ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಹೂಡಿಕೆದಾರರ ಜೇಬು ತುಂಬಿಸಿದ ಐಪಿಒ

ಎರಡು ಪಟ್ಟು ಹೆಚ್ಚಾದ ರೂಟ್‌ ಮೊಬೈಲ್‌ ಕಂಪನಿಯ ಷೇರು ಮೌಲ್ಯ
Last Updated 17 ಜನವರಿ 2021, 15:31 IST
ಅಕ್ಷರ ಗಾತ್ರ

2020ರಲ್ಲಿ ಷೇರುಪೇಟೆಗೆ ತೆಗೆದುಕೊಂಡ 15 ಕಂಪನಿಗಳ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಗಳು ಹೂಡಿಕೆದಾರರ ಜೇಬು ತುಂಬಿಸುವಲ್ಲಿ ಯಶಸ್ವಿಯಾಗಿವೆ. ಅಲ್ಪಾವಧಿಯಲ್ಲೇ ಮೂರು ಕಂಪನಿಗಳ ಐಪಿಒಗಳು ಮೂರಂಕಿ ಲಾಭವನ್ನು ತಂದುಕೊಟ್ಟಿದ್ದರೆ, 11 ಕಂಪನಿಗಳ ಐಪಿಒಗಳು ಎರಡಂಕಿ ಲಾಭವನ್ನು ನೀಡಿವೆ. 2020ರಲ್ಲಿ ಬಿಡುಗಡೆಯಾದ ಐಪಿಒಗಳ ಕುರಿತ ಅವಲೋಕನ ಇಲ್ಲಿದೆ...

**

ಕೋವಿಡ್‌ನಿಂದಾಗಿ ದೇಶದಲ್ಲಿ ಹಲವು ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೂ 2020ರಲ್ಲಿ ಷೇರುಪೇಟೆಗೆ ತೆಗೆದುಕೊಂಡ 15 ಕಂಪನಿಗಳ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಗಳು ಹೂಡಿಕೆದಾರರ ಜೇಬು ತುಂಬಿಸುವಲ್ಲಿ ಯಶಸ್ವಿಯಾಗಿವೆ.

ಹದಿನೈದು ಐಪಿಒಗಳ ಪೈಕಿ ರೂಟ್‌ ಮೊಬೈಲ್‌, ಬರ್ಗರ್‌ ಕಿಂಗ್‌ ಇಂಡಿಯಾ ಹಾಗೂ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ ಕಂಪನಿಗಳ ಐಪಿಒಗಳು ಮೂರಂಕಿ ಲಾಭವನ್ನು ಹೂಡಿಕೆದಾರರಿಗೆ ತಂದುಕೊಟ್ಟಿವೆ. 11 ಐಪಿಒಗಳು ಎರಡಂಕಿ ಲಾಭ ಗಳಿಸಿದ್ದರೆ, ಯುಟಿಐ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯ ಐಪಿಒ ಮಾತ್ರ ಒಂದಂಕಿಗೆ ಸೀಮಿತವಾಗಿದೆ. ಕಳೆದ ವರ್ಷ ಬಿಡುಗಡೆಯಾದ 15 ಐಪಿಒಗಳಲ್ಲಿ ಯಾವ ಕಂಪನಿಯ ಷೇರಿನ ಬೆಲೆಯೂ ಹಂಚಿಕೆಯಾದ ಬೆಲೆಗಿಂತ (ಇಶ್ಶೂ ಪ್ರೈಸ್‌) ಹೆಚ್ಚಿನ ಪ್ರಮಾಣದಲ್ಲೇ ಷೇರುಪೇಟೆಯಲ್ಲಿ ವಹಿವಾಟು ಆಗುತ್ತಿರುವುದು ಒಳ್ಳೆಯ ಬೆಳವಣಿಗೆ.

ಷೇರುಪೇಟೆಗೆ ಬಿಡುಗಡೆಯಾದ ದಿನದಂದು (ಲೀಸ್ಟಿಂಗ್‌ ಡೇ) ನಾಲ್ಕು ಕಂಪನಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಐಪಿಒಗಳ ಷೇರಿನ ಮೌಲ್ಯ ಹಂಚಿಕೆ ಬೆಲೆಗಿಂತಲೂ ಹೆಚ್ಚಾಗಿವೆ. ಮೊದಲ ದಿನದ ವಹಿವಾಟಿನಲ್ಲೇ ಭಾರಿ ಲಾಭ ಗಳಿಸುವ ಮೂಲಕ ಸಂಚಲನ ಮೂಡಿಸಿರುವ ಮೊದಲ ಮೂರು ಸ್ಥಾನಗಳಲ್ಲಿ ಬರ್ಗರ್‌ ಕಿಂಗ್‌ ಇಂಡಿಯಾ (ಶೇ 125), ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಜೀಸ್‌ (ಶೇ 123.46) ಹಾಗೂ ಬೆಕ್ಟರ್ಸ್‌ ಫುಡ್‌ ಸ್ಪೆಷಾಲಿಟೀಸ್‌ (ಶೇ 106.31) ಕಂಪನಿಗಳಿವೆ. ಯುಟಿಐ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿ (ಶೇ –14.58), ಏಂಜೆಲ್‌ ಬ್ರೋಕಿಂಗ್‌ (ಶೇ –9.86), ಎಸ್‌.ಬಿ.ಐ ಕಾರ್ಡ್ಸ್‌ (ಶೇ –9.74) ಹಾಗೂ ಇಕ್ವಟಸ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ (ಶೇ –0.60) ಕಂಪನಿಗಳು ಮೊದಲ ದಿನದ ವಹಿವಾಟಿನಲ್ಲೇ ಐಪಿಒ ಬೆಲೆಗಿಂತಲೂ ಕುಸಿದು ನಷ್ಟವನ್ನು ಅನುಭವಿಸಿದ್ದವು.

ಚಾಂಪಿಯನ್‌ ಆದ ರೂಟ್‌ ಮೊಬೈಲ್‌

ಐಟಿ ಸರ್ವಿಸ್‌ ಆ್ಯಂಡ್‌ ಕನ್ಸಲ್ಟಿಂಗ್‌ ವಲಯದ ರೂಟ್‌ ಮೊಬೈಲ್‌ ಕಂಪನಿಯ ಷೇರಿನ ಬೆಲೆಯು (ಐಪಿಒ ಹಂಚಿಕೆ ಬೆಲೆ ₹ 350) ರಾಷ್ಟ್ರೀಯ ಷೇರುಪೇಟೆಯಲ್ಲಿ 2021ರ ಜನವರಿ 15ರ ವಹಿವಾಟು ಅಂತ್ಯಕ್ಕೆ ₹ 799.20 (ಶೇ 228.34) ಹೆಚ್ಚಾಗುವ ಮೂಲಕ 2020ನೇ ಸಾಲಿನ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈ ಕಂಪನಿಯ ಐಪಿಒ 2020ರ ಸೆಪ್ಟೆಂಬರ್‌ 17ರಂದು ಷೇರುಪೇಟೆಗೆ ಬಿಡುಗಡೆಯಾಗಿದ್ದು, ಮೊದಲ ದಿನವೇ ₹ 301.30 (ಶೇ 86.08)ರಷ್ಟು ಹೆಚ್ಚಾಗಿತ್ತು. ಷೇರುಪೇಟೆಗೆ ತೆರೆದುಕೊಂಡ ನಾಲ್ಕು ತಿಂಗಳ ಅವಧಿಯಲ್ಲೇ ಮೌಲ್ಯವನ್ನು ಎರಡು ಪಟ್ಟು ಹೆಚ್ಚಿಸಿಕೊಂಡು ಗಮನ ಸೆಳೆದಿದೆ.

ಬರ್ಗರ್‌ ಕಿಂಗ್‌ ಇಂಡಿಯಾ ಕಂಪನಿಯ ಷೇರಿನ ಬೆಲೆಯು (ಐಪಿಒ ಹಂಚಿಕೆ ಬೆಲೆ ₹ 60) ಈಗ ₹ 83.90 (ಶೇ 139.80) ಹೆಚ್ಚಾಗಿದೆ. ಈ ಕಂಪನಿಯ ಐಪಿಒ ಕಳೆದ ಡಿಸೆಂಬರ್‌ 14ರಂದು ಷೇರುಪೇಟೆಗೆ ಬಿಡುಗಡೆಯಾಗಿದ್ದು, ಮೊದಲ ದಿನವೇ ₹ 75 (ಶೇ 125)ರಷ್ಟು ಏರಿಕೆ ಕಂಡಿತ್ತು.

ಕಂಪ್ಯೂಟರ್‌ ಸಾಫ್ಟ್‌ವೇರ್‌ ತಯಾರಿಸುವ ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಾಜಿಸ್‌ ಕಂಪನಿಯ ಷೇರಿನ ಬೆಲೆಯು (ಐಪಿಒ ಹಂಚಿಕೆ ಬೆಲೆ ₹ 166) ಈಗ ₹ 211.50 (ಶೇ 127.40) ಏರಿಕೆ ಕಂಡಿದೆ. ಕಳೆದ ಸೆಪ್ಟೆಂಬರ್‌ 17ರಂದು ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಈ ಕಂಪನಿಯ ಷೇರು ಮೊದಲ ದಿನವೇ ₹ 204.95 (ಶೇ 123.46) ಏರಿಕೆಯನ್ನು ದಾಖಲಿಸಿತ್ತು.

ಡಿಸೆಂಬರ್‌ 24ರಂದು ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಬೆಕ್ಟರ್ಸ್‌ ಫುಡ್‌ ಸ್ಪೆಷಾಲಿಟಿ ಕಂಪನಿಯ (ಐಪಿಒ ಹಂಚಿಕೆ ಬೆಲೆ ₹ 288) ಷೇರಿನ ಬೆಲೆ ಮೊದಲ ದಿನವೇ 306.20 (ಶೇ 106.31) ಹೆಚ್ಚಾಗಿತ್ತು. ಆದರೆ, ಕ್ರಮೇಣ ಇಳಿಮುಖ ಕಂಡ ಈ ಕಂಪನಿಯ ಷೇರಿನ ಬೆಲೆಯು ಜನವರಿ 15ಕ್ಕೆ ವಹಿವಾಟು ಅಂತ್ಯಗೊಂಡಂತೆ ₹ 449.05ಕ್ಕೆ ತಲುಪುವ ಮೂಲಕ ಕೇವಲ ₹ 161.05 (ಶೇ 55.92)ಯಷ್ಟೇ ಹೆಚ್ಚಾಗಿದೆ. ಇಪ್ಪತ್ತು ದಿನಗಳ ವಹಿವಾಟಿನಲ್ಲೇ ಈ ಕಂಪನಿಯ ಷೇರಿನ ಬೆಲೆಯು ಬಿಡುಗಡೆಯಾದ ದಿನಕ್ಕೆ ಹೋಲಿಸಿದರೆ ಶೇ 50ರಷ್ಟು ಕುಸಿತಗೊಂಡಿದೆ.

ರೋಸರಿ ಬಯೋಟೆಕ್‌ ಕಂಪನಿಯ ಷೇರಿನ ಬೆಲೆಯು ₹ 415 (ಶೇ 97.64); ಲಿಖಿತಾ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿಯ ಷೇರಿನ ಮೌಲ್ಯವು ₹ 73.20 (ಶೇ 61); ಗ್ಲೆಂಡ್‌ ಫಾರ್ಮಾ ಷೇರಿನ ಬೆಲೆಯು ₹ 866.20 (ಶೇ 57.74); ಮಝಾಗಾನ್‌ ಡಾಕ್‌ ಶಿಪ್‌ಬಿಲ್ಡರ್ಸ್‌ ಕಂಪನಿಯ ಷೇರಿನ ಮೌಲ್ಯವು ₹ 72.25 (ಶೇ 49.82); ಕಂಪ್ಯೂಟರ್‌ ಏಜ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್‌ ಷೇರಿನ ಬೆಲೆಯು ₹ 568.20 (ಶೇ 45.82); ಕ್ಯಾಮಕಾನ್‌ ಸ್ಪೆಷಾಲಿಟಿ ಕೆಮಿಕಲ್ಸ್‌ನ ಷೇರಿನ ಬೆಲೆಯು ₹ 107.75 (ಶೇ 31.69) ಹಾಗೂ ಎಸ್‌ಬಿಐ ಕಾರ್ಡ್ಸ್‌ ಕಂಪನಿಯ ಷೇರಿನ ಬೆಲೆಯು ₹ 200.45 (ಶೇ 26.54) ಹೆಚ್ಚಾಗಿದೆ.

ಇದೇ ಜನವರಿ 1ರಂದು ಷೇರುಪೇಟೆಗೆ ತೆರೆದುಕೊಂಡ ಆಂಥೋನಿ ವೇಸ್ಟ್‌ ಹ್ಯಾಂಡಲಿಂಗ್‌ ಸೆಲ್‌ ಕಂಪನಿಯ ಷೇರಿನ ಬೆಲೆಯು ₹ 46.9 (ಶೇ 14.8) ಹೆಚ್ಚಾಗಿದೆ. ಈ ಕಂಪನಿಯ ಷೇರು ಮೊದಲ ದಿನ ಐಪಿಒ ಬೆಲೆಗಿಂತ ₹ 92.35 (ಶೇ 29.3) ಹೆಚ್ಚಾಗಿತ್ತು.

2020ರಲ್ಲಿ 15 ಕಂಪನಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಸುಮಾರು ₹ 26,500 ಕೋಟಿ ಬಂಡವಾಳವನ್ನು ಸಂಗ್ರಹಿಸಿವೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಯೆಸ್‌ ಬ್ಯಾಂಕ್‌ ಕಳೆದ ವರ್ಷ ‘ಮುಂದುವರಿದ ಸಾರ್ವಜನಿಕ ಕೊಡುಗೆ’ (ಎಫ್‌.ಪಿ.ಒ) ಮೂಲಕ ಸುಮಾರು ₹ 14 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿತ್ತು. 2019ರಲ್ಲಿ ಷೇರುಪೇಟೆಗೆ ತೆರೆದುಕೊಂಡ 17 ಕಂಪನಿಗಳು ಐಪಿಒಗಳ ಮೂಲಕ ಕೇವಲ 17,433 ಕೋಟಿ ಬಂಡವಾಳವನ್ನು ಸಂಗ್ರಹಿಸಿತ್ತು.

ಕೋವಿಡ್‌ ಕಾರಣಕ್ಕೆ ದೇಶದಲ್ಲಿ ಲಾಕ್‌ಡೌನ್‌ ಹೇರುವ ನಿರ್ಧಾರ ಪ್ರಕಟಿಸಿದ್ದರಿಂದ ಮಾರ್ಚ್‌ 23ರಂದು ಷೇರುಪೇಟೆಯು ನೆಲ ಕಚ್ಚಿತ್ತು. ಶೇ 79ರಷ್ಟು ಕುಸಿತ ಕಂಡಿದ್ದ ಸೂಚ್ಯಂಕವು, ಕ್ರಮೇಣ ಹೂಡಿಕೆದಾರರ ಉತ್ಸಾಹದಿಂದಾಗಿ ಸಾರ್ವಕಾಲಿಕ ಗರಿಷ್ಠ ಮುಟ್ಟಕ್ಕೇರುವುದಕ್ಕೆ 2020 ವರ್ಷ ಸಾಕ್ಷಿಯಾಯಿತು.

ಬಿಡುಗಡೆಗೆ ಸಿದ್ಧವಾದ ಐಆರ್‌ಎಫ್‌ಸಿ ಐಪಿಒ

2020ರಲ್ಲಿ ಬಿಡುಗಡೆಯಾದ ಐಪಿಒಗಳು ಯಶಸ್ಸು ಕಂಡ ಬೆನ್ನಲ್ಲೇ ಇನ್ನಷ್ಟು ಕಂಪನಿಗಳು ಐಪಿಒಗಳ ಮೂಲಕ ಬಂಡವಾಳ ಸಂಗ್ರಹಿಸಲು ಮುಂದೆ ಬರುತ್ತಿವೆ. ಇಂಡಿಯನ್‌ ರೈಲ್ವೆ ಫೈನಾನ್ಸ್‌ ಕಾರ್ಪೊರೇಷನ್‌ ಸಹ ಐಪಿಒ ಬಿಡುಗಡೆ ಮಾಡುತ್ತಿದ್ದು, ಇದೇ ಜನವರಿ 18ರಿಂದ 20ರೊಳಗೆ ಬಿಡ್‌ ಮಾಡಬಹುದಾಗಿದೆ. ₹ 10 ಮುಖಬೆಲೆಯ ಐಪಿಒಗೆ ₹ 25ರಿಂದ ₹ 26ರ ನಡುವೆ ಬಿಡ್‌ ಮಾಡಬಹುದಾಗಿದೆ. ಜನವರಿ 29ರಂದು ಷೇರುಪೇಟೆಗೆ ತೆರೆದುಕೊಳ್ಳುತ್ತಿದೆ.

ಅದೇ ರೀತಿ ಇಂಡಿಗೊ ಪೇಂಟ್ಸ್‌ ಕಂಪನಿ ಸಹ ಐಪಿಒ ಬಿಡುಗಡೆಗೆ ಮುಂದಾಗಿದ್ದು, ಜನವರಿ 20ರಿಂದ 22ರ ನಡುವೆ ಬಿಡ್‌ ಮಾಡಬಹುದಾಗಿದೆ. ₹ 10 ಮುಖಬೆಲೆಯ ಐಪಿಒಗೆ ₹ 1488ದಿಂದ ₹1490ರ ನಡುವೆ ಬಿಡ್‌ ಮಾಡಬಹುದಾಗಿದೆ. ಫೆಬ್ರುವರಿ 2ರಂದು ಷೇರುಪೇಟೆಗೆ ಈ ಕಂಪನಿಯ ಷೇರು ತೆರೆದುಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT