ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಗಳಲ್ಲಿ ಖರೀದಿ ಭರಾಟೆ: ಸೆನ್ಸೆಕ್ಸ್ 30,000 ಸಮೀಪ, ಬ್ಯಾಂಕ್ ವಲಯ ಗಳಿಕೆ

Last Updated 26 ಮಾರ್ಚ್ 2020, 5:23 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ತಡೆಗೆ ದೇಶವ್ಯಾಪಿ 21 ದಿನಗಳ ಲಾಕ್‌ಡೌನ್‌ ಘೋಷಣೆಯಾಗಿರುವ ಪರಿಣಾಮ ದೇಶದ ಷೇರುಪೇಟೆಗಳಲ್ಲಿ ಗುರುವಾರವೂ ಸಕಾರಾತ್ಮಕ ವಹಿವಾಟು ಮುಂದುವರಿದಿದೆ. ಬ್ಯಾಂಕ್‌ ಹಾಗೂ ಐಟಿ ವಲಯದ ಷೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶೇ 4.36ರಷ್ಟು (1,244.23 ಅಂಶ) ಏರಿಕೆಯೊಂದಿಗೆ 29,780.01 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇ 3.93ರಷ್ಟು (326.70 ಅಂಶ) ಹೆಚ್ಚಳ ಕಂಡು 8,644.55 ಅಂಶಗಳಲ್ಲಿ ವಹಿವಾಟು ನಡೆದಿದೆ. ಬುಧವಾರ ಶೇ 15ರಷ್ಟು ಗಳಿಕೆ ಕಂಡಿದ್ದ ಆ್ಯಕ್ಸಿಸ್‌ ಬ್ಯಾಂಕ್ ಇಂದೂ ಸಹ ಓಟ ಮುಂದುವರಿಸಿದ್ದು, ಶೇ 10ರಷ್ಟು ಏರಿಕೆ ದಾಖಲಿಸಿದೆ. ಇನ್ನೂ ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಶೇ 25ರಷ್ಟು ಏರಿಕೆಯಾಗಿದೆ.

ಇನ್ಫೊಸಿಸ್‌, ಟೆಕ್‌ ಮಹೀಂದ್ರಾ, ಟಿಸಿಎಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಐಟಿಸಿ, ಟೈಟಾನ್‌, ಎಸ್‌ಬಿಐ, ಎಚ್‌ಡಿಎಫ್‌ಸಿ, ಭಾರ್ತಿ ಏರ್‌ಟೆಲ್‌, ಬಿಇಎಂಎಲ್‌ ಸೇರಿದಂತೆ ಬಹುತೇಕ ಕಂಪನಿಗಳ ಷೇರುಗಳ ಬೆಲೆ ಶೇ 2ರಿಂದ 10ರಷ್ಟು ಜಿಗಿದಿವೆ. ಇದು ಹೂಡಿಕೆದಾರರಲ್ಲಿ ವಿಶ್ವಾಸ ಮತ್ತಷ್ಟು ಹೆಚ್ಚಿಸಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ 13 ಪೈಸೆ ಚೇತರಿಸಿಕೊಂಡಿದ್ದು, ₹75.81ರಲ್ಲಿ ವಹಿವಾಟು ನಡೆದಿದೆ.

ಕೊರೊನಾ ವೈರಸ್‌ ಸೋಂಕು ವ್ಯಾಪಿಸಿರುವ ಪರಿಣಾಮ ಅಮೆರಿಕ 2 ಟ್ರಿಲಿಯನ್‌ ಡಾಲರ್‌ ಪರಿಹಾರ ಪ್ಯಾಕೇಜ್‌ ಘೋಷಿಸಿರುವುದು ಹಾಗೂ ಆರ್ಥಿಕತೆಗೆ ಚೇತರಿಗೆ ನೀಡಲು ಭಾರತ ಸರ್ಕಾರ ₹1.5 ಟ್ರಿಲಿಯನ್‌ ಪ್ಯಾಕೇಜ್‌ಗೆ ಸಮ್ಮಿತಿಸುವ ಕುರಿತು ವರದಿಗಳು ಹೊರಬಂದಿರುವುದು ಷೇರುಪೇಟೆಗಳ ಮೇಲೆ ಸಕಾರಾತ್ಮ ಪರಿಣಾಮ ಬೀರಿವೆ. (1 ಟ್ರಿಲಿಯನ್‌= 1 ಲಕ್ಷ ಕೋಟಿ )

ಬುಧವಾರ ಬ್ಯಾಂಕಿಂಗ್ ಮತ್ತು ಇಂಧನ ವಲಯದ ಷೇರುಗಳ ಖರೀದಿಗೆ ಆಸಕ್ತಿ ಕಂಡು ಬಂದಿತ್ತು. ಸೆನ್ಸೆಕ್ಸ್‌ 28,535.78 ಅಂಶದೊಂದಿಗೆ ದಿನವ ವಹಿವಾಟು ಮುಗಿಸಿತು ಹಾಗೂ ನಿಫ್ಟಿ 516.80 ಅಂಶಗಳ ಏರಿಕೆ ಕಂಡು 8,317.85 ಅಂಶ ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT