ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸಿಗರಿಗೆ ಅಮೆರಿಕದ ನಿರ್ಬಂಧ: ದೇಶದ ಷೇರುಪೇಟೆಯಲ್ಲಿ ತಲ್ಲಣ, ಐಟಿ ಷೇರುಗಳು ಕುಸಿತ

Last Updated 21 ಏಪ್ರಿಲ್ 2020, 5:27 IST
ಅಕ್ಷರ ಗಾತ್ರ

ಬೆಂಗಳೂರು: ಶೂನ್ಯಕ್ಕಿಂತಲೂ ಕಡಿಮೆ ದರಕ್ಕೆ ಕುಸಿದ ಕಚ್ಚಾ ತೈಲ ದರ, ಅಮೆರಿಕಕ್ಕೆ ವಲಸಿಗರ ಪ್ರವೇಶ ನಿರ್ಬಂಧ ಹಾಗೂ ಹೆಚ್ಚುತ್ತಿರುವ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ದೇಶದ ಷೇರುಪೇಟೆಗಳಲ್ಲಿ ತೀವ್ರ ತಲ್ಲಣಿ ಸೃಷ್ಟಿಸಿದೆ. ಐಟಿ ಷೇರುಗಳು ತೀವ್ರ ಕುಸಿತಕ್ಕೆ ಒಳಗಾಗಿವೆ.

ಮಂಗಳವಾರ ವಹಿವಾಟು ಆರಂಭವಾಗ ಕೆಲವೇ ನಿಮಿಷಗಳಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 878 ಅಂಶ ಇಳಿಕೆಯಾಗಿ 30,780 ಅಂಶ ತಲುಪಿತು. ಇನ್ನೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 230 ಅಂಶ ಕುಸಿದು 9,031.55 ಅಂಶ ಮುಟ್ಟಿತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ತಾತ್ಕಾಲಿಕವಾಗಿ ವಲಸಿಗರ ಪ್ರವೇಶವನ್ನು ನಿಷೇಧಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ದೇಶದ ಐಟಿ ಕಂಪನಿಗಳ ಷೇರು ಬೆಲೆ ಶೇ 6ರ ವರೆಗೂ ಇಳಿಕೆಯಾಗಿವೆ. ಟಿಸಿಎಸ್‌, ಇನ್ಫೊಸಿಸ್‌, ಟೆಕ್‌ ಮಹೀಂದ್ರಾ, ವಿಪ್ರೊ, ಎಚ್‌ಸಿಎಲ್ ಟೆಕ್ನಾಲಜೀಸ್‌, ಎನ್‌ಐಐಟಿ ಟೆಕ್ನಾಲಜೀಸ್‌, ಹೆಕ್ಸಾವೇರ್‌ ಟೆಕ್ನಾಲಜೀಸ್‌ ಸೇರಿದಂತೆ ಹಲವು ಕಂಪನಿಗಳ ಷೇರು ಬೆಲೆ ಶೇ 1ರಿಂದ ಶೇ 5ರಷ್ಟು ಕುಸಿದಿವೆ.

ಮೈಂಡ್‌ ಟ್ರೀ ಷೇರು ಬೆಲೆ ಶೇ 6ರಷ್ಟು ಇಳಿಕೆಯಾಗಿ ₹739 ತಲುಪಿದೆ.

ಮಾರುತಿ ಸುಜುಕಿ, ಹಿಂಡಾಲ್ಕೊ, ಟಾಟಾ ಸ್ಟೀಲ್‌, ವೇದಾಂತ ಮತ್ತು ಬಜಾಜ್‌ ಫೈನಾನ್ಸ್‌ ಶೇ 6ರಿಂದ ಶೇ 8ರ ವರೆಗೂ ಇಳಿಕೆಯಾಗಿವೆ. ರಿಲಯನ್ಸ್‌ ಇಂಡಸ್ಟ್ರೀಸ್‌ (ಶೇ 3.49), ಐಸಿಐಸಿಐ ಬ್ಯಾಂಕ್‌ (ಶೇ 5.69), ಎಚ್‌ಡಿಎಫ್‌ಸಿ (ಶೇ 3.08) ಷೇರು ನಷ್ಟ ಅನುಭವಿಸಿದೆ.

ಈ ನಡುವೆಯೂ ಡಾ.ರೆಡ್ಡೀಸ್‌, ಸನ್‌ ಫಾರ್ಮಾ, ಸಿಪ್ಲಾ, ಐಟಿಸಿ ಹಾಗೂ ಹಿಂದುಸ್ತಾನ್‌ ಯೂನಿಲಿವರ್‌ ಷೇರುಗಳು ಶೇ 2ರ ವರೆಗೂ ಗಳಿಕೆ ದಾಖಲಿಸಿವೆ.

ದೇಶದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ರಫ್ತು ಸಂಸ್ಥೆಯಾಗಿರುವ ಇನ್ಫೊಸಿಸ್‌, 2019–20ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹4,335 ಕೋಟಿ ನಿವ್ವಳ ಲಾಭ ಗಳಿಸಿದೆ. ಲಾಭಾಂಶ ಘೋಷಣೆಯ ನಂತರ ಏರಿಕೆಯಾಗಿದ್ದ ಷೇರು ಬೆಲೆ ಇಂದು ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT