ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಚೇತರಿಕೆ: ರಿಲಯನ್ಸ್‌, ಇನ್ಫೊಸಿಸ್‌, ಐಟಿಸಿ ಮೇಲೆ ಹೂಡಿಕೆದಾರರ ಕಣ್ಣು 

Last Updated 31 ಮಾರ್ಚ್ 2020, 10:08 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಚೇತರಿಕೆ ಕಂಡು ಬಂದಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ ಹಾಗೂ ಇನ್ಫೊಸಿಸ್‌ ಕಂಪನಿಗಳ ಷೇರುಗಳ ಖರೀದಿಗೆ ಹೂಡಿಕೆದಾರರು ವಿಶ್ವಾಸ ತೋರಿದ್ದಾರೆ.

ಆರಂಭಿಕ ವಹಿವಾಟಿನಲ್ಲಿ 800 ಅಂಶ ಏರಿಕೆ ಕಂಡ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌, ನಂತರದಲ್ಲಿ 505.20 ಅಂಶ ಹೆಚ್ಚಳದೊಂದಿಗೆ 28,845.52 ಅಂಶಗಳಲ್ಲಿ ವಹಿವಾಟು ನಡೆದಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 199.85 ಅಂಶ ಚೇತರಿಕೆಯೊಂದಿಗೆ 8,480.85 ಅಂಶ ಮುಟ್ಟಿತು.

ಟಾಟಾ ಸ್ಟೀಲ್‌, ಎಚ್‌ಡಿಎಫ್‌ಸಿ, ಆ್ಯಕ್ಸಿಸ್‌ ಬ್ಯಾಂಕ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ರಿಲಯನ್ಸ್‌ ಇಂಡಸ್ಟ್ರೀಸ್‌, ಒಎನ್‌ಜಿಸಿ, ಐಟಿಸಿ, ಎಚ್‌ಸಿಎಲ್‌ ಟೆಕ್‌ ಹಾಗೂ ಟೈಟಾನ್‌ ಷೇರುಗಳು ಶೇ 3ರಷ್ಟು ಏರಿಕೆ ಕಂಡಿವೆ. ಇಂಡಸ್‌ಇಂಡ್‌ ಬ್ಯಾಂಕ್‌ ಶೇ 16ರಷ್ಟು ಕುಸಿದಿದೆ. ಬಜಾಜ್‌ ಫೈನಾನ್ಸ್‌, ಬಜಾಜ್‌ ಆಟೊ ಹಾಗೂ ಮಾರುತಿ ಷೇರುಗಳು ಇಳಿಕೆ ದಾಖಲಿಸಿವೆ.

ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 1,375.27 ಅಂಶ ಇಳಿಕೆಯಾಗಿ 28,440.32 ಅಂಶಗಳಲ್ಲಿ ವಹಿವಾಟು ಕೊನೆಯಾಗಿತ್ತು. ನಿಫ್ಟಿ ಸಹ 379.15 ಅಂಶಗಳು ಕಡಿಮೆಯಾಗಿ 8,281.10 ಅಂಶಗಳನ್ನು ತಲುಪಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿನ್ನೆ ₹4,363.61 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ದೇಶದಲ್ಲಿ ಲಾಕ್‌ಡೌನ್‌ ನಡುವೆಯೂ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಷೇರುಪೇಟೆ ಕುಸಿತ ಕಂಡಾಗಲೆಲ್ಲ ದೇಶೀಯ ಹೂಡಿಕೆದಾರರು ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಕಂಪನಿಗಳ ಷೇರುಗಳ ಖರೀದಿಯಲ್ಲಿ ತೊಡಗಿದ್ದಾರೆ. ಇನ್ನೂ ಚೀನಾದ ಕೈಗಾರಿಕೆಗಳು ಈಗಾಗಲೇ ತಯಾರಿಕೆ ಘಟಕಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಶಾಂಘೈ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಶೇ 98.6ರಷ್ಟು ಪ್ರಮುಖ ಕೈಗಾರಿಕೆಗಳು ಪುನರಾರಂಭಗೊಂಡಿವೆ.

ಹಾಂಕಾಂಗ್‌, ಟೋಕಿಯೊ ಹಾಗೂ ಸೋಲ್‌ ಷೇರುಪೇಟೆಗಳಲ್ಲಿಸಕಾರಾತ್ಮಕ ವಹಿವಾಟು ನಡೆದಿದೆ.

ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯ 10 ಪೈಸೆ ಚೇತರಿಕೆ ಕಂಡು ₹75.48ರಲ್ಲಿ ವಹಿವಾಟು ನಡೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 2.16ರಷ್ಟು ಏರಿಕೆಯೊಂದಿಗೆ ಪ್ರತಿ ಬ್ಯಾರೆಲ್‌ಗೆ 26.99 ಡಾಲರ್‌ ತಲುಪಿದೆ.

ಜಗತ್ತಿನಾದ್ಯಂತ ಕೋವಿಡ್‌–19ನಿಂದಾಗಿ ಸಾವಿಗೀಡಾದವರ ಸಂಖ್ಯೆ 37,000 ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT