ್, ಪಂಜಾಬ್, ತೆಲಂಗಾಣ, ಉತ್ತರಾಖಂಡ ಮತ್ತು ನಾಗಾಲ್ಯಾಂಡ್ ರಾಜ್ಯಗಳಿವೆ. ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸಗಢ, ದೆಹಲಿ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ, ಮಿಜೋರಾಂ ಮತ್ತು ಸಿಕ್ಕಿಂ ರಾಜ್ಯಗಳು ‘ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮ ಪರಿಸರ’ ವಿಭಾಗದ ಅಡಿಯಲ್ಲಿವೆ.

ಸಾಂಸ್ಥಿಕ ಬೆಂಬಲ, ನಿಯಮಗಳ ಪಾಲನೆಯನ್ನು ಸುಲಭವಾಗಿಸುವುದು, ಹಣಕಾಸಿನ ನೆರವು ಒದಗಿಸಲು ಸಹಾಯ ಮಾಡುವುದು ಸೇರಿದಂತೆ ಏಳು ಕ್ಷೇತ್ರಗಳಲ್ಲಿ ತಂದಿರುವ ಸುಧಾರಣೆಯನ್ನು ಗಮನಿಸಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ವರ್ಗೀಕರಿಸಲಾಗಿದೆ. ಕೇಂದ್ರ ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವಾಣಿಜ್ಯ ವಹಿವಾಟು ಇಲಾಖೆಯು (ಡಿಪಿಐಐಟಿ) ಈ ಶ್ರೇಯಾಂಕ ನೀಡಿದೆ.

ಕಳೆದ ವರ್ಷದಿಂದ ಈ ಶ್ರೇಯಾಂಕ ನೀಡುವ ಪದ್ಧತಿ ಆರಂಭವಾಗಿದೆ. ಹಿಂದಿನ ವರ್ಷದಲ್ಲೂ ಗುಜರಾತ್ ರಾಜ್ಯವು ‘ಅತ್ಯುತ್ತಮ ಸಾಧಕ’ ಸ್ಥಾನದಲ್ಲಿ ಇತ್ತು. ಒಟ್ಟು 22 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳನ್ನು ಈ ಬಾರಿ ಶ್ರೇಯಾಂಕಕ್ಕೆ ಪರಿಗಣಿಸಲಾಗಿತ್ತು.

ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಚ್ ಗೋಯಲ್, ‘ಇದು ನವೋದ್ಯಮಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಲು ಇನ್ನಷ್ಟು ನೆರವಾಗುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು