ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಸೆನ್ಸೆಕ್ಸ್‌ 50,000

Last Updated 21 ಜನವರಿ 2021, 19:09 IST
ಅಕ್ಷರ ಗಾತ್ರ

2020ರ ಆಗಸ್ಟ್‌ನಲ್ಲಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು, ‘ಷೇರು ಮಾರುಕಟ್ಟೆ ಹಾಗೂ ನೈಜ ಅರ್ಥ ವ್ಯವಸ್ಥೆಯ ನಡುವೆ ಸಂಪರ್ಕ ಇಲ್ಲದಂತಾಗಿದೆ’ ಎಂದು ಹೇಳಿದ್ದರು. ಆಗ ಷೇರು ಮಾರುಕಟ್ಟೆಯ ಸೂಚ್ಯಂಕಗಳಲ್ಲಿ ಕಂಡುಬರುತ್ತಿದ್ದ ತೀವ್ರ ಏರಿಕೆಯನ್ನು ಗಮನಿಸಿ ದಾಸ್ ಅವರು, ‘ಮುಂದೆ ಸೂಚ್ಯಂಕಗಳಲ್ಲಿ ಒಂದಿಷ್ಟು ಪ್ರಮಾಣದ ಇಳಿಕೆ ಖಂಡಿತ ಇರಲಿದೆ’ ಎಂದು ಭವಿಷ್ಯ ನುಡಿದಿದ್ದಾಗಿ ವರದಿಯಾಗಿತ್ತು.

ಲಾಕ್‌ಡೌನ್‌ ಜಾರಿಗೆ ಬಂದ ಸಂದರ್ಭದಲ್ಲಿ 25,981 ಅಂಶಗಳಿಗೆ ತಲುಪಿದ್ದ ಬಿಎಸ್‌ಇ ಸೆನ್ಸೆಕ್ಸ್, ಆಗಸ್ಟ್‌ 20ರ ಸುಮಾರಿಗೆ 38,220ಕ್ಕೆ ತಲುಪಿತ್ತು. ಅಂದರೆ ಶೇಕಡ 47ರಷ್ಟು ಏರಿಕೆ ದಾಖಲಿಸಿತ್ತು! ಆಗಸ್ಟ್ ನಂತರವೂ ಮಾರುಕಟ್ಟೆಯಲ್ಲಿ ಗೂಳಿಯ ಓಟ ನಿಲ್ಲಲಿಲ್ಲ. ಹೊಸ ವರ್ಷದ ಆರಂಭದಲ್ಲಿ, ಅಂದರೆ ಜನವರಿ 11ರಂದು, ಬಿಡುಗಡೆ ಮಾಡಲಾದ ಹಣಕಾಸು ಸ್ಥಿರತೆ ವರದಿಯಲ್ಲಿ ಕೂಡ ದಾಸ್ ಅವರು, ಹಣಕಾಸು ಮಾರುಕಟ್ಟೆಯ ನಾಗಾಲೋಟದ ಬಗ್ಗೆ ಒಂದೆರಡು ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ. ‘ಹಣಕಾಸು ಮಾರುಕಟ್ಟೆಗಳ ಕೆಲವು ವಲಯಗಳು ಹಾಗೂ ನಿಜವಾದ ಅರ್ಥವ್ಯವಸ್ಥೆಯ ನಡುವಿನ ಕಂದಕವು ದೊಡ್ಡದಾಗುತ್ತಿದೆ. ಜಾಗತಿಕವಾಗಿಯೂ ದೇಶೀಯವಾಗಿಯೂ ಈ ರೀತಿ ಆಗುತ್ತಿದೆ. ಕೆಲವು ಹಣಕಾಸು ಉತ್ಪನ್ನಗಳ ಬೆಲೆ ಅತಿಯಾಗಿ ಹೆಚ್ಚಾಗಿರುವುದು ಹಣಕಾಸು ಸ್ಥಿರತೆಗೆ ಅಪಾಯ ಒಡ್ಡುತ್ತದೆ. ಈ ಅಪಾಯಗಳ ಬಗ್ಗೆ ಬ್ಯಾಂಕ್‌ಗಳಿಗೆ ಅರಿವು ಇರಬೇಕು...’ ಎಂದು ದಾಸ್ ಅವರು ವರದಿಯ ಮುನ್ನುಡಿಯಲ್ಲಿ ಬರೆದಿದ್ದಾರೆ.

ಅವರ ಈ ಮಾತುಗಳು ಸಾರ್ವಜನಿಕರ ಮುಂದೆ ಬಂದ ಹತ್ತೇ ದಿನಗಳಲ್ಲಿ ಸೆನ್ಸೆಕ್ಸ್ 50 ಸಾವಿರದ ಗಡಿ ದಾಟಿದೆ! ದೇಶದ ಅರ್ಥ ವ್ಯವಸ್ಥೆಯ ಆರೋಗ್ಯ ಸೂಚಕಗಳಲ್ಲಿ ಒಂದಾಗಿರುವ ಸೆನ್ಸೆಕ್ಸ್‌ಅನ್ನು ಮಾತ್ರ ಗಮನಿಸಿದರೆ, ಈ ದೇಶವು ಆರ್ಥಿಕ ಹಿಂಜರಿತದ ಸ್ಥಿತಿಗೆ ಜಾರಿಯೇ ಇಲ್ಲ ಎಂದು ಸುಲಭವಾಗಿ ಹೇಳಬಹುದು! ಗುರುವಾರದ ವಹಿವಾಟಿನಲ್ಲಿ ಐವತ್ತು ಸಾವಿರ ಅಂಶಗಳ ಗಡಿಯನ್ನು ದಾಟಿದ್ದ ಸೆನ್ಸೆಕ್ಸ್, ದಿನದ ಕೊನೆಯಲ್ಲಿ 49,624 ಅಂಶಗಳಲ್ಲಿ ಅಂತ್ಯಗೊಂಡಿದೆ. ಮಾರ್ಚ್‌ ಕೊನೆಯ ಭಾಗದಲ್ಲಿನ ಕನಿಷ್ಠ ಮಟ್ಟಕ್ಕೆ ಹೋಲಿಸಿದರೆ, ಶೇಕಡ 90ರಷ್ಟಕ್ಕಿಂತ ಹೆಚ್ಚಿನ ಏರಿಕೆ ದಾಖಲಿಸಿದಂತಾಗಿದೆ. ಅಂದಹಾಗೆ, ಸೆನ್ಸೆಕ್ಸ್ ಹಾಗೂ ಷೇರುಪೇಟೆಯ ಇತರ ಸೂಚ್ಯಂಕಗಳು ಈ ಪರಿಯಲ್ಲಿ ಏರಿಕೆ ದಾಖಲಿಸುತ್ತಿರುವ ಹೊತ್ತಿನಲ್ಲೇ, ಭಾರತದ ಅರ್ಥ ವ್ಯವಸ್ಥೆಯು ಐತಿಹಾಸಿಕ ಕುಸಿತ ಕಂಡಿದೆ, ಹಿಂಜರಿತದ ಸ್ಥಿತಿಗೆ ಜಾರಿಕೊಂಡಿದೆ.

ಮಾರ್ಚ್‌ನಲ್ಲಿ ಕಂಡ ಪ್ರಮಾಣದ ಕುಸಿತದ ಪುನರಾವರ್ತನೆ ಈಗಿನ ಸಂದರ್ಭದಲ್ಲಿ ಆಗಲಿಕ್ಕಿಲ್ಲ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ‘ದೇಶದ ಅರ್ಥ ವ್ಯವಸ್ಥೆಯು ಪುನಶ್ಚೇತನ ಕಾಣುವ ಹಾದಿಯಲ್ಲಿ ಇದೆ. ಕಾರ್ಪೊರೇಟ್ ಕಂಪನಿಗಳ ಆದಾಯದಲ್ಲಿ ಕೂಡ ಚೇತರಿಕೆ ಕಾಣುತ್ತಿದೆ. ಪರಿಸ್ಥಿತಿ ಹೀಗಿರುವಾಗ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಕುಸಿತ ಕಂಡುಬರಲಿಕ್ಕಿಲ್ಲ. ಅರ್ಥ ವ್ಯವಸ್ಥೆಯ ಚಲನೆಯ ಜೊತೆ ನೇರ ಸಂಬಂಧ ಹೊಂದಿರುವ ವಲಯಗಳ ಷೇರುಗಳ ಮೇಲೆ ಹೂಡಿಕೆದಾರರು ಈ ಹೊತ್ತಿನಲ್ಲಿ ಗಮನ ಹರಿಸುವುದು ಒಳಿತು. ಬ್ಯಾಂಕಿಂಗ್, ತೈಲ ಮತ್ತು ನೈಸರ್ಗಿಕ ಇಂಧನ, ರಿಯಲ್ ಎಸ್ಟೇಟ್, ಲೋಹ, ಟೆಲಿಕಾಂ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ (ಎಫ್‌ಎಂಸಿಜಿ) ಉತ್ಪನ್ನಗಳ ಕಂಪನಿಗಳತ್ತ ಚಿತ್ತ ಹರಿಸಬಹುದು’ ಎಂದು ಹೇಳುತ್ತಾರೆ ತೆರಿಗೆ ಮತ್ತು ಹಣಕಾಸು ಸಲಹೆಗಾರ ಶಿವಾನಂದ ಪಂಡಿತ್.

ಪ್ರೈಮ್‌ಇನ್ವೆಸ್ಟರ್‌ ಡಾಟ್‌ ಇನ್‌ ಸಂಸ್ಥೆಯ ಸಹಸಂಸ್ಥಾಪಕಿ ವಿದ್ಯಾ ಬಾಲಾ ಅವರು,ಮಿಡ್ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಪ್ರತಿದಿನವೂ ಹೊಸ ಎತ್ತರಕ್ಕೆ ತಲುಪುತ್ತಿದ್ದ ವಿಚಾರವಾಗಿ ಸಣ್ಣ ಹೂಡಿಕೆದಾರರಿಗೆ ಹಿಂದೊಮ್ಮೆ ಹೀಗೆ ಸಲಹೆ ನೀಡಿದ್ದರು: ‘ಲಾಭ ಗಳಿಕೆಯ ಉದ್ದೇಶದಿಂದ ಒಮ್ಮೆ ಷೇರುಗಳನ್ನು ಮಾರಾಟ ಮಾಡುವ ಬಗ್ಗೆ ಆಲೋಚಿಸಬಹುದು’. ಅದೇ ಮಾತನ್ನು ಪುನರುಚ್ಚರಿಸಿರುವ ವಿದ್ಯಾ ಅವರು, ‘ಈಗಲೂ ಭಾರಿ ಪ್ರಮಾಣದಲ್ಲಿ ಮೌಲ್ಯ ಹೆಚ್ಚಳ ದಾಖಲಿಸಿರುವ ಷೇರುಗಳನ್ನು ಲಾಭ ಗಳಿಕೆಯ ಉದ್ದೇಶದಿಂದ ಮಾರಾಟ ಮಾಡುವ ಬಗ್ಗೆ ಆಲೋಚಿಸಬಹುದು’ ಎಂದು ಹೇಳುತ್ತಾರೆ. ‘ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯಿಂದ ಹೊರನಡೆಯುವ ಕೆಲಸವನ್ನು ಹೂಡಿಕೆದಾರರು ಮಾಡಬಾರದು. ಆದರೆ, ಯಾವ ಕಂಪನಿಯಲ್ಲಿ ಎಷ್ಟು ಹೂಡಿಕೆ, ಈಕ್ವಿಟಿ ಹಾಗೂ ಬಾಂಡ್‌ಗಳ ಮೇಲೆ ಎಷ್ಟು ಹೂಡಿಕೆ ಎಂಬ ವಿಚಾರದಲ್ಲಿ ಮರುಹೊಂದಾಣಿಕೆ ಮಾಡುವ ಬಗ್ಗೆ ಹೊಸದಾಗಿ ಗಮನಹರಿಸಬೇಕು’ ಎಂದರು.

‘ಲಾಕ್‌ಡೌನ್‌ ಅವಧಿಯಲ್ಲಿ ಕೂಡ ಕೆಲವು ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸಿವೆ. ಕೆಲವು ಕಂಪನಿಗಳು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿ ಲಾಭದ ಪ್ರಮಾಣವನ್ನು ಹೆಚ್ಚಿನ ಮಟ್ಟದಲ್ಲಿ ಉಳಿಸಿಕೊಂಡಿವೆ’ ಎಂದು ‘ಸೆಂಟರ್ ಫಾರ್ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ’ ಸಂಸ್ಥೆಯ ವರದಿಯೊಂದು ಹೇಳಿದೆ. ‘ಈ ರೀತಿಯ ಲಾಭ ಗಳಿಕೆಯು ಬಹುಕಾಲ ಸಾಧ್ಯವಾಗುವುದಿಲ್ಲ. ಕಂಪನಿಗಳ ಖರ್ಚು, ವೆಚ್ಚಗಳು ಮುಂದಿನ ದಿನಗಳಲ್ಲಿ ಹೆಚ್ಚುತ್ತವೆ. ಆಗ ಲಾಭದ ಪ್ರಮಾಣದಲ್ಲಿ ಇಳಿಕೆ ಕಂಡುಬರಬಹುದು. ಹೂಡಿಕೆದಾರರು, ಒಳ್ಳೆಯ ವಹಿವಾಟು ಇರುವ ಕಂಪನಿಗಳ ಷೇರುಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ’ ಎಂಬ ಸಲಹೆಯನ್ನು ವಿದ್ಯಾ ನೀಡಿದರು.

‘ಕೋವಿಡ್–19 ಅಪ್ಪಳಿಸಿದ ನಂತರದ ಸಂದರ್ಭದಲ್ಲಿ ಸೂಚ್ಯಂಕಗಳು ಚೇತರಿಸಿಕೊಂಡಿರುವ ರೀತಿ ಆಶ್ಚರ್ಯ ಹುಟ್ಟಿಸುವಂತಿದೆ. ಆದರೆ, ಮಾರುಕಟ್ಟೆಯಲ್ಲಿ ಗೂಳಿಯ ಓಟ ಹೀಗೆಯೇ ಮುಂದುವರಿಯುವುದೇ ಎಂಬ ಪ್ರಶ್ನೆ ಕೆಲವರಲ್ಲಿದೆ. ಈ ಬಗೆಯ ಏರಿಕೆ ಎಲ್ಲ ಸಂದರ್ಭಗಳಲ್ಲೂ ಖಂಡಿತ ಇರುವುದಿಲ್ಲ. ಒಂದಲ್ಲ ಒಂದು ಹಂತದಲ್ಲಿ ಲಾಭ ಗಳಿಕೆಯ ಉದ್ದೇಶದ ವಹಿವಾಟು ಷೇರು ಮಾರುಕಟ್ಟೆಯಲ್ಲಿ ಶುರುವಾಗುತ್ತದೆ. ಆಗ ಸೂಚ್ಯಂಕಗಳು ಕುಸಿತ ಕಾಣುತ್ತವೆ. ಆದರೆ, ಕಳೆದ ವರ್ಷದಲ್ಲಿ ಕಂಡುಬಂದಂತಹ ದೊಡ್ಡ ಮಟ್ಟದ ಕುಸಿತ ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ’ ಎಂಬ ಅಭಿಪ್ರಾಯ ನೀಡಿದರು ಹೂಡಿಕೆ ಸಲಹೆಗಾರ ಶರತ್ ಎಂ.ಎಸ್.

ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ಅವರು ಮಾರುಕಟ್ಟೆಯ ಚಲನೆಯನ್ನು ಕಂಡು ಬುಧವಾರ ಆಡಿರುವ ಒಂದು ಮಾತನ್ನು ಇಲ್ಲಿ ಉಲ್ಲೇಖಿಸಬಹುದು. ‘ಹಣಕಾಸು ಮಾರುಕಟ್ಟೆಯಲ್ಲಿ ಕಂಡುಬಂದಿರುವ ಸಂಭ್ರಮದಲ್ಲಿ ಬುರುಗೆ ಎಷ್ಟು ಎಂಬ ಪ್ರಶ್ನೆಯೊಂದು ಇದೆ. ಈ ಪ್ರಶ್ನೆಗೆ ಉತ್ತರ ಸಿಗಲು ಇನ್ನೊಂದು ತ್ರೈಮಾಸಿಕವನ್ನು ಕಳೆಯಬೇಕು’ ಎಂದು ಬಿರ್ಲಾ ಹೇಳಿದ್ದಾರೆ. ಈಗಿನ ಏರಿಕೆಯನ್ನು ಕಂಡು ಸಂಭ್ರಮಿಸುತ್ತಿರುವವರಿಗೂ, ಏರಿಕೆಯ ಬಗ್ಗೆ ಅನುಮಾನ ಹೊಂದಿರುವವರಿಗೂ ಬಿರ್ಲಾ ಅವರ ಮಾತಿನಲ್ಲಿ ಉತ್ತರ ಸಿಗಬಹುದು.

––––––

ನೂರು ರೂಪಾಯಿ 190 ಆಗಿದ್ದು...

ಸೆನ್ಸೆಕ್ಸ್‌ನಲ್ಲಿ ನೋಂದಣಿ ಆಗಿರುವ ಎಲ್ಲ ಕಂಪನಿಗಳ ಷೇರುಗಳ ಮೇಲೆ ವ್ಯಕ್ತಿಯೊಬ್ಬ, ಆ ಕಂಪನಿಗಳ ಮಾರುಕಟ್ಟೆ ಬಂಡವಾಳದ ಪ್ರಮಾಣಕ್ಕೆ ಅನುಗುಣವಾಗಿ ಹೂಡಿಕೆ ಮಾಡಿದ್ದ ಎಂದು ಭಾವಿಸಿ. ಆ ಹೂಡಿಕೆಯು ಮಾರ್ಚ್‌ ಕೊನೆಯ ಭಾಗದಲ್ಲಿ ಆಗಿದ್ದಿದ್ದರೆ, ಹೂಡಿಕೆ ಮಾಡಿದ ಪ್ರತಿ ₹ 100 ಕೂಡ ಈಗ ಸರಿಸುಮಾರು ₹ 190 ಆಗಿರುತ್ತಿತ್ತು!

‘ಷೇರು ಮಾರುಕಟ್ಟೆಯು ಈ ಸಂದರ್ಭದಲ್ಲಿ ಇಷ್ಟೊಂದು ಏರಿಕೆ ಕಂಡಿರಬಹುದು. ಆದರೆ, ಈಗಲೂ ಕೆಲವು ಕಂಪನಿಗಳ ಷೇರುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಅಂತಹ ಷೇರುಗಳ ಖರೀದಿಗೆ ಮುಂದಾಗುವುದು ಜಾಣತನದ ಕೆಲಸ. ಯಾವ ಷೇರುಗಳು ದೀರ್ಘಕಾಲದಿಂದ ಉತ್ತಮ ಲಾಭ ಕೊಡುತ್ತಿಲ್ಲವೋ ಅವನ್ನು ಮಾರಾಟ ಮಾಡಿ, ಉತ್ತಮ ಷೇರುಗಳನ್ನು ನಿಮ್ಮದಾಗಿಸಿಕೊಳ್ಳಬೇಕು’ ಎಂದು ಶರತ್ ಸಲಹೆ ನೀಡಿದರು.

––––––

ಏಕೆ ಈ ಪರಿಯ ಏರಿಕೆ?

ಷೇರು ಮಾರುಕಟ್ಟೆ ಸೂಚ್ಯಂಕಗಳು ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದಕ್ಕೆ ಕಾರಣ ಏನಿರಬಹುದು ಎಂಬ ಪ್ರಶ್ನೆಗೆ ಮಾರುಕಟ್ಟೆ ತಜ್ಞರು ಹಲವು ಕಾರಣಗಳನ್ನು ನೀಡಿದ್ದಾರೆ. ಬ್ಯಾಂಕ್‌ಗಳಲ್ಲಿ ಠೇವಣಿ ಮೇಲಿನ ಬಡ್ಡಿ ದರ ಕಡಿಮೆ ಇರುವ ಕಾರಣ, ಷೇರುಗಳಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು ಎಂಬ ನಿರೀಕ್ಷೆ. ವ್ಯವಸ್ಥೆಯಲ್ಲಿ ನಗದು ಚಲಾವಣೆ ಹೆಚ್ಚಿಸಲು ಆರ್‌ಬಿಐ ಸೇರಿದಂತೆ ಬೇರೆ ಬೇರೆ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಕೈಗೊಂಡಿರುವ ಕ್ರಮಗಳ ಕಾರಣದಿಂದಾಗಿ ಷೇರು ಮಾರುಕಟ್ಟೆಗಳಿಗೆ ಹೆಚ್ಚಿನ ಹಣ ಹರಿದುಬರುತ್ತಿದೆ, ಇದು ಷೇರುಗಳ ಮೌಲ್ಯ ಹೆಚ್ಚಿಸುತ್ತಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ಭಾರತದಲ್ಲಿ ಮಾಡುತ್ತಿರುವ ಹೂಡಿಕೆಯು ಇದಕ್ಕೆ ಸಾಕ್ಷಿ ಎಂಬ ವಿವರಣೆಯೂ ಇದೆ. ಕೋವಿಡ್‌–19 ಸಾಂಕ್ರಾಮಿಕಕ್ಕೆ ಲಸಿಕೆ ಸಿದ್ಧವಾಗಿದೆ, ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಯು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ, ಕೆಲವು ಕಂಪನಿಗಳ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ ಎಂಬ ನಿರೀಕ್ಷೆ, ಭರವಸೆಯ ಕಾರಣದಿಂದಲೂ ಷೇರು ಪೇಟೆಯಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ ಎಂಬ ವಾದ ಇದೆ.

––––––

ಹೆಚ್ಚಿದ ಮಹಿಳೆಯರ ಪಾಲ್ಗೊಳ್ಳುವಿಕೆ

ಲಾಕ್‌ಡೌನ್‌ ಜಾರಿಗೆ ಬಂದ ನಂತರದ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಳ ಆಗಿದೆ ಎಂಬ ವರದಿಗಳು ಇವೆ. ‘ಬ್ಯಾಂಕುಗಳಲ್ಲಿ ಇರಿಸುವ ನಿಶ್ಚಿತ ಠೇವಣಿಗಳ (ಎಫ್‌.ಡಿ.) ಮೇಲಿನ ಬಡ್ಡಿದರ ಕಡಿಮೆ ಆಗಿರುವ ಪರಿಣಾಮವಾಗಿ, ಮಹಿಳೆಯರು ಪರ್ಯಾಯ ಆದಾಯ ಮೂಲಗಳನ್ನು ಹುಡುಕುತ್ತಿದ್ದಾರೆ. ಹೂಡಿಕೆ ಮಾಡುತ್ತಿರುವ ಮಹಿಳೆಯರಲ್ಲಿ ಹೆಚ್ಚಿನವರು ಷೇರು ಮಾರುಕಟ್ಟೆಗೆ ಹೊಸಬರು, ಬಹುತೇಕರು ಗೃಹಿಣಿಯರು’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದರು.

2020ರ ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ, ಅದರ ಹಿಂದಿನ ಮೂರು ತಿಂಗಳುಗಳಿಗೆ ಹೋಲಿಸಿದರೆ, ಮಹಿಳೆಯರು ಖಾತೆ ತೆರೆಯುತ್ತಿರುವ ಪ್ರಮಾಣ ಶೇಕಡ 32ರಷ್ಟು ಹೆಚ್ಚಳವಾಗಿದೆ ಎಂದು ಬ್ರೋಕರೇಜ್ ಸಂಸ್ಥೆ ‘ಅಪ್‌ಸ್ಟಾಕ್ಸ್’ ಮಾಹಿತಿ ನೀಡಿತ್ತು. 2020ರ ಮಾರ್ಚ್‌ ನಂತರದಲ್ಲಿ ಷೇರು ಮಾರುಕಟ್ಟೆ ಏರುಗತಿಯಲ್ಲಿ ಇರುವುದು ಕೂಡ ಮಹಿಳೆಯರು ಷೇರುಗಳ ಮೇಲಿನ ಹೂಡಿಕೆಯಲ್ಲಿ ಆಸಕ್ತಿ ತೋರಿಸುತ್ತಿರುವುದಕ್ಕೆ ಒಂದು ಕಾರಣ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

‘ಮಾರ್ಚ್‌ 1ರ ನಂತರ ಜೆರೋದಾ ವೇದಿಕೆಯ ಮೂಲಕ 1.8 ಲಕ್ಷ ಮಹಿಳೆಯರು ಹೂಡಿಕೆಯತ್ತ ಮುಖ ಮಾಡಿದ್ದಾರೆ, ಅವರ ಸರಾಸರಿ ವಯಸ್ಸು 33 ವರ್ಷ’ ಎಂದು ಜೆರೋದಾ ಕಂಪನಿಯ ಸಹಸಂಸ್ಥಾಪಕ ನಿಖಿಲ್ ಕಾಮತ್ ಈ ಹಿಂದೆ ಹೇಳಿದ್ದರು.

––––––

ಸೂಚ್ಯಂಕ ಏರಿಕೆಯ ಹಾದಿ

* 1986ರಲ್ಲಿ ಬಿಎಸ್‌ಸಿ ಸೆನ್ಸೆಕ್ಸ್ ವಹಿವಾಟು ಆರಂಭವಾಯಿತು. ಆದರೆ, ಸೂಚ್ಯಂಕವು 1,000ದ ಗಡಿ ದಾಟಲು ನಾಲ್ಕು ವರ್ಷಗಳು ಬೇಕಾದವು. 1990ರ ದಶಕವು ಷೇರುಪೇಟೆಯ ಬೆಳವಣಿಗೆಗೆ ಹಲವು ಪೂರಕ ಅಂಶಗಳು ಒದಗಿ ಬಂದವು. 1991ರಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿಯು ಜಾರಿಗೆ ಬಂದ ಕಾರಣ, ಷೇರುಪೇಟೆಯ ವಹಿವಾಟು ವಿಸ್ತರಿಸಿತು. ನಂತರದ ಒಂದು ವರ್ಷದಲ್ಲೇ ಸೂಚ್ಯಂಕವು 4,000ದ ಗಡಿ ದಾಟಿತ್ತು. 20ನೇ ಶತಮಾನದ ಅಂತ್ಯದ ವೇಳೆಗೆ ಸೂಚ್ಯಂಕವು 5,000ದ ಗಡಿಯನ್ನು ದಾಟಿತ್ತು.

* 21ನೇ ಶತಮಾನದ ಮೊದಲ ದಶಕದ ಮೊದಲಾರ್ಧವು ಷೇರುಪೇಟೆ ಪ್ರಗತಿಗೆ ಪೂರಕವಾದ ವಾತಾವರಣವನ್ನು ಒದಗಿಸಿಕೊಟ್ಟಿತು. ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿಗಳ ಕಾರ್ಯಾರಂಭವು, ಹೂಡಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಟ್ಟಿತು. ಹೀಗಾಗಿ ಈ ದಶಕದ ಮೊದಲ ವರ್ಷವೇ ಸೂಚ್ಯಂಕವು 6,000ದ ಗಡಿಯನ್ನು ದಾಟಿತು. ಹೂಡಿಕೆ ನಿಯಮಗಳಲ್ಲಿನ ಬದಲಾವಣೆ, ವಿದೇಶಿ ಕಂಪನಿಗಳ ಆಗಮನವು ಇದಕ್ಕೆ ಕಾರಣವಾಯಿತು

* 21ನೇ ಶತಮಾನದ ಮೊದಲ ದಶಕದ ದ್ವಿತೀಯಾರ್ಧವು ಷೇರುಪೇಟೆಯಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಸೂಚ್ಯಂಕವು 10,000ದ ಗಡಿ ದಾಟಿದರೂ, ಜಾಗತಿಕ ಆರ್ಥಿಕ ಹಿಂಜರಿತವು ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿತ್ತು. ಇದು ಷೇರುಪೇಟೆಯ ಮೇಲೂ ಪ್ರಭಾವ ಬೀರಿತ್ತು. ಆದರೆ, 2010ರ ವೇಳೆಗೆ ಸೂಚ್ಯಂಕವು 21,000ರದ ಗಡಿ ದಾಟಿತು

* 2010ರ ನಂತರದ ವರ್ಷಗಳಲ್ಲಿ, ಸೂಚ್ಯಂಕವು ತ್ವರಿತಗತಿಯ ಏರಿಕೆಗೆ ಸಾಕ್ಷಿಯಾಗಿದೆ. 21,000ದ ಗಡಿಯನ್ನು ಸೂಚ್ಯಂಕವು ಆಗ್ಗಾಗ್ಗೆ ಮುಟ್ಟುತ್ತಿದ್ದರೂ, ವಹಿವಾಟಿನ ಅಂತ್ಯದ ವೇಳೆಗೆ ಈ ಸಂಖ್ಯೆಯನ್ನು ದಾಟಿದ್ದು 2013ರಲ್ಲಿ. ನಂತರದ ಎರಡೇ ವರ್ಷಗಳಲ್ಲಿ ಸೂಚ್ಯಂಕವು 30,000ದ ಗಡಿಯನ್ನೂ ದಾಟಿತು. ನಂತರದ ನಾಲ್ಕು ವರ್ಷಗಳಲ್ಲಿ ಸೂಚ್ಯಂಕವು 40,000ರದ ಗಡಿಯನ್ನು ದಾಟಿತು. 2010-2019ರ ಮಧ್ಯೆ ಸೂಚ್ಯಂಕವು ದುಪಟ್ಟಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT