ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ಎತ್ತರಕ್ಕೆ ಜಿಗಿದ ನಿಫ್ಟಿ: ಹೂಡಿಕೆದಾರರ ₹7.93 ಲಕ್ಷ ಕೋಟಿ ಸಂಪತ್ತು ವೃದ್ಧಿ

Published 14 ಜೂನ್ 2024, 14:26 IST
Last Updated 14 ಜೂನ್ 2024, 14:26 IST
ಅಕ್ಷರ ಗಾತ್ರ

ಮುಂಬೈ: ಎಚ್‌ಡಿಎಫ್‌ಸಿ, ರಿಲಯನ್ಸ್ ಇಂಡಸ್ಟ್ರೀಸ್‌ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ಷೇರುಗಳ ಖರೀದಿಯಿಂದಾಗಿ ಸತತ ಮೂರನೇ ದಿನವಾದ ಶುಕ್ರವಾರವೂ ಷೇರು ಸೂಚ್ಯಂಕಗಳು ಏರಿಕೆ ಕಂಡು, ಹೊಸ ದಾಖಲೆ ಬರೆದಿವೆ.

ರಫ್ತು ಪ್ರಮಾಣದಲ್ಲಿನ ಏರಿಕೆಯೂ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯಲು ನೆರವಾಯಿತು. ವಿದೇಶಿ ಬಂಡವಾಳದ ಹೊರಹರಿವಿನ ನಡುವೆಯೂ ಸೂಚ್ಯಂಕಗಳು ಏರಿಕೆ ದಾಖಲಿಸಿವೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 181 ಅಂಶ ಏರಿಕೆ ಕಂಡು, 76,992 ಅಂಶಗಳಿಗೆ ಮುಟ್ಟುವ ಮೂಲಕ ಹೊಸ ಎತ್ತರಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 66 ಅಂಶ ಏರಿಕೆ ಕಂಡು, 23,465 ಅಂಶಗಳಿಗೆ ಸ್ಥಿರಗೊಂಡಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. 

‌ವಾರದ ವಹಿವಾಟಿನ ಲೆಕ್ಕಾಚಾರದಲ್ಲಿ ಸೆನ್ಸೆಕ್ಸ್‌ 299 ಅಂಶ ಹಾಗೂ ನಿಫ್ಟಿ 175 ಅಂಶ ಏರಿಕೆಯಾಗಿದೆ. 

ಮೂರು ದಿನಗಳ ಗೂಳಿ ಓಟದಿಂದಾಗಿ ಹೂಡಿಕೆದಾರರ ಸಂಪತ್ತು ₹7.93 ಲಕ್ಷ ಕೋಟಿ ವೃದ್ಧಿಯಾಗಿದೆ. ಬಿಎಸ್‌ಇ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ₹434 ಲಕ್ಷ ಕೋಟಿಗೆ ಮುಟ್ಟಿದೆ.

ಸೆನ್ಸೆಕ್ಸ್‌ ಗುಚ್ಛದಲ್ಲಿ ಮಹೀಂದ್ರ ಆ್ಯಂಡ್‌ ಮಹೀಂದ್ರ, ಟೈಟನ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್‌ ಸಿಮೆಂಟ್‌, ಬಜಾಜ್‌ ಫೈನಾನ್ಸ್‌, ಎಕ್ಸಿಸ್‌ ಬ್ಯಾಂಕ್‌, ಟಾಟಾ ಮೋಟರ್ಸ್‌ ಮತ್ತು ಏಷ್ಯನ್‌ ಪೇಂಟ್ಸ್‌ ಷೇರಿನ ಮೌಲ್ಯ ಏರಿಕೆ ಆಗಿದೆ.‌ ಅಂಬುಜಾ ಸಿಮೆಂಟ್ಸ್‌ ಷೇರಿನ ಮೌಲ್ಯ ಶೇ 2ರಷ್ಟು ಹೆಚ್ಚಳವಾಗಿದೆ.

ಟೆಕ್‌ ಮಹೀಂದ್ರ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌, ವಿಪ್ರೊ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಲಾರ್ಸೆನ್‌ ಆ್ಯಂಡ್‌ ಟೊಬ್ರೊ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಷೇರಿನ ಮೌಲ್ಯ ಇಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT