ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿಯುತ್ತಿದೆ ಷೇರುಪೇಟೆ: ಹೂಡಿಕೆದಾರರು ಈಗೇನು ಮಾಡಬೇಕು?

Last Updated 10 ಮಾರ್ಚ್ 2020, 12:08 IST
ಅಕ್ಷರ ಗಾತ್ರ

ಕೆಟ್ಟ ಸುದ್ದಿಗಳ ಪ್ರಭಾವದಿಂದಷೇರುಪೇಟೆ ಸತತ ಕುಸಿಯಲು ಕಾರಣವಾಗುತ್ತಿದೆ.ಕೋವಿಡ್ 19 ಪ್ರಕರಣಗಳು ಪ್ರತಿದಿನ ಎಂಬಂತೆ ವರದಿಯಾಗುತ್ತಿವೆ. ಯೆಸ್‌ ಬ್ಯಾಂಕ್ ಪತನದಿಂದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ. ವಿವಿಧ ದೇಶಗಳ ನಡುವೆ ಕಚ್ಚಾತೈಲ ದರಸಮರವೂ ಸೇರಿದಂತೆ ಹಲವು ಬಿಕ್ಕಟ್ಟುಗಳಿಂದ ಷೇರುಪೇಟೆ ಕಂಗಾಲಾಗಿದೆ.

ಮುಂಬೈ ಪೇಟೆಯ ಸಂವೇದಿ ಸೂಚ್ಯಂಕವು ಸೋಮವಾರ 1900 ಅಂಶಗಳ ಕುಸಿತ ದಾಖಲಿಸಿ, 35,634.95 ಅಂಶಗಳೊಂದಿಗೆ ವಹಿವಾಟು ಮುಗಿಸಿತು. ತಿಂಗಳಿಗಿಷ್ಟು ಎಂಬಂತೆ ಆರ್‌ಡಿ (ರಿಕರಿಂಗ್ ಡೆಪಾಸಿಟ್) ಮಾದರಿಯಲ್ಲಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಎಸ್‌ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್) ಮಾಡುತ್ತಿರುವ ಲಕ್ಷಾಂತರ ಮ್ಯೂಚ್ಯುವಲ್ ಫಂಡ್ ಹೂಡಿಕೆದಾರರಲ್ಲಿ ಈ ಕುಸಿತದಿಂದ ಆತಂಕ ಉಂಟಾಗಿದೆ.

ಕೆಲವರ ಹೂಡಿಕೆ ಅಸಲಿಗಿಂತ ಕಡಿಮೆಯಾಗಿದೆ. ಆದರೂ ವೈಯಕ್ತಿಕ ಹೂಡಿಕೆ ಮತ್ತು ಹಣಕಾಸು ಸಲಹೆಗಾರರು ಹೂಡಿಕೆ ಯೋಜನೆಗಳಿಗೆ ಬದ್ಧರಾಗಿರುವಂತೆ ಮತ್ತು ಹೊಸದಾಗಿ ಯಾವುದೇ ಹೂಡಿಕೆ ಸಾಹಸ ಮಾಡದಿರುವಂತೆ ಎಚ್ಚರ ಹೇಳುತ್ತಿದ್ದಾರೆ.

ಕೋವಿಡ್ 19 ಭೀತಿಯ ಜೊತೆಗೆ ಕಚ್ಚಾ ತೈಲ ಧಾರಣೆಯು ಮಾರುಕಟ್ಟೆಯ ಭವಿಷ್ಯವನ್ನು ನಿರ್ಧರಿಸುತ್ತದೆ. ತನ್ನ ಒಂದು ಕಾಲದ ಸಹವರ್ತಿ ರಷ್ಯಾ ವಿರುದ್ಧ ಸೌದಿ ಅರೇಬಿಯಾ ಆರಂಭಿಸಿರುವ ಬೆಲೆಸಮರದಿಂದಾಗಿ ಪ್ರಮುಖ ಕಂಪನಿಗಳ ಷೇರುಗಳು ಹಲವು ವರ್ಷಗಳ ಕನಿಷ್ಠಮಟ್ಟಕ್ಕೆ ಕುಸಿದಿದೆ.

‘ಇದು ಷೇರುಪೇಟೆಯಲ್ಲಿ ಹೂಡಿಕೆಗೆ ಸಕಾಲ ಎನ್ನುವುದು ನಿಜ. ಆದರೆಷೇರು ಮಾರುಕಟ್ಟೆಯ ಪ್ರಾಥಮಿಕ ಜ್ಞಾನವಿಲ್ಲದೆ, ಅವರಿವರ ಮಾತು ಕೇಳಿಕೊಂಡು ಲಾಭದ ಆಸೆಗೆ ಹೊಸದಾಗಿ ಷೇರುಪೇಟೆಯಲ್ಲಿ ಹೂಡಿಕೆ ಆರಂಭಿಸುವುದು ಅಪಾಯಕಾರಿ. ಕಂಪನಿಗಳ ಬಗ್ಗೆ ತಕ್ಕಮಟ್ಟಿಗೆ ಜ್ಞಾನವಿರುವವರಿಗೆ ಇದು ಹೂಡಿಕೆಗೆ ಖಂಡಿತ ಉತ್ತಮ ಅವಕಾಶ ಕಲ್ಪಿಸಿಕೊಡುತ್ತದೆ’ ಎನ್ನುತ್ತಾರೆವೆಲ್ತ್ ಮ್ಯಾನೇಜರ್ ರಮೇಶ್‌.

‘ಮ್ಯೂಚುವಲ್‌ ಫಂಡ್‌ಗಳಲ್ಲಿ ಎಸ್‌ಐಪಿ ಮಾಡಿರುವವರು ಮಾರುಕಟ್ಟೆ ಕುಸಿದಿದೆ ಎನ್ನುವ ನೆಪವೊಡ್ಡಿ ಹೂಡಿಕೆ ನಿಲ್ಲಿಸಬಾರದು’ ಎನ್ನುವುದು ಮತ್ತೋರ್ವ ವೆಲ್ತ್ ಮ್ಯಾನೇಜರ್ ಗೌರವ್ ಮೊಂಗಾ ಅವರ ಮಾತು.

‘ಈ ಎಸ್‌ಐಪಿ ನಿಲ್ಲಿಸುತ್ತೇನೆ. ಮಾರುಕಟ್ಟೆಯಲ್ಲಿ ಹೇಗೆ ನೆಗಿಟಿವ್ ಮೂಡ್ ಇದೆ. ಇನ್ನಷ್ಟು ಕುಸಿದ ಮೇಲೆ ಹೂಡಿಕೆ ಆರಂಭಿಸುತ್ತೇನೆ ಎನ್ನುವ ಧೋರಣೆ ಸಲ್ಲದು. ನಿಮ್ಮ ಗುರಿಗಳತ್ತ ಲಕ್ಷ್ಯವಿಟ್ಟು ಹೂಡಿಕೆ ಮುಂದುವರಿಸಿ. ಈಗ ಯೂನಿಟ್‌ಗಳನ್ನುಮಾರಿ, ಮಾರುಕಟ್ಟೆಯಿಂದ ಹೊರಗೆ ಹೋಗಲು ನಿರ್ಧರಿಸಿದರೆ ನೀವು ನಷ್ಟ ಅನುಭವಿಸಬೇಕಾಗುತ್ತದೆ’ ಎನ್ನುವುದು ಅವರ ಕಿವಿಮಾತು.

‘ಕೆಟ್ಟ ಸುದ್ದಿಗಳಿಂದ ಪ್ರಭಾವಿತವಾಗಿ ಮಾರುಕಟ್ಟೆ ಕುಸಿಯುತ್ತಿದೆ. ಇದು ಸ್ಮಶಾನ ವೈರಾಗ್ಯವಿದ್ದಂತೆ. ಕೆಲ ಸಮಯದ ನಂತರ ಮಾರುಕಟ್ಟೆ ಮತ್ತೆ ಮೇಲೇಳಲೇ ಬೇಕು’ ಎನ್ನುವುದು ಷೇರು ದಲ್ಲಾಳಿ ಮತ್ತು ಹೂಡಿಕೆ ಸಲಹೆಗಾರ ಕೃಪಾಲ್ ಅವರ ವಿಶ್ಲೇಷಣೆ.

‘ಭಾರತ ಸರ್ಕಾರ ಮಾಲೀಕತ್ವದ ನವರತ್ನ ಕಂಪನಿಗಳು, ರಿಲಯನ್ಸ್‌ನಂಥ ದೊಡ್ಡ ಕಂಪನಿಯ ಷೇರುಗಳು ಕಡಿಮೆ ಬೆಲೆಗೆ ಸಿಗುತ್ತಿವೆ. ಉತ್ತಮ ಲಾಭಾಂಶ ಘೋಷಿಸುವಆರ್‌ಇಸಿಯಥ ಕಂಪನಿಯ ಷೇರು ಬೆಲೆ ಕುಸಿದಿದೆ. ದೀರ್ಘಾವಧಿ ಅಥವಾ ಕಾಲಮಿತಿ ಹೂಡಿಕೆಯ ದೃಷ್ಟಿಯಿಂದ ಯೋಚಿಸುವವರಿಗೆ ಇದು ಉತ್ತಮ ಅವಕಾಶ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT