ಶನಿವಾರ, ಜನವರಿ 18, 2020
20 °C

ಏರಿದ ಬಂಗಾರದ ಬೆಲೆ; 10 ಗ್ರಾಂಗೆ ₹ 41,000, ಬೆಳ್ಳಿ ಕೆಜಿಗೆ ₹ 48,474 

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚಿನ್ನದ ಬಿಸ್ಕತ್‌ಗಳು – ಸಂಗ್ರಹ ಚಿತ್ರ

ಬೆಂಗಳೂರು: ಅಮೆರಿಕ–ಇರಾನ್‌ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ, ಷೇರು ಪೇಟೆಗಳ ಮೇಲೆ ಪ್ರಭಾವ ಬೀರಿರುವಂತೆ ಚಿನ್ನ ದರದ ಮೇಲೂ ಆಗಿದೆ. 

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ (ಎಂಸಿಎಕ್ಸ್‌)ನಲ್ಲಿ ಫೆಬ್ರುವರಿಯ ಬಂಗಾರ ಫ್ಯೂಚರ್ಸ್‌ ಬೆಲೆ ಸೋಮವಾರ ಶೇ 2.3ರಷ್ಟು (₹ 918) ಏರಿಕೆಯಾಗುವ ಮೂಲಕ 10 ಗ್ರಾಂಗೆ ₹41,030 ದಾಖಲೆಯ ಮಟ್ಟ ತಲುಪಿತು. ಶುಕ್ರವಾರ ಸಹ ಶೇ 2ರಷ್ಟು ಹೆಚ್ಚಳದೊಂದಿಗೆ 10 ಗ್ರಾಂ ಬಂಗಾರದ ಬೆಲೆ ₹ 850 ಜಿಗಿದಿತ್ತು. ಪ್ರಸ್ತುತ ₹ 40,900ರಲ್ಲಿ ವಹಿವಾಟು ನಡೆದಿದೆ. 

ಮಧ್ಯ ಪ್ರಾಚ್ಯದಲ್ಲಿನ ಆತಂಕದ ವಾತಾವರಣ ಹೂಡಿಕೆದಾರರನ್ನು ‘ಹೂಡಿಕೆಯ ಸುರಕ್ಷಿತ ಸ್ವರ್ಗ’ ಚಿನ್ನದ ಕಡೆಗೆ ಮುಖ ಮಾಡಿಸಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ. ದೇಶೀಯ ಚಿನಿವಾರ ಪೇಟೆಯಲ್ಲಿ ಎರಡು ದಿನಗಳಲ್ಲಿ 10 ಗ್ರಾಂ ಚಿನ್ನಕ್ಕೆ ಸುಮಾರು ₹ 1800 ಹೆಚ್ಚಳವಾಗಿದ್ದು, ಏಳು ವರ್ಷಗಳ ಗರಿಷ್ಠ ಮಟ್ಟದತ್ತ ಸಾಗಿದೆ. ಎಂಸಿಎಕ್ಸ್‌ನಲ್ಲಿ ಬೆಳ್ಳಿಯ ಫ್ಯೂಚರ್ಸ್‌ ಬೆಲೆ ಕೂಡ ಶೇ 2ರಷ್ಟು (₹ 947) ಜಿಗಿಯುವ ಮೂಲಕ ಕೆಜಿಗೆ ₹ 48,474 ಆಗಿದೆ. 

ಜಾಗತಿಕ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನ ದರ ಶೇ 1.5ರಷ್ಟು ಹೆಚ್ಚಳದೊಂದಿಗೆ ಪ್ರತಿ ಔನ್ಸ್‌ಗೆ (28.34 ಗ್ರಾಂ.)  ₹ 1,13,791 (1,579.55 ಡಾಲರ್‌) ತಲುಪಿದ್ದು, ಕಳೆದ ಆರು ವರ್ಷಗಳಲ್ಲೇ ಅತ್ಯಧಿಕ ಮಟ್ಟವಾಗಿದೆ. ಆಮದು ಆಗುವ ಚಿನ್ನಕ್ಕೆ ಭಾರತದಲ್ಲಿ ಜಾಗತಿಕ ಮಾರುಕಟ್ಟೆಯ ದರದೊಂದಿಗೆ ಶೇ 12.5ರಷ್ಟು ಆಮದು ದರ ಮತ್ತು ಶೇ 3ರಷ್ಟು ಜಿಎಸ್‌ಟಿ ಸೇರುತ್ತದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನ ₹ 42,180 ಆಗಿದೆ. 

ಇದನ್ನೂ ಓದಿ: 

ಭಾರತ ಬೇಡಿಕೆ ತಕ್ಕಂತೆ ಚಿನ್ನ ಆಮದು ಮಾಡಿಕೊಳ್ಳುತ್ತಿದ್ದು, ಡಾಲರ್‌ ಎದುರು ರೂಪಾಯಿ ಮೌಲ್ಯ ₹ 72ಕ್ಕಿಂತ ಹೆಚ್ಚಾಗುವ ಮೂಲಕ ಕುಸಿತ ಕಂಡಿದೆ. ಇದರಿಂದ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಚಿನ್ನ 10 ಗ್ರಾಂಗೆ ₹ 41,300 ಹಾಗೂ ಬೆಳ್ಳಿ ಕೆಜಿಗೆ ₹ 48,900 ಮುಟ್ಟುವ ಸಾಧ್ಯತೆ ಇರುವುದಾಗಿ ಎಂಎಸ್‌ಸಿ ಗ್ಲೋಬಲ್‌ ಸೆಕ್ಯುರಿಟೀಸ್‌ ಹೇಳಿದೆ. 

ದೇಶೀಯ ಮಾರುಕಟ್ಟೆಯಲ್ಲಿ ವರ್ಷದಲ್ಲಿ ಚಿನ್ನದ ದರ ಸುಮಾರು ಶೇ 25ರಷ್ಟು ಜಿಗಿತ ಕಂಡಿದ್ದು, ಚಿಲ್ಲರೆ ಖರೀದಿದಾರರಿಂದ ಬೇಡಿಕೆ ಕುಸಿದಿದೆ. ಬೆಲೆ ಏರಿಕೆ ಕಾರಣದಿಂದಾಗಿ ಖರೀದಿಯಿಂದ ಜನರು ದೂರ ಸರಿದಿದ್ದು, 2018ಕ್ಕೆ ಹೋಲಿಸಿದರೆ 2019ರಲ್ಲಿ ಚಿನ್ನದ ಆಮದು ಪ್ರಮಾಣ ಶೇ 12ರಷ್ಟು ಕಡಿಮೆಯಾಗಿದೆ. 

ಬಾಗ್ದಾನ್‌ ವಾಯುನೆಲೆಯಿಂದ ಅಮೆರಿಕ ಸೇನೆಯನ್ನು ಹೊರ ಕಳುಹಿಸಲು ಇರಾಕ್‌ ಮುಂದಾದರೆ, ಆರ್ಥಿಕ ನಿರ್ಬಂಧ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾನುವಾರ ಬೆದರಿಕೆಯೊಡ್ಡಿದ್ದಾರೆ. ಇದರಿಂದಾಗಿ ಇರಾನ್‌ ಮತ್ತು ಇರಾಕ್‌ ಎರಡೂ ರಾಷ್ಟ್ರಗಳೊಂದಿಗೆ ಅಮೆರಿಕ ಜಿದ್ದಿಗೆ ಬಿದ್ದಂತಾಗಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆ ಕಾವು ತೀಕ್ಷ್ಣವಾಗುತ್ತಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು