ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ನಡೆದ ವಹಿವಾಟಿನಲ್ಲಿ ಮೊದಲ ಬಾರಿಗೆ 84 ಸಾವಿರ ಅಂಶ ದಾಟಿದೆ.
ಬ್ಯಾಂಕಿಂಗ್ ಷೇರುಗಳ ಮಾರಾಟದ ಏರಿಕೆಯಿಂದಾಗಿ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸಿರುವುದು ಹೂಡಿಕೆದಾರರಲ್ಲಿ ಉತ್ಸಾಹ ಹೆಚ್ಚಿಸಿದೆ. ಹಾಗಾಗಿ, ಸೂಚ್ಯಂಕಗಳು ಏರಿಕೆಯ ಹಾದಿ ಹಿಡಿದಿವೆ.
ಹೂಡಿಕೆದಾರರ ಸಂಪತ್ತು ₹6.24 ಲಕ್ಷ ಕೋಟಿ ಹೆಚ್ಚಳವಾಗಿದೆ.
ಸೆನ್ಸೆಕ್ಸ್ 1,359 ಅಂಶ ಏರಿಕೆ ಕಂಡು, 84,544 ಅಂಶಗಳಲ್ಲಿ ಮುಕ್ತಾಯಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 375 ಅಂಶ ಏರಿಕೆ ಕಂಡು 25,790 ಅಂಶಗಳಲ್ಲಿ ಸ್ಥಿರಗೊಂಡಿತು.
ಜೆಎಸ್‌ಡಬ್ಲ್ಯು ಸ್ಟೀಲ್, ಐಸಿಐಸಿಐ ಬ್ಯಾಂಕ್, ಎಲ್ ಆ್ಯಂಡ್ ಟಿ, ಭಾರ್ತಿ ಏರ್‌ಟೆಲ್, ನೆಸ್ಲೆ, ಅದಾನಿ ಪೋರ್ಟ್ಸ್, ಎಚ್‌ಸಿಎಲ್, ಎಚ್‌ಡಿಎಫ್‌ಸಿ, ಟೆಕ್ ಮಹೀಂದ್ರ, ಮಾರುತಿ, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಷೇರುಗಳ ಮೌಲ್ಯ ಏರಿಕೆ ಕಂಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್ ಇಂಡ್ ಬ್ಯಾಂಕ್, ಟಿಸಿಎಸ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳ ಮೌಲ್ಯದಲ್ಲಿ ಇಳಿಕೆಯಾಗಿದೆ.