ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಆಟೊ ವಲಯದ ಷೇರುಗಳ ಗೂಳಿ ಓಟ

52 ವಾರಗಳ ಗರಿಷ್ಠ ಮಟ್ಟಕ್ಕೆ ಏರಿದ ಬಜಾಜ್‌ ಆಟೊ, ಟಾಟಾ ಮೋಟರ್ಸ್‌, ಅಶೋಕ ಲೈಲೆಂಡ್‌
Last Updated 25 ಜನವರಿ 2021, 3:11 IST
ಅಕ್ಷರ ಗಾತ್ರ

ಮುಂಬೈ ಷೇರುಪೇಟೆಯ ಸೂಚ್ಯಂಕ ‘ಸೆನ್ಸೆಕ್ಸ್‌’ನ ಅಂಶ 50 ಸಾವಿರದ ಗಡಿಯನ್ನು ದಾಟಿ ಐತಿಹಾಸಿಕ ದಾಖಲೆ ನಿರ್ಮಿಸಿದ ಬೆನ್ನಲ್ಲೇ ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾಗಿದ್ದರಿಂದ ವಾರಾಂತ್ಯದಲ್ಲಿ ಸೆನ್ಸೆಕ್ಸ್‌ 746 (ಶೇ 1.40) ಅಂಶಗಳ ಕುಸಿತ ಕಂಡಿತು. ರಾಷ್ಟ್ರೀಯ ಷೇರುಪೇಟೆಯ ಸೂಚ್ಯಂಕ ‘ನಿಫ್ಟಿ–50’ ಕೂಡ 218 (ಶೇ 1.50) ಅಂಶಗಳ ಕುಸಿತಕ್ಕೆ ಸಾಕ್ಷಿಯಾಯಿತು. ಆದರೆ, ಈ ಮಾರಾಟ ಒತ್ತಡದ ನಡುವೆಯೂ ಆಟೊ ವಲಯದ ಷೇರುಗಳು ಮಾತ್ರ ‘ಗೂಳಿ ಓಟ’ವನ್ನು ಮುಂದುವರಿಸಿದ್ದವು. ಆಟೊ ವಲಯದ ಪ್ರಮುಖ ಕಂಪನಿಗಳ ಷೇರುಗಳ ಬೆಲೆಯು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪುವ ಮೂಲಕ ಗಮನ ಸೆಳೆದಿವೆ.

ಸೆನ್ಸೆಕ್ಸ್‌ ಹಾಗೂ ನಿಫ್ಟಿ–50 ಸೂಚ್ಯಂಕಗಳು ಶುಕ್ರವಾರ ಭಾರಿ ಕುಸಿತ ಕಂಡಿದ್ದರೂ ‘ಬಿಎಸ್‌ಇ ಆಟೊ’ ಸೂಚ್ಯಂಕವು 347 (ಶೇ 1.49) ಅಂಶಗಳ ಹಾಗೂ ‘ನಿಫ್ಟಿ ಆಟೊ’ ಸೂಚ್ಯಂಕವು 148 (ಶೇ 1.43) ಅಂಶಗಳ ಏರಿಕೆಯನ್ನು ಕಂಡಿರುವ ಜೊತೆಗೆ 52 ವಾರಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು. ಆಟೊ ವಲಯದ ಮುಂಚೂಣಿ ಕಂಪನಿಗಳಾದ ಬಜಾಜ್‌ ಆಟೊ, ಹಿರೋ ಮೊಟೊಕಾರ್ಪ್‌, ಅಶೋಕ ಲೈಲೆಂಡ್‌, ಟಾಟಾ ಮೋಟರ್ಸ್‌, ಟಿವಿಎಸ್‌ ಮೋಟರ್ಸ್‌, ಐಷರ್‌ ಮೋಟರ್ಸ್‌ ಷೇರುಗಳು ಶುಕ್ರವಾರದ ದಿನದ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿರುವುದು ಹೂಡಿಕೆದಾರರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

6 ತಿಂಗಳಲ್ಲಿ ಶೇ 45 ಏರಿಕೆ: ಆರು ತಿಂಗಳ ಅವಧಿಯಲ್ಲಿ ಬಿಎಸ್‌ಇ ಆಟೊ ಸೂಚ್ಯಂಕದ ಮೌಲ್ಯವು ಶೇ 45.38ರಷ್ಟು ಹಾಗೂ ಎನ್‌ಎಸ್‌ಇ ಆಟೊ ಸೂಚ್ಯಂಕದ ಮೌಲ್ಯವು ಶೇ 45.97ರಷ್ಟು ಹೆಚ್ಚಾಗಿದೆ. ಮೂರು ತಿಂಗಳಲ್ಲಿ ಬಿಎಸ್‌ಇ ಆಟೊ ಸೂಚ್ಯಂಕವು ಶೇ 33.37 ಹಾಗೂ ನಿಫ್ಟಿ ಆಟೊ ಸೂಚ್ಯಂಕವು ಶೇ 33.72; ಒಂದು ತಿಂಗಳಲ್ಲಿ ಕ್ರಮವಾಗಿ ಶೇ 18.75 ಹಾಗೂ ಶೇ 19.25ರಷ್ಟು; ಒಂದು ವಾರದ ಅವಧಿಯಲ್ಲಿ ಕ್ರಮವಾಗಿ ಶೇ 3.24 ಮತ್ತು ಶೇ 3.32ರಷ್ಟು ಏರಿಕೆ ಕಂಡಿವೆ.

ಸದ್ದು ಮಾಡಿದ ಬಜಾಜ್‌ ಆಟೊ: ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್‌ ಆಟೊ ಕಂಪನಿಯ ಷೇರಿನ ಬೆಲೆಯು ರಾಷ್ಟ್ರೀಯ ಷೇರುಪೇಟೆಯಲ್ಲಿ ಶುಕ್ರವಾರ ₹ 386.20 (ಶೇ 10.43) ಹೆಚ್ಚಾಗುವ ಮೂಲಕ ಮಾರಾಟಗಾರರೇ ಇಲ್ಲದೆ, ಖರೀದಿದಾರರು ಮಾತ್ರ ಬಿಡ್‌ ಮಾಡುವ ಸ್ಥಿತಿಗೆ ತಲುಪಿತ್ತು.

ಈ ಕಂಪನಿಯು ಡಿಸೆಂಬರ್‌ ತಿಂಗಳ ಅಂತ್ಯದ ಮೂರನೇ ತ್ರೈಮಾಸಿಕ ವರದಿಯನ್ನು ಗುರುವಾರ ಪ್ರಕಟಿಸಿತ್ತು. ₹ 1,556.3 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಕಂಪನಿಯ ಆದಾಯದಲ್ಲಿ ಶೇ 23.4ರಷ್ಟು ಏರಿಕೆಯಾಗಿದ್ದು, ಇದು ಇದುವರೆಗಿನ ದಾಖಲೆಯ ಲಾಭ ಗಳಿಕೆಯಾಗಿದೆ. ಆದಾಯದಲ್ಲೂ ಶೇ 16.6ರಷ್ಟು ಹೆಚ್ಚಾಗಿರುವ ಸುದ್ದಿಯ ಪರಿಣಾಮ ಹೂಡಿಕೆದಾರರು ಬಜಾಜ್‌ ಆಟೊ ಕಂಪನಿಯ ಷೇರಿನ ಖರೀದಿಗೆ ಮುಗಿಬಿದ್ದಿದ್ದರು. ಹೀಗಾಗಿ ಈ ಕಂಪನಿಯ ಷೇರಿನ ಬೆಲೆಯ 52 ವಾರಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು.

ಬಜಾಜ್‌ ಆಟೊ ಷೇರಿನ ಮೌಲ್ಯವು ಕಳೆದ ಆರು ತಿಂಗಳಲ್ಲಿ ₹ 2,008.60 (ಶೇ 67.27), ಮೂರು ತಿಂಗಳಲ್ಲಿ ₹ 2,098.95 (ಶೇ 72.49) ಹಾಗೂ ಒಂದು ತಿಂಗಳ ಅವಧಿಯಲ್ಲಿ ₹ 1,619.35 (ಶೇ 47.98) ಹೆಚ್ಚಾಗಿದೆ.

ಟಾಟಾ ಮೋಟರ್ಸ್‌ ಮೌಲ್ಯ ಶೇ 178 ಹೆಚ್ಚಳ: ಆಟೊ ವಲಯದಲ್ಲಿ ಹೂಡಿಕೆದಾರರಿಗೆ ಭಾರಿ ಪ್ರಮಾಣದ ಲಾಭ ತಂದುಕೊಟ್ಟಿರುವ ಷೇರುಗಳಲ್ಲಿ ಟಾಟಾ ಮೋಟರ್ಸ್‌ ಮುಂಚೂಣಿಯಲ್ಲಿ ನಿಲ್ಲುತ್ತಿದೆ. ಈ ಕಂಪನಿಯ ಷೇರಿನ ಬೆಲೆಯು ಆರು ತಿಂಗಳ ಅವಧಿಯಲ್ಲಿ ₹ 185.60 (ಶೇ 178.94), ಮೂರು ತಿಂಗಳಲ್ಲಿ ₹ 155.65 (ಶೇ 116.41) ಹಾಗೂ ಒಂದು ತಿಂಗಳಲ್ಲಿ ₹ 113.40 (ಶೇ 64.45) ಏರಿಕೆಯಾಗಿದೆ.

ಅಶೋಕ ಲೈಲೆಂಡ್‌ ಕಂಪನಿಯ ಷೇರಿನ ಮೌಲ್ಯವೂ ಆರು ತಿಂಗಳಲ್ಲಿ ₹ 71.85 (ಶೇ 142.55), ಮೂರು ತಿಂಗಳಲ್ಲಿ ₹ 43.60 (ಶೇ 55.43) ಹಾಗೂ ಒಂದು ತಿಂಗಳಲ್ಲಿ ₹ 27 (ಶೇ 28.34) ಹೆಚ್ಚಾಗಿದೆ.

ಐಷರ್‌ ಮೋಟರ್ಸ್‌ ಷೇರಿನ ಮೌಲ್ಯವು ಕ್ರಮವಾಗಿ ಶೇ 42.91, ಶೇ 41, ಶೇ 21.74 ಮತ್ತು ಮಾರುತಿ ಸುಜುಕಿ ಕಂಪನಿಯ ಷೇರಿನ ಮೌಲ್ಯವು ಕ್ರಮವಾಗಿ ಶೇ 34.13, ಶೇ 14.09, ಶೇ 8.09 ಹಾಗೂ ಟಿವಿಎಸ್‌ ಮೋಟರ್‌ ಷೇರಿನ ಬೆಲೆಯು ಕ್ರಮವಾಗಿ ಶೇ 31.14, ಶೇ 16.45, ಶೇ 9.82 ಮತ್ತು ಹಿರೋ ಮೊಟೊಕಾರ್ಪ್‌ ಷೇರಿನ ಮೌಲ್ಯವು ಕ್ರಮವಾಗಿ ಶೇ 23.14, ಶೇ 16.45 ಮತ್ತು ಶೇ 9.82 ಹೆಚ್ಚಾಗಿದೆ.

2020ನೇ ಸಾಲಿನಲ್ಲಿ ‘ಬಿಎಸ್‌–4’ ಎಂಜಿನ್‌ ವಾಹನ ಮಾರಾಟಕ್ಕೆ ನಿರ್ಬಂಧ ಹೇರಿದ್ದು, ಹೆಚ್ಚಿನ ಬೆಲೆಯ ಬಿ.ಎಸ್‌–6 ವಾಹನಗಳನ್ನು ಮಾರಾಟ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿಯ ನಡುವೆಯೇ ಕೋವಿಡ್‌ ಕಾರಣಕ್ಕೆ ಲಾಕ್‌ಡೌನ್‌ ಜಾರಿಗೊಂಡಿದ್ದು, ಆಟೊ ವಲಯದ ಕಂಪನಿಗಳ ಪಾಲಿಗೆ ಭಾರಿ ಹೊಡೆತ ಬಿದ್ದಿತ್ತು. ಆದರೆ, ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದಂತೆ ವರ್ಷಾಂತ್ಯದಲ್ಲಿ ವಾಹನಗಳ ಖರೀದಿಯ ಪ್ರಮಾಣದಲ್ಲೂ ಏರಿಕೆಯಾಗಿದ್ದು, ಆಟೊ ವಲಯದ ಕಂಪನಿಗಳ ಲಾಭ ಗಳಿಕೆಗೆ ಇದು ಪೂರಕವಾಯಿತು.

ಆಟೊಮೊಬೈಲ್‌ ಡೀಲರ್‌ಗಳ ಸಂಘದ ಒಕ್ಕೂಟದ ಪ್ರಕಾರ 2020–21ನೇ ಆರ್ಥಿಕ ಸಾಲಿನಲ್ಲಿ ಇದೇ ಮೊದಲ ಬಾರಿಗೆ ಆಟೊ ವಲಯದ ಸಗಟು ವಹಿವಾಟು ಚೇತರಿಕೆ ಕಂಡಿದೆ. 2010ರ ಡಿಸೆಂಬರ್‌ ತಿಂಗಳಿಗೆ ಹೋಲಿಸಿದರೆ ಈ ಬಾರಿಯ ಡಿಸೆಂಬರ್‌ ತಿಂಗಳಿನಲ್ಲಿ ವಾಹನಗಳ ನೋಂದಣಿ ಪ್ರಮಾಣದಲ್ಲಿ ಶೇ 11ರಷ್ಟು ಹೆಚ್ಚಾಗಿದೆ. ನವೆಂಬರ್‌ ತಿಂಗಳಿಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಶೇ 19ರಷ್ಟು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT