ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಲೆಕ್ಕಾಚಾರ ಅರಿಯದೆ ಷೇರು ಹೂಡಿಕೆ ಬೇಡ!

Last Updated 22 ಮಾರ್ಚ್ 2021, 19:35 IST
ಅಕ್ಷರ ಗಾತ್ರ

‘ಷೇರುಪೇಟೆಯಲ್ಲಿ ಹೂಡಿಕೆ ಮಾಡಿದರೆ ಸಿಕ್ಕಾಪಟ್ಟೆ ತೆರಿಗೆ ಕಟ್ಟಬೇಕು. ಹೂಡಿಕೆ ಮಾಡಿ ಗಳಿಸಿದ್ದಕ್ಕಿಂತ ಅಲ್ಲಿ ತೆರಿಗೆ ಹೊರೆಯೇ ಹೆಚ್ಚು...’ ‘ಅಯ್ಯೋ, ಹೂಡಿಕೆ ಮಾಡುವಾಗ ನಷ್ಟ ಆದ್ರೆ ಏನು ಮಾಡೋದು? ಅಲ್ಪಾವಧಿ-ದೀರ್ಘಾವಧಿ ಗಳಿಕೆ ಲೆಕ್ಕಾಚಾರ ಹೇಗೆ?’

ಹೀಗೆ ಹೂಡಿಕೆದಾರರಲ್ಲಿ ತೆರಿಗೆ ವಿಚಾರವಾಗಿ ಬಹಳಷ್ಟು ಗೊಂದಲಗಳಿವೆ. ಆದರೆ ವಾಸ್ತವದಲ್ಲಿ ಷೇರುಗಳ ಮೇಲಿನ ಹೂಡಿಕೆಯಲ್ಲಿನ ತೆರಿಗೆ ಲೆಕ್ಕಾಚಾರ ಕಬ್ಬಿಣದ ಕಡಲೆಯಲ್ಲ.

ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ (TAX ON STCG): ಯಾವುದೇ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಿ ಒಂದು ವರ್ಷದ (365 ದಿನಗಳ ಅವಧಿ) ಒಳಗೆ ಅದನ್ನು ಮಾರಾಟ ಮಾಡಿದರೆ ಅಲ್ಪಾವಧಿ ಬಂಡವಾಳ ಗಳಿಕೆ (STCG) ತೆರಿಗೆ ಅನ್ವಯವಾಗುತ್ತದೆ. ಶೇಕಡ 15ರಷ್ಟು ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ ಮೇಲೆ ಶೇ 4ರಷ್ಟು ಸೆಸ್ ಪಾವತಿಸಬೇಕಾಗುತ್ತದೆ. ಉದಾಹರಣೆಗೆ ನೀವು ‘ಅ’ ಎಂಬ ಕಂಪನಿಯ ಷೇರುಗಳಲ್ಲಿ ₹ 30,000 ಹೂಡಿಕೆ ಮಾಡಿದ ಬಳಿಕ, ಏಳು ತಿಂಗಳ ಅವಧಿಯಲ್ಲಿ ₹ 10 ಸಾವಿರ ಲಾಭ ಗಳಿಸಿದ್ದೀರಿ ಎಂದಿಟ್ಟುಕೊಳ್ಳಿ. ಒಂದೊಮ್ಮೆ ಆ ಷೇರುಗಳನ್ನು ₹ 10 ಸಾವಿರ ಲಾಭಕ್ಕೆ ಮಾರಾಟ ಮಾಡಿದಲ್ಲಿ ಶೇ 15ರಷ್ಟು ಅಂದರೆ ₹ 1,500 ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ನೀವು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ವರ್ಗದ ಅಡಿಯಲ್ಲಿ ಬಂದರೂ, ಷೇರು ಹೂಡಿಕೆ ಮೇಲಿನ ಅಲ್ಪಾವಧಿ ಗಳಿಕೆಗೆ ಶೇ 15 ರಷ್ಟು ತೆರಿಗೆ, ಅದರ ಮೇಲೆ ಶೇ 4 ರಷ್ಟು ಸೆಸ್ ಪಾವತಿಸಿದರೆ ಆಯಿತು.

ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ (TAX ON LTCG): ಯಾವುದೇ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಿದ ಒಂದು ವರ್ಷದ ಬಳಿಕ ಅದನ್ನು ಮಾರಾಟ ಮಾಡಿದರೆ ಶೇ 10ರಷ್ಟು ದೀರ್ಘಾವಧಿ ಬಂಡವಾಳ ಗಳಿಕೆ (LTCG) ತೆರಿಗೆ ಅನ್ವಯಿಸುತ್ತದೆ. ಆದರೆ ಇಲ್ಲಿ ಹೂಡಿಕೆ ಮೇಲಿನ ₹ 1 ಲಕ್ಷದವರೆಗಿನ ಗಳಿಕೆಗೆ ತೆರಿಗೆ ಇರುವುದಿಲ್ಲ.

ಉದಾಹರಣೆ-1: ನೀವು ₹ 50,000 ಮೌಲ್ಯದ ಷೇರುಗಳನ್ನು ಖರೀದಿಸಿ ₹ 30,000 ಲಾಭ ಗಳಿಸಿದ್ದೀರಿ ಎಂದುಕೊಳ್ಳಿ. ಷೇರು ಖರೀದಿಸಿದ 365 ದಿನಗಳ (ಒಂದು ವರ್ಷದ) ನಂತರ ಅವನ್ನು ಮಾರಾಟ ಮಾಡಿದರೆ ನೀವು ಗಳಿಸಿರುವ ₹ 30,000 ಲಾಭಕ್ಕೆ ತೆರಿಗೆ ಕಟ್ಟಬೇಕಿಲ್ಲ.

ಉದಾಹರಣೆ-2: ನೀವು ₹ 9 ಲಕ್ಷ ಮೌಲ್ಯದ ಷೇರುಗಳನ್ನು ಖರೀದಿಸಿ ಒಂದು ವರ್ಷದ ನಂತರ ₹ 10 ಲಕ್ಷ ಲಾಭ ಗಳಿಸಿದ್ದು, ಷೇರುಗಳ ಮಾರಾಟಕ್ಕೆ ನಿರ್ಧರಿಸಿದ್ದೀರಿ ಎಂದು ಭಾವಿಸೋಣ. ಈಗ ನೀವು ₹ 10 ಲಕ್ಷ ಲಾಭದಲ್ಲಿ ₹ 1 ಲಕ್ಷಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ. ಇನ್ನುಳಿದ ₹ 9 ಲಕ್ಷದ ಮೇಲೆ ಶೇ 10ರಷ್ಟು ಅಂದರೆ ₹ 90 ಸಾವಿರ ತೆರಿಗೆ ಕಟ್ಟಬೇಕಾಗುತ್ತದೆ.

ಷೇರುಪೇಟೆ ಹೂಡಿಕೆ ತೆರಿಗೆ ಲೆಕ್ಕಾಚಾರ

ಅಲ್ಪಾವಧಿ ಬಂಡವಾಳ ಗಳಿಕೆ ತೆರಿಗೆ (STCG);ದೀರ್ಘಾವಧಿ ಬಂಡವಾಳ ಗಳಿಕೆ ತೆರಿಗೆ (LTCG)

ಷೇರನ್ನು 1 ವರ್ಷದ ಒಳಗೆ ಮಾರಾಟ ಮಾಡಿದರೆ, ಬಂದ ಲಾಭಕ್ಕೆ ಶೇ15 ರಷ್ಟು ತೆರಿಗೆ + ಶೇ 4ರಷ್ಟು ಸೆಸ್; ಷೇರನ್ನು 1 ವರ್ಷದ ನಂತರ ಮಾರಿದರೆ, ₹ 1 ಲಕ್ಷದವರೆಗಿನ ಗಳಿಕೆಗೆ ತೆರಿಗೆ ಇಲ್ಲ. ನಂತರದ ಗಳಿಕೆಗೆ ಶೇ 10ರಷ್ಟು ತೆರಿಗೆ ಅನ್ವಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT