ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Assembly Election Results 2023 | ಎಫ್‌ಪಿಐ: ₹1.04 ಲಕ್ಷ ಕೋಟಿ ಹೂಡಿಕೆ

ಷೇರುಪೇಟೆ ದಿಕ್ಕು ನಿರ್ಧರಿಸಲಿವೆ ರಾಜ್ಯಗಳ ಚುನಾವಣಾ ಫಲಿತಾಂಶ
Published 2 ಡಿಸೆಂಬರ್ 2023, 19:30 IST
Last Updated 2 ಡಿಸೆಂಬರ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಮತ್ತೆ ಭಾರತದಲ್ಲಿ ಷೇರುಗಳನ್ನು ಖರೀದಿಸಲು ಆರಂಭಿಸಿದ್ದಾರೆ. ಅಮೆರಿಕದ ಬಾಂಡ್‌ ಗಳಿಕೆ ಪ್ರಮಾಣ ಕಡಿಮೆ ಆಗಿರುವುದು ಮತ್ತು ಭಾರತದ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತಿರುವುದು ಮತ್ತೆ ಖರೀದಿ ನಡೆಸುವಂತೆ ಮಾಡುತ್ತಿದೆ. 2023ರಲ್ಲಿ ಒಟ್ಟು ₹1.04 ಲಕ್ಷ ಕೋಟಿ ಹೂಡಿಕೆ ಮಾಡಿದ್ದಾರೆ.

ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ನವೆಂಬರ್‌ ತಿಂಗಳಿನಲ್ಲಿ ₹9 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಅದಕ್ಕೂ ಹಿಂದೆ ಅಂದರೆ ಆಗಸ್ಟ್‌ನಿಂದ ನವೆಂಬರ್ 15ರವರೆಗಿನ ಅವಧಿಯಲ್ಲಿ ₹83,422 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

5 ರಾಜ್ಯಗಳ ಚುನಾವಣಾ ಫಲಿತಾಂಶವು ಮುಂದಿನ ದಿನಗಳಲ್ಲಿ ಷೇರುಪೇಟೆಗಳ ದಿಕ್ಕನ್ನು ನಿರ್ಧರಿಸಲಿವೆ. ಫಲಿತಾಂಶವು ಒಂದೊಮ್ಮೆ ಆಡಳಿತದಲ್ಲಿರುವ ಪಕ್ಷಗಳ ಪರವಾಗಿ ಬಂದರೆ ಮಾರುಕಟ್ಟೆಯು ಇನ್ನಷ್ಟು ಏರಿಕೆ ಕಾಣಲಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಮಾರುಕಟ್ಟೆಯು ಏರುಮುಖವಾಗಿದ್ದರೆ ವಿದೇಶಿ ಹೂಡಿಕೆದಾರರು ಅದರ ಲಾಭ ಪಡೆದುಕೊಳ್ಳಲಿದ್ದಾರೆ.  ಹೆಚ್ಚಿನ ಸಂಖ್ಯೆಯಲ್ಲಿ ಷೇರುಗಳನ್ನು ಮಾರಾಟ ಮಾಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಬೆಳವಣಿಗೆಯ ಕುರಿತು ಅನಿಶ್ಚಿತತೆ ಇದ್ದರೂ ಭಾರತದ ಸ್ಥಿತಿ ಉತ್ತಮವಾಗಿದೆ ಎನ್ನುವುದನ್ನು ಜುಲೈ–ಸೆಪ್ಟೆಂಬರ್ ತ್ರೈಮಾಸಿಕದ ಅಂಕಿ–ಅಂಶಗಳು ಮತ್ತು ತಯಾರಿಕಾ ವಲಯದ ಬೆಳವಣಿಗೆಯು ಹೇಳುತ್ತಿವೆ. ಅಮೆರಿಕದ ಬಾಂಡ್‌ ಗಳಿಕೆಯು ಕಡಿಮೆ ಆಗುತ್ತಿರುವುದು ಸಹ ಷೇರುಪೇಟೆಯಲ್ಲಿ ಸಕಾರಾತ್ಮಕ ಚಲನೆಗೆ ಕಾರಣವಾಗುತ್ತಿದೆ ಎಂದು ಮೆಹ್ತಾ ಈಕ್ವಿಟೀಸ್‌ ಲಿಮಿಟೆಡ್‌ನ ಸಂಶೋಧನಾ ವಿಭಾಗ ಹಿರಿಯ ಉಪಾಧ್ಯಕ್ಷ ಪ್ರಶಾಂತ್‌ ತಾಪ್ಸೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT